15ಕ್ಕೆ ಜಿಲ್ಲಾ ಮಕ್ಕಳ ಗ್ರಂಥಾಲಯ ಉದ್ಘಾಟನೆ

Team Udayavani, Aug 7, 2019, 3:00 AM IST

ಚಿಕ್ಕಬಳ್ಳಾಪುರ: ಕ್ಷೇತ್ರದ ಮಾಜಿ ಸಂಸದ ಎಂ.ವೀರಪ್ಪ ಮೊಯ್ಲಿ ರವರ ದೂರದೃಷ್ಟಿ ಚಿಂತನೆಯ ಪರಿಣಾಮ ಇಡೀ ರಾಜ್ಯಕ್ಕೆ ಮಾದರಿಯಾಗಿ ಡಿಜಿಟಲ್‌ ಲೈಬ್ರರಿ ಹೊಂದಿರುವ ಹೆಗ್ಗಳಿಕೆ ಪಾತ್ರವಾಗಿ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಈಗ ಪ್ರತ್ಯೇಕವಾದ ಮಕ್ಕಳ ಗ್ರಂಥಾಲಯ ಕೂಡ ಸ್ಥಾಪನೆಗೊಂಡಿದ್ದು, ಆಗಸ್ಟ್‌ 15ಕ್ಕೆ ಗ್ರಂಥಾಲಯ ಲೋಕಾರ್ಪಣೆ ಆಗಲಿದೆ.

ಹೌದು, ನಗರದ ಸಾರ್ವಜನಿಕ ಬಸ್‌ ನಿಲ್ದಾಣ ಎದುರು ಇರುವ ಜಿಲ್ಲಾ ಕೇಂದ್ರ ಗ್ರಂಥಾಲಯ ಪಕ್ಕದಲ್ಲಿನ ಹಳೆ ಜಿಲ್ಲಾ ಕೇಂದ್ರ ಗ್ರಂಥಾಲಯ ಕಟ್ಟಡವನ್ನು ಜಿಲ್ಲಾಡಳಿತ ಅದರಲ್ಲೂ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ವಿಶೇಷ ಕಾಳಜಿ ವಹಿಸಿ ಇಡೀ ಕಟ್ಟಡವನ್ನು ಸಂಪೂರ್ಣ ಮಕ್ಕಳ ಗ್ರಂಥಾಲಯವಾಗಿ ಮಾರ್ಪಡಿಸುವ ಮಹತ್ವಕಾಂಕ್ಷಿ ಕಾರ್ಯಕ್ಕೆ ಕೈ ಹಾಕಿದ್ದು, ಇಡೀ ಕಟ್ಟಡ ಮಕ್ಕಳ ಗ್ರಂಥಾಲಯಕ್ಕೆ ಪೂರಕವಾಗಿ ಅಣಿಯಾಗುತ್ತಿದೆ.

5 ಕೋಟಿ ರೂ. ವೆಚ್ಚ: ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಗ್ರಂಥಾಲಯಕ್ಕೆ ಸುಸಜ್ಜಿತವಾದ ಹೈಟೆಕ್‌ ಕಟ್ಟಡ ನಿರ್ಮಾಣಕ್ಕೂ ಮೊದಲು ಭಾರತ ರತ್ನ ಸರ್‌ ಎಂ.ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಆರಂಭಗೊಂಡಿದ್ದ ಸಾರ್ವಜನಿಕ ಗ್ರಂಥಾಲಯ ಹಳೆ ಕಟ್ಟಡದಲ್ಲಿ ನಿರ್ವಹಿಸಲಾಗುತ್ತಿತ್ತು. ಆದರೆ ಕ್ಷೇತ್ರದ ಸಂಸದರಾಗಿದ್ದ ಎಂ.ವೀರಪ್ಪ ಮೊಯ್ಲಿ ಮೊದಲ ಬಾರಿಗೆ ಸಂಸದರಾಗಿ ಕೇಂದ್ರದಲ್ಲಿ ಸಚಿವರಾಗಿದ್ದ ವೇಳೆ ಇಂಡಿಯನ್‌ ಆಯಿಲ್‌ ಸಂಸ್ಥೆ ಹಾಗೂ ಕೆನರಾ ಬ್ಯಾಂಕ್‌ ನೆರವಿನೊಂದಿಗೆ 5 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್‌ ಲೈಬ್ರರಿ ಸ್ಥಾಪಿಸಿದ ನಂತರ ಹಳೆ ಕಟ್ಟಡವನ್ನು ಹಾಗೆ ಬಿಡಲಾಗಿತ್ತು. ಜಿಲ್ಲೆಯ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಪ್ರತ್ಯೇಕ ಗ್ರಂಥಾಲಯ ಸ್ಥಾಪಿಸಬೇಕೆಂದು ಜಿಲ್ಲಾಡಳಿತ ನಿರ್ಧರಿಸಿ ಇದೀಗ ಶತಮಾನಗಳ ಭವ್ಯ ಇತಿಹಾಸ ಇರುವ ಕಟ್ಟಡವನ್ನು ಮಕ್ಕಳ ಗ್ರಂಥಾಲಯವಾಗಿ ಮಾರ್ಪಡಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಸುಣ್ಣಬಣ್ಣ: ಮಕ್ಕಳ ಗ್ರಂಥಾಲಯವಾಗಿ ರೂಪುಗೊಳ್ಳುತ್ತಿರುವ ಕಟ್ಟಡವನ್ನು ಸದ್ಯ ನವೀಕರಣಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಇಡೀ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯಲಾಗಿದ್ದು, ಜಿಲ್ಲೆಯ ಚಿತ್ರಕಲಾ ಶಿಕ್ಷಕರನ್ನು ಬಳಸಿಕೊಂಡು ಗ್ರಂಥಾಲಯ ಗೋಡೆಗಳನ್ನು ಸಿಂಗರಿಸುವ ಕಾರ್ಯ ನಡೆಯುತ್ತಿದೆ.

ಗೋಡೆಗಳ ಮೇಲೆ ಚಿತ್ರ: ಪುಟಾಣಿ ಮಕ್ಕಳ ಗಮನ ಸೆಳೆಯುವ ದಿಸೆಯಲ್ಲಿ ಆಟಿಕೆಗಳನ್ನು ಚಿತ್ರಿಸುವ ಕಾರ್ಯ ನಡೆಯುತ್ತಿದೆ. ವಿಶೇಷವಾಗಿ ಮಕ್ಕಳಲ್ಲಿ ನೆಲ, ಜಲ, ಪರಿಸರ, ಆರೋಗ್ಯದ ಬಗ್ಗೆ ಅರಿವು ಮೂಡಿಸುವಂತಹ ಸಾಂಧರ್ಬಿಕ ಚಿತ್ರಗಳನ್ನು ಚಿತ್ರ ಕಲಾ ಶಿಕ್ಷಕರು ಗೋಡೆಗಳ ಮೇಲೆ ಬಿಡಿಸುತ್ತಿದ್ದು, ಗಮನ ಸೆಳೆಯುತ್ತಿವೆ.

ವೃತ್ತಕಾರದಲ್ಲಿರುವ ಇಡೀ ಕಟ್ಟಡವನ್ನು ಮಕ್ಕಳ ಗ್ರಂಥಾಲಯವಾಗಿ ಪರಿವರ್ತಿಸಿ ಮಕ್ಕಳ ಮನೋವಿಕಾಸಕ್ಕೆ, ಮಕ್ಕಳಿಗೆ ಮಾಹಿತಿ ತಂತ್ರಜ್ಞಾನದ ಜೊತೆಗೆ ಕೌಶಲ್ಯಗಳನ್ನು ಬಿತ್ತುವ ಕೇಂದ್ರವಾಗಿ ಗ್ರಂಥಾಲಯವನ್ನು ಜಿಲ್ಲಾಡಳಿತ ಅಭಿವೃದ್ಧಿಪಡಿಸುತ್ತಿದೆ. ಈಗಾಗಲೇ ಮಕ್ಕಳ ತಜ್ಞರನ್ನು ಸಂಪರ್ಕಿಸಿ ಮಕ್ಕಳು ಓದುವಂತ ಪುಸ್ತಕಗಳನ್ನು ಪಟ್ಟಿ ಮಾಡಿ ಗ್ರಂಥಾಲಯಕ್ಕೆ ಬೇಕಾಗುವಷ್ಟು ಪುಸ್ತಕಗಳ ಖರೀದಿಗೂ ಜಿಲ್ಲಾ ಗ್ರಂಥಾಲಯ ಇಲಾಖೆ ಅಗತ್ಯ ಸಿದ್ಧತೆ ಕೈಗೊಂಡಿದೆ.

ನೆಹರು ಉದ್ಘಾಟಿಸಿದ್ದ ಗ್ರಂಥಾಲಯ: ಭಾರತ ರತ್ನ ಸರ್‌ ಎಂ.ವಿಶೇಶ್ವರಯ್ಯ ಹೆಸರಿನಲ್ಲಿ ಆರಂಭಗೊಂಡಿದ್ದ ಈ ಸಾರ್ವಜನಿಕ ಗ್ರಂಥಾಲವನ್ನು 1962 ಜುಲೈ 17 ರಂದು ದೇಶದ ಮೊದಲ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರು ಖುದ್ದು ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸಿ ಜಿಲ್ಲಾ ಕೇಂದ್ರ ಗ್ರಂಥಾಲಯವನ್ನು ಉದ್ಘಾಟಿಸಿ ಜಿಲ್ಲೆಗೆ ಲೋಕಾರ್ಪಣೆಗೊಳಿಸಿದ್ದರು. ನೆಹರು ಸವಿನೆನಪಿಗಾಗಿಯೇ ಈಗ ಈ ಕಟ್ಟಡವನ್ನು ಮಕ್ಕಳ ಗ್ರಂಥಾಲಯವಾಗಿ ಮಾರ್ಪಡಿಸುವ ಕೆಲಸವನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆ ಕೈಗೆತ್ತಿಕೊಂಡು ಅದನ್ನು ಸಾಕಾರಗೊಳಿಸುವ ಹಂತಕ್ಕೆ ತಲುಪಿದೆ.

ಹಳೆ ಜಿಲ್ಲಾ ಕೇಂದ್ರ ಗ್ರಂಥಾಲಯ ಕಟ್ಟಡವನ್ನು ಸಂಪೂರ್ಣವಾಗಿ ಬಳಸಿಕೊಂಡು ಮಕ್ಕಳ ಗ್ರಂಥಾಲಯವನ್ನಾಗಿ ಸ್ಥಾಪಿಸಲಾಗುತ್ತಿದೆ. ಇಡೀ ಗ್ರಂಥಾಲಯವನ್ನು ಕೇವಲ ಮಕ್ಕಳಿಗೆ ಮಾತ್ರ ಮೀಸಲಿಡಲಾಗುವುದು. ಕಟ್ಟಡ ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ಚಿತ್ರಗಳು ಬಿಡಿಸುವ ಕಾರ್ಯ ನಡೆಯುತ್ತಿದೆ. ಆ.15ಕ್ಕೆ ಜಿಲ್ಲೆಗೆ ಗ್ರಂಥಾಲಯವನ್ನು ಲೋಕಾರ್ಪಣೆಗೊಳಿಸುವ ಉದ್ದೇಶ ಹೊಂದಲಾಗಿದೆ.
-ಅನಿರುದ್ಧ್ ಶ್ರವಣ್‌, ಜಿಲ್ಲಾಧಿಕಾರಿ

* ಕಾಗತಿ ನಾಗರಾಜಪ್ಪ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ