ಬಂಟ್ವಾಳದ ನಾವೂರಿನಲ್ಲಿ ಮಹಜರು ವಿಚಾರ: ದಿನಗಳ ಹಿಂದೆ ಕೇಳಿದ್ದು ಬಾಂಬ್ ರಿಹರ್ಸಲ್ ಶಬ್ದವೇ?
Team Udayavani, Sep 23, 2022, 8:10 AM IST
ಬಂಟ್ವಾಳ: ಶಿವಮೊಗ್ಗ ಪೊಲೀಸರಿಂದ ಬಂಧಿತನಾದ ಆರೋಪಿಯನ್ನು ಬಂಟ್ವಾಳದ ನಾವೂರಿನಲ್ಲಿ ಮಹಜರು ನಡೆಸಿರುವ ವಿಚಾರಕ್ಕೆ ಸಂಬಂಧಿಸಿ ಹಲವು ಚರ್ಚೆಗಳು ಆರಂಭಗೊಂಡಿದೆ. ಕೆಲ ಸಮಯಗಳ ಹಿಂದಷ್ಟೇ ಭೀಕರ ಶಬ್ದವೊಂದು ಸ್ಥಳೀಯ ನಿವಾಸಿಗಳಿಗೆ ಕೇಳಿಬಂದಿದ್ದು, ಅದು ನೇತ್ರಾವತಿ ನದಿಯ ಮತ್ತ ಕುದುರು ಪ್ರದೇಶದಲ್ಲಿ ಆರೋಪಿಗಳು ನಡೆಸಿದ ಬಾಂಬ್ ರಿಹರ್ಸಲ್‌ನ ಶಬ್ದವೇ ಎಂದು ಅನುಮಾನಗಳು ಸೃಷ್ಟಿಯಾಗಿದೆ.
ಅಂದರೆ ಆರೋಪಿಗಳು ಬಾಂಬ್ ರಿಹರ್ಸಲ್‌ಗಾಗಿ ನಾವೂರಿಗೆ ಬಂದಿದ್ದರು ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಇಂತದೊಂದು ಅನುಮಾನ ಸೃಷ್ಟಿಯಾಗಿದೆ. ನೇತ್ರಾವತಿ ನದಿಯಲ್ಲಿ ನಿಷೇಧದ ನಡುವೆಯೂ ಆಗಾದ ತೋಟೆ(ನ್ಪೋಟಕ ವಸ್ತು) ಹಾಕಿ ಮೀನು ಹಿಡಿಯುವ ಪ್ರಕರಣಗಳು ನಡೆದಿದ್ದು, ಆದರೆ ಒಂದು ತಿಂಗಳ ಈಚೆಗೆ ನದಿ ಪಾತ್ರದ ನಿವಾಸಿಯೊಬ್ಬರಿಗೆ ತೋಟೆಯ ಶಬ್ದಕ್ಕಿಂತ ಭಿನ್ನವಾಗಿ ಭೀಕರ ಶಬ್ದವೊಂದು ಕೇಳಿತ್ತು.
ಈ ವಿಚಾರವನ್ನು ಅವರು ತನ್ನ ಸ್ನೇಹಿತರ ಬಳಿಯೂ ಹೇಳಿಕೊಂಡಿದ್ದು, “ಸುದೆಟ್ ಭಯಂಕರ ಶಬ್ದವೊಂದು ಕೇಂದ್‌ಂಡ್, ತೋಟೆ ಕೈಟೇ ಪುಡಾಂಡ ದಾನೆ'(ನದಿಯಿಂದ ಜೋರಾದ ಶಬ್ದವೊಂದು ಕೇಳಿಬಂದಿದ್ದು, ತೋಟೆ ಕೈಯಲ್ಲೇ ನ್ಪೋಟಿಸಿದೆಯೇ) ಹೇಳಿದ್ದರು. ಸಾಮಾನ್ಯವಾಗಿ ತೋಟೆಯು ನೀರಿನ ಒಳಗೆ ನ್ಪೋಟಿಸಿದರೆ ಅಷ್ಟೊಂದು ಜೋರಾದ ಶಬ್ದ ಕೇಳುವುದಿಲ್ಲ. ಅದು ಮೇಲ್ಭಾಗದಲ್ಲಿ ಸ್ಫೋಟಗೊಂಡರೆ ಮಾತ್ರ ಆ ರೀತಿಯ ಶಬ್ದ ಕೇಳುತ್ತದೆ ಎನ್ನುವ ಕಾರಣಕ್ಕೆ ಶಬ್ದ ಕೇಳಿದ ವ್ಯಕ್ತಿ ಆ ರೀತಿ ಹೇಳಿದ್ದರು.
ಆದರೆ ಅದು ಇನ್ಯಾವುದೋ ಬೇರೆ ನ್ಪೋಟಕದ ಶಬ್ದ ಎಂದು ಭಾವಿಸಿರಲಿಲ್ಲ. ಆದರೆ ಇದೀಗ ಶಿವಮೊಗ್ಗ ಪೊಲೀಸರು ಶಂಕಿತ ತೀರ್ಥಹಳ್ಳಿ ಮೂಲದ ಮಂಗಳೂರಿನಲ್ಲಿ ವಾಸವಾಗಿದ್ದ ಮಾಜ್ ಮುನೀರ್ ಅಹ್ಮದ್(22)ನನ್ನು ಕುದುರು ಪ್ರದೇಶಕ್ಕೆ ಕರೆತಂದು ಮಹಜರು ಮಾಡಿದ ಬಳಿಕ ಅಂತಹ ಅನುಮಾನವೊಂದು ಸ್ಥಳೀಯರನ್ನು ಕಾಡುತ್ತಿದೆ. ಆದರೆ ಅದು ನಿಜವಾಗಿಯೂ ಯಾವುದರ ಶಬ್ದವೆಂದು ಯಾರಿಗೂ ಸರಿಯಾಗಿ ಗೊತ್ತಿಲ್ಲ ಎನ್ನಲಾಗಿದೆ.