ಹಣಕ್ಕಿಂತ ಹಸಿರೀಕರಣವೇ ಪ್ರಮುಖವಾಗಲಿ

ಚಿತ್ರದುರ್ಗದಲ್ಲಿ ಸಾಕಷ್ಟು ಗಿಡ-ಮರ ಇದ್ದರೂ ತಾಪಮಾನ ಹೆಚ್ಚಳ ಆತಂಕಕಾರಿ: ಶಾಸಕ ಜಿ.ಎಚ್. ತಿಪ್ಪಾರೆಡ್ಡಿ

Team Udayavani, Jun 7, 2019, 12:32 PM IST

ಚಿತ್ರದುರ್ಗ: ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಉದ್ಘಾಟಿಸಿದರು.

ಚಿತ್ರದುರ್ಗ: ಪರಿಸರ ಪ್ರೇಮ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ನಡೆದರೆ ಆರೋಗ್ಯಕರ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರದ ಎಲ್ಲ ಭಾಗದಲ್ಲಿ ಹಸಿರೀಕರಣ ಮಾಡಲು ಪಣ ತೊಡಬೇಕಿದೆ. ಕಳೆದ ವರ್ಷ ಸರ್ಕಾರದ ನೆರವಿಲ್ಲದೆ ‘ಟಾರ್ಗೆಟ್ ಟೆನ್‌ ತೌಸಂಡ್‌’ ಸಂಘಟನೆಯವರು ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಚಿತ್ರದುರ್ಗದ ಪರಿಸರದಲ್ಲಿ ಸಾಕಷ್ಟು ಮರಗಳು ಇದ್ದರೂ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ ಇದೆ ಎಂದರು.

ಯಾವುದೇ ಗಿಡ, ಮರವನ್ನು ಕಡಿಯಬಾರದು. ರೈತರ ಜಮೀನು, ಶಾಲಾ-ಕಾಲೇಜುಗಳ ಆವರಣ ಹಾಗೂ ರಸ್ತೆ ಬದಿಯಲ್ಲಿ ಗಿಡ ನೆಡಬೇಕು. ನಗರದ ಅನೇಕ ಭಾಗಗಳಲ್ಲಿ ರಸ್ತೆ ಅಗಲೀಕರಣ ಮಾಡುವ ಸಂಧರ್ಭದಲ್ಲಿ ಮರಗಳನ್ನು ಕಡಿಯಲಾಗುತ್ತಿದೆ. ಮುಂದಿನ ದಿನಗಳಲ್ಲಿ 8-10 ಸಾವಿರ ಸಸಿ ನೆಡಲಾಗುವುದು. ಕೋಟಿ ರೂ.ಗಿಂತಲೂ ಒಂದು ಗಿಡ ತುಂಬಾ ಮುಖ್ಯ ಎಂದು ತಿಳಿಸಿದರು.

ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಬೇಕು. ವಿದ್ಯಾರ್ಥಿಗಳಿಗೆ ಒಂದು ಗಿಡ ಬೆಳೆಸುವ ಮತ್ತು ಪೋಷಿಸುವ ಕೆಲಸ ನೀಡಲಾಗುವುದು. ಮಕ್ಕಳು ಸಾಮಾಜಿಕ ಕಳಕಳಿ ಬೆಳೆಸಿಕೊಂಡು ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸುವ ಕೆಲಸ ಮಾಡಬೇಕು. ನಿತ್ಯದ ಪರಿಸರದಲ್ಲಿ ನೆಲ, ಮಣ್ಣು , ಬೆಳೆ, ಹಣ್ಣು ಹಂಪಲು ಉಳಿಯುವಂತಾಗಲು ಪರಿಸರ ದಿನವನ್ನು ಜಾಗೃತ ದಿನವೆಂದು ಹೇಳಿದರೆ ತಪ್ಪಗಲಾರದು ಎಂದರು.

ಉಪನ್ಯಾಸಕರಿಗೆ ತರಾಟೆ: ದ್ವಿತೀಯ ಪಿಯುಸಿ ಫಲಿತಾಂಶ ಕಳಪೆಯಾಗಿದೆ. ಮಕ್ಕಳ ಭವಿಷ್ಯದೊಂದಿಗೆ ಆಟವಾಡಬೇಡಿ. ಫಲಿತಾಂಶವನ್ನು ನೋಡಿದರೆ ತುಂಬಾ ನೋವಾಗುತ್ತದೆ. ಬಾಲಕಿಯರ ಮತ್ತು ಬಾಲಕರ ಸರ್ಕಾರಿ ಕಾಲೇಜಿನಲ್ಲಿ ಫಲಿತಾಂಶ ತರುವಲ್ಲಿ ಶಿಕ್ಷಕರು ವಿಫಲಾರಾಗಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಶಾಸಕರು ಉಪನ್ಯಾಸಕರನ್ನು ತರಾಟೆಗೆ ತೆಗೆದುಕೊಂಡರು.

ಮುಂದಿನ ದಿನಗಳಲ್ಲಿ ಉತ್ತಮವಾಗಿ ಮಕ್ಕಳನ್ನು ತಯಾರು ಮಾಡಲಿಲ್ಲ ಅಂದರೆ ವರ್ಗಾವಣೆ ಮಾಡಿಕೊಂಡು ಹೋಗಿ. ಗ್ರಾಮೀಣ ಮತ್ತು ಬಡ ಮಕ್ಕಳ ಜೀವನ ಹಾಳು ಮಾಡಬೇಡಿ. ಉಪನ್ಯಾಸಕರು ಗಂಭೀರವಾಗಿ ಚಿಂತನೆ ಮಾಡಿ ಉತ್ತಮ ಫಲಿತಾಂಶ ನೀಡದಿದ್ದರೆ ನಿಮ್ಮ ವಿರುದ್ಧ ಪ್ರತಿಭಟನೆ ಮಾಡಿಸುತ್ತೇನೆ ಎಂದು ಗುಡುಗಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ. ಮಂಜುನಾಥ್‌ ಮಾತನಾಡಿ, ಪರಿಸರ ಮಾಲಿನ್ಯ ಮಾಡುತ್ತಿದ್ದೇವೆ. ನೈಸರ್ಗಿಕ ಶಕ್ತಿಗೆ ಮಾತ್ರ ಇಂಗಾಲದ ಡೈ ಆಕ್ಸೈಡ್‌ ಹೀರಿಕೊಳ್ಳಲು ಸಾಧ್ಯ. ಅದಕ್ಕಾಗಿ ಗಿಡಗಳನ್ನು ಬೆಳೆಸಬೇಕು. ಪ್ರತಿ ವ್ಯಕ್ತಿ ಆಮ್ಲಜನಕ ಪಡೆಯಲು ಒಂದ ವರ್ಷಕ್ಕೆ 30 ಗಿಡಗಳನ್ನಾದರೂ ನೆಡಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಆರೋಗ್ಯಕರ ವಾತಾವರಣವನ್ನು ಕಾಣಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಅರಣ್ಯಾಧಿಕಾರಿ ಸಂದೀಪ್‌ ನಾಯಕ , ಪ್ರಾಂಶುಪಾಲ ಎನ್‌. ಗಣೇಶ್‌, ಇಕೋ ಕ್ಲಬ್‌ ಅಧಿಕಾರಿ ಎನ್‌.ಎ. ಶಿವಕುಮಾರ್‌, ಸ್ಕೌಟ್ಸ್‌ ಮತ್ತು ಗೈಡ್ಸ್‌ ಅಧಿಕಾರಿ ಸುಧೀರ್‌ಕುಮಾರ್‌ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ