ಮಿಷನ್ ಇಂದ್ರಧನುಷ್ ಅನುಷ್ಠಾನಕ್ಕೆ ಸೂಚನೆ
ಕೋವಿಶಿಲ್ಡ್ ಲಸಿಕೆ ಪಡೆದುಕೊಳ್ಳಲು ಆಯಾ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು
Team Udayavani, Feb 20, 2021, 5:35 PM IST
ಬೀದರ: ತೀವ್ರಗೊಂಡ ಮಿಷನ್ ಇಂದ್ರಧನುಷ್ ಕಾರ್ಯಕ್ರಮವು ಬೀದರ ಜಿಲ್ಲೆಯಲ್ಲಿ ನೂರು ಪ್ರತಿಶತ ಅನುಷ್ಠಾನವಾಗಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅನುಷ್ಠಾನಾಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ತೀವ್ರಗೊಂಡ ಮಿಷನ್ ಇಂದ್ರಧನುಷ್
ಕಾರ್ಯಕ್ರಮದ ಪೂರ್ವ ಸಿದ್ಧತೆಗಾಗಿ ಜಿಲ್ಲಾ ಸಂಚಲನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 0 ದಿಂದ 2 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರು ಲಸಿಕೆಯಿಂದ ತಪ್ಪಿಸಿಕೊಂಡಿದ್ದರೆ ಅಥವಾ ಬಿಟ್ಟು ಹೋಗಿದ್ದರೆ ಅಂತವರನ್ನು ಗುರುತಿಸಿ ಲಸಿಕೆ ಹಾಕಿಸಲು ಕ್ರಮ ವಹಿಸಬೇಕು.
ಜಿಲ್ಲೆಯಲ್ಲಿ ಶೇ.14ರಷ್ಟು ಮಕ್ಕಳು ಲಸಿಕೆಯಿಂದ ವಂಚಿತರಾಗಿದ್ದಾರೆ ಎನ್ನುವ ಮಾಹಿತಿ ಇದ್ದು, ಇದಕ್ಕೆ ಕಾರಣಗಳನ್ನು ಗುರುತಿಸಿ ಮನವೊಲಿಸುವ ಕಾರ್ಯಕ್ರಮ ಕೈಗೊಳ್ಳಬೇಕು ಎಂದರು.
ಕೋವಿಶಿಲ್ಡ್ ಲಸಿಕೆ: ಸಭೆಯಲ್ಲಿ ಕೋವಿಶಿಲ್ಡ್ ಲಸಿಕೆ ಕುರಿತು ಮಾತನಾಡಿದ ಜಿಲ್ಲಾಧಿಕಾರಿಗಳು, ವಿವಿಧ ಇಲಾಖೆಗಳ ಮುಖ್ಯಸ್ಥರು ಕಡ್ಡಾಯವಾಗಿ ಕೋವಿಶಿಲ್ಡ್ ಲಸಿಕೆ ಪಡೆದುಕೊಳ್ಳಬೇಕು. ಅಲ್ಲದೇ ತಮ್ಮ-ತಮ್ಮ ಇಲಾಖೆಯ ಎಲ್ಲ ನೌಕರರು ಕೂಡ ಕೋವಿಶಿಲ್ಡ್ ಲಸಿಕೆ ಪಡೆದುಕೊಳ್ಳಲು ಆಯಾ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದರು.
ಆಯಾ ತಾಲೂಕುಗಳಲ್ಲಿ ಕೋವಿಶಿಲ್ಡ್ ಲಸಿಕಾ ಅಭಿಯಾನದ ಅನುಷ್ಠಾನಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಎಲ್ಲ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಯಿತು. ಹೋಮ್ ಗಾರ್ಡ್ಸ್‌ಗಳಿಗೆ ಅವರಿದ್ದಲ್ಲಿಗೆ ಹೋಗಿ ಲಸಿಕೆ ಹಾಕಲು ಸಂಬಂಧಿಸಿದ ಅನುಷ್ಠಾನಾಧಿಕಾರಿಗಳಿಗೆ ಸೂಚಿಸಲಾಯಿತು.
ಕಂಟ್ರೋಲ್ ರೂಮ್ ಬಳಸಿಕೊಳ್ಳಿ:
ಪ್ರತಿಯೊಬ್ಬರು ಕೋವಿಶಿಲ್ಡ್ ಲಸಿಕೆ ಪಡೆದುಕೊಳ್ಳಲು ಅನುಕೂಲವಾಗುವಂತೆ ಸಂದೇಶ ತಲುಪಿಸಿ ಮಾಹಿತಿ ರವಾನೆಗೆ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಕಂಟ್ರೋಲ್ ರೂಮ್‌ಗಳನ್ನು ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಸಭೆಯಲ್ಲಿ ಜಿಪಂ ಸಿಇಒ ಜಹೀರಾ ನಸೀಮ್, ಸಹಾಯಕ ಆಯುಕ್ತೆ ಗರೀಮಾ ಪನ್ವಾರ, ಡಿಎಚ್‌ಒ ಡಾ| ವಿ.ಜಿ.ರೆಡ್ಡಿ, ವೈದ್ಯಾಧಿ ಕಾರಿ ಡಾ| ಅನಿಲ್ ತಾಳಿಕೋಟಿ, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ| ಮಹೇಶ ಬಿರಾದಾರ, ಡಾ| ಶಿವಶಂಕರ, ಡಾ| ಕೃಷ್ಣಾ ರೆಡ್ಡಿ, ಡಾ| ದೀಪಾ ಕೊಂಡಾ, ಡಾ| ಸಂಜೀವಕುಮಾರ ಪಾಟೀಲ, ಸಂಗಪ್ಪ ಕಾಂಬಳೆ ಇದ್ದರು.