ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೊಳಿಸಿ
Team Udayavani, Feb 24, 2021, 1:29 PM IST
ಗೌರಿಬಿದನೂರು: ಬಾಲಕಾರ್ಮಿಕ ಪದ್ಧತಿ ಕಡಿವಾಣಕ್ಕೆ ಸಾರ್ವಜನಿಕರ ಹಾಗೂ ಪೋಷಕರ ಸಹಕಾರ ಅಗತ್ಯ. ಈ ಅನಿಷ್ಠ ಪದ್ಧತಿ ಕಂಡು ಬಂದಲ್ಲಿ ಕೂಡಲೇ ದೂರು ನೀಡಬೇಕೆಂದು ಹಿರಿಯ ಶ್ರೇಣಿ ನ್ಯಾಯಾಧೀಶೆ ರೇಣುಕಾ ದೇವಿದಾಸ್ ರಾಯ್ಕರ್ ತಿಳಿಸಿದರು.
ನಗರದ ನೂತನ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಗೌರಿಬಿದನೂರು, ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ(ನಿಷೇಧ ಮತ್ತು ನಿಯಂತ್ರಣ)ಕಾಯ್ದೆ 1986 ರ ಕಾಯ್ದೆ ಅಡಿಯಲ್ಲಿ ನೇಮಕವಾದ ನಿರೀಕ್ಷರರಿಗೆ ತಾಲೂಕು ಮಟ್ಟದ ಒಂದು ದಿನದ ತರಬೇತಿ ಕಾರ್ಯಾಗಾರ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂವಿಧಾನದಲ್ಲಿ ಮಕ್ಕಳಿಗೆ ಶಿಕ್ಷಣ ಕಡ್ಡಾಯಗೊಳಿಸಿದೆ. 14 ರಿಂದ 18 ವರ್ಷದ ಎಲ್ಲ ಮಕ್ಕಳಿಗೆ ಪೋಷಕರು ಶಿಕ್ಷಣ ನೀಡಬೇಕು. ಬಡತನ ನೆಪದಲ್ಲಿ ಮಕ್ಕಳಿಗೆ ಕೆಲಸಕ್ಕೆ ಕಳಿಸಿದರೆ ಅದು ಬಾಲಕಾರ್ಮಿಕ ಕಾಯ್ದೆಗೆ ಒಳಪಡುತ್ತದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಅರ್. ಪವಿತ್ರಾ ಮಾತನಾಡಿ, ನಮ್ಮ ಸುತ್ತಮುತ್ತಲು ಕಾಣುವ ಬಾಲಕಾರ್ಮಿಕ ಪದ್ಧತಿಯನ್ನುಕಂಡು ಸುಮ್ಮನಿರದೆ ದೂರು ಕೊಡುವಮೂಲಕ ನಿರ್ಮೂಲನೆಗೆ ಮುಂದಾಗಬೇಕು.ಆಗ ಮಾತ್ರ ನವ ಸಮಾಜ ನಿರ್ಮಾಣಕ್ಕೆ ನಾವು ಕೈಜೋಡಿಸಿದಂತೆ ಆಗುತ್ತದೆ ಎಂದರು.
ಹಿರಿಯ ವಕೀಲ ಎಂ.ಆರ್.ಲಕ್ಷ್ಮೀ ನಾರಾಯಣ್ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಬಡತನದ ನೆಪದಲ್ಲಿ ಕೆಲಸಕ್ಕೆ ದೂಡುವುದು ಖೇದಕರ ಎಂದರು. ವಕೀಲ ಟಿ.ಕೆ.ವಿಜಯರಾಘವ, ತಹಶೀಲ್ದಾರ್ ಎಚ್. ಶ್ರೀನಿವಾಸ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಆಧ್ಯಕ್ಷ ಡಿ.ರಾಮ ದಾಸ್, ಸರ್ಕಾರಿ ಅಭಿಯೋಜಕ ಆದಿನಾರಾ ಯಣಸ್ವಾಮಿ, ಕಾರ್ಮಿಕ ನಿರೀಕ್ಷಕ ರಾಮಾಂಜಿನಪ್ಪ ಮತ್ತು ಹಿರಿಯ ವಕೀಲರು ಹಾಜರಿದ್ದರು