ಸದಾಶಿವ ಆಯೋಗ ಜಾರಿಗೆ ಈಗಲೂ ನಮ್ಮ ವಿರೋಧವಿದೆ: ಸಚಿವ ಪ್ರಭು ಚವ್ಹಾಣ್
Team Udayavani, Aug 28, 2021, 4:54 PM IST
ಚಿತ್ರದುರ್ಗ: ಸದಾಶಿವ ಆಯೋಗ ಜಾರಿ ಕುರಿತು ಈ ಹಿಂದೆ ವಿರೋಧ ಮಾಡಿದ್ದೇವೆ. ಈಗಲೂ ಕೂಡಾ ನಮ್ಮ ವಿರೋಧವಿದೆ. ಮುಂದೆ ಏನಾಗುತ್ತದೆ ನೋಡೋಣ ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದರು.
ನಗರದ ಮುರುಘಾ ಮಠಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮುದಾಯಕ್ಕೆ ಅನ್ಯಾಯವಾಗಲ್ಲ ಎಂಬ ವಿಶ್ವಾಸವಿದೆ. ಬೋವಿ, ಕೊರಚ, ಕೊರಮ, ಲಂಭಾಣಿಗರಿಗೆ ಅನ್ಯಾಯವಾಗಲ್ಲ ಎಂಬ ಭರವಸೆಯಿದೆ. ನಮ್ಮ ಕೇಂದ್ರ ಮಂತ್ರಿ ನಾರಾಯಣ ಸ್ವಾಮಿ ಹೇಳಿದ್ದಾರೆಂದು ಗೊತ್ತಿಲ್ಲ, ಆದರೆ ನಮ್ಮ ನಿರ್ಧಾರ ಮುಂದುವರಿಯುತ್ತದೆ. ನಾನು ರಾಜ್ಯ ಮಂತ್ರಿ ಇದ್ದೇನೆ, ಅವರು ಕೇಂದ್ರ ಮಂತ್ರಿ ಇದ್ದಾರೆ, ಅವರ ಹೇಳಿಕೆ ನನ್ನ ಗಮನಕ್ಕೆ ಬಂದಿಲ್ಲ, ಮಾತನಾಡುವೆ ಎಂದರು.
ಗೋ ಹತ್ಯೆ ನಿಷೇಧ ಕಾಯ್ದೆ ನಮ್ಮ ಸರ್ಕಾರ ಸಂಕಲ್ಪವಾಗಿತ್ತು. ಪ್ರತಿ ಜಿಲ್ಲೆಗೆ ಒಂದು ಗೋಶಾಲೆ ತೆರೆಯಲು ಚಿಂತನೆ ನಡೆದಿದೆ. ಜಾಗವನ್ನು ಕೂಡಾ ಆಯ್ಕೆ ಮಾಡುತ್ತಿದ್ದೇವೆ. ಪ್ರಾಣಿ ಸಹಾಯ ಕೇಂದ್ರ ದೇಶದ ಇತಿಹಾಸದಲ್ಲಿ ಮೊದಲು ನಾವು ಆರಂಭ ಮಾಡಿದ್ದೇವೆ. ಒಂದು ತಿಂಗಳಿನಲ್ಲಿ 10 ಸಾವಿರ ಕರೆ ಬಂದಿವೆ. ಪಶು ಸಂಜೀವಿನಿ ಯೋಜನೆ, ಅಂಬ್ಯುಲೆನ್ಸ್, ವೈದ್ಯರ ನೇಮಕವಾಗಿದೆ ಎಂದರು.
ಗೋ ಹತ್ಯೆ ವಿರೋಧಿ ಕಾನೂನು ಜಾರಿಗೊಳಿಸಲು ಸಂಪೂರ್ಣ ಶ್ರಮಿಸುತ್ತಿದ್ದೇನೆ. ಪಶು ಭಾಗ್ಯ ಕುರಿತು ಚಿಂತನೆ ನಡೆಯುತ್ತಿದೆ. ಪಶು ಚಿಕಿತ್ಸೆ ಕುರಿತು ಶುಲ್ಕ ನಿಗದಿಯ ಚಿಂತನೆ ನಡೆದಿಲ್ಲ ಎಂದು ಸಚಿವರು ಮಾಹಿತಿ ನೀಡಿದರು.