ನಾಳೆಯಿಂದ ಜಿಲ್ಲೆಯಲ್ಲಿ ಸ್ವಚ್ಛಮೇವ ಜಯತೇ

Team Udayavani, Jun 10, 2019, 3:00 AM IST

ಚಾಮರಾಜನಗರ: ಜಿಪಂ ವತಿಯಿಂದ ಜೂ.11ರಿಂದ ಜುಲೈ 10ರವರೆಗೆ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ವಚ್ಛಮೇವ ಜಯತೇ ಹಾಗೂ ಜಲಾಮೃತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಜೂ.11ರಂದು ಸ್ವಚ್ಛಮೇವ ಜಯತೇ ಹಾಗೂ ಜಲಾಮೃತ ಕಾರ್ಯಕ್ರಮಗಳಿಗೆ ಚಾಲನೆ ದೊರೆಯುವ ಹಿನ್ನೆಲೆಯಲ್ಲಿ ವಿಶೇಷ ಹಾಗೂ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 1000 ಸಸಿ ನೆಡಲಾಗುವುದು. ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವ ಸ್ವಚ್ಛತಾ ರಥಕ್ಕೆ ಹಸಿರು ನಿಶಾನೆ ತೋರಲಾಗುತ್ತದೆ.

ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಪಂ ಅಧ್ಯಕ್ಷರು, ಸದಸ್ಯರ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ. ಈ ವೇಳೆ ಸಸಿ ನೆಡುವ ಕಾರ್ಯಕ್ರಮ, ಕುಂಭಮೇಳ ಜಾಥಾ, ಪೋಸ್ಟರ್‌, ಭಿತ್ತಿಪತ್ರ, ಹಾಗೂ ಸ್ಟಿಕ್ಕರ್‌ ಬಿಡುಗಡೆ, ಸ್ವಚ್ಛತಾ ರಥ ಚಾಲನೆ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ನಡೆಯಲಿದೆ.

ಜಿಲ್ಲಾ ಹಾಗೂ ತಾಲೂಕು ಹಂತದಲ್ಲಿ ನಡೆಯಲಿದ್ದು, ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ಜೂ. 11 ರ ಬೆಳಗ್ಗೆ 9.30 ಕ್ಕೆ ಸ್ವಚ್ಛಮೇವ ಜಯತೇ ಹಾಗೂ ಜಲಾಮೃತ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು.

ಚಾಮರಾಜನಗರ ತಾಲೂಕಿಗೆ ಸಂಬಂಧಿಸಿದಂತೆ ಚಂದಕವಾಡಿ ಗ್ರಾಮದ ಸರ್ಕಾರಿ ಕರ್ನಾಟಕ ಪಬ್ಲಿಕ್‌ ಶಾಲಾ ಅವರಣದಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಜಿಪಂ ಅಧ್ಯಕ್ಷೆ ಶಿವಮ್ಮ ಚಾಲನೆ ನೀಡುವರು. ಜಿಪಂ ಸಿಇಒ ಕೆ.ಎಸ್‌.ಲತಾಕುಮಾರಿ ಉಪಸ್ಥಿತರಿರುವರು.

ಗುಂಡ್ಲುಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಬೇಗೂರು ಗ್ರಾಮದ ಐಟಿಐ ಕಾಲೇಜಿನಲ್ಲಿ ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌, ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ ಗ್ರಾಪಂ ಆವರಣದಲ್ಲಿ ಶಾಸಕ‌ ಎನ್‌. ಮಹೇಶ್‌, ಹನೂರು ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಜಿ.ವಿ.ಗೌಡ ಸರ್ಕಾರಿ ಪ್ರೌಢಶಾಲಾ ಅವರಣದಲ್ಲಿ ಶಾಸಕ‌ ಆರ್‌.ನರೇಂದ್ರ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

ನೀರು ಉಳಿಸುವುದು, ಹಸಿರು ಬೆಳೆಸುವುದು, ಸ್ವಚ್ಛತೆ ಕಾಪಾಡಿಕೊಳ್ಳುವುದು ಜಲಾಮೃತ ಮತ್ತು ಸ್ವಚ್ಛ ಮೇವ ಜಯತೆಯ ಉದ್ದೇಶ. ಸಸಿ ನೆಡುವ ಮೂಲಕ ಹಸಿರು, ನೀರು, ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಒಂದು ತಿಂಗಳ ಕಾಲ ಹಮ್ಮಿಕೊಳ್ಳಲಾಗಿದೆ.
-ಕೆ.ಎಸ್‌. ಲತಾಕುಮಾರಿ, ಜಿಪಂ ಸಿಇಒ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ