ರಾಜ್ಯಕ್ಕೆ ಮಾದರಿ ಬೂದಿಹಾಳ್‌ ಗ್ರಾಪಂ ಕಟ್ಟಡ

Team Udayavani, Aug 14, 2019, 3:00 AM IST

ನೆಲಮಂಗಲ: ಗ್ರಾಮಗಳ ಜನರಿಗೆ ಸರ್ಕಾರದ ಸಂಪರ್ಕ ಸೇತುವೆಯಾಗಿರುವ ಬೂದಿಹಾಳ್‌ ಗ್ರಾಮಪಂಚಾಯಿತಿಯು ರಾಜ್ಯಕ್ಕೆ ಮಾದರಿಯಾಗಿರುವ ಗ್ರಾಮಸೌಧ ನಿರ್ಮಾಣ ಮಾಡಿರುವುದು ಸದಸ್ಯರ ಹೊಂದಾಣಿಕೆಗೆ ಸಾಕ್ಷಿಯಾಗಿದೆ ಎಂದು ಸಂಸದ ಬಿ.ಎನ್‌.ಬಚೇcಗೌಡ ಅಭಿಪ್ರಾಯಪಟ್ಟರು. ತಾಲೂಕಿನ ಬೂದಿಹಾಲ್‌ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಪಂಚಾಯಿತಿಯ ನೂತನ ಗ್ರಾಮಸೌಧ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಪಂ ಆರ್ಥಿಕವಾಗಿ ಸಬಲ: ಗ್ರಾಮಾಂತರ ಜಿಲ್ಲೆಯಲ್ಲಿ ಬೂದಿಹಾಳ್‌ ಗ್ರಾಮಪಂಚಾ ಯಿ ತಿ ಆರ್ಥಿಕವಾಗಿ ಸಬಲವಾಗಿರುವ ಎರಡನೇ ಪಂಚಾಯಿತಿಯಾಗಿದ್ದು ಸರ್ಕಾರದ ಅನುದಾನ ಹಾಗೂ ಖಾಸಗಿ ಕಂಪನಿಗಳ ಸಿಎಸ್‌ಆರ್‌ ಹಣವನ್ನು ಉಪಯುಕ್ತವಾಗಿ ಬಳಸಿಕೊಂಡು 20 ಕೋಟಿ ವೆಚ್ಚದಲ್ಲಿ 16 ಗ್ರಾಮಗಳನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ಜೊತೆಗೆ 2 ಕೋಟಿ ವೆಚ್ಚದಲ್ಲಿ ಬೃಹತ್‌ ಗ್ರಾಮಸೌಧ ನಿರ್ಮಾಣ ಮಾಡಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

10 ಸಾವಿರ ಕೋಟಿ ನೆರವಿಗೆ ಒತ್ತಾಯ: ರಾಜ್ಯದಲ್ಲಿ ಸಂಭವಿಸಿರುವ ಭೀಕರ ಜಲಪ್ರಳಯದಿಂದ ಜನರು ಮನೆಗಳ ಜೊತೆ ಬದುಕು ಕಳೆದುಕೊಂಡಿದ್ದಾರೆ, ಗ್ರಾಮಗಳು ನೀರಿನಲ್ಲಿ ಮುಳುಗಿವೆ, ಗುಡ್ಡಗಳು ಕುಸಿಯುತ್ತಿವೆ, ಹೊಲಗಳಿಗೆ ನೀರು ನುಗ್ಗಿವೆ, ನೆರೆಯಿಂದ ಜನರ ಬದುಕಲು ಪರಿತಪಿಸುವಂತಹ ಸನ್ನಿವೇಶದಲ್ಲಿ ನೆರವಿನ ಅನಿವಾರ್ಯತೆ ಇದೆ. ಕೇಂದ್ರ ಸರ್ಕಾರ 10 ಸಾವಿರ ಕೋಟಿಯಾದರೂ ಪರಿಹಾರ ನೀಡಬೇಕು, ಇದರ ಬಗ್ಗೆ ರಾಜ್ಯದ ಎಲ್ಲಾ ಸಂಸದರು, ಮುಖ್ಯಮಂತ್ರಿಗಳು ಒತ್ತಾಯಿಸಿ ನೆರವು ಪಡೆಯುತೇವೆ ಎಂದು ತಿಳಿಸಿದರು.

ಗ್ರಾಮಸೌಧ ನಿರ್ಮಾಣ ಮಾಡಿ ಅತ್ಯುತ್ತಮ ಕೆಲಸ: ಆದಿಚುಂಚನಗಿರಿ ಮಹಾಸಂಸ್ಥಾನಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ರಾಜ್ಯದ ಜನರ ಸೇವೆಗಾಗಿ ಕೆಂಗಲ್‌ ಹನುಮಂತಯ್ಯನವರು ವಿಧಾನಸೌಧ ನಿರ್ಮಿಸಿದರು, ಎಸ್‌.ಎಂ.ಕೃಷ್ಣ ವಿಕಾಸಸೌಧ ನಿರ್ಮಾಣ ಮಾಡಿದರೆ ಕುಮಾರಸ್ವಾಮಿ ಸುವರ್ಣಸೌಧ ನಿರ್ಮಾಣ ಮಾಡುವ ಮೂಲಕ ರಾಜ್ಯದ ಜನರಿಗೆ ಅನುಕೂಲ ಮಾಡಿದರು, ಅದೇ ರೀತಿ ಗ್ರಾಪಂ ಅಧ್ಯಕ್ಷ ಎಂ.ಕೆ.ನಾಗರಾಜು ಹಾಗೂ ತಂಡ ಗ್ರಾಮಸೌಧ ನಿರ್ಮಾಣ ಮಾಡಿ ಅತ್ಯುತ್ತಮ ಕೆಲಸಮಾಡಿದ್ದಾರೆ ಎಂದರು.

ಆಡಳಿತ ಮಂಡಳಿಗೆ ಅಭಿನಂದನೆ: ಗ್ರಾಪಂ ಅಧ್ಯಕ್ಷ ಎಂ.ಕೆ.ನಾಗರಾಜು ಮಾತನಾಡಿ, ಪಂಚಾಯಿತಿಯ ಎಲ್ಲ ಸದಸ್ಯರ ಸಲಹೆ ಸಹಕಾರದೊಂದಿಗೆ ಸಾಧನೆಯನ್ನು ಮಾಡಲು ಸಾಧ್ಯವಾಯಿತು. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಪ್ರತಿಯೊಬ್ಬರಿಗೂ ಮೂಲಭೂತ ಸೌಕರ್ಯಗಳನ್ನು ಮತ್ತು ಸರಕಾರದ ಯೋಜನೆಗಳನ್ನು ತಲುಪಿಸುವಲ್ಲಿ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಕಾರ್ಯವೈಖರಿ ಶ್ಲಾಘನೀಯವಾದದ್ದು. ತಮ್ಮ ಆಡಳಿತಾವಧಿಯಲ್ಲಿ ಪಂಚಾಯಿತಿಯನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ತಿಳಿಸಿದರು.

ಚೆಕ್‌ವಿತರಣೆ: ಉತ್ತರ ಕರ್ನಾಟಕದ ಜಲಪ್ರಳಯಕ್ಕೊಳ್ಳಗಾಗಿರುವ ಜನರಿಗೆ ಸಹಕರಿಸುವ ಸಲುವಾಗಿ ಕಾರ್ಯಕ್ರಮದಲ್ಲಿ ಪಂಚಾಯಿತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಲಕ್ಷ ರೂ.ಗಳ ಸಹಾಯಧನದ ಚೆಕ್‌ಅನ್ನು ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ ಅವರಿಗೆ ಹಸ್ತಾಂತರಿಸಲಾಯಿತು.

ಮನವಿ: ಗ್ರಾಮ ಪಂಚಾಯಿತಿ ಕೇಂದ್ರ ಗ್ರಾಮವಾಗಿರುವ ಬೂದಿಹಾಳ್‌ ಗ್ರಾಮದ ವೇಣು ಹಾಗೂ ಜಿ.ಸಿದ್ದರಾಜು ಮತ್ತು ಯುವಕ ತಂಡದವರು ಪಂಚಾಯಿತಿ ಹಳೆಯ ಕಟ್ಟಡವನ್ನು ವ್ಯಾಯಾಮ ಶಾಲೆಯನ್ನಾಗಿ ಮಾಡಿಕೊಡುವಂತೆ ಪಂಚಾಯಿತಿ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅಧ್ಯಕ್ಷ ಎಂ.ಕೆ.ನಾಗರಾಜು ವ್ಯಾಯಾಮಶಾಲೆಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಭರವಸೆ ನೀಡಿದರು.

ಗ್ರಾಮವಾಣಿ ಬಿಡುಗಡೆ: ಬೂದಿಹಾಳ್‌ ಗ್ರಾಮದ ಇತಿಹಾಸ, ಪಂಚಾಯಿತಿ ವ್ಯಾಪ್ತಿಯ ಸಮಗ್ರ ಮಾಹಿತಿಯುಳ್ಳ ಹಾಗೂ ಪ್ರಸ್ತುತ ಆಡಳಿತ ಮಂಡಳಿಯ ಅವಧಿಯಲ್ಲಿ ಹಮ್ಮಿಕೊಂಡಿರುವ ಯೋಜನೆಗಳ ಸಚಿತ್ರಮಾಹಿತಿ, ಅಭಿವೃದ್ಧಿಯ ಸಮಗ್ರ ಮಾಹಿತಿಯುಳ್ಳ ಕಿರು ಸ್ಮರಣ ಸಂಚಿಕೆಯನ್ನು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಆರ್‌.ಲತಾ, ಪಿಡಿಒ ಡಿ.ಪದ್ಮನಾಭ್‌ ಬಿಡುಗಡೆಗೊಳಿಸಿದರು.

ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀನಂಜಾವಧೂತಸ್ವಾಮೀಜಿ, ವಿಧಾನಪರಿಷತ್‌ ಸದಸ್ಯ ಬಿಎಂಎಲ್‌.ಕಾಂತರಾಜು, ಎಸ್‌.ರವಿ, ಅ.ದೇವೇಗೌಡ. ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ, ಮಾಜಿಪ್ರದಾನ ಬಿ.ಕರಿವರದಯ್ಯ, ಎಪಿಎಂಸಿ ನಿರ್ದೇಶಕ ವಿ.ಗೋವಿಂದರಾಜು, ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ, ಸಿಇಒ ಆರ್‌.ಲತಾ, ತಾಪಂ ಇಒ ಡಾ.ಎಂ.ಬಿ.ನಾಗರಾಜ್‌, ತಹಶೀಲ್ದಾರ್‌ ಕೆಎನ್‌.ರಾಜಶೇಖರ್‌, ತಾಪಂ ಸ್ಥಾಯಿಸಮಿತಿ ಅಧ್ಯಕ್ಷ ಬಿ.ರಂಗನಾಥ್‌, ಗ್ರಾಪಂ ಉಪಾಧ್ಯಕ್ಷ ಶೋಭಾ ನರಸಿಂಹಮೂರ್ತಿ, ಸದಸ್ಯರಾದ ಕೆ.ಜಿ.ವೆಂಕಟೇಶ್‌, ಬಿ.ಟಿ.ಮಂಜುನಾಥ್‌ಗೌಡ, ಮಂಜಮ್ಮ ಮಾರೇಗೌಡ, ಮುನಿರಾಜು, ಮಂಜುಳಾ ಸೇರಿದಂತೆ ಸದಸ್ಯರು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ