ಆಕಾಂಕ್ಷಿಗಳ ಅಸಮಾಧಾನ ಶಮನ ಯತ್ನ

ರಾಜು ಕಾಗೆ-ಅಶೋಕ ಪೂಜಾರಿಗೆ ನಿಗಮ-ಮಂಡಳಿ ಸ್ಥಾನಕುತೂಹಲ ಮೂಡಿಸಿದ ಉಭಯರ ನಡೆ

Team Udayavani, Oct 10, 2019, 3:29 PM IST

ಕೇಶವ ಆದಿ
ಬೆಳಗಾವಿ: ಅನರ್ಹ ಶಾಸಕರ ಕ್ಷೇತ್ರಗಳಿಗೆ ಡಿಸೆಂಬರ್‌ ನಲ್ಲಿ ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ತಲೆನೋವು ಉಂಟು ಮಾಡಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆಕಾಂಕ್ಷಿಗಳ ಸಮಾಧಾನದ ಕ್ರಮಕ್ಕೆ ಮುಂದಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳ ಪ್ರಮುಖ ಆಕಾಂಕ್ಷಿಗಳಿಗೆ ಮಹತ್ವದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕಲ್ಪಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಕಾಗವಾಡ ಕ್ಷೇತ್ರದಿಂದ ಪ್ರಮುಖ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಹಾಗೂ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ರಾಜು ಕಾಗೆ ಅವರಿಗೆ ಮಲಪ್ರಭಾ-ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ಹಾಗೂ ಗೋಕಾಕ ಕ್ಷೇತ್ರದಿಂದ ಪ್ರಬಲ ಸ್ಪರ್ಧಿಯಾಗಿರುವ ಆಶೋಕ ಪೂಜಾರಿ ಅವರಿಗೆ
ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದಾರೆ.

ಮುಖ್ಯಮಂತ್ರಿಗಳ ಈ ಆದೇಶದ ಪ್ರಕಾರ ರಾಜು ಕಾಗೆ ಕಾಗವಾಡ ಕ್ಷೇತ್ರದಲ್ಲಿ ಅನರ್ಹ ಶಾಸಕ ಶ್ರೀಮಂತ ಪಾಟೀಲ ಇಲ್ಲವೇ ಅವರ ಪುತ್ರ ಶ್ರೀನಿವಾಸ ಪಾಟೀಲಗೆ ಟಿಕೆಟ್‌ ಬಿಟ್ಟು ಕೊಡಬೇಕು. ಅದೇ ರೀತಿ ಗೋಕಾಕದಲ್ಲಿ ರಮೇಶ ಜಾರಕಿಹೊಳಿ ಅವರಿಗಾಗಿ ಅಶೋಕ ಪೂಜಾರಿ ಬಿಜೆಪಿ ಟಿಕೆಟ್‌ ಪ್ರಯತ್ನದಿಂದ ಹಿಂದೆ ಸರಿಯಬೇಕು. ಮುಖ್ಯಮಂತ್ರಿಗಳ ಈ ಆದೇಶದಿಂದ ಶ್ರೀಮಂತ ಪಾಟೀಲ ಹಾಗೂ ರಮೇಶ ಜಾರಕಿಹೊಳಿ ನಿರಾಳರಾಗಿದ್ದಾರೆ.

ಆದರೆ ಚುನಾವಣೆಯ ಈ ಸಂದರ್ಭದಲ್ಲಿ ಇಂತಹ ಅಮಿಷ ಒಪ್ಪಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ರಾಜು ಕಾಗೆ ಹಾಗೂ ಅಶೋಕ ಪೂಜಾರಿ ಅವರ ಬೆಂಬಲಿಗರಲ್ಲಿ ಕಾಣುತ್ತಿದೆ. ಕಳೆದ ಚುನಾವಣೆಯಲ್ಲಿ ಇದೇ ಶ್ರೀಮಂತ ಪಾಟೀಲ ಹಾಗೂ ರಮೇಶ ಜಾರಕಿಹೊಳಿ ವಿರುದ್ಧ ಪ್ರಚಾರ ಮಾಡಿದ್ದ ಹಾಗೂ ಆರೋಪಗಳ ಸುರಿಮಳೆ ಹರಿಸಿದ್ದ ರಾಜು ಕಾಗೆ ಮತ್ತು ಅಶೋಕ ಪೂಜಾರಿ ಈಗ ಯಾವ ಆಧಾರದ ಮೇಲೆ ಇದೇ ಎದುರಾಳಿಗಳಿಗೆ ತಮ್ಮ ಟಿಕೆಟ್‌ ಬಿಟ್ಟುಕೊಟ್ಟು, ಮುಖ್ಯಮಂತ್ರಿಗಳು ನೀಡಿರುವ ಅಧ್ಯಕ್ಷ ಸ್ಥಾನ ಅಲಂಕರಿಸುತ್ತಾರೆ ಎಂಬ ಚರ್ಚೆ ಆರಂಭವಾಗಿದೆ.

ಕಾಗವಾಡ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿರುವ ರಾಜು ಕಾಗೆ ಅವರಿಗೆ ಮುಖ್ಯಮಂತ್ರಿಗಳ ಹಠಾತ್‌ ಆದೇಶ ಅಚ್ಚರಿ ತಂದಿದೆ. ಯಾವುದೇ ಕಾರಣಕ್ಕೂ ಈ ಹುದ್ದೆ ಒಪ್ಪಿಕೊಂಡು ಟಿಕೆಟ್‌ ಕಣದಿಂದ ಹಿಂದೆ ಸರಿಯುವುದು ಬೇಡ ಎಂದು ಅವರ ಬೆಂಬಲಿಗರು ಒತ್ತಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣೆಗೆ ತಯಾರಿ ನಡೆಸುತ್ತಿರುವ ರಾಜು ಕಾಗೆ ಅವರ ಮುಂದಿನ ನಿರ್ಧಾರ ಈಗ ಕುತೂಹಲ ಹುಟ್ಟಿಸಿದೆ.

ಇನ್ನು ಅಶೋಕ ಪೂಜಾರಿ ಮೊದಲಿಂದಲೂ ಗೋಕಾಕದಲ್ಲಿ ಜಾರಕಿಹೊಳಿ ಕುಟುಂಬ ವ್ಯವಸ್ಥೆ ವಿರುದ್ಧ ಹೋರಾಟ ಮಾಡುತ್ತ ಬಂದವರು. ಕಳೆದ ಮೂರು ಚುನಾವಣೆಗಳಲ್ಲಿ ರಮೇಶ ಜಾರಕಿಹೊಳಿಗೆ ತೀವ್ರ ಪೈಪೋಟಿ ಒಡ್ಡಿದ್ದಾರೆ. ಆದರೆ ನಾನಾ ರಾಜಕೀಯ ಕಾರಣಗಳಿಂದ ಅವರಿಗೆ ಜಯ ಸಿಕ್ಕಿಲ್ಲ ಎಂಬುದು ಕ್ಷೇತ್ರದ ಜನರಿಗೆ ಗೊತ್ತಿರುವ ಸಂಗತಿ. ಮೇಲಾಗಿ ಕಳೆದ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಬಿಜೆಪಿ ನಾಯಕರ ವಿರುದ್ಧ ಆರೋಪಗಳ ಸುರಿಮಳೆ ಹರಿಸಿದ್ದನ್ನು ಸಹ ಬಿಜೆಪಿ ಕಾರ್ಯಕರ್ತರು ನೋಡಿದ್ದಾರೆ.

ಹೀಗಿರುವಾಗ ಈಗ ರಮೇಶ ಜಾರಕಿಹೊಳಿ ಅವರಿಗೆ ಬಿಜೆಪಿ ಟಿಕೆಟ್‌ ನೀಡುವ ಉದ್ದೇಶದಿಂದ ಅಶೋಕ ಪೂಜಾರಿ ಅವರಿಗೆ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಿರುವುದು ಬಿಜೆಪಿ ಕಾರ್ಯಕರ್ತರು ಹಾಗೂ ಪೂಜಾರಿ ಬೆಂಬಲಿಗರಲ್ಲಿ ಅಸಮಾಧಾನ ಹುಟ್ಟುಹಾಕಿದೆ.

ಜಾರಕಿಹೊಳಿ ಸಹೋದರರ ವಿರುದ್ಧ ಗೋಕಾಕದಲ್ಲಿ ಮೊದಲಿಂದಲೂ ಹೋರಾಟಕ್ಕೆ ಇಳಿದಿರುವ ಅಶೋಕ ಪೂಜಾರಿ ಮೇಲೆ ಕ್ಷೇತ್ರದ ಜನರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ವ್ಯವಸ್ಥೆಯ ವಿರುದ್ಧ ಅವರ ಹೋರಾಟ ನಿರಂತರವಾಗಿರಲಿ ಎಂದು ಅವರ ಬೆಂಬಲಿಗರು ಬಯಸಿದ್ದಾರೆ. ಹೀಗಿರುವಾಗ ಚುನಾವಣೆಯ ತಯಾರಿ ಸಂದರ್ಭದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿಯಿರಿ ಎಂದು ಹೇಳುವುದು ಯಾವ ನ್ಯಾಯ ಎಂಬುದು ಪೂಜಾರಿ ಅವರ ಬೆಂಬಲಿಗರ ಪ್ರಶ್ನೆ.

ಅಶೋಕ ಪೂಜಾರಿಗೆ ಕಾಂಗ್ರೆಸ್‌ ಸಹ ಗಾಳ ಹಾಕಿದೆ. ಗೋಕಾಕ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಸಿಗದೇ ಇದ್ದ ಪಕ್ಷದಲ್ಲಿ ತಮ್ಮ ಪಕ್ಷದಿಂದ ಸ್ಪರ್ಧೆ ಮಾಡಿಸಬೇಕು. ಇಲ್ಲದಿದ್ದರೆ ಅವರನ್ನು ಪಕ್ಷೇತರರನ್ನಾಗಿ ಕಣಕ್ಕಿಳಿಸಬೇಕು ಎಂಬುದು ಕಾಂಗ್ರೆಸ್‌ ಉದ್ದೇಶ. ಇಂತಹ ಸನ್ನಿವೇಶದಲ್ಲಿ ಈಗ ಮುಖ್ಯಮಂತ್ರಿಗಳು ಅಶೋಕ ಪೂಜಾರಿಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಅವರನ್ನು ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂಬ ಸೂಚನೆ ನೀಡಿದ್ದಾರೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಅಶೋಕ ಪೂಜಾರಿ ಅವರ ಮುಂದಿನ ನಿರ್ಧಾರ ಈಗ ಸಾಕಷ್ಟು ಕುತೂಹಲ ಹುಟ್ಟಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ