ಗಿರಿಜನರ ಅಭಿವೃದ್ಧಿಗೆ ವನ್ಯಜೀವಿ ಕಾನೂನು ಅಡ್ಡಿ

ಜಿಲ್ಲೆಯ 148 ಪೋಡುಗಳಲ್ಲಿ ವಾಸ ಮಾಡುತ್ತಿರುವ 45 ಸಾವಿರ ಸೋಲಿಗರು • ಇಂದು ವಿಶ್ವ ಆದಿವಾಸಿ ದಿನ

Team Udayavani, Aug 9, 2019, 2:35 PM IST

ಸಂತೆಮರಹಳ್ಳಿ: ಆದಿ ಮಾನವ ಕಾಡಿನಲ್ಲಿ ವಾಸ ಮಾಡುತ್ತಿದ್ದ ಎಂಬುದನ್ನು ವೈಜ್ಞಾನಿಕ ವಿಶ್ಲೇಷಣೆಗಳು ಸಾಬೀತು ಪಡಿಸಿವೆ. ಇದರ ಕುರುಹಾಗಿ ಇನ್ನೂ ಕೂಡ ಆದಿವಾಸಿಗಳು ತಮ್ಮ ವಿಶಿಷ್ಟ ಸಂಸ್ಕೃತಿಗೆ ಕಿಂಚಿತ್ತೂ ಧಕ್ಕೆ ಬಾರದ ರೀತಿಯಲ್ಲಿ ತಮ್ಮ ಸಂಪ್ರದಾಯಗಳ ಪ್ರತಿನಿಧಿಗಳಾಗಿ ಇಂದೂ ಕೂಡ ಕಾಡಿನಲ್ಲೇ ವಾಸವಾಗಿದ್ದಾರೆ. ಆದರೆ ಅರಣ್ಯ ಹಕ್ಕು ಕಾನೂನು ಇನ್ನೂ ಸಂಪೂರ್ಣವಾಗಿ ಜಾರಿಯಾಗದ ಹಿನ್ನೆಲೆಯಲ್ಲಿ ಅವರ ಹೋರಾಟ ಇನ್ನೂ ನಿರಂತರವಾಗಿದೆ.

ಆದಿವಾಸಿಗಳ ಅಭಿವೃದ್ಧಿಗಾಗಿ ಮಹತ್ವ ನೀಡುವ ನಿಟ್ಟನಲ್ಲಿ ವಿಶ್ವ ಸಂಸ್ಥೆ 1995ರಲ್ಲಿ ಆ.9ರಂದು ವಿಶ್ವ ಆದಿವಾಸಿ ದಿನವನ್ನಾಗಿ ಘೋಷಿಸಿದೆ. ಹಾಗಾಗಿ 2019ನೇ ವರ್ಷಾಚರಣೆಯಲ್ಲಿ ‘ಆದಿವಾಸಿಗಳ ಭಾಷೆ ಗಳು ಮತ್ತು ಹೋರಾಟ’ ಎಂಬ ಧ್ಯೇಯವಾಕ್ಯವನ್ನು ಘೋಷಿಸಲಾಗಿದೆ.

ಸಮೀಕ್ಷೆಗಳಿಂದ ಸಾಬೀತು: ಭಾರತದಲ್ಲಿ 3 ಸಾವಿರಕ್ಕಿಂತ ಹೆಚ್ಚು ಹಾಗೂ ಕರ್ನಾಟಕದಲ್ಲಿ 50 ಬುಡಕಟ್ಟು ಸಮುದಾಯಗಳಿವೆ. ಇವರನ್ನು ಸೋಲಿಗರು, ಜೇನು ಕುರುಬ, ಕಾಡು ಕುರುಬ, ಕೊರಗ, ಯರವ, ಮಲೆಕುಡಿಯ, ಕುಡಿಯ, ಇರುಳಿಗ, ಹಸಲರು, ಗೌಡಲು, ಸಿದ್ದಿ ಈ ರೀತಿಯ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಆದಿವಾಸಿ ಅರಣ್ಯ ಸಮುದಾಯಗಳ ಪ್ರಕೃತಿಯ ಭಾಗವಾಗಿ ನೆಲೆ, ಜಲ, ಅರಣ್ಯ ಮತ್ತು ಜೀವವೈವಿಧ್ಯತೆಯೊಂದಿಗೆ ಸಹ ಜೀವನ ನಡೆಸುತ್ತಿ ದ್ದಾರೆ. ಆದಿವಾಸಿಗಳು ಇರುವ ಸ್ಥಳಗಳಲ್ಲಿ ಸಮೃದ್ಧ ಕಾಡುಗಳ, ಪ್ರಾಣಿ ಪಕ್ಷಿಗಳು ಹೆಚ್ಚಾಗಿ ಕಂಡು ಬರುತ್ತದೆ ಎಂಬುದು ಸಮೀಕ್ಷೆಗಳು ಸಾಬೀತು ಪಡಿಸಿವೆ.

ಶೇ.50 ರಷ್ಟು ಅರಣ್ಯ ಪ್ರದೇಶ: ಚಾಮರಾಜನಗರ ಜಿಲ್ಲೆಯು ಶೇ.50 ರಷ್ಟು ಅರಣ್ಯ ಪ್ರದೇಶ ಒಳ ಗೊಂಡಿದೆ. ಇವುಗಳಲ್ಲಿ ಬಿಳಿಗಿರಿರಂಗನಸ್ವಾಮಿ ಹುಲಿ ರಕ್ಷಿತ ಅರಣ್ಯ ಪ್ರದೇಶ, ಮಲೈ ಮಹದೇಶ್ವರ ವನ್ಯಜೀವಿ ಧಾಮ, ಬಂಡೀಪುರ ರಾಷ್ಟ್ರೀಯ ಉದ್ಯಾನವನ ಮತ್ತು ಕಾವೇರಿ ವನ್ಯಜೀವಿಧಾಮ ಮತ್ತು ಕೊಳ್ಳೇಗಾಲ ಮೀಸಲು ಅರಣ್ಯ ಪ್ರದೇಶ ಒಳಗೊಂಡಿದೆ. ಈ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ 148 ಪೋಡುಗಳಲ್ಲಿ ಒಟ್ಟು 45 ಸಾವಿರ ಸೋಲಿಗ ಜನಾಂಗದವರು ವಾಸಿಸುತ್ತಿದ್ದಾರೆ.

ಅಭಿವೃದ್ಧಿಗೆ ಅಡ್ಡಿಯಾದ ವನ್ಯ ಜೀವಿ ಕಾನೂನು: ಕಾಡನ್ನು ದೇವರು ಎಂದು ನಂಬಿಕೊಂಡು ಜೀವನ ಸಾಗಿಸುತ್ತಿದೆ. ಜನರಿಗೆ ಕಾಡಿನ ಸಂರಕ್ಷಣೆಯ ಮಾ ಡುವ ನಿಟ್ಟಿನಲ್ಲ ಕೇಂದ್ರ ಸಕಾರವು 1972ರಲ್ಲಿ ವನ್ಯ ಜೀವ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಿತ್ತು. ಇದರಿಂದ ಅರಣ್ಯದೊಳಗೆ ನೆಲಸಿರುವ ಆದಿವಾಸಿಗಳ ಹಕ್ಕುಗಳನ್ನು ಮಾನ್ಯತೆ ನೀಡದೆ ದೌರ್ಜನ್ಯದಿಂದ ಬಲವಂತವಾಗಿ ಎತ್ತಂಗಡಿ ಮಾಡಿದ ಕಾರಣದಿಂದಾಗಿ ಸೋಲಿಗರು ಅತಂತ್ರರಾಗುವಂತೆ ಈ ಕಾಯ್ದೆ ಜಾರಿಯಾಗಿದೆ.

ಅನೇಕ ಕಾಯ್ದೆ ಜಾರಿ: ಆದಿವಾಸಿಗಳು ವಾಸಮಾಡುವ ಪ್ರದೇಶಗಳಲ್ಲಿ ಹುಲಿ ಯೋಜನೆ, ರಾಷ್ಟ್ರೀಯ ಉದ್ಯಾ ನವನಗಳು, ವನ್ಯಜೀವಿಧಾಮಗಳು ಮತ್ತು ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಿ ಆದಿವಾಸಿಗಳ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಈ ಅನ್ಯಾಯದ ವಿರುದ್ಧ ಆದಿವಾಸಿಗಳು ಸಂಘಟಿತರಾಗಿ ನಡೆಸಿದ ಹೋರಾಟದ ಫ‌ಲವಾಗಿ ಭಾರತ ಸರ್ಕಾರವು ಇವರ ಅಭಿವೃದ್ಧಿಗಾಗಿ ಅನೇಕ ಕಾಯ್ದೆ ಮತ್ತು ಕಾನೂನು ಜಾರಿಗೆ ತಂದಿತ್ತು. ಇದರಲ್ಲಿ 2006ರ ಅರಣ್ಯ ಹಕ್ಕು ಕಾಯ್ದೆ ಪ್ರಮುಖ ವಾದುದು. ಇದರೊಂದಿಗೆ ಜೀತ ವಿಮುಕ್ತ ಕಾಯ್ದೆ, ಜಮೀನು ಪರಬಾರೆ ನಿಷೇಧ ಕಾಯ್ದೆ, ದೌರ್ಜನ್ಯ ನಿಯಂತ್ರಣ ಕಾಯ್ದೆ, ಅರಣ್ಯ ಹಕ್ಕು ಮಾನ್ಯತೆ ಹಾಗೂ ಗಿರಿಜನ ಉಪಯೋಜನೆ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ಇವುಗಳು ಸಮರ್ಪಕವಾಗಿ ಅನುಷ್ಠಾನ ಗೊಳಿಸುತ್ತಿಲ್ಲ. ಇದರಿಂದ ಸೋಲಿಗರು, ಬುಡಕಟ್ಟು ಜನಾಂಗದವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ.

ಮೂಲ ಸೌಲಭ್ಯವಿಲ್ಲ: ಕಾಡಿನಲ್ಲಿ ವಾಸಿಸುವ ಸೋಲಿಗರಿಗೆ ಕುಡಿಯುವ ನೀರು, ವಿದ್ಯುತ್‌ ಸಂಪರ್ಕ, ರಸ್ತೆ, ಮನೆ, ಕೆಲಸ, ಶಿಕ್ಷಣ ಸೇರಿದಂತೆ ಅನೇಕ ಪ್ರಮುಖ ಸೌಲಭ್ಯಗಳು ವಂಚಿತರಾಗು ತ್ತಿದ್ದಾರೆ. ಇವು ಪಡೆಯಬೇಕಾದರೆ ಅರಣ್ಯ ಇಲಾಖೆಅನುಮತಿ ಕಡ್ಡಾಯ. ಆದರೆ ಇದನ್ನು ಅಷ್ಟು ಸುಲಭವಾಗಿ ಪಡೆದು ಕೊಳ್ಳಲು ಸಾಧ್ಯವಿಲ್ಲ. ಅರಣ್ಯ ಪ್ರದೇಶದ ಲ್ಲಿರುವ ಸೋಲಿಗರ ಕುಟುಂಬಗಳು ಇನ್ನೂ ಕೂಡ ಸೌಲಭ್ಯದಿಂದ ವಂಚಿತರಾಗಿ ಬದುಕನ್ನು ನಡೆಸುತ್ತಿದ್ದಾರೆ. ಇವುಗಳ ಬಗ್ಗೆ ಸರ್ಕಾರ, ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸೇರಿದಂತೆ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು ಎಂಬುದು ಬೆಟ್ಟದ ಮಾದೇಗೌಡ, ಕ್ಯಾತೇಗೌಡ ಸೇರಿದಂತೆ ಅನೇಕ ಸೋಲಿಗರ ಒತ್ತಾಸೆಯಾಗಿದೆ.

 

● ಫೈರೋಜ್‌ಖಾನ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ