ತಗ್ಗು-ಗುಂಡಿಗಳಲ್ಲಿ ಜೋಕಾಲಿ ಪಯಣ

•ಮಳೆ ಅವಾಂತರಕ್ಕೆ ಕೆರೆಯಂತಾದ ರಸ್ತೆ ಗುಂಡಿಗಳು•ನಾಗರಿಕರಿಂದ ಇಂದು ಪ್ರತಿಭಟನೆ

Team Udayavani, Jul 8, 2019, 10:16 AM IST

ಬೈಲಹೊಂಗಲ: ಮುಂಗಾರು ಮಳೆಗೆ ಪಟ್ಟಣದ ಬಸ್‌ ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳ ಗುಂಡಿಗಳಿದ್ದ ಪರಿಣಾಮ ರಸ್ತೆಗಳೇ ಹೊಂಡಗಳಾಗಿ ಮಾರ್ಪಟ್ಟಿವೆ.

ಬಸ್‌ ನಿಲ್ದಾಣ ರಸ್ತೆಯಲ್ಲಿ ಬಾರಿ ಮಳೆಯಿಂದ ನೀರು ಹರಿಯುತ್ತಿದೆ. ವಾಹನ ಸವಾರರು, ಪಾದಚಾರಿಗಳು ಓಡಾಡುವುದು ಕಷ್ಟವಾಗುತ್ತಿದೆ. ಮಳೆ ನೀರು ತುಂಬಿಕೊಂಡಿರುವ ಗುಂಡಿಯನ್ನು ನೋಡದೆ ವಾಹನ ಸವಾರರು ವೇಗವಾಗಿ ಚಲಿಸುವುದರಿಂದ ಕೊಚ್ಚೆ ನೀರು ಪಾದಚಾರಿಗಳಿಗೆ, ಪಕ್ಕದಲ್ಲಿ ಚಲಿಸುವ ವಾಹನಗಳಿಗೆ ಸಿಡಿಯುತ್ತಿದೆ. ಮಳೆ ಬರುವಾಗ ಹೊಂಡದಲ್ಲಿ ನೀರು ತುಂಬಿದರೆ ಹೊಸದಾಗಿ ಬರುವವರು ಹೊಂಡಕ್ಕೆ ಬೀಳುವ ಸ್ಥಿತಿಯಿದೆ.

ಮಳೆ ಬಂದಾಗ ಮಧ್ಯಭಾಗದಲ್ಲಿ 1ರಿಂದ 2ಅಡಿಯಷ್ಟು ಮಳೆ ನೀರು ಶೇಖರಣೆಯಾಗುತ್ತದೆ. ರಸ್ತೆಯಲ್ಲಿ ಮಕ್ಕಳು ಸಂಚರಿಸಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಅಪಘಾತಗಳು ಸಂಭವಿಸುವ ಸಂದರ್ಭಗಳು ಇವೆ. ದ್ವಿಚಕ್ರ ವಾಹನಗಳು ಮುಳುಗೇಳುತ್ತಾ ಸಂಚರಿಸುವ ಸ್ಥಿತಿ ಉದ್ಬವವಾಗಿದೆ. ಕೆಸರುಮಯ ಇಂಥ ರಸ್ತೆಗಳಲ್ಲಿ ಸಂಚರಿಸುವ ಶಾಲಾ-ಕಾಲೇಜು ವಿದ್ಯಾರ್ಥಿಗಳು, ನಾಗರಿಕರು ದಿನಂಪ್ರತಿ ಅಳುಕುತ್ತಲೆ ಚಲಿಸುತ್ತಾರೆ. ಬಹುತೇಕ ಪಟ್ಟಣದ ಭಾಗದಲ್ಲಿ ಇದೇ ಸ್ಥಿತಿ ಇದೆ.

ಪಟ್ಟಣದ ಕಿತ್ತೂರ ಚನ್ನಮ್ಮ ಸಮಾಧಿ ರಸ್ತೆ, ಬಜಾರ ರಸ್ತೆ, ಜವಳಿಕೂಟ, ಬಸವನಗರ, ವಿದ್ಯಾನಗರ ಇದೇ ಮೊದಲಾದ ಪ್ರಮುಖ ರಸ್ತೆಗಳಲ್ಲಿ ತಗ್ಗುಗುಂಡಿಗಳು ಬಿದ್ದು ಮಳೆ ನೀರು ನಿಂತರೂ ಅಧಿಕಾರಿಗಳು ಇದರತ್ತ ಗಮನ ಹರಿಸುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.

ಬಳಹಷ್ಟು ದಿನಗಳಿಂದ ಮಳೆ ನೀರು ಗುಂಡಿಗಳಲ್ಲಿ ನಿಲ್ಲುವುದರಿಂದ ಹೊಲಸು ಕೇಸರಿನಿಂದ ಆವೃತ್ತವಾದ ಪ್ರದೇಶದಲ್ಲಿ ಸೊಳ್ಳೆ, ಕ್ರಿಮಿಕೀಟಗಳಿಂದ ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟು, ನಾಗಕರಿಕರು ಆರೋಗ್ಯ ಸಮಸ್ಯೆ ತಲೆದೋರುವ ಸಮಸ್ಯೆ ಇದೆ.

ಒಮ್ಮೆ ರಸ್ತೆ ಗುತ್ತಿಗೆ ಪಡೆದವರು ಇಂತಿಷ್ಟು ವರ್ಷ ಅಥವಾ ಕನಿಷ್ಠ ಐದು ವರ್ಷ ನಿರ್ವಹಣೆ ಮಾಡಬೇಕೆಂಬ ನಿಯಮವಿದೆ. ಆದರೆ ಗುಂಡಿ ಬಿದ್ದು ಹಲವು ದಿನಗಳಾದರೂ ಇದರತ್ತ ಗಮನ ಹರಿಸದ ಕಾರಣ ಮಳೆ ನೀರು ಹರಿದು ರಸ್ತೆಗಳು ಮತ್ತಷ್ಟು ಹದಗೆಟ್ಟಿವೆ.

ಬಿದ್ದಿರುವ ತಗ್ಗು-ಗುಂಡಿಗಳನ್ನು ಮುಚ್ಚಿಸಿಬೇಕು. ವಾಹನ ಸವಾರರು ನಡೆದಾಡುವಂತೆ ಮತ್ತು ಚಾಲಕರು ಸರಾಗವಾಗಿ ವಾಹನ ಚಲಾಯಿಸಲು ಅಧಿಕಾರಿಗಳು ಅನುಕೂಲ ಮಾಡಿಕೊಡಬೇಕು ಪುರಸಭೆ, ವಿವಿಧ ಇಲಾಖೆ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ತಕ್ಷಣವೇ ದುರಸ್ತಿ..
ಪಟ್ಟಣದಲ್ಲಿ ಮಳೆಯಿಂದ ರಸ್ತೆ ಹದಗೆಟ್ಟಿರುವುದು ಗಮನಕ್ಕೆ ಬಂದಿದೆ. ಮುಂಗಾರು ಮಳೆ ಹೆಚ್ಚಾಗುತ್ತಿರುವ ಕಾರಣ ರಸ್ತೆ ಹದಗೆಟ್ಟಿವೆ. ತಕ್ಷಣವೇ ದುರಸ್ತಿ ಕೈಗೊಳ್ಳಲಾಗುವುದು.•ಶಿವಪ್ಪ ಅಂಬಿಗೇರ, ಮುಖ್ಯಾಧಿಕಾರಿ, ಪುರಸಭೆ ಬೈಲಹೊಂಗಲ

 

•ಸಿ.ವೈ. ಮೆಣಶಿನಕಾಯಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ