ಶಿವಶಂಕರರೆಡ್ಡಿಯಿಂದ ನೈತಿಕತೆ, ಪಕ್ಷ ನಿಷ್ಠೆ ಕಲಿಯಬೇಕಿಲ್ಲ

Team Udayavani, Aug 7, 2019, 3:00 AM IST

ಚಿಕ್ಕಬಳ್ಳಾಪುರ: ಎಲ್ಲರಿಗೂ ಬಾಯಿಯಲ್ಲಿ ಹಲ್ಲು ಇದ್ದರೆ ಮಾಜಿ ಸಚಿವ ಶಿವಶಂಕರರೆಡ್ಡಿಗೆ ಹೊಟ್ಟೆಯಲ್ಲಿ ಹಲ್ಲು ಇದೆ. ಇದು ನಾನು ಹೇಳುವ ಮಾತಲ್ಲ. ಅವರ ಕ್ಷೇತ್ರದಲ್ಲಿ ಮನೆ ಮಾತಾಗಿರುವ ಮಾತು. ರಾಜಕೀಯವಾಗಿ ಬೆಳೆಸಿದ ಅವರ ರಾಜಕೀಯ ಗುರು ಅಶ್ವತ್ಥನಾರಾಯಣರೆಡ್ಡಿ ಬೆನ್ನಿಗೆ ಚೂರಿ ಹಾಕಿ ಚುನಾವಣೆಯಲ್ಲಿ ಸ್ವತಂತ್ರವಾಗಿನಿಂತ ಶಿವಶಂಕರರೆಡ್ಡಿಯಿಂದ ನಾನು ನೈತಿಕತೆ, ಪಕ್ಷ ನಿಷ್ಠೆ, ಧರ್ಮದ ಪಾಠ ಕಲಿಯಬೇಕೆ? ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್‌ ಮಾಜಿ ಸಚಿವ ಶಿವಶಂಕರರೆಡ್ಡಿ ವಿರುದ್ಧ ಕಿಡಿಕಾರಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಮಾಜಿ ಸಚಿವರಾದ ಶಿವಶಂಕರೆಡ್ಡಿ, ವಿ.ಮುನಿಯಪ್ಪ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾಡಿದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಡಾ.ಕೆ.ಸುಧಾಕರ್‌, ನಾನು ಈ ಕ್ಷಣದವರೆಗೂ ಕಾಂಗ್ರೆಸ್‌ ಪಕ್ಷದಲ್ಲಿದ್ದೇನೆ. ಯಾವುದೇ ರಾಜಕೀಯ ತೀರ್ಮಾನ ತೆಗೆದುಕೊಂಡಿಲ್ಲ. ನನ್ನ ರಾಜೀನಾಮೆ ಸ್ವತಂತ್ರ ನಿರ್ಧಾರ. ಕ್ಷೇತ್ರದ ಅಭಿವೃದ್ಧಿ ಮಾಡದೇ ಆತ್ಮವಂಚನೆಯಿಂದ ಕೆಲಸ ಮಾಡಲು ಒಪ್ಪದೇ ರಾಜೀನಾಮೆ ನೀಡಿದ್ದಾಗಿ ತಿಳಿಸಿದರು.

ಕಾಯಿಸುತ್ತಿದ್ದರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಿಕ್ಕ ಸ್ಪಂದನೆ 14 ತಿಂಗಳ ಮೈತ್ರಿ ಸರ್ಕಾರದಲ್ಲಿ ಸಿಗಲಿಲ್ಲ. ನಾನು ಅವಮಾನ ಎದುರಿಸಿದ್ದೇನೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಹೋದರೆ ತುಂಬ ಹೊತ್ತು ಕಾಯಿಸುತ್ತಿದ್ದರು. ಸೌಜನ್ಯಕ್ಕೂ ಕರೆದು ಮಾತನಾಡಿಸುತ್ತಿರಲಿಲ್ಲ ಎಂದು ದೂರಿದರು.

ಜನರ ಬಳಿ ಹೋಗುತ್ತೇನೆ: ಮೆಡಿಕಲ್‌ ಕಾಲೇಜಿಗೆ ಅನುದಾನ ಬೇಡಿದರೂ ಸ್ಪಂದಿಸಲಿಲ್ಲ. ಎತ್ತಿನಹೊಳೆ ಯೋಜನೆಗೆ ಇಂಚು ಜಮೀಜು ಸ್ವಾಧೀನಪಡಿಸಿಕೊಳ್ಳಲಿಲ್ಲ. ನಾನು ಈ ಭಾಗದ ರೈತರಿಗೆ ಕೊಟ್ಟ ಭರವಸೆ ಈಡೇರುವುದಿಲ್ಲ ಎಂದು ತಿಳಿದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ ಎಂದು ಸಮರ್ಥಿಸಿಕೊಂಡರು. ಮುಂದೆ ಏನೇ ನಿರ್ಧಾರ ತೆಗೆದುಕೊಂಡರೂ ಕ್ಷೇತ್ರದ ಜನರ ಬಳಿಗೆ ಹೋಗುತ್ತೇನೆ ಎಂದರು.

ಎಲ್ಲೂ ಬಾರ್‌, ವೈನ್‌ಶಾಪ್‌, ಜಮೀನು ಕಬಳಿಕೆ ಮಾಡಿಲ್ಲ ಎಂದು ಮಾಜಿ ಸಂಸದ ಆರ್‌.ಎಲ್‌.ಜಾಲಪ್ಪ ಸಂಬಂಧಿ ಜಿ.ಹೆಚ್‌.ನಾಗರಾಜ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಶಿವಶಂಕರರೆಡ್ಡಿ, ಗೌರಿಬಿದನೂರು ಎಸಿಸಿ ಸಿಮೆಂಟ್‌ ಕಾರ್ಖಾನೆಯಲ್ಲಿ ತಮ್ಮ ಪಾಲುದಾರಿಕೆ ಹೊಂದಿದ್ದು, ಅದಕ್ಕಾಗಿ 35 ಎಕರೆ ಸರ್ಕಾರಿ ಜಮೀನನ್ನು ಕಾರ್ಖಾನೆಗೆ ಬಿಟ್ಟುಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಹೆಸರು ಪ್ರಸ್ತಾಪ: ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಪ್ರತಿಯೊಬ್ಬರು, ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಡಳಿತವನ್ನು ಸುಧಾಕರ್‌ ಬೆಂಬಲಿಗರು ಕೊಂಡಾಡಿದರು. ಸುದ್ದಿಗೊಷ್ಠಿಯಲ್ಲಿ ಜಿಪಂ ಸದಸ್ಯರಾದ ಕೆ.ಎನ್‌.ಕೇಶವರೆಡ್ಡಿ, ಪಿ.ಎನ್‌.ಪ್ರಕಾಶ್‌, ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಗೋವಿಂದಸ್ವಾಮಿ, ಮರಳುಕುಂಟೆ ಕೃಷ್ಣಮೂರ್ತಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆ.ಎಚ್‌.ತಮ್ಮೇಗೌಡ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಪಿ.ನಾಗೇಶ್‌, ನಗರಸಭೆ ಮಾಜಿ ಅಧ್ಯಕ್ಷ ಮುನಿಕೃಷ್ಣ, ಲೀಲಾವತಿ, ಅಪ್ಪಾಲು ಮಂಜು ಉಪಸ್ಥಿತರಿದ್ದರು.

ನಿಗಮ, ಮಂಡಳಿಗೆ ಮಾಜಿ ಸ್ಪೀಕರ್‌ ಅಡ್ಡಗಾಲು: ನಾನು ಯಾವುದೇ ನಿಗಮ, ಮಂಡಳಿ ಹುದ್ದೆ ಕೇಳಿರಲಿಲ್ಲ. ಪಕ್ಷರ ವರಿಷ್ಠರೇ ನನಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿದ್ದರು. ಆದರೆ ಕುಮಾರಸ್ವಾಮಿ, ಸ್ಪೀಕರ್‌ ಆಗಿದ್ದ ರಮೇಶ್‌ ಕುಮಾರ್‌ ಮಾತು ಕೇಳಿ ನನಗೆ ಅಧ್ಯಕ್ಷ ಸ್ಥಾನ ಕೊಡದೇ ಆರು ತಿಂಗಳ ಕಾಲ ಸತಾಯಿಸಿದರು. ಕೆ.ಎಚ್‌.ಮುನಿಯಪ್ಪ ಪರ ಗುರುತಿಸಿಕೊಂಡಿರುವುದಕ್ಕೆ ರಮೇಶ್‌ ಕುಮಾರ್‌ ನನ್ನ ವಿರುದ್ಧ ರಾಜಕೀಯವಾಗಿ ಷಡ್ಯಂತ್ರ ಮಾಡಿದರು ಎಂದು ದೂರಿದರು.

ರಮೇಶ್‌ ಕುಮಾರ್‌ ಸತ್ಯಹರಿಶ್ಚಂದ್ರರೇ..?: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ವಿಧಾನಸಭೆ ಅಧೀವೇಶನದಲ್ಲಿ ನೈತಿಕತೆ ಬಗ್ಗೆ ಮಾತನಾಡುತ್ತಾರೆ. ಇವರೇನು ಸತ್ಯ ಹರಿಶ್ಚಂದ್ರರೇ ಎಂದು ಅನರ್ಹ ಶಾಸಕ ಸುಧಾಕರ್‌ ಪ್ರಶ್ನಿಸಿದರು. ದೇವರಾಜು ಅರಸು ಗುರುತಿಸಿ ಇವರನ್ನು ಬೆಳೆಸಿದರು( ರಮೇಶ್‌ ಕುಮಾರ್‌) ಅವರಿಗೆ ಕೈ ಕೊಟ್ಟು 78 ರಲ್ಲಿ ರಾಮಕೃಷ್ಣ ಹೆಗಡೆ ಜೊತೆ ಸೇರಿದವರು.

ಬಳಿಕ 1994 ರಲ್ಲಿ ದೇವೇಗೌಡರ ಜೊತೆ ಸೇರಿದರು. 1999 ರಲ್ಲಿ ಕೆ.ಎಚ್‌.ಮುನಿಯಪ್ಪ ನೆರಳಲ್ಲಿ ಎಸ್‌.ಎಂ.ಕೃಷ್ಣ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದರು. ಇದು ವ್ಯಾಪಾರ ಅಲ್ಲವೇ ? ಇದು ಪಕ್ಷಾಂತರ ಅಲ್ಲವೇ? ಎಂದು ರಮೇಶ್‌ ಕುಮಾರ್‌ ವಿರುದ್ಧ ಡಾ.ಕೆ.ಸುಧಾರ್‌ ವಾಗ್ಧಾಳಿ ನಡೆಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಎಂ.ವೀರಪ್ಪ ಮೊಯ್ಲಿ ಸೋಲಿಗೆ ನಾನು ಕೂಡ ಕಾರಣ. ಕಾಂಗ್ರೆಸ್‌ ನಿಷ್ಠಾವಂತ ಕಾರ್ಯಕರ್ತನಾಗಿ ಒಪ್ಪಿಕೊಳ್ಳುತ್ತೇನೆ. ಕಾರಣ ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬರಲಿಲ್ಲ. ಪಕ್ಷಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ವೀರಪ್ಪ ಮೊಯ್ಲಿ ಸೋಲು ನನಗೂ ಅಘಾತ ತಂದಿದೆ. ಈ ಬಗ್ಗೆ ಅವರಲ್ಲಿ ಕ್ಷೇಮೆ ಕೋರುತ್ತೇನೆ.
-ಡಾ.ಕೆ.ಸುಧಾಕರ್‌, ಅನರ್ಹ ಶಾಸಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ