ಇಂದು ಗೋಪಿನಾಥಂನಲ್ಲಿ ಶಿಕ್ಷಣ ಸಚಿವರ ವಾಸ್ತವ್ಯ

Team Udayavani, Nov 18, 2019, 3:00 AM IST

ಹನೂರು: ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ರಾಜ್ಯದ ಗಡಿಯಂಚಿನ ಗ್ರಾಮ ಗೋಪಿನಾಥಂ ಶಾಲೆಯಲ್ಲಿ ವಾಸ್ತವ್ಯ ಹೂಡಲು ಸೋಮವಾರ ಸಂಜೆ 6 ಗಂಟೆಗೆ ಆಗಮಿಸಲಿದ್ದು, ಶೈಕ್ಷಣಿಕವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದ್ದಾರೆಯೇ ಎಂಬುದು ಎಲ್ಲರ ನಿರೀಕ್ಷೆಯಾಗಿದೆ.

ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ: ಚಾಮರಾಜನಗರ ಜಿಲ್ಲೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿದೆ. ಅದರಲ್ಲೂ ಹನೂರು ತಾಲೂಕು ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವ ಬರಪೀಡಿತ ಮತ್ತು ಹಿಂದುಳಿದ ವಿಸ್ತಾರವಾದ ತಾಲೂಕಾಗಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹನೂರು ತಾಲೂಕು ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ತಾಲೂಕಾಗಿದ್ದರೂ ಶೈಕ್ಷಣಿಕವಾಗಿ ಮಾತ್ರ ಶ್ರೀಮಂತವಾದ ತಾಲೂಕಾಗಿದೆ. ಕಳೆದ 4 ವರ್ಷಗಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಾಮರಾಜನಗರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ತಾಲೂಕಾಗಿದ್ದು, ರಾಜ್ಯದ 205 ತಾಲೂಕುಗಳ ಪೈಕಿ 2017-18ನೇ ಸಾಲಿನಲ್ಲಿ 8 ಸ್ಥಾನ ಮತ್ತು 2018-19ನೇ ಸಾಲಿನಲ್ಲಿ 11ನೇ ಸ್ಥಾನ ಪಡೆದಿದ್ದು ಶೈಕ್ಷಣಿಕವಾಗಿ ಪ್ರಗತಿಯ ಪಥದಲ್ಲಿರುವುದರ ಸಂಕೇತವಾಗಿದೆ.

ತಾಲೂಕಿನಲ್ಲಿ 100ಕ್ಕೂ ಹೆಚ್ಚು ಶಿಕ್ಷಕರ ಕೊರತೆ: ತಾಲೂಕಿನಲ್ಲಿ 197 ಶಾಲೆಗಳಿದ್ದು 100ಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ. ಪ್ರಾಥಮಿಕ ಶಾಲೆಗಳ 97 ಶಿಕ್ಷಕರು ಮತ್ತು ಪ್ರೌಢಶಾಲೆಯ 33 ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಅಲ್ಲದೆ ತಾಲೂಕಿನಲ್ಲಿ 16 ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಮತ್ತು 14 ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ತಾಲೂಕಿನ 117 ಶಾಲಾ ಕೊಠಡಿಗಳು ಭಾರೀ ಪ್ರಮಾಣದಲ್ಲಿ ದುರಸ್ತಿ ಹಂತದಲ್ಲಿವೆ. ಇನ್ನು 57 ಕೊಠಡಿಗಳು ಅಲ್ಪ ಪ್ರಮಾಣದಲ್ಲಿ ದುರಸ್ತಿಯಲ್ಲಿವೆ. ಅಲ್ಲದೆ ತಾಲೂಕಿನ 25 ಶಾಲೆಗಳಿಗೆ ಆಟದ ಮೈದಾನವೇ ಇಲ್ಲ. ಇನ್ನು 57 ಶಾಲೆಗಳಲ್ಲಿ ಆಟದ ಮೈದಾನವಿದ್ದರೂ ಅವು ಬಳಕೆ ಮಾಡದಂತಹ ಸ್ಥಿತಿಯಲ್ಲಿದ್ದು ಅವುಗಳ ಅಭಿವೃದ್ಧಿಗಾಗಿ ಅನುದಾನದ ಅವಶ್ಯಕತೆಯಿದೆ. 68 ಶಾಲೆಗಳಿಗೆ ಶಾಲಾ ಸುತ್ತುಗೋಡೆಗಳು ನಿರ್ಮಾಣವಾಗಿಲ್ಲ.

ವಿದ್ಯಾರ್ಥಿಗಳಿಗಿಲ್ಲ ಶೂ-ಸಾಕ್ಸ್‌, ಸಮವಸ್ತ್ರ: ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಕೂಡ ಅದು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಮುಕ್ತಾಯಗೊಳ್ಳಲು ಕೇವಲ 3-4 ತಿಂಗಳುಗಳಷ್ಟೇ ಬಾಕಿಯಿವೆ. ಆದರೆ ಸರ್ಕಾರದಿಂದ ನೀಡುವ ಶೂ-ಸಾಕ್ಸ್‌, ಸಮವಸ್ತ್ರ ಮಾತ್ರ ತಾಲೂಕಿನ ವಿದ್ಯಾರ್ಥಿಗಳಿಗೆ ದೊರೆತಿಲ್ಲ. 2018-19ನೇ ಸಾಲಿನಲ್ಲಿ 2ನೇ ಜೊತೆ ಸಮವಸ್ತ್ರವನ್ನೇ ವಿತರಿಸಿಲ್ಲ. ಇನ್ನು 2019-20ನೇ ಸಾಲಿನ ಶೈಕ್ಷಣಿಕ ವರ್ಷ ಮುಗಿಯುತ್ತಾ ಬರುತ್ತಿದ್ದರೂ ಪ್ರಸಕ್ತ ಸಾಲಿನ ಸಮವಸ್ತ್ರ ವಿತರಣೆಯಾಗಿಲ್ಲ. 2019-20ನೇ ಸಾಲಿಗೆ ಶೂ – ಸಾಕ್ಸ್‌ ವಿತರಿಸಲು ಮೇ 2019ರಲ್ಲೇ ಇಲಾಖೆಯಿಂದ ಆದೇಶ ಹೊರಡಿಸಿದ್ದರೂ ಇನ್ನೂ ಯಾವ ವಿದ್ಯಾರ್ಥಿಗೂ ಶೂ – ಸಾಕ್ಸ್‌ ದೊರೆತಿಲ್ಲ. ಇನ್ನು ಪ.ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿ ನೀಡುವ ವಿದ್ಯಾರ್ಥಿ ವೇತನ ಕೂಡ ಸಮರ್ಪಕವಾಗಿ ದೊರೆತಿಲ್ಲ.

ಶಿಕ್ಷಕರ ಪ್ರಮುಖ ಸಮಸ್ಯೆಗಳು: ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಕೆಲವೊಮ್ಮೆ ಪ್ರಾಣ ಪಣಕ್ಕಿಟ್ಟು ಶಾಲೆಗಳಿಗೆ ತೆರಳಿ ಪಾಠ-ಪ್ರವಚನ ನೀಡಿರುವ ಉದಾಹರಣೆಗಳಿವೆ. ಹನೂರು ತಾಲೂಕು ಹೇಳಿಕೇಳಿ ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವ ತಾಲೂಕು, ಬಹುತೇಕ ಗ್ರಾಮಗಳು ಅರಣ್ಯದೊಳಗಿವೆ. ಆದರೆ ಶಿಕ್ಷಕರಿಗೆ ದೊರಕುವಂತಹ ಗಿರಿಭತ್ಯೆ 100ಕ್ಕೂ ಹೆಚ್ಚು ಶಿಕ್ಷಕರಿಗೆ ಲಭಿಸುತ್ತಿಲ್ಲ.

ಸೂಕ್ತ ಬಸ್‌ ವ್ಯವಸ್ಥೆ ಇಲ್ಲ: ತಾಲೂಕಿನ ಹಲವು ಗ್ರಾಮಗಳಿಗೆ ಬಸ್‌ಗಳ ವ್ಯವಸ್ಥೆಯಿಲ್ಲದ ಹಿನ್ನೆಲೆ ಅರಣ್ಯದೊಳಗೆ ದ್ವಿಚಕ್ರ ವಾಹನ ಅಥವಾ ನಡೆದೇ ಸಾಗುವಂತಹ ಪರಿಸ್ಥಿತಿಯಿದೆ. ಈ ವೇಳೆ ಶಿಕ್ಷಕರು ಕಾಡುಪ್ರಾಣಿಗಳಿಂದ ಸಮಸ್ಯೆ ಎದುರಿಸಿರುವ ಉದಾಹರಣೆಗಳಿವೆ. ಈ ಹಿನ್ನೆಲೆ ಶಿಕ್ಷಕರಿಗೆ ವಸತಿ ಗೃಹಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಮತ್ತು ಸಮರ್ಪಕ ಬಸ್‌ವ್ಯವಸ್ಥೆ ಕಲ್ಪಿಸಬೇಕು. ಇನ್ನು ಶಿಕ್ಷಕರು ಪಾಠ- ಪ್ರವಚನಗಳ ಜೊತೆ ಬಿಸಿಯೂಟ ಯೋಜನೆ ಸೇರಿದಂತೆ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿಯಿದ್ದು ಇದು ಶೈಕ್ಷಣಿಕ ಪ್ರಗತಿಗೆ ಅಡಚಣೆಯಾಗಲಿದೆ. ಈ ಹಿನ್ನೆಲೆ ಹೆಚ್ಚುವರಿ ಜವಾಬ್ದಾರಿಗಳಿಂದ ಶಿಕ್ಷಕರನ್ನು ಹೊರತುಡಿಸಬೇಕು. ಅಲ್ಲದೆ ಈ ಭಾಗದ ಬಹುತೇಕ ಶಿಕ್ಷಕರು ಬಿಸಿಯೂಟದ ಪರಿಕರಗಳನ್ನು ಬಸ್‌ ವ್ಯವಸ್ಥೆಯಿಲ್ಲದ ಹಿನ್ನೆಲೆ ಹೆಚ್ಚಿನ ಕತ್ತೆಗಳ ಮೇಲೆ ಸಾಗಿಸಬೇಕಾದ ಪರಿಸ್ಥಿತಿಯಿದೆ.

ಇದು ಶಿಕ್ಷಕರಿಗೆ ಹೊರೆಯಾಗಿದ್ದು ಹೆಚ್ಚುವರಿ ಹಣವನ್ನು ಸರ್ಕಾರ ನೀಡುತ್ತಿಲ್ಲ. ಹೀಗೆ ತಾಲೂಕಿನಲ್ಲಿ ಶಿಕ್ಷಕರೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇನ್ನು ಸರ್ವಶಿಕ್ಷಣ ಅಭಿಯಾನದಡಿ ಹುದ್ದೆ ಪಡೆದಿರುವ ಶಿಕ್ಷಕರು ಅನುದಾನದ ಕೊರತೆಯಿಂದಾಗಿ ಸಮರ್ಪಕ ವೇತನ ಸಿಗದೆ 2 ತಿಂಗಳಿಗೊಮ್ಮೆ ಸಂಬಳ ಪಡೆಯುತ್ತಿದ್ದಾರೆ. ಒಟ್ಟಾರೆ ಹನೂರು ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶಿಕ್ಷಣ ಸಚಿವರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಕಾದು ನೋಡಬೇಕು.

ಶಿಕ್ಷಕರ ಹಿತದೃಷ್ಟಿಯಿಂದ ಸಿಆರ್‌ ನಿಯಮವನ್ನು ತಿದ್ದುಪಡಿ ಮಾಡಿ ಪದವೀಧರ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡಬೇಕು. ಎನ್‌ಪಿಎಸ್‌ ನೌಕರರ ಹೊಸ ಪಿಂಚಣಿ ವ್ಯವಸ್ಥೆ ರದ್ದುಮಾಡಿ ಹಳೇ ಪಿಂಚಣಿ ಪದ್ಧತಿಯನ್ನೇ ನೀಡಬೇಕು ಮತ್ತು ತಾಲೂಕಿನ 100ಕ್ಕೂ ಹೆಚ್ಚು ಶಿಕ್ಷಕರಿಗೆ ಗಿರಿಭತ್ಯೆ ದೊರಕದೆ ಅನ್ಯಾಯವಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಈಗಾಗಲೇ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದು ಇವುಗಳ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ನಿರೀಕ್ಷೆಯಲ್ಲಿದ್ದೇವೆ.
-ಗುರುಸ್ವಾಮಿ, ತಾಲೂಕು ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ

ಪ್ರೌಢಶಾಲೆಯ ಮುಖ್ಯ ಶಿಕ್ಷಕರಿಗೆ ವಾರ್ಷಿಕವಾಗಿ ನೀಡುವ 30 ದಿನಗಳ ಗಳಿಕೆ ರಜೆ ವ್ಯವಸ್ಥೆಯನ್ನು ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೂ ಕಲ್ಪಿಸಬೇಕು. 1-8ನೇ ತರಗತಿ ಇರುವ ಶಾಲೆಗಳು ಮತ್ತು ಹೆಚ್ಚಿನ ವಿದ್ಯಾರ್ಥಿಗಳು ಇರುವ ಶಾಲೆಗೆ ಮುಖ್ಯ ಶಿಕ್ಷಕರ ಜವಾಬ್ದಾರಿ ಕಡಿತಗಳಿಸುವ ನಿಟ್ಟಿನಲ್ಲಿ ಪ್ರತಿ ಶಾಲೆಗೂ ಕ್ಲರ್ಕ್‌ ನೇಮಕ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು.
-ನಂಜುಂಡಸ್ವಾಮಿ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ

* ವಿನೋದ್‌ ಎನ್‌.ಗೌಡ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ