ಬರದ ಜಿಲ್ಲೆಯಲ್ಲಿ ಪರಿಸರ ಹಬ್ಬದ ಸಂಭ್ರಮ

ಗಿಡ ನೆಟ್ಟರಷ್ಟೇ ಸಾಲದು ಪ್ರತಿಯೊಬ್ಬರು ಪೋಷಣೆ ಶಪಥ‌ ಮಾಡಬೇಕು • ಉಸ್ತುವಾರಿ ಸಚಿವ ಶಿವಶಂಕರರೆಡ್ಡಿ ಸಲಹೆ

Team Udayavani, Jun 6, 2019, 10:59 AM IST

ಚಿಕ್ಕಬಳ್ಳಾಪುರ: ಪರಿಸರ ದಿನದ ನಿಮಿತ್ತ ಗಿಡ ನೆಡುವುದಷೇ ಅಲ್ಲ. ಗಿಡನೆಡುವುದರ ಜೊತೆಗೆ ಅದರ ಪೋಷಣೆ ಮಾಡುವ ಶಪಥವನ್ನು ಪ್ರತಿಯೊಬ್ಬರು ಮಾಡಬೇಕು. ಆಗ ಮಾತ್ರ ಪರಿಸರ ಉಳಿಸಿ ಬೆಳೆಸಲು ಹಾಗೂ ಸಂರಕ್ಷಿಸಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್‌.ಎಚ್. ಶಿವಶಂಕರರೆಡ್ಡಿ ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಖನಿಜಾ ಪ್ರತಿಷ್ಠಾನ ಸಹಯೋಗದಲ್ಲಿ ನಂದಿ ಸಮೀಪದ ಕಣಿವೆ ನಾರಾಣಪುರ ಚನ್ನಗಿರಿ ಬೆಟ್ಟದ ಸಾಲಿನಲ್ಲಿ ಬುಧವಾರ ಸಾಮೂಹಿಕ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ಲಾಸ್ಟಿಕ್‌ ಬಳಕೆ ನಿಲ್ಲಲಿ: ಇತ್ತೀಚಿನ ದಿನಗಳಲ್ಲಿ ದಿನಗಳಲ್ಲಿ ಅರಣ್ಯನಾಶದಿಂದ ಜಾಗತಿಕ ತಾಪಮಾನ ಹೆಚ್ಚಾಗಿದೆ. ಇದರಿಂದ ದೇಶದ ಕೃಷಿ, ಆರೋಗ್ಯ, ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಬೀರ ತೊಡಗಿವೆ. ಜೊತೆಗೆ ಮಳೆಯ ಅಭಾವದಿಂದಾಗಿ ಪ್ರಕೃತಿ ಅಸಮತೋಲವಾಗಿದೆ. ಆದ್ದರಿಂದ ಪ್ರಕೃತಿಯನ್ನು ನಾವೆಲ್ಲರೂ ರಕ್ಷಿಸಬೇಕಾಗಿದೆ. ಇಲ್ಲಿನ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಹೆಚ್ಚಾಗಿ ಗಿಡಿ ನೆಡುವುದರ ಜೊತೆಗೆ ಅದನ್ನು ಕಾಪಾಡವುದು ಎಲ್ಲರ ಹೊಣೆಯಾಗಿರುತ್ತದೆ. ಗಿಡ ಮರ ಬೆಳೆಸಲು ಯುವಕರು, ಶಾಲಾ ಮಕ್ಕಳು ಮುಂದೆ ಬರಬೇಕು. ಒಳ್ಳೆಯ ಗಾಳಿ ಆರೋಗ್ಯ ಸಿಗಲು ಮರ ಗಿಡಗಳ ಅತ್ಯಗತ್ಯ. ಜಿಲ್ಲೆಯಲ್ಲಿ ಅರಣ್ಯದ ಕೊರತೆಯಿಂದ ಮಳೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿ ಜಿಲ್ಲೆಯು ಬರ ಪರಿಸ್ಥಿತಿ ಎದುರುಸವಂತಾಗಿದೆ. ಜಿಲ್ಲಾದ್ಯಂತ ವರ್ಷ ಪೂರ್ತಿ ಗಿಡ ನೆಡುವ ಕಾರ್ಯವನ್ನು ಮುಂದುವರೆಸಿ ಅದರ ಪೋಷಣೆ ಮಾಡುವ ಕುರಿತು ಪ್ರತಿಯೊಬ್ಬರು ಪ್ರತಿಜ್ಞೆ ಮಾಡಬೇಕೆಂದು ಸಲಹೆ ನೀಡಿದ ಸಚಿವರು, ಪರಿಸರ ಮಾಲಿನ್ಯ ತಡೆಯಬೇಕಿದ್ದು, ಅಪಾಯಕಾರಿ ಪ್ಲಾಸ್ಟಿಕ್‌ ಬಳಕೆ ನಿಲ್ಲಬೇಕೆಂದರು.

ಇಂದಿನ ದುಸ್ಥಿತಿಗೆ ದುರಾಸೆ ಕಾರಣ: ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಾ.ಕೆ ಸುಧಾಕರ್‌, ಮಾನವನ ದುರಾಸೆಗೆ ಇಂದು ವಿಪರೀತವಾಗಿ ಪರಿಸರ ನಾಶ ಮಾಡಲಾಗಿದೆ. ಇದೇ ಪ್ರಮಾಣದಲ್ಲಿ ಪರಿಸರ ನಾಶವಾದರೆ, ಭವಿಷ್ಯದಲ್ಲಿ ಜೀವ ಸಂಕುಲಕ್ಕೆ ಸುಗಮ ಜೀವನ ಕಷ್ಟಕರವಾಗಿರುತ್ತದೆ. ಈಗಾಗಲೇ ತೀವ್ರವಾದ ಬರ ಎದುರಿಸುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ನದಿಗಳು ಬತ್ತು ಹೋಗಿದೆ. ನದಿಗಳನ್ನು ಪುನರುಜ್ಜೀಸಿಕೊಳ್ಳಬೇಕಾದರೆ, ಅರಣ್ಯ ರಕ್ಷಣೆ ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ, ಅರಣ್ಯ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿರುತ್ತದೆ ಎಂದರು. ವರ್ಷದಿಂದ ವರ್ಷಕ್ಕೆ ಬರಗಾಲವನ್ನು ಎದುರಿಸುವ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಮಾತ್ರವಲ್ಲದೇ ಸಸಿಗಳನ್ನು ನೆಡುವ ಕಾರ್ಯ ಆಂದೋಲನವಾಗಿ ರೂಪಗೊಳ್ಳಬೇಕೆಂದರು.

ಸಸಿನೆಟ್ಟ ಗಣ್ಯರು: ಇದೇ ಸಂದರ್ಭದಲ್ಲಿ ಮುದ್ದೇನಹಳ್ಳಿಯ ಸರ್‌.ಎಂ.ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದ ಸುತ್ತಮುತ್ತ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವರಾ ಎನ್‌.ಹೆಚ್.ಶಿವಶಂಕರರೆಡ್ಡಿ ಮತ್ತಿತರ ಗಣ್ಯರು ಸಸಿಗಳನ್ನು ನೆಟ್ಟು ಜಿಲ್ಲಾಡಳಿತ, ಜಿಪಂ ಹಮ್ಮಿಕೊಂಡಿರುವ ಪರಿಸರ ಸಂರಕ್ಷಣೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಜಿಪಂ ಅಧ್ಯಕ್ಷ ಎಚ್.ವಿ.ಮಂಜುನಾಥ್‌, ಜಿಲ್ಲಾಧಿಕಾರಿಅನಿರುದ್ಧ್ ಶ್ರವಣ್‌, ಜಿಪಂ ಸಿಇಓ ಗುರುದತ್‌ ಹೆಗಡೆ, ಅರಣ್ಯ ಇಲಾಖ ಉಪ ಸಂರಕ್ಷಣಾಧಿಕಾರಿ ರವಿಶಂಕರ್‌, ಅಪರ ಜಿಲ್ಲಾಧಿಕಾರಿ ಅರತಿ ಆನಂದ್‌, ಉಪಭಾಗಧಿಕಾರಿ ಬಿ.ಶಿವಸ್ವಾಮಿ, ತಹಸೀಲ್ದಾರ್‌ ಕೆ.ನರಸಿಂಹಮೂರ್ತಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಮಧುಸೂಧನ್‌ ಎಸ್‌, ಸಹಾಯಕ ಪರಿಸರ ಅಧಿಕಾರಿ ವಿಜಯ ಎಂ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪರಿಸರ ಸ್ನೇಹಿ ಕೈ ಚೀಲ ಬಿಡುಗಡೆ:

ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಜಿಲ್ಲಾದ್ಯಂತ ಪ್ಲಾಸ್ಟಿಕ್‌ ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ಪ್ಲಾಸ್ಟಿಕ್‌ ಚೀಲದ ಬದಲಿಗೆ ಪರಿಸರ ಸ್ನೇಹಿ ಬಟ್ಟೆಯ ಕೈಚೀಲವನ್ನು ಬಳಕೆ ಮಾಡಿ ಎಂಬುದನ್ನು ಸಾರ್ವಜನಿಕರಿಕೆ ಮನವರಿಕೆ ಮಾಡುವ ಉದ್ದೇಶದಿಂದ ಕಾರ್ಯಕ್ರಮದಲ್ಲಿ ಪರಿಸರ ಮಾಲಿನ್ಯ ನಿಯಂ ತ್ರಣ ಮಂಡಳಿ ವತಿಯಿಂದ ಸಿದ್ಧಪಡಿಸಿರುವ ಕೈಚೀಲವನ್ನು ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಹೆಚ್.ಶಿವ ಶಂಕರರೆಡ್ಡಿ, ಶಾಸಕ ಡಾ.ಕೆ.ಸುಧಾಕರ್‌, ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್‌ ಸೇರಿದಂತೆ ಮತ್ತಿತರರು ಬಿಡುಗಡೆ ಮಾಡಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ