ಹಣ ಕೇಳಿದ್ರೆ ಲೈಸೆನ್ಸ್ ರದ್ದು: ರಾಮಪ್ಪ
Team Udayavani, Apr 12, 2020, 5:50 PM IST
ಹರಿಹರ: ಮಿನಿ ವಿಧಾನಸೌಧದಲ್ಲಿ ಶನಿವಾರ ಶಾಸಕ ಎಸ್.ರಾಮಪ್ಪ ಅಧಿಕಾರಿಗಳ ಸಭೆ ನಡೆಸಿದರು.
ಹರಿಹರ: ತಾಲೂಕಿನ ಯಾವುದೇ ನ್ಯಾಯಬೆಲೆ ಅಂಗಡಿಯವರು ಪಡಿತರ ನೀಡಲು ಹಣ ಕೇಳಿದರೆ, ತೂಕದಲ್ಲಿ ವ್ಯತ್ಯಾಸ ಮಾಡಿದರೆ, ನಿಗದಿಗಿಂತ ಕಡಿಮೆ ಆಹಾರ ಧಾನ್ಯ ವಿತರಿಸಿದರೆ ಅಂತಹ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ಶಾಸಕ ಎಸ್.ರಾಮಪ್ಪ ಎಚ್ಚರಿಸಿದರು.
ನಗರದ ಮಿನಿ ವಿಧಾನಸೌಧದಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಜನತೆ ಲಾಕ್ ಡೌನ್‌ನಿಂದ ಸಂಕಟದಲ್ಲಿದ್ದಾಗ ಮಾಸಿಕ ಪಡಿತರ ವಿತರಿಸಲು 20ರಿಂದ 100 ರೂ.ವರೆಗೆ ಹಣ ಪಡೆಯುತ್ತಿರುವುದು ನ್ಯಾಯಬೆಲೆ ಅಂಗಡಿಯವರ ನಾಚಿಕೆಗೇಡಿನ ವರ್ತನೆಯಾಗಿದೆ ಎಂದರು. ಈಗಾಗಲೆ ತಾಲೂಕಿನಾದ್ಯಂತ ಸಾಕಷ್ಟು ದೂರುಗಳು ಬಂದಿವೆ, ಹಣ ಕೇಳುವ, ಅಕ್ಕಿ-ಗೋಧಿ ಕಡಿಮೆ ನೀಡುವುದು ಕಂಡುಬಂದರೆ ಅಂತ ಅಂಗಡಿಗಳ ಬಗ್ಗೆ ಸಾರ್ವಜನಿಕರು ದೂರವಾಣಿ ಮೂಲಕ ಗಮನಕ್ಕೆ ತಂದರೂ ಪರಿಶೀಲಿಸಿ, ಪರವಾನಗಿ ರದ್ದು ಪಡಿಸಲು ತಹಶೀಲ್ದಾರ್ ಮೂಲಕ ಡಿಸಿಗೆ ವರದಿ ಕಳಿಸುತ್ತೇನೆ. ಈ ವಿಷಯದಲ್ಲಿ ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದರು.
ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಮಾತನಾಡಿ, ಆಹಾರ ಇಲಾಖೆಸಹಾಯವಾಣಿಗೂ ಈ ಕುರಿತು ದೂರುಗಳು ಬಂದಿದ್ದು, ಎಲ್ಲಾ ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗುವುದು. ಆಗಲೂ ಸುಧಾರಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದರು. ಪೌರಾಯುಕ್ತೆ ಎಸ್.ಲಕ್ಷ್ಮೀ, ಟಿಎಚ್‌ಒ ಡಾ| ಚಂದ್ರಮೋಹನ್, ಆಹಾರ ನಿರೀಕ್ಷಕರಾದ ನಜರುಲ್ಲಾ, ಬಸವರಾಜ್, ಹಿರಿಯ ಆರೋಗ್ಯ ನಿರೀಕ್ಷಕ ಎಂ.ವಿ.ಹೊರಕೇರಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ್ ಮಹಾಂತೇಶ್ ಇತರರಿದ್ದರು.