ಗುಡಪಳ್ಳಿ-ಮಂಠಾಳ ಗ್ರಾಪಂಗೆ ಪುರಸ್ಕಾರ

ಮನೆ ಮನೆಗೆ ತೆರಳಿ ಶೌಚಾಲಯ-ಸ್ವಚ್ಛತೆ ಜಾಗೃತಿ

Team Udayavani, Oct 2, 2019, 2:08 PM IST

ಔರಾದ: ತಾಲೂಕಿನ ಗುಡಪಳ್ಳಿ ಗ್ರಾಪಂಗೂ ಪ್ರಸಕ್ತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಅಭಿವೃದ್ಧಿ ಅಧಿಕಾರಿ ಉತ್ತಮ ಆಡಳಿತ ಹಾಗೂ ಸಿಬ್ಬಂದಿ ಸಹಕಾರದೊಂದಿಗೆ ಸರ್ವ ಸದಸ್ಯರು ಅಭಿವೃದ್ಧಿಯೇ ಮೂಲಮಂತ್ರ ಎಂದು ಪಠಿಸಿರುವ ಹಿನ್ನೆಲೆಯಲ್ಲಿ ಗುಡಪಳ್ಳಿ ಗ್ರಾಪಂಗೆ ಪ್ರಶಸ್ತಿ ಅರಸಿ ಬಂದಿದೆ.

2015ರಲ್ಲಿಯೇ ನೂತನ ಗ್ರಾಪಂ ಕೇಂದ್ರವಾಗಿ ರಚನೆಯಾದ ಗುಡಪಳ್ಳಿ ನಾಲ್ಕು ಗ್ರಾಮ ಹಾಗೂ ಮೂರು ತಾಂಡಾಗಳಿಂದ ಕೂಡಿದೆ. ಒಟ್ಟು 13 ಸದಸ್ಯರ ಬಲ ಹೊಂದಿರುವ ಗ್ರಾಪಂ ನಾಲ್ಕು ವರ್ಷದಲ್ಲಿಯೇ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ ಅತಿ ಕಡಿಮೆ ಅವಧಿಯಲ್ಲಿಯೇ ಗಾಂಧಿ ಗ್ರಾಮ ಪುರಸ್ಕಾರ ಪಡೆದುಕೊಂಡು ಬೀದರ ಜಿಲ್ಲೆಯಲ್ಲಿಯೆ ಮೊದಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜನಜಾಗೃತಿ: ಮನೆ ಮನೆಗೆ ತೆರಳಿ ಶೌಚಾಲಯ, ಸ್ವತ್ಛತೆ ಜಾಗೃತಿ ಮೂಡಿಸಿದೆ. ನರೇಗಾ ಯೋಜನೆಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿದೆ. ಕರ ವಸೂಲಿ ಸೇರಿದಂತೆ ಸಣ್ಣ, ಅತಿ ಸಣ್ಣ ರೈತರು ತಮ್ಮ ಹೊಲದಲ್ಲಿ ನರೇಗಾ ಯೋಜನೆಯಲ್ಲಿ ಕೆಲಸ ಮಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಿ ಉತ್ತಮ ಕೆಲಸ ಮಾಡಿದೆ.

ವಿದ್ಯುತ್‌ ಇಲ್ಲ ಸೋಲಾರ್‌ ಎಲ್ಲ: ಸರ್ಕಾರಿ ಕೆಲಸದಲ್ಲಿನ ಪ್ರತಿಯೊಂದು ಕೆಲಸಕ್ಕೂ ವಿದ್ಯುತ್‌ ಅನಿವಾರ್ಯವಾಗಿದೆ. ಆದರೆ ಗುಡಪಳ್ಳಿ ಪಂಚಾಯತ ಸದಸ್ಯರ ಹಾಗೂ ಅಧಿಕಾರಿಗಳ ಉತ್ತಮ ಆಲೋಚನೆಯಿಂದ ಪಂಚಾಯತ ಕಚೇರಿ ಮೇಲೆ ಸೋಲಾರ್‌ ಅಳವಡಿಸಿ ವಿದ್ಯುತ್‌ ಮೂಲಕವೇ ಪಂಚಾಯತನಲ್ಲಿ ಪ್ರತಿಯೊಂದು ಕೆಲಸ ಮಾಡಲಾಗುತ್ತಿದೆ. ಹೀಗಾಗಿಯೇ ನಿರಂತರ ಹಾಗೂ ಸಕಾಲಕ್ಕೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತಿದೆ. ಅದರೊಂದಿಗೆ ಪಂಚಾಯತ ಕಚೇರಿ ಮೇಲೆ ಮಳೆಗಾಲದಲ್ಲಿ ಬಿದ್ದ ಮಳೆ ನೀರು ಹಾಳಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಶೇಖರಣೆಗೆ ವ್ಯವಸ್ಥೆ ಮಾಡಲಾಗಿದೆ.

ಮಾದರಿ ಕಟ್ಟಡ: ಜನರು ಕಚೇರಿಗೆ ಬಂದು ಸಕಾಲಕ್ಕೆ ಕೆಲಸವಾಗದೆ ಇದ್ದಾಗ ವಿಶ್ರಾಂತಿ ಮಾಡಲು ಉತ್ತಮ ಕೊಠಡಿ ನಿರ್ಮಿಸಲಾಗಿದೆ. ಶುದ್ಧ ಕುಡಿಯುವ ನೀರು ಸೇರಿದಂತೆ ಇನ್ನಿತರ ಸೌಕರ್ಯ ಒದಗಿಸಲಾಗಿದೆ. ಅದಲ್ಲದೆ ಉರಿನ ಹಿರಿಯ ಮುಖಂಡರ ನೆನಪಿಗಾಗಿ ಗ್ರಾಪಂ ಕಚೇರಿಗೆ ಎಂ. ವೈ. ಘೋಡಪಳ್ಳೆ ಎಂಬ ನಾಮಫಲಕ ಹಾಕಲಾಗಿದೆ.

ಸಾಧನೆ ಹಾದಿ: ನರೇಗಾ ಯೋಜನೆಯಲ್ಲಿ ಕಲ್ಲು ಆಯುವ ಕೆಲಸ, ಚೆಕ್‌ ಡ್ಯಾಂ, ತೆರೆದ ಬಾವಿ ನಿರ್ಮಾಣ, ಕೃಷಿ ಹೊಂಡ, ಹೊಲದ ಅಂಚಿನಲ್ಲಿ ಸಸಿ ಹಚ್ಚುವ ಕೆಲಸ ಸಹ ಅಚ್ಚುಕಟ್ಟಾಗಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಇಲಾಖೆ ನಿಯಮದ ಪ್ರಕಾರ ಹತ್ತು ಸಾವಿರ ದುಡಿಯುವ ಕೈಗೆ ಕೆಲಸ ನೀಡುವಂತೆ ಗುರಿ ನೀಡಲಾಗಿತ್ತು. ಆದರೆ ಗುಡಪಳ್ಳಿ ಪಂಚಾಯತನಲ್ಲಿ ಹದಿನಾರು ಸಾವಿರ ಜನರಿಗೆ ನರೇಗಾ ಯೋಜನೆಯಲ್ಲಿ ಕೆಲಸ ನೀಡಲಾಗಿದೆ.ಪಂಚಾಯತ ವ್ಯಾಪ್ತಿಯಲ್ಲಿ 94 ಮನೆ ನಿರ್ಮಾಣ ಮಾಡುವಂತೆ ನಿಯಮ ಇತ್ತು. ಅದಕ್ಕೂ ಮೀರಿ 135 ಮನೆ ನಿರ್ಮಾಣ ಮಾಡಿ ಗುಡಿಸಲು ನಿವಾಸಿಗಳಿಗೆ ಸೂರು ಕಲ್ಪಿಸಿಕೊಡಲಾಗಿದೆ.

ನೂರರಷ್ಟು ಕರ ವಸೂಲಿ: 10 ಲಕ್ಷ ರೂ. ಕರ ವಸೂಲಿ ಮಾಡಿ ಶೇ. 100ರಷ್ಟು ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಭಿವೃದ್ಧಿ ಕೆಲಸದ ಬಗ್ಗೆ ಅರಿವು ಮೂಡಿಸಿ ಕರ ವಸೂಲಿ ಮಾಡಲಾಗಿದೆ. ಕರ ವಸೂಲಿಯಿಂದ ಬಂದ ಹಣದಲ್ಲಿ ಪಂಚಾಯತನಲ್ಲಿ ಕೆಲಸ ಮಾಡುತ್ತಿರುವ 11 ಜನ ಸಿಬ್ಬಂದಿಗೆ ಸೆಪ್ಟೆಂಬರ್‌ ತಿಂಗಳ ತನಕ ಪೂರ್ತಿ ವೇತನ ನೀಡಲಾಗಿದೆ.

ಗುಡಪಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವಾನಂದ ಔರಾದೆ ತಮ್ಮ 9 ವರ್ಷದ ಅವಧಿಯಲ್ಲಿ ಮೂರನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ತಾವು ಸೇವೆ ಮಾಡುವ ಪಂಚಾಯತ ಪಾಲಾಗುವಂತೆ ಮಾಡಿದ್ದಾರೆ.

ಪರಿಹಾರ ನಿಧಿಗೆ ಹಣ: ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ 1.35ಲಕ್ಷ ರೂ. ಹಣ ನೀಡಿ ಅತಿ ಹೆಚ್ಚು ಪರಿಹಾರ ನೀಡಿದ ಬೀದರ ಜಿಲ್ಲೆಯ ಪ್ರಥಮ ಪಂಚಾಯತ ಎಂದು ಹೆಸರು ಪಡೆದುಕೊಂಡಿದೆ.ಹಿಗಾಗಿಯೇ ಅಂದಿನ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಪಂಚಾಯತ ಅಧ್ಯಕ್ಷರಿಗೆ ಅಭಿನಂದನಾ ಪತ್ರ ಸಲ್ಲಿಸಿದ್ದಾರೆ.

 

ರವೀಂದ್ರ ಮುಕ್ತೇದಾರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ