ನಿರಾಶ್ರಿತರಿಗೆ ಮನೆ ಹಕ್ಕುಪತ್ರ ವಿತರಣೆ

Team Udayavani, Nov 17, 2019, 3:00 AM IST

ಕೊಳ್ಳೇಗಾಲ: ತಾಲೂಕಿನಲ್ಲಿ ಇತ್ತೀಚಿಗೆ ಪ್ರವಾಹ ಬಂದು ಕಾವೇರಿ ನದಿಯ ತೀರದಲ್ಲಿರುವ ಗ್ರಾಮಗಳಿಗೆ ನೀರು ನುಗ್ಗಿದ ಪರಿಣಾಮ ಹಲವು ಮನೆಗಳು ನೆಲಕ್ಕೆ ಉರುಳಿ, ಮನೆ ಕಳೆದುಕೊಂಡ ನಿರಾಶ್ರಿತರಿಗೆ ನೂತನ ಮನೆ ನಿರ್ಮಾಣ ಮಾಡಿಕೊಳ್ಳಲು ಶಾಸಕ ಎನ್‌.ಮಹೇಶ್‌ ಹಕ್ಕುಪತ್ರಗಳನ್ನು ಶನಿವಾರ ವಿತರಣೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಇತ್ತೀಚಿಗೆ ರಾಜ್ಯವ್ಯಾಪಿ ಮಳೆ ಸುರಿದ ಪರಿಣಾಮ ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯದಿಂದ ಕಾವೇರಿ ನದಿಗೆ ಸಾವಿರಾರು ಕ್ಯೂಸೆಕ್ಸ್‌ ನೀರು ಹೊರಬಿಟ್ಟ ಪರಿಣಾಮ ಕಾವೇರಿ ನದಿ ಉಕ್ಕಿ ಹರಿದಿದೆ. ತಾಲೂಕಿನ ಮುಳ್ಳೂರು, ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿ, ಹರಳೆ ಮುಳುಗಡೆಯಾಗಿದ್ದ ಹಿನ್ನೆಲೆಯಲ್ಲಿ ಎಲ್ಲಾ ನಿರಾಶ್ರಿತರನ್ನು ತಾಲೂಕಿನ ವಿವಿಧೆಡೆಗಳಲ್ಲಿ ತೆರೆದಿದ್ದ ಸಾಂತ್ವನ ಕೇಂದ್ರಗಳಿಗೆ ರವಾನೆ ಮಾಡಲಾಗಿತ್ತು.

ಪ್ರವಾಹದ ನಂತರ ನೀರು ಹೆಚ್ಚು ಮುಂದೆ ಹರಿದು ಹೋದ ಕಾರಣ ಜಲಾವೃತಕ್ಕೆ ಸುಮಾರು 27 ಮನೆಗಳು ಕುಸಿದು ಬಿದ್ದಿತ್ತು. ದಾಸನಪುರ 15 ಮನೆ, ಹಳೇ ಅಣಗಳ್ಳಿ 7, ಮುಳ್ಳೂರು 4, ಹಂಪಾಪುರ 1 ಮನೆ ಹಾನಿಯಾಗಿ ಮನೆಯ ನಿವಾಸಿಗಳು ಬೀದಿಗೆ ಬೀಳುವಂತೆ ಆಗಿತ್ತು ಎಂದು ಆತಂಕ ವ್ಯಕ್ತಪಡಿಸಿದರು.

ಜಲಾವೃತ ಗ್ರಾಮಗಳ ವೀಕ್ಷಣೆ: ಕೂಡಲೇ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಠಾರಿಯಾ, ಆಗಿನ ಉಸ್ತುವಾರಿ ವಿ.ಸೋಮಣ್ಣ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌, ಸಾಂತ್ವನ ಕೇಂದ್ರಗಳಿಗೆ ಭೇಟಿ ನೀಡಿ ಸರ್ಕಾರ ನಿಮ್ಮೊಡನೆ ಇದ್ದು, ಎಲ್ಲರಿಗೂ ಸೌಕರ್ಯ ಕಲ್ಪಿಸಿಕೊಡುವ ಭರವಸೆಯನ್ನು ನೀಡಿದ್ದರು. ನಂತರ ಜಲಾವೃತ ಗ್ರಾಮಗಳಿಗೂ ತೆರಳಿ ಹಾನಿ ಅಂದಾಜುಗಳನ್ನು ವೀಕ್ಷಣೆ ಮಾಡಿದ್ದರು.

ಅಧಿಕಾರಿಗಳು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ, ಅಂದಾಜು ವೆಚ್ಚ ತಯಾರಿಸಿ, ನಂತರ ಅದರ ಅಂದಾಜು ವೆಚ್ಚದ ಮೌಲ್ಯವನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದ ಮೇರೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಂಪುಟ ಸಭೆ ಸೇರಿ, ಎನ್‌ಡಿಆರ್‌ಎಫ್ ಹಳೆಯ ದರದಲ್ಲಿ ನೀಡುತ್ತಿದ್ದ ಪರಿಹಾರದಿಂದ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಳ್ಳಲು ಕಷ್ಟವಾಗುತ್ತದೆಂದು ಅರಿತು ಸಂಪುಟ ಸಭೆಯಲ್ಲಿ ಮನೆ ಕಳೆದುಕೊಂಡವರಿಗೆ 5 ಲಕ್ಷ, ಮನೆ ದುರಸ್ತಿಗೆ ಒಂದು ಲಕ್ಷ, ಸಣ್ಣಪುಟ್ಟ ಹಾನಿಯಾದವರಿಗೆ 50 ಸಾವಿರ ಘೋಷಣೆ ಮಾಡಿರುವುದನ್ನು ಸ್ವಾಗತಿಸಿದರು.

ಉತ್ತಮ ಮನೆ ನಿರ್ಮಾಣ ಮಾಡಿ: ಈ ಹಿಂದೆ ಮನೆ ಕಳೆದುಕೊಂಡವರಿಗೆ 98 ಸಾವಿರ ಪರಿಹಾರವನ್ನು ನೀಡಲಾಗುತ್ತಿದ್ದು, ಇದರಿಂದ ಮನೆ ನಿರ್ಮಾಣ ಮಾಡಿಕೊಳ್ಳಲು ಕಷ್ಟವಾಗುತ್ತಿದ್ದ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಮಂಜೂರು ಮಾಡಿದೆ. ಆದೇಶ ಪತ್ರವನ್ನು ಸಹ ವಿತರಣೆ ಮಾಡಲಾಗಿದೆ. ಉತ್ತಮ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಬೇಕು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೊಂದ ಸುಮಾರು 525 ಕುಟುಂಬಗಳ ಮನೆಗಳಲ್ಲಿ ಇಡಲಾಗಿದ್ದ ಸಾಮಾಗ್ರಿಗಳನ್ನು ಕಳೆದುಕೊಂಡವರಿಗೆ ತಲಾ 2100 ನಗದು ಮತ್ತು ಗುಡಿಸಲುಗಳಿಗೆ 4100 ನೀಡಲಾಗಿದೆ. ಸರ್ಕಾರ ಎಲ್ಲಾ ರೀತಿಯ ಅನುದಾನವನ್ನು ಸಂಬಂಧಿಸಿದ ನಿರಾಶ್ರಿತರ ಖಾತೆಗೆ ನೀಡಲಾಗಿದೆ. ಸಂಪೂರ್ಣ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈಗಾಗಲೇ ಸರ್ಕಾರ ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಹ ಗ್ರಾಮಗಳಿಗೆ ನುಗ್ಗದಂತೆ ಶಾಶ್ವತ ಕಾಮಗಾರಿಗಳನ್ನು ಕೈಗೆತ್ತಿಕೊಂಡು ನೀರು ನುಗ್ಗದಂತೆ ಕ್ರಮ ವಹಿಸಲಾಗುವುದು. ನೊಂದವರ ಪಾಲಿಗೆ ಸದಾ ಸರ್ಕಾರ ಜೊತೆಗಿರುತ್ತದೆ ಎಂದು ಹೇಳಿದರು. ಈ ವೇಳೆ ಜಿಪಂ ಸದಸ್ಯ ನಾಗರಾಜು, ತಾಪಂ ಸದಸ್ಯ ಕೃಷ್ಣಪ್ಪ, ಪ್ರಭಾರ ಇಒ ಶಶಿಧರ್‌, ತಹಶೀಲ್ದಾರ್‌ ಕುನಾಲ್‌, ರಾಜಸ್ವ ನಿರೀಕ್ಷಕ ರಾಜಶೇಖರ್‌, ಗ್ರಾಮ ಲೆಕ್ಕಿಗ ರಾಜೇಂದ್ರ ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ