ಮೆಡಿಕಲ್ ಕಾಲೇಜಿಗೆ ಡೀನ್ ನೇಮಕಕ್ಕೆ ಆಗ್ರಹ
Team Udayavani, Feb 10, 2021, 4:27 PM IST
ಚಿತ್ರದುರ್ಗ: ಏಳು ವರ್ಷಗಳ ಹಿಂದೆ ಚಿತ್ರದುರ್ಗಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರಾಗಿದ್ದರೂ, ಈವರೆಗೆ ಭೂಮಿಪೂಜೆ ನೆರವೇರಿಸಿಲ್ಲ. ಅಲ್ಲದೆ ಡೀನ್ ನೇಮಕ ಮಾಡಿಲ್ಲ ಎಂದು ಆರೋಪಿಸಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಗಾಂಧಿ ವೃತ್ತದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು, ಜಿಲ್ಲೆಯ ಶಾಸಕರು, ಸಚಿವರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೆಡಿಕಲ್ ಕಾಲೇಜಿಗೆ ಸರ್ಕಾರದಲ್ಲಿ ಹಣವಿಲ್ಲ. ಭಿಕ್ಷೆ ಎತ್ತಿ ಎಂದು ಹೇಳಿರುವ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮೊದಲು ರಾಜೀನಾಮೆ ನೀಡಲಿ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ವಿಧಾನ ಪರಿಷತ್ ಸದಸ್ಯರು ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿರುವುದಕ್ಕೆ ಹಣ ಬಿಡುಗಡೆಗೊಳಿಸುವಂತೆ ಎಲ್ಲಿಯೂ ಚಕಾರ ಎತ್ತುತ್ತಿಲ್ಲ. ಮುಖ್ಯಮಂತ್ರಿ 50 ಕೋಟಿ ರೂ.ಗಳನ್ನು ಘೋಸಷಿಸಿದ್ದು, ಈವರೆಗೆ ನಯಾಪೈಸೆಯೂ ಬಿಡುಗಡೆಯಾಗದಿರುವುದು ಜಿಲ್ಲೆಯ ಜನರ ದೌರ್ಭಾಗ್ಯ ಎಂದರು.
ಇದನ್ನೂ ಓದಿ :ಜೀತ ಮುಕ್ತ ಜಿಲ್ಲೆಯಾಗಿಸಲು ಪಣ ತೊಡಿ
ದೊಡ್ಡಬಳ್ಳಾಪುರ, ಉಡುಪಿ, ಕೊಪ್ಪಳ ಜಿಲ್ಲೆಗಳಿಗೆ ಮೆಡಿಕಲ್ ಕಾಲೇಜಿಗೆ ಹಣ ಬಿಡುಗಡೆಗೊಳಿಸಿರುವ ರಾಜ್ಯ ಸರ್ಕಾರ, ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯನ್ನು ಕಡೆಗಣಿಸುತ್ತಲೇ ಬರುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆ ಕಾರಣ. ಕೂಡಲೇ ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ಹಣ ಮಂಜೂರು ಮಾಡಿ ಡೀನ್ ನೇಮಕ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಶಾಸಕರುಗಳ ನಿವಾಸದ ಎದುರು ಪ್ರತಿಭಟನೆ ನಡೆಸಿ ಭಿಕ್ಷೆ ಎತ್ತಿ ಸರ್ಕಾರಕ್ಕೆ ಹಣ ನೀಡುವುದಾಗಿ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ. ಶಿವಕುಮಾರ್ ಎಚ್ಚರಿಸಿದರು.
ಕರ್ನಾಟಕ ನವ ನಿರ್ಮಾಣ ಸೇನೆ ತಾಲೂಕು ಅಧ್ಯಕ್ಷ ಟಿ. ಆನಂದ್, ಯುವ ಘಟಕದ ಅಧ್ಯಕ್ಷ ಶಶಾಂಕ್, ನಗರ ಘಟಕದ ಅಧ್ಯಕ್ಷ ಗೋಪಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಾ ಗೌರಣ್ಣ, ಸುನಂದಮ್ಮ, ನಾಗರತ್ನ, ರತ್ನಮ್ಮ, ಓಬಳೇಶ, ರಘು, ಪ್ರವೀಣ್, ಮಾರುತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.