ಇಂದಿನಿಂದ ಜಿಲ್ಲಾದ್ಯಂತ ಆಹಾರ ಆಯೋಗ ಸಂಚಾರ

Team Udayavani, Oct 21, 2019, 3:00 AM IST

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013ರ ಅನುಷ್ಠಾನದ ಬಗ್ಗೆ ಖುದ್ದು ಪರಿಶೀಲಿಸಲು ರಾಜ್ಯ ಆಹಾರ ಆಯೋಗ ಅಧ್ಯಕ್ಷ ಡಾ.ಕೃಷ್ಣಮೂರ್ತಿ ನೇತೃತ್ವದ ತಂಡ ಇಂದಿನಿಂದ ಜಿಲ್ಲೆಯಲ್ಲಿ ಅ.23ರ ವರೆಗೂ ಸತತ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

ಪರಿಶೀಲನಾ ಪ್ರವಾಸ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013, ಸೆಕ್ಷನ್‌ 16 ರ ಅನ್ವಯ ರಾಜ್ಯ ಆಹಾರ ಆಯೋಗ ರಚನೆ ಮಾಡಲಾಗಿದ್ದು ಈ ಆಯೋಗದಲ್ಲಿ ಅಧ್ಯಕ್ಷರು ಸೇರಿದಂತೆ ಏಳು ಜನ ಸದಸ್ಯರಿದ್ದು, ರಾಜ್ಯದ ಹಲವು ಜಿಲ್ಲೆಗಳ ಪ್ರವಾಸ ನಡೆಸಿರುವ ಆಹಾರ ಆಯೋಗ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಸೋಮವಾರದಿಂದ ಬುಧವಾರವರೆಗೂ ಪರಿಶೀಲನಾ ಪ್ರವಾಸ ಕೈಗೊಂಡಿದೆ.

ಭೇಟಿ ಸ್ಥಳಗಳ ಬಗ್ಗೆ ಗೌಪ್ಯ: ಆಯೋಗದ ಅಧ್ಯಕ್ಷ ಡಾ.ಕೃಷ್ಣಮೂರ್ತಿ, ಆಯೋಗದ ಸದಸ್ಯರಾದ ಶಿವಶಂಕರ್‌, ಅಸಬಿ, ಮಂಜುಳಾಬಾಯಿ ಸೇರಿದಂತೆ ಹಲವು ಮಂದಿ ಸದಸ್ಯರು ಜಿಲ್ಲೆಗೆ ಆಗಮಿಸಲಿದ್ದು, ಭಾನುವಾರ ರಾತ್ರಿಯೇ ಜಿಲ್ಲೆಗೆ ಆಗಮಿಸಿ ನಗರದ ಪ್ರವಾಸ ಮಂದಿರದಲ್ಲಿ ವಾಸ್ತವ್ಯ ಇರುವ ತಂಡ, ಸೋಮವಾರ ಪರಿಶೀಲನೆಗೆ ತೆರಳಲಿದ್ದು, ಆಯೋಗ ಭೇಟಿ ನೀಡುವ ಸ್ಥಳಗಳ ಬಗ್ಗೆ ರಹಸ್ಯವಾಗಿ ಇಡಲಾಗಿದೆ.

ಆಹಾರ ಪೂರೈಕೆ ಮಾಹಿತಿ: ಪ್ರಮುಖವಾಗಿ ಆಯೋಗವು ಸಾರ್ವಜನಿಕರ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಆಹಾರ ಧಾನ್ಯಗಳ ಗುಣಮಟ್ಟ, ನ್ಯಾಯಬೆಲೆ ಅಂಗಡಿಗಳ ಕಾರ್ಯವೈಖರಿ, ಬಿಸಿಯೂಟ ಯೋಜನೆ, ಅಂಗನವಾಡಿಗಳಿಗೆ ಆಹಾರ ಪೂರೈಕೆ ಸೇರಿದಂತೆ ಜಿಲ್ಲೆಯಲ್ಲಿ ಆಹಾರ ಪೂರೈಕೆ ಸಂಬಂಧ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ದಿಸೆಯಲ್ಲಿ ಜಿಲ್ಲೆಯ ಆರು ತಾಲೂಕು ಕೇಂದ್ರಗಳಲ್ಲಿ ಪ್ರವಾಸ ಹಮ್ಮಿಕೊಂಡಿದೆ.

ಅಪೌಷ್ಟಿಕ ಮಕ್ಕಳ ಘಟಕಗಳಿಗೆ ಭೇಟಿ: ಪ್ರವಾಸದ ವೇಳೆ ಜಿಲ್ಲಾ ವ್ಯಾಪ್ತಿಗೆ ಬರುವ ನ್ಯಾಯಬೆಲೆ ಅಂಗಡಿಗಳು, ಸಗಟು ಆಹಾರ ಧಾನ್ಯಗಳ ಮಳಿಗೆ, ಅಂಗನವಾಡಿ ಕೇಂದ್ರಗಳು, ಮಧ್ಯಾಹ್ನ ಉಪಾಹಾರ ಯೋಜನೆಯಡಿಯಲ್ಲಿನ ಸರ್ಕಾರಿ ಶಾಲೆಗಳು, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರ ವಿದ್ಯಾರ್ಥಿ ನಿಲಯಗಳು, ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು ಮತ್ತು ಜಿಲ್ಲಾ ತೀವ್ರ ಅಪೌಷ್ಟಿಕ ಮಕ್ಕಳ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.

ದಾಖಲೆ, ಮಾಹಿತಿ ನೀಡಲು ಸೂಚನೆ: ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸುವ ಆಹಾರ ಪದಾರ್ಥಗಳ ಗುಣಮಟ್ಟ, ಅವುಗಳ ತೂಕ, ಅಳತೆ ಸೇರಿದಂತೆ ವಿವಿಧ ಇಲಾಖೆಗಳಡಿಯಲ್ಲಿ ಕಾರ್ಯ ನಿರ್ವಹಿಸುವ ಆಹಾರ ಪದಾರ್ಥಗಳಿಗೆ ಸಂಬಂಧಿಸಿದಂತೆ ಆಹಾರ ಆಯೋಗವು ಭೇಟಿ ನೀಡಿ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳು ಹಲವು ದಿನಗಳ ಹಿಂದೆಯೇ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಆಹಾರ ಆಯೋಗದ ತಂಡ ಜಿಲ್ಲೆಗೆ ಭೇಟಿ ನೀಡುವ ವೇಳೆ ಸೂಕ್ತ ದಾಖಲೆ, ಮಾಹಿತಿ ಒದಗಿಸುವಂತೆ ಸೂಚಿಸಿದ್ದಾರೆ.

3.12 ಲಕ್ಷ ಪಡಿತರ ಚೀಟಿ: ಜಿಲ್ಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಡಿ ಬರೋಬ್ಬರಿ 3.12 ಲಕ್ಷ ಪಡಿತರ ಚೀಟಿಗಳು ಇದ್ದು, ಪ್ರತಿ ತಾಲೂಕಿನಲ್ಲಿ ಆಹಾರ ಇಲಾಖೆ ದಾಸ್ತಾನು ಕೊಠಡಿಗಳನ್ನು ಹೊಂದಿದೆ. ಸುಮಾರು 541 ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಣೆ ಮಾಡುತ್ತಿದೆ.

ಜಿಲ್ಲೆಯಲ್ಲಿ ಹೆಚ್ಚಿದ ಕಳಪೆ ಆಹಾರ ಸಾಮಗ್ರಿ: ಇತ್ತೀಚೆಗೆ ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರದಾರರಿಗೆ ವಿತರಿಸುವ ಆಹಾರ ಪದಾರ್ಥಗಳು ಸಾಕಷ್ಟು ಕಳಪೆ ಗುಣಮಟ್ಟದಿಂದ ಕೂಡಿವೆಯೆಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದ್ದು, ಇದಕ್ಕೆ ಆಹಾರ ಆಯೋಗದ ತಂಡ ಜಿಲ್ಲೆಯ ಜನರ ಬಳಿ ಯಾವ ರೀತಿ ಅಹವಾಲು ಸ್ವೀಕರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇತ್ತೀಚೆಗೆ ರಾಗಿ, ಅಕ್ಕಿಯಲ್ಲಿ ಸಾಕಷ್ಟು ಕಲ್ಲು ಮಿಶ್ರಣಗೊಂಡಿದ್ದು ಆಹಾರ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿತ್ತು. ಮತ್ತೂಂದೆಡೆ ಸಕಾಲದಲ್ಲಿ ನ್ಯಾಯಬೆಲೆ ಅಂಗಡಿಗಳು ತೆರೆಯದೇ ಗ್ರಾಮೀಣ ಭಾಗದ ರೈತಾಪಿ ಕೂಲಿ ಕಾರ್ಮಿಕರಿಗೆ ತೊಂದರೆ ಆಗುತ್ತಿದೆ. ಇನ್ನೂ ತೂಕ, ಅಳತೆಯಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿದ್ದು, ಇದಕ್ಕೆಲ್ಲಾ ಕಡಿವಾಣ ಹಾಕುವ ರೀತಿಯಲ್ಲಿ ಆಹಾರ ಆಯೋಗ ಯಾವ ರೀತಿಯ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಜಿಲ್ಲೆಗೆ ಇದೇ ಮೊದಲ ಬಾರಿಗೆ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣಮೂರ್ತಿ ನೇತೃತ್ವದಲ್ಲಿ ಆಯೋಗದ ಸದಸ್ಯರು ಜಿಲ್ಲೆಗೆ ಆಗಮಿಸುತ್ತಿದ್ದು, ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ವಾಸ್ತವ್ಯ ಇದ್ದು, ಆಹಾರ ಪದಾರ್ಥಗಳ ಗುಣಮಟ್ಟ, ತೂಕ, ಅಳತೆ ಸೇರಿದಂತೆ ವಿವಿಧ ಹಾಸ್ಟೆಲ್‌ಗ‌ಳಿಗೆ ಭೇಟಿ ನೀಡಿ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆ ನಡೆಸಲಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಆಯೋಗ ಭೇಟಿ ನೀಡಲಿದೆ.
-ಲಕ್ಷ್ಮೀನಾರಾಯಣರೆಡ್ಡಿ, ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ