ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಪತ್ರ ಚಳವಳಿ

Team Udayavani, Sep 18, 2019, 11:13 AM IST

ಸವದತ್ತಿ: ಸಾವಿರಾರು ಸಂಖ್ಯೆಯಲ್ಲಿ ರೈತರು ಮತ್ತು ಶ್ರೀಗಳು ನವಿಲುತೀರ್ಥ ಅಣೆಕಟ್ಟಿನಿಂದ ಪಾದಯಾತ್ರೆ ಮೂಲಕ ಒಡಕಹೊಳಿ ಕುಮಾರೇಶ್ವರ ಮಠದವರೆಗೆ ಆಗಮಿಸಿದರು.

ಸವದತ್ತಿ: ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರು ಹಾಗೂ ಸಾಮಾನ್ಯ ಜನತೆಗೆ ಸ್ಪಂದಿಸದೇ ಆಡಳಿತವನ್ನು ತಮ್ಮ ಅನುಕೂಲದಂತೆ ನಡೆಸುತ್ತಿವೆ. ಶಾಸಕಾಂಗವೂ ಸ್ವಾರ್ಥಿಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಬೇಕೆಂದು ರೈತಸೇನಾ ಮುಖಂಡ ವೀರೇಶ ಸೊಬರದಮಠ ಆರೋಪಿಸಿದರು.

ತಾಲೂಕಿನ ವಟ್ನಾಳ-ಗೊರವನಕೊಳ್ಳ ಗ್ರಾಮದ ಒಡಕಹೊಳಿ ಕುಮಾರೇಶ್ವರ ಮಠದಲ್ಲಿ ಮಂಗಳವಾರ ಮಲಪ್ರಭೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 40 ವರ್ಷಗಳ ಹಿಂದೆ ಮಹದಾಯಿ ಮಲಪ್ರಭೆಗೆ ಜೋಡಣೆ ಹೋರಾಟ ಆರಂಭವಾಗಿದ್ದು ಈ ಹೋರಾಟಕ್ಕೆ ಇದುವರೆಗೂ ಯಾವ ರಾಜಕೀಯ ಪಕ್ಷಗಳೂ ಬೆಂಬಲ ನೀಡಿಲ್ಲ. ಈ ಹಿಂದೆ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು ಚಲೋ ಚಳವಳಿಯ ಮೂಲಕ ರಾಜ್ಯದ ಎಲ್ಲ ಪ್ರಮುಖರನ್ನು ಭೇಟಿ ಮಾಡಿ, ಮನವಿ ಮಾಡಿದರೂ ಇತ್ತ ಗಮನ ಕೊಡದ ಸರ್ಕಾರಗಳು ಮಲತಾಯಿ ಧೋರಣೆ ತೋರುತ್ತಿವೆ. ನಮ್ಮ ಹೋರಾಟಕ್ಕೆ ಮುಕ್ತಿ ಸಿಗಬೇಕೆಂದರೆ ರಾಜ್ಯಪಾಲರ ಮಧ್ಯ ಪ್ರವೇಶ ಅತ್ಯವಶ್ಯ. ಸೆ.25ರಂದು 4 ಜಿಲ್ಲೆ 11 ತಾಲೂಕಿನ ರೈತರೆಲ್ಲ ಸೇರಿ ಹುಬ್ಬಳ್ಳಿಯಲ್ಲಿ ರಾಜ್ಯಪಾಲರಿಗೆ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ಎಚ್ಚರಿಸಲಿದ್ದೇವೆ. ಈ ಕುರಿತು ಕ್ರಮ ಕೈಗೊಳ್ಳದಿದ್ದರೆ ರಾಜ್ಯಪಾಲರು ಹೋರಾಟಗಾರರಿಗೆ ವಿಷ ಸೇವನೆಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.

ರಾಜಕೀಯ ಮತ್ತು ವೈಯಕ್ತಿಕ ಲಾಭಕ್ಕಾಗಿ ಎಂದಿಗೂ ಹೋರಾಟಗಳನ್ನು ಬಳಸಿಕೊಂಡಿಲ್ಲ. ಬದಲಾಗಿ ನನ್ನ ಹೋರಾಟ ರಾಜ್ಯದ ರೈತರ ಜೀವಜಲಕ್ಕಾಗಿ ಅಷ್ಟೇ. ಇಲ್ಲಸಲ್ಲದ ಅನೇಕ ಆರೋಪಗಳಿಂದ ನನ್ನ ಹೋರಾಟಕ್ಕೆ ಚ್ಯುತಿ ತರಲೆತ್ನಿಸುತ್ತಿರುವ ಕಾರ್ಯಗಳು ಇಂದಿಗೂ ನಡೆಯುತ್ತಿವೆ. ಇದ್ಯಾವುದಕ್ಕೂ ನಾನು ಜಗ್ಗುವುದಿಲ್ಲ. ಮಹದಾಯಿ ಹೋರಾಟದಲ್ಲಿ ನಿರಂತರವಾಗಿ ನನಗೆ ಬೆಂಬಲ ವ್ಯಕ್ತಪಡಿಸಿದ ಪ್ರತಿಯೊಬ್ಬರ ಜವಾಬ್ದಾರಿ ನನ್ನ ಮೇಲಿದ್ದು, ಹೋರಾಟಗಾರರಿಗೆ ನ್ಯಾಯ ಒದಗಿಸುವ ಪ್ರಯತ್ನ ನನ್ನ ಆದ್ಯ ಕರ್ತವ್ಯವಾಗಿದೆ ಎಂದರು.

ಕಳೆದ ವರ್ಷ ಸುಪ್ರೀಂಕೋರ್ಟ್‌ ತ್ರಿಸದಸ್ಯ ಪೀಠದಿಂದ 5.5 ಟಿಎಂಸಿ ನೀರು ಹರಿಸುವಂತೆ ತೀರ್ಪು ನೀಡಿತ್ತು. ಈ ಮೊದಲು ಮಹದಾಯಿ ವಿಚಾರವಾಗಿ ಕ್ಯಾತೆ ತೆಗೆಯುತ್ತಲೇ ಇದ್ದ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ಸುಪ್ರೀಮ್‌ ತೀರ್ಪಿಗೆ ವಿರೋಧ ವ್ಯಕ್ತ ಪಡಿಸುತ್ತಿಲ್ಲ. ಕಾರಣ ಮಹದಾಯಿ ವಿಷಯವನ್ನು ರಾಜಕೀಯ ದಾಳವಾಗಿ ಉಪಯೋಗಿಸಿಕೊಳ್ಳುವಂತೆ ಕಾಣುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಕರ್ನಾಟಕದಲ್ಲಿ ಮಹದಾಯಿ ಹೋರಾಟವನ್ನು ಹತ್ತಿಕ್ಕಲು ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಒಡೆದು ಆಳುವ ನೀತಿ ಅನುಸರಿಸಿ ರೈತ ಹೋರಾಟಗಾರರಲ್ಲಿ ಭಿನ್ನಾಭಿ ಪ್ರಾಯ ಸೃಷ್ಟಿಸಿದ್ದಾರೆ. ಈ ಹೋರಾಟದಲ್ಲಿ ಭಾಗವಹಿಸಿದ ಸ್ವಾಮೀಜಿಗಳನ್ನು ಸಹಿತ ಸಂಕಷ್ಟಕ್ಕೆ ದೂಡಿದ್ದಾರೆ ಎಂದರು.

ಇದಕ್ಕೂ ಮೊದಲು ಸಾವಿರಾರು ಸಂಖ್ಯೆ ಯಲ್ಲಿ ರೈತರು ನವಿಲುತೀರ್ಥ ಆಣೆಕಟ್ಟಿನಿಂದ ಪಾದಯಾತ್ರೆ ಮೂಲಕ ವಡಕಹೊಳಿ ಕುಮಾರೇಶ್ವರ ಮಠದವರೆಗೆ ಆಗಮಿಸಿ ಮಲಪ್ರಭೆಗೆ ಬಾಗಿನ ಅರ್ಪಿಸಿದರು. ಈ ಕಾರ್ಯಕ್ರಮದ ಸಭೆಯಲ್ಲಿ ಯಲ್ಲಮ್ಮ ದೇವಸ್ಥಾನದ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ಡಿವೈಎಸ್ಪಿ ಬಿ.ಎಸ್‌. ಪಾಟೀಲ, ಸಿಪಿಐ ಎಂ.ಪಿ. ಸರವ್ವಗೋಳ, ಪಿಎಸೈ ಪರಶುರಾಮ ಪೂಜೇರ, ಮುರಗೋಡ ಪಿಎಸೈ ಪ್ರಸಾದ ಪಣೇಕರ, ಎಎಸೈ ವಾಯದ ಅಲಿ ಯಾದವಾಡ ಇವರ ನೇತೃತ್ವದಲ್ಲಿ ಬಂದೋಬಸ್ತ್ ಕ್ರಮ ಕೈಗೊಳ್ಳಲಾಗಿತ್ತು.

ಈ ವೇಳೆ ತೊರಗಲ್ಲ ಚನ್ನಮಲ್ಲ ಶಿವಾಚಾರ್ಯರರು, ಸ್ವಾದಿಮಠದ ಶಿವಬಸವ ಶ್ರೀಗಳು, ಚಿಕ್ಕುಂಬಿ ನಾಗಲಿಂಗ ಶ್ರೀಗಳು, ಮುಳ್ಳೂರ ಹೊಸಮಠ ಶ್ರೀಗಳು, ಘಟಪ್ರಭದ ಮಲ್ಲಿಕಾರ್ಜುನ ಶ್ರೀಗಳು, ಏಕನಗೌಡ ಮುದ್ದನಗೌಡ್ರ ಸೇರಿದಂತೆ ಅನೇಕ ಪ್ರಮುಖರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ