ಹತಾಶರಾಗದೇ ಏಡ್ಸ್‌ಗೆ ಚಿಕಿತ್ಸೆ ಪಡೆಯಿರಿ

Team Udayavani, Dec 17, 2018, 12:26 PM IST

ಬೀದರ: ಎಚ್‌ಐವಿ ಏಡ್ಸ್‌ ರೋಗ ನಿಯಂತ್ರಣಕ್ಕಾಗಿ ಸರ್ಕಾರ ಸಾಕಷ್ಟು ಕಾರ್ಯಕ್ರಮ ರೂಪಿಸುತ್ತಿದ್ದು, ರೋಗಿಗಳು ಯಾವುದೇ ಕಾರಣಕ್ಕೂ ಹತಾಶರಾಗದೇ ಚಿಕಿತ್ಸೆ ಪಡೆಯಲು ಮುಂದಾಗಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಆರ್‌. ರಾಘವೇಂದ್ರ ಅಭಿಪ್ರಾಯಪಟ್ಟರು.

ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ 2030ರ ವೇಳೆಗೆ ದೇಶವನ್ನು ಎಚ್‌ಐವಿ ರೋಗದಿಂದ ಮುಕ್ತವಾಗಿಸುವ ಗುರಿ ಹೊಂದಿದೆ. ಅದರಂತೆ ಈ ರೋಗವನ್ನು ನಿರ್ಮೂಲನೆಗೊಳಿಸಲು ಪ್ರತಿಯೊಬ್ಬರು ಪಣ ತೊಡಬೇಕಿದೆ. ಎಚ್‌ಐವಿ ಬಾಧಿತರು ಕಾನೂನು ಸೇವೆ ಪಡೆಯಲು ಹೆದರಬೇಕಾಗಿಲ್ಲ. ಜಿಲ್ಲೆಯ ಎಆರ್‌ಟಿ ಕೇಂದ್ರದಲ್ಲಿ ಇಬ್ಬರು ಪ್ಯಾನಲ್‌ ವಕೀಲರನ್ನು ಸರ್ಕಾರದ ವತಿಯಿಂದ ನಿಯೋಜಿಸಲಾಗಿದೆ. ಎಚ್‌ಐವಿ ಬಾಧಿತರು ಇವರಿಂದ ಕಾನೂನು ಸಲಹೆ ಮತ್ತು ಸೇವೆ ಪಡೆಯಬಹುದಾಗಿದೆ ಎಂದು ಹೇಳಿದರು.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಮಾರ್ತಾಂಡರಾವ್‌ ಖಾಶೆಂಪುರಕರ ಮಾತನಾಡಿ, ಎಚ್‌
ಐವಿ ವೈರಾಣುವಿನಿಂದ ಬರುವ ರೋಗವಾಗಿದೆ. ಸೂಕ್ತ ಜಾಗೃತಿ ಮೂಡಿಸುವುದರಿಂದ ಮಾತ್ರ ನಿಯಂತ್ರಣ ಸಾಧ್ಯ. ಈ ರೋಗಕ್ಕೆ ಔಷಧ ಲಭ್ಯವಿಲ್ಲ. ಆದರೆ ಜೀವನಶೈಲಿ ಉತ್ತಮಗೊಳಿಕೊಳ್ಳುವ ಮೂಲಕ ರೋಗ ಬಾರದಂತೆ ನೋಡಿಕೊಳ್ಳಬಹುದು ಎಂದು ಹೇಳಿದರು. 

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಸಿ.ಎಸ್‌. ರಗಟೆ ಮಾತನಾಡಿ, ಎಚ್‌ಐವಿ ರೋಗಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಸೌಲಭ್ಯವಿದೆ. ರೋಗಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎ.ಜಬ್ಟಾರ್‌ ಮಾತನಾಡಿ, ಎಚ್‌ಐವಿ ಬಾಧಿತರಿಗೆ ಚಿಕಿತ್ಸೆ ಜತೆಗೆ ಬೆಂಬಲದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಏಡ್ಸ್‌ ನಿಯಂತ್ರಣಕ್ಕಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ವಿಜಯಕುಮಾರ ವಾಘಮೋರೆ, ದಿಲೀಪ, ಸಂತೋಷ ಸಿಂಧೆ, ಮಹಾನಂದಾ, ವಿಶ್ವನಾಥ ಸ್ವಾಮಿ ಹಾಗೂ ಶಿವಕುಮಾರ ವಾಲ್ಮೋಡ್ಡಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜಿಪಂ ಉಪಕಾರ್ಯದರ್ಶಿ ಕಿಶೋರಕುಮಾರ ದುಬೆ ಅವರು ಜಾಥಾಕ್ಕೆ ಚಾಲನೆ ನೀಡಿದರು. 

ಜಿಲ್ಲಾ ಏಡ್ಸ್‌ ನಿಯಂತ್ರಣಾಧಿ ಕಾರಿ ಡಾ| ದೀಪಾ ಖಂಡ್ರೆ, ಜಿಲ್ಲಾ ಮಟ್ಟದ ಕಾರ್ಯಕ್ರಮ ಅಧಿ ಕಾರಿ ಡಾ| ರಾಜಶೇಖರ ಪಾಟೀಲ, ಡಾ| ಇಂದುಮತಿ ಪಾಟೀಲ, ಡಾ| ಶಿವಶಂಕರ ಬಿ., ಡಾ| ಕೃಷ್ಣರೆಡ್ಡಿ, ಡಾ| ರವೀಂದ್ರ ಸಿರ್ಸೆ, ತಾಲೂಕು ಅಧಿ ಕಾರಿ ಡಾ| ಸಂಗಾರೆಡ್ಡಿ, ಎನ್‌. ಕೆ. ಜಾಬಶೆಟ್ಟಿ, ಉಪ ಆರೋಗ್ಯ ಶಿಕ್ಷಣಾ ಧಿಕಾರಿ ಸಂಗಪ್ಪ ಕಾಂಬಳೆ, ಸುಭಾಷ ಮುಧಾಳೆ, ಗೀತಾ ರೆಡ್ಡಿ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ