ಬೆಳ್ತಂಗಡಿ ತಾ|: 2,000 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ

Team Udayavani, May 22, 2019, 6:00 AM IST

ಬೆಳ್ತಂಗಡಿ: ವರ್ಷದಿಂದ ವರ್ಷಕ್ಕೆ ಭತ್ತ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿರುವ ನಡುವೆಯೂ ತಾ| ಕೃಷಿ ಇಲಾಖೆಯಿಂದ ಪ್ರಸ್ತುತ 2,000 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಪ್ರಸಕ್ತ 50 ಕ್ವಿಂಟಾಲ್‌ ಭತ್ತ ಬಿತ್ತನೆ ಬೀಜ ದಾಸ್ತಾನು ಇರಿಸಿದೆ.

ಎಂಒ4 ತಳಿಗೆ ಮಾತ್ರ ಬೇಡಿಕೆ
3 ಹೋಬಳಿಗಳಾಗ ಬೆಳ್ತಂಗಡಿ, ಕೊಕ್ಕಡ ವೇಣೂರು ಪ್ರದೇಶಗಳಲ್ಲಿ ವಿವಿಧ ಕಾರಣಗಳಿಂದ ಕಳೆದ 2 ವರ್ಷಗಳಲ್ಲಿ ಸಾವಿರ ಹೆಕ್ಟೇರ್‌ಗೂ ಅಧಿಕ ಭತ್ತ ಬೆಳೆಯುವವರ ಸಂಖ್ಯೆ ಗಣನೀಯ ಇಳಿಕೆಯಾಗಿದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಭತ್ತ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ಒದಗಿಸುತ್ತಿದ್ದು, ಅವಶ್ಯ ಯಂತ್ರೋಪಕರಣಗಳನ್ನು ಶೇ. 90 ಸಬ್ಸಿಡಿಯಲ್ಲಿ ನೀಡುತ್ತಿದೆ. ತಾ|ನ ರೈತರಿಂದ ಎಂಒ4 (ಭದ್ರಾ) ತಳಿಗೆ ಮಾತ್ರ ಬೇಡಿಕೆ ಬಂದಿರುವುದರಿಂದ 50 ಕ್ವಿಂ. ದಾಸ್ತಾನು ಮಾಡಲಾಗಿತ್ತು. ಈ ಬಾರಿ ಪೂರ್ವ ಮುಂಗಾರು ಕೈಕೊಟ್ಟಿರುವುದರಿಂದ ಸದ್ಯ 1 ಕ್ವಿಂ. ಬಿತ್ತನೆ ಬೀಜ ಮಾರಾಟ ಆಗಿದ್ದು, 49 ಕ್ವಿಂ. ದಾಸ್ತಾನು ಉಳಿದು ಕೊಂಡಿದೆ. ಕಳೆದ ಬಾರಿ ಬೇಡಿಕೆ ಅನುಸಾರ ಎಂಒ4, ಉಮಾ, ಜ್ಯೋತಿ, ಜಯಾ ವಿತರಿಸಲಾಗಿತ್ತು.

100 ಕ್ವಿಂಟಾಲ್‌ ವಿತರಣೆ ಗುರಿ
ಮೂರು ಹೋಬಳಿಗಳಲ್ಲಿ ಮುಂಗಾರು ಪೂರ್ವ 2,000 ಹೆಕ್ಟೇರ್‌ ಗುರಿ ಹೊಂದಿದ್ದು, ಹಿಂಗಾರಿನಲ್ಲಿ 850 ಹೆಕ್ಟೇರ್‌ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಭೂ ಪರಿವರ್ತನೆ, ರಬ್ಬರ್‌ ಬೆಳೆ, ಅಡಿಕೆ ತೋಟ, ಪಡೀಲು ಬಿಟ್ಟಿರುವುದರಿಂದ ಭತ್ತ ಬೆಳೆಯುವವರ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬುದು ಆತಂಕಕಾರಿ. ಕಳೆದ ಬಾರಿ 119 ಕ್ವಿಂಟಾಲ್‌ ಬಿತ್ತನೆ ಬೀಜ ಮಾರಾಟವಾಗಿದೆ. ಮುಂಗಾರಿ ನಲ್ಲಿ 63 ಕ್ವಿಂಟಾಲ್‌, ಹಿಂಗಾರಿನಲ್ಲಿ 56 ಕ್ವಿಂಟಾಲ್‌ ಭತ್ತ ವಿತರಿಸಲಾಗಿದೆ. ಈ ಬಾರಿಯೂ 100 ಕೆ.ಜಿ. ವಿತರಿಸುವ ಗುರಿ ಹೊಂದಲಾಗಿದೆ ಎಂದು ತಾಂತ್ರಿಕ ಕೃಷಿ ಅಧಿಕಾರಿ ಹುಮೇರ್‌ ಜಬೀನ್‌ ತಿಳಿಸಿದ್ದಾರೆ.

 ಬೇಡಿಕೆಗೆ ಅನುಸಾರ ಬಿತ್ತನೆ ಬೀಜ
3 ಹೋಬಳಿಗೆ 50 ಕ್ವಿಂಟಾಲ್‌ ಬಿತ್ತನೆ ಬೀಜ ಲಭ್ಯವಾಗಿದ್ದು, ಬೇರೆಡೆ ದಾಸ್ತಾನು ಕೊರತೆಯಿಂದ ಬೆಳ್ತಂಗಡಿ ಕೃಷಿ ಇಲಾಖೆಯಲ್ಲೇ ಸಂಗ್ರಹಿಸಿಡಲಾಗಿದೆ. ರೈತರ ಬೇಡಿಕೆಗೆ ಅನುಸಾರವಾಗಿ ಬಿತ್ತನೆ ಬೀಜ ಪಡೆಯಬಹುದು. ಬೇಡಿಕೆ ಹೆಚ್ಚಿದ್ದಂತೆ ಹೆಚ್ಚುವರಿಯಾಗಿ ತರಿಸಲಾಗುವುದು.
 - ಪ್ರೇಮಾ ಡಿ. ಕಾಮ್ಲೆ, ಸಹಾಯಕ ಕೃಷಿ ನಿರ್ದೇಶಕರು

ಕೃಷಿ ಇಲಾಖೆಯಲ್ಲಿ 5 ಎಕ್ರೆ ಭತ್ತ ಗದ್ದೆ
ಬೆಳ್ತಂಗಡಿ ಕೃಷಿ ಇಲಾಖೆಯ ಬೀಜ ಉತ್ಪಾದನ ಕೇಂದ್ರದಲ್ಲಿ 5 ಎಕ್ರೆ ಗದ್ದೆ ಹೊಂದಿದ್ದು, ಪ್ರತಿ ವರ್ಷ ಭತ್ತ ಬೆಳೆಯಲಾಗುತ್ತಿದೆ. ಬೆಳೆದ ಭತ್ತವನ್ನು ಫಾರ್ಮೇಷನ್‌ ಪಕ್ರಿಯೆಗೆ ಬಳಸಿ ಶಿವಮೊಗ್ಗಕ್ಕೆ ಕಳುಹಿಸಲಾಗುತ್ತದೆ. ಬಳಿಕ ಅಲ್ಲಿಂದ ಸಬ್ಸಿಡಿ ಮುಖೇನ ಅವಶ್ಯವಿರುವ ಕೃಷಿ ಇಲಾಖೆಗೆ ಹಸ್ತಾಂತರಿಸುವ ಕೆಲಸ ನಿರಂತರವಾಗಿ ಸಾಗುತ್ತಿದೆ. ಕಳೆದ ಬಾರಿ 70 ಕೆ.ಜಿ.ಯ 112 ಬ್ಯಾಗ್‌ ಭತ್ತ ಬೆಳೆಯಲಾಗಿದೆ. ಉಳಿದ ಸ್ಥಳಗಳಲ್ಲಿ ಸೆಣಬು ಬೆಳೆಯಲಾಗುತ್ತಿದೆ.

ಭತ್ತ ಬೆಳೆ-ಬಿತ್ತನೆ ಬೀಜ
ಭತ್ತ ಬೆಳೆಯುವ ಗುರಿ- 2,000 ಹೆಕ್ಟೇರ್‌ 
ಹೋಬಳಿ (ಹೆಕ್ಟೇರ್‌) ಬೆಳ್ತಂಗಡಿ-850, ವೇಣೂರು-850, ಕೊಕ್ಕಡ-350
ಲಭ್ಯ ಭತ್ತ ಬಿತ್ತನೆ ಬೀಜ- 49 ಕ್ವಿಂ.
ಮಾರಾಟ – 1 ಕ್ವಿಂ.
ಬೆಲೆ (1 ಕೆ.ಜಿ.) -30 ರೂ.
ಮಿತಿ – ಒಬ್ಬ ರೈತನಿಗೆ ಎಕ್ರೆಗೆ 25 ಕೆ.ಜಿ.

ಚೈತ್ರೇಶ್‌ ಇಳಂತಿಲ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ