ಚೌಕಿದಾರನ ಸುತ್ತಲೂ ಇರೋರೆಲ್ಲ ಚೋರರು

Team Udayavani, Apr 22, 2019, 2:17 PM IST

ರಾಯಬಾಗ: ರೈತ, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವಿರೋಧಿ ನರೇಂದ್ರ ಮೋದಿಯ ಬಿಜೆಪಿ ಕೋಮುವಾದಿ ಪಕ್ಷಕ್ಕೆ ಯಾರು ಕೂಡಾ ಮತ ನೀಡಬಾರದು. ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಮಹಾವೀರ ಭವನದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಒಬ್ಬ ಸುಳ್ಳುಗಾರ. ಕಳೆದ ಐದು ವರ್ಷದ ಅವಧಿಯಲ್ಲಿ ಗುರುತರವಾದ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆ ಈಡೇರಿಸಿಲ್ಲ. ಹೀಗಾಗಿ ನರೇಂದ್ರ ಮೋದಿ ಪ್ರಧಾನಿಯಾಗಲು ಯೋಗ್ಯವಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ರೈತರ ಸಾಲಮನ್ನಾ, ಕಪ್ಪು ಹಣ ತರದೆ ನರೇಂದ್ರ ಮೋದಿಯವರು ಶ್ರೀಮಂತ ಉದ್ಯಮಿಗಳನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ. ನಾನೊಬ್ಬ ಚೌಕಿದಾರ್‌ ಎಂದು ಹೇಳುತ್ತಾ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಿದ್ದಾರೆ. ಚೌಕಿದಾರನ ಸುತ್ತಮುತ್ತ ಇರುವುರೆಲ್ಲರೂ ಚೋರರಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಯಬಾಗ ಮತಕ್ಷೇತ್ರಗಳಲ್ಲಿ ಕೆರೆ ತುಂಬುವ ಯೋಜನೆಯ 39 ಕೆರೆಗಳಿಗೆ 92 ಕೋಟಿ ರೂ. ಮಂಜೂರು ಮಾಡಿದ್ದು, ನಾನು ಮುಖ್ಯಮಂತ್ರಿಯಾದ ಅವಧಿಯಲ್ಲಿ ಎಂದು ಹೇಳಿದ ಅವರು, ದೇಶದಲ್ಲಿ ಅಭಿವೃದ್ಧಿಯಾಗಬೇಕಾದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು. ಹೀಗಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರಿಗೆ ಮತ ನೀಡಿ ಭಾರಿ ಅಂತರದಿಂದ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಈ ಭಾಗದ ಪ್ರಭಾವಿ ನಾಯಕರಾದ ವಿ.ಎಲ್. ಪಾಟೀಲ ಹಾಗೂ ಎಸ್‌.ಆರ್‌.ಬಾನೆ ಅವರನ್ನು ನೆನಪಿಸಿಕೊಂಡು ಅವರೊಂದಿಗಿನ ರಾಜಕೀಯ ಒಡನಾಟ ಸ್ಮರಿಸಿಕೊಂಡರು. ಜಿಲ್ಲಾ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಮಾಜಿ ಶಾಸಕ ಎಸ್‌.ಬಿ. ಘಾಟಗೆ, ಕಾಂಗ್ರೆಸ್‌ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ, ಜಿಲ್ಲಾಧ್ಯಕ್ಷೆ ತೇಜಶ್ವಿ‌ನಿ ನಾಯಿಕವಾಡಿ, ಬ್ಲಾಕ್‌ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ಈರಗೌಡ ಪಾಟೀಲ, ಅಮಿತ ಘಾಟಗೆ, ಸಂಜು ಬಾನೆ, ಧೂಳಗೌಡ ಪಾಟೀಲ, ಅರ್ಜುನ ನಾಯಿಕವಾಡಿ, ಸದಾಶಿವ ದೇಶಿಂಗೆ, ಮಹಾವೀರ ಮೋಹಿತೆ, ರಾಜು ಶಿರಗಾಂವೆ, ಬಿ.ಎನ್‌. ಬಂಡಗಾರ, ಕುಂತಿನಾಥ ಮಗದುಮ್ಮ, ಸುಕುಮಾರ ಕಿರಣಗಿ, ಅಪ್ಪಾಸಾಬ ಕುಲಗುಡೆ ಸೇರಿದಂತೆ ಇತರರಿದ್ದರು.

ಜನರ ದಿಕ್ಕು ತಪ್ಪಿಸುವ ಮೋದಿ ಸರ್ಕಾರ: ಸತೀಶ

ಮೂಡಲಗಿ: ದೇಶದಲ್ಲಿ ಯುಪಿಎ ಸರ್ಕಾರ ಅನೇಕ ಜನಪ್ರಿಯ ಯೋಜನೆಗಳನ್ನು ತಂದಿದೆ ಮತ್ತು ಮೋದಿ ಸರ್ಕಾರ ಯಾವುದೇ ಯೋಜನೆಗಳನ್ನು ತರದೇ ಜನರನ್ನು ಯಾಮಾರಿಸುತ್ತಿದೆ. ಯುವಕರು ಇದನ್ನು ಅರ್ಥ ಮಾಡಿಕೊಂಡು ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮನವಿ ಮಾಡಿದರು. ಅವರಾದಿಯಲ್ಲಿ ಲೋಕಸಭಾ ಅಭ್ಯರ್ಥಿ ಡಾ| ವಿ.ಎಸ್‌. ಸಾಧುನವರ ಪರ ಮತಯಾಚಿಸಿ ನಂತರ ಮಾತನಾಡಿದ ಅವರು, ಮತದಾರರು ಕಾಂಗ್ರೆಸ್‌ಗೆ ಮತ ನೀಡಿ ನಮ್ಮೆಲ್ಲರ ನಾಯಕ ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿ ಮಾಡಲು ಸಹಕರಿಸಬೇಕು. ಮಹದಾಯಿ ಹೋರಾಟದಲ್ಲಿ ಭಾಗವಹಿಸದ ಅಭ್ಯರ್ಥಿಗಳನ್ನು ದೂರ ಇಡಬೇಕು ಎಂದರು. ಜಿಪಂ ಮಾಜಿ ಸದಸ್ಯ ರಮೇಶ ಉಟಗಿ ಮಾತನಾಡಿ, ಕಾಂಗ್ರೆಸ್‌ ಮಾಜಿ ಸಚಿವ ವಿ.ಎಸ್‌. ಕೌಜಲಗಿ ಈ ಗ್ರಾಮಕ್ಕೆ ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ನೀಡಿದ್ದು ಬಿಜೆಪಿ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ಜನರನ್ನು ಮರಳು ಮಾಡುತ್ತಿದೆ ಎಂದರು. ಜೆಡಿಎಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಸತೀಶ ವಂಟಗುಡಿ, ಪ್ರಕಾಶ ಸೋನವಾಲ್ಕರ, ಎಸ್‌.ಆರ್‌. ಸೋನವಾಲ್ಕರ, ಜೆ.ಕೆ. ಉಟಗಿ, ಪಿ.ಎಲ್. ಬೇವಿನಕಟ್ಟಿ ಇತರರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ