ಕಷ್ಟಪಟ್ಟು ಅಲ್ಲ; ಇಷ್ಟಪಟ್ಟು ಓದಿ

Team Udayavani, Sep 29, 2018, 1:12 PM IST

ಚಿತ್ರದುರ್ಗ: ಐಎಎಸ್‌, ಐಪಿಎಸ್‌, ಕೆಎಎಸ್‌ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬೇಕಾದರೆ ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದಲ್ಲ, ಇಷ್ಟಪಟ್ಟು ಓದಬೇಕಾಗಿದೆ ಎಂದು ಪ್ರೊಬೆಷನರಿ ಐಎಎಸ್‌ ಅಧಿಕಾರಿ ಡಾ| ನಂದಿನಿದೇವಿ ಕಿವಿಮಾತು ಹೇಳಿದರು.

ನಗರದ ಜಿಲ್ಲಾ ಗ್ರಂಥಾಲಯದ ಸಭಾಂಗಣದಲ್ಲಿ ಗ್ರಂಥಾಲಯ ಇಲಾಖೆ ವತಿಯಿಂದ ಓದುಗ ವಿದ್ಯಾರ್ಥಿಗಳಿಗಾಗಿ ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತಂತೆ ಶುಕ್ರವಾರ ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಷ್ಟಪಟ್ಟು ಅಧ್ಯಯನ ಮಾಡುವುದಕ್ಕಿಂತ ಇಷ್ಟಪಟ್ಟು ಅಧ್ಯಯನ ಮಾಡಬೇಕು. ಯಾರದೋ ಒತ್ತಡದಿಂದ, ಆಸಕ್ತಿರಹಿತ ವಿಷಯ ಅಧ್ಯಯನ ಮಾಡುವುದರಿಂದ ಯಶಸ್ಸು ಸಾಧಿಸುವುದು ಕಷ್ಟಸಾಧ್ಯ. ಪುಸ್ತಕಗಳ ಅಧ್ಯಯನದಿಂದ ಮಾತ್ರ ಎಲ್ಲ ವಿಷಯ ಅರಿಯಲು ಸಾಧ್ಯವಿಲ್ಲ. ಆಕಾಂಕ್ಷಿಗಳು ದಿನಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಪ್ರಚಲಿತ ವಿದ್ಯಮಾನಗಳು, ಸಂಪಾದಕೀಯ, ದೇಶ-ವಿದೇಶಿ ಸುದ್ದಿಗಳು, ಆರ್ಥಿಕ ವಿಷಯಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಆವಿಷ್ಕಾರಗಳು, ಪರಿಸರದಂತಹ ವಿಷಯಗಳಿಗೆ ಹೆಚ್ಚಿನ ಆದ್ಯತೆ ನಿಡಬೇಕೆಂದರು.

ವಿದೇಶಗಳೊಂದಿಗೆ ಭಾರತದ ಬಾಂಧವ್ಯದ ಬಗ್ಗೆ ಅರಿಯಬೇಕು. ಪ್ರಮುಖಾಂಶಗಳನ್ನು ಬರದಿಟ್ಟುಕೊಂಡು, ಆಗಾಗ್ಗೆ ಓದಿ, ಮನನ ಮಾಡಿಕೊಳ್ಳಬೇಕು. ಅಂತರ್ಜಾಲದಲ್ಲಿ ಈಗ ಸಾಕಷ್ಟು ವಿಷಯಗಳು ಸುಲಭವಾಗಿ ಲಭ್ಯವಾಗುತ್ತಿದ್ದು, ನೂತನ ತಂತ್ರಜ್ಞಾನಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ಪರ್ಧಾತ್ಮಕವಾಗಿಯೇ ಸಿದ್ಧತೆ
ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಕೆಎಎಸ್‌ ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವುದು ಪಂಚವಾರ್ಷಿಕ ಯೋಜನೆಗಳಂತೆ ಅಲ್ಲ. ನಾಲ್ಕೈದು ವರ್ಷಗಳಿಂದ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಸಮಂಜಸವಲ್ಲ. ಏಕೆಂದರೆ ವರ್ಷದಿಂದ ವರ್ಷಕ್ಕೆ ಪರೀಕ್ಷೆಯ ಸ್ವರೂಪ ಹಾಗೂ ಪ್ರಚಲಿತ ವಿಷಯಗಳು ಬದಲಾಗುತ್ತವೆ. 

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಂಗ್ಲ ಭಾಷೆ ಕಡ್ಡಾಯವಲ್ಲ. ಮಾತೃ ಭಾಷೆಯಲ್ಲಿಯೇ ಪರೀಕ್ಷೆ ಬರೆದು ಯಶಸ್ಸು ಕಾಣಬಹುದು. ರಾಜ್ಯದಲ್ಲಿ ಹಲವರು ಆಕಾಂಕ್ಷಿಗಳು ಮಾತೃ ಭಾಷೆಯಲ್ಲಿಯೇ ಪರೀಕ್ಷೆ ಬರೆದು ಯಶಸ್ಸು ಕಂಡಿದ್ದಾರೆ ಎಂದು ತಿಳಿಸಿದರು.

ಯುಪಿಎಸ್‌ಸಿ ಪ್ರಾಥಮಿಕ ಪರೀಕ್ಷೆ ಪಾಸಾಗಲು 3 ತಿಂಗಳ ಸಿದ್ಧತೆ ಸಾಕಾಗುತ್ತದೆ. ಗುಂಪು ಚರ್ಚೆಗಳು, ಪ್ರತಿಭೆ, ವಿಷಯಗಳನ್ನು ಇತರರೊಂದಿಗೆ ಹಂಚಿಕೊಂಡಾಗ ಜ್ಞಾನ ವೃದ್ಧಿಯಾಗುತ್ತದೆ. ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅಧ್ಯಯನದಲ್ಲಿ ವಿನಿಯೋಗಿಸಬೇಕು. ತಾವು ಐಎಎಸ್‌ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾದ ಬಗೆ ಹಾಗೂ ಸರಳ ಮಾರ್ಗಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಪ್ರೊಬೆಷನರಿ ಕೆಎಎಸ್‌ ಅಧಿಕಾರಿಗಳಾದ ಮಹೇಂದ್ರ ತಾಲ್‌, ಸುರೇಖಾ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು.ಅಧ್ಯಯನದ ಸ್ವರೂಪ ಹಾಗೂ ವಿಷಯಗಳ ಆಯ್ಕೆ ಕುರಿತಂತೆ ವಿದ್ಯಾರ್ಥಿಗಳೊಂದಿಗೆ
ಸಂವಾದ ನಡೆಸಿದರು.

ಮುಖ್ಯ ಗ್ರಂಥಾಲಯ ಅಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲಾ ಗ್ರಂಥಾಲಯಕ್ಕೆ ಬರುವ ಓದುಗ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುವ ಕುರಿತು ಸಾಕಷ್ಟು ಪುಸ್ತಕಗಳನ್ನು ಒದಗಿಸಲಾಗುತ್ತಿದೆ. ಅಲ್ಲದೇ ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಐಎಎಸ್‌, ಕೆಎಎಸ್‌ ಉತ್ತೀರ್ಣರಾದ ಅಧಿಕಾರಿಗಳಿಂದ ಸ್ಪರ್ಧಾಕಾಂಕ್ಷಿಗಳೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಗಾಗ್ಗೆ ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು. ಸಂವಾದ ಕಾರ್ಯಕ್ರಮದಲ್ಲಿ ಐಎಎಸ್‌, ಕೆಎಎಸ್‌ ಪರೀಕ್ಷೆಯಲ್ಲಿ ಸ್ಪರ್ಧಾಕಾಂಕ್ಷಿಗಳು ಪಾಲ್ಗೊಂಡಿದ್ದರು.

ಪುಸ್ತಕಗಳ ಅಧ್ಯಯನದಿಂದ ಮಾತ್ರ ಎಲ್ಲ ವಿಷಯ ಅರಿಯಲು ಸಾಧ್ಯವಿಲ್ಲ. ದಿನ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಪ್ರಚಲಿತ ವಿದ್ಯಮಾನಗಳು, ಸಂಪಾದಕೀಯ, ದೇಶ-ವಿದೇಶಿ ಸುದ್ದಿಗಳು, ಆರ್ಥಿಕ ವಿಷಯಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಆವಿಷ್ಕಾರಗಳು, ಪರಿಸರದಂಥ ವಿಷಯಗಳಿಗೆ ಹೆಚ್ಚಿನ ಆದ್ಯತೆ ನಿಡಬೇಕು. 
 ಡಾ| ನಂದಿನಿದೇವಿ, ಪ್ರೊಬೆಷನರಿ ಐಎಎಸ್‌ ಅಧಿಕಾರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ