ಪಶ್ಚಿಮ ಘಟ್ಟದಲ್ಲಿ ಅರಣ್ಯ ಇಲಾಖೆಯಿಂದ ಚಾರಣಕ್ಕೆ ಬ್ರೇಕ್‌

Team Udayavani, Mar 16, 2018, 5:14 PM IST

ಮಂಗಳೂರು : ತಮಿಳುನಾಡು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚಿನ ದುರಂತದ ಕಾರಣವನ್ನು ಮುಂದಿಟ್ಟುಕೊಂಡು ಕರ್ನಾಟಕ ಸರಕಾರದ ಅರಣ್ಯ ಇಲಾಖೆ ಇಲ್ಲಿನ ರಕ್ಷಿತಾರಣ್ಯಗಳಲ್ಲಿ ಚಾರಣವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು, ಇದೀಗ ಇಲಾಖೆಯ ನಿರ್ಧಾರಕ್ಕೆ ಚಾರಣಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಜತೆಗೆ ಇದರಿಂದ ಅರಣ್ಯದೊಳಗಿನ ಮಾಫಿಯಾ ಹೆಚ್ಚಳಗೊಳ್ಳುವ ಆತಂಕ ಎದುರಾಗಿದೆ. 

ರಾಜ್ಯದ ಪ್ರಮುಖ ಚಾರಣದ ಪ್ರದೇಶ ವೆಂದು ಖ್ಯಾತಿ ಗಳಿಸಿರುವ ಪಶ್ಚಿಮ ಘಟ್ಟ ಪ್ರದೇಶಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ಚಾರಣಿಗರು ಆಗಮಿಸುತ್ತಿದ್ದು, ಇಲಾಖೆಯ ಆದೇಶ ಅವರಿಗೆ ನಿರಾಶೆ ತಂದಿದೆ. ಅರಣ್ಯದೊಳಗೆ ಸಾಕಷ್ಟು ಕಾನೂನುಬಾಹಿರ ಕೃತ್ಯಗಳು ನಡೆಯುತ್ತಿದ್ದರೂ ಕ್ರಮ ಕೈಗೊಳ್ಳದ ಇಲಾಖೆ ಚಾರಣಿಗರ ಮೇಲೆ ಕ್ರಮಕ್ಕೆ ಮುಂದಾಗಿರುವುದು ವಿಪರ್ಯಾಸ ಎಂದು ಹೇಳಲಾಗುತ್ತಿದೆ. 

ದ.ಕ, ಉಡುಪಿ ಜಿಲ್ಲೆಗಳಿಂದಲೂ ಸಾಕಷ್ಟು ಸಂಖ್ಯೆಯ ಪರಿಸರಪ್ರೇಮಿ ಚಾರಣಿಗರ ತಂಡಗಳು ರಜಾದಿನಗಳಲ್ಲಿ ಚಾರಣಕ್ಕೆ ತೆರಳಿ ಅರಣ್ಯ ಜಾಗೃತಿ ಕಾರ್ಯ ನಡೆಸುತ್ತಿದ್ದು, ಇದೀಗ ಅವರ ಕಾರ್ಯಚಟುವಟಿಕೆಗಳಿಗೂ ಬ್ರೇಕ್‌ ಬೀಳಲಿದೆ. ಅರಣ್ಯದೊಳಗೆ ನಡೆಯು ತ್ತಿರುವ ಕಾನೂನುಬಾಹಿರ ಕೃತ್ಯಗಳನ್ನು ಬೆಂಬಲಿಸುವು ದಕ್ಕೋಸ್ಕರ ಸರಕಾರ ಈ ನಿರ್ಧಾರವನ್ನು ಕೈಗೊಂಡಿದೆ ಎಂಬ ಆರೋಪಗಳು ಕೇಳಿಬಂದಿವೆ. 

ಮಾಫಿಯಾ ಹೆಚ್ಚಳ ಸಾಧ್ಯತೆ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಗಾಂಜಾ ಮಾಫಿಯಾ, ಎಸ್ಟೇಟ್‌ ಮಾಫಿಯಾ, ಕಳ್ಳಬೇಟೆ ಮಾಫಿಯಾಗಳು ನಡೆಯುತ್ತಿದ್ದರೂ ಅರಣ್ಯ ಇಲಾಖೆಯಿಂದ ಅದನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಆದರೆ ಇಂತಹ ದಂಧೆ ನಡೆಸುವವರು ಚಾರಣಿಗರಿಗೆ ಹೆದರಿಯಾದರೂ ತಮ್ಮ ಕೃತ್ಯಗಳಿಗೆ ಕೊಂಚ ಬ್ರೇಕ್‌ ಹಾಕಿದ್ದರು. ಆದರೆ ಇಲಾಖೆಯ ನಿರ್ಧಾರದಿಂದ ಚಾರಣಿಗರು ಅರಣ್ಯ ಪ್ರವೇಶಿಸದೇ ಇದ್ದರೆ ಅರಣ್ಯ ದಂಧೆ ಹೆಚ್ಚಳವಾಗುವ ಆತಂಕ ಎದುರಾಗಿದೆ. ಈ ಹಿಂದೆಯೂ ಎಷ್ಟೋ ಸಂದರ್ಭದಲ್ಲಿ ಬೇಟೆಗಾರರು ಚಾರಣಿಗರಿಗೆ ಎದುರಾದ ಘಟನೆಗಳು ನಡೆದಿದೆ ಎಂದು ಚಾರಣಿಗರು ತಿಳಿಸುತ್ತಾರೆ. 

ಅರಣ್ಯ ಸಂರಕ್ಷಣೆ ಜಾಗೃತಿ ಕಾರ್ಯ
ದ.ಕ.ಜಿಲ್ಲೆಯಿಂದ ಪ್ರತಿ ವಾರ ಸಹ್ಯಾದ್ರಿ ಸಂಚಯ ತಂಡ ಪಶ್ಚಿಮ ಘಟ ಪ್ರದೇಶಗಳಿಗೆ ಚಾರಣ ತೆರಳುತ್ತಿದೆ. ತಮ್ಮ ಜತೆ ವಿವಿಧ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಅವರಲ್ಲಿ ಅರಣ್ಯ ಸಂರಕ್ಷಣೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಘಟ್ಟ ಪ್ರದೇಶದಲ್ಲಿ ಯಾವ ರೀತಿ ನದಿಗಳು ಹುಟ್ಟುತ್ತವೆ, ಅಲ್ಲಿರುವ ಹುಲ್ಲುಗಾವಲಿನಿಂದ ಪ್ರಯೋಜನ ಏನು, ಕಾಡ್ಗಿಚ್ಚು ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದರ ಕುರಿತು ಮಾಹಿತಿ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ. 

ಸಹ್ಯಾದ್ರಿ ಸಂಚಯ ಕಳೆದ 4 ವರ್ಷಗಳಿಂದ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ವರ್ಷಕ್ಕೆ ಸುಮಾರು 15 ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಮಾಹಿತಿ ಕಾರ್ಯವನ್ನು ಮಾಡುತ್ತಿದೆ. ಪ್ರಸ್ತುತ ಅರಣ್ಯ ಇಲಾಖೆಯ ಆದೇಶದ ಪ್ರಕಾರ ಚಾರಣ ನಿಷೇಧಗೊಂಡರೆ ವಿದ್ಯಾರ್ಥಿಗಳು ಇಂತಹ ಅಮೂಲ್ಯ ಮಾಹಿತಿ ಗಳಿಂದ ವಂಚಿತರಾಗಲಿದ್ದಾರೆ. 

ಕಾಡ್ಗಿಚ್ಚು ಕೃತಕ ಸೃಷ್ಟಿ?
ಚಾರಣಿಗರ ಹಿತದೃಷ್ಟಿಯಿಂದ ಇಲಾಖೆಯು ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದ್ದರೂ  ಪರೋಕ್ಷವಾಗಿ ಅರಣ್ಯದೊಳಗೆ ನಡೆಯುತ್ತಿ ರುವ ಕಾನೂನುಬಾಹಿರ ಕೃತ್ಯಗಳನ್ನು ಬೆಂಬಲಿ ಸುವುದಕ್ಕೋಸ್ಕರ ಇಂತಹ ನಿರ್ಧಾರ ಕೈಗೊಳ್ಳ ಲಾಗಿದೆ. ಜತೆಗೆ ಇವರು ಹೇಳುವ ಪ್ರಕಾರ ಅರಣ್ಯ ದಲ್ಲಿ ತನ್ನಷ್ಟಕ್ಕೇ ಕಾಡ್ಗಿಚ್ಚು ಹತ್ತಿ ಕೊಳ್ಳುವುದಿಲ್ಲ. ಬದಲಾಗಿ ಅರಣ್ಯ ಮಾಫಿಯಾಗಳು ಕಾಡ್ಗಿಚ್ಚನ್ನು ಸೃಷ್ಟಿಸಿ ಜನರನ್ನು ಹೆದರಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಇದೆ.

ಘಟ್ಟ ಪ್ರದೇಶಗಳಲ್ಲಿ ಕಾಡ್ಗಿಚ್ಚು ಹತ್ತಿದಾಗ ಅಲ್ಲಿನ ಹುಲ್ಲು ಸೇರಿದಂತೆ ಅದರ ಬೇರು ಕೂಡ ಹೊತ್ತಿ ಉರಿಯುತ್ತದೆ. ಇದರಿಂದ ಮಳೆ ಬರುವ ವೇಳೆಯೂ ಅದು ಚಿಗುರುವುದಿಲ್ಲ. ಮಳೆಯ ನೀರಿಗೆ ಬೆಟ್ಟ ಪ್ರದೇಶದ ಮಣ್ಣು ಸವೆತದಿಂದ ತಳ ಭಾಗದ ನದಿ ಉಗಮ ಸ್ಥಳಗಳನ್ನು ಸೇರಿಕೊಂಡು ಅಲ್ಲಿನ ಕಣಿವೆಗಳು ಮುಚ್ಚಿ ಹೋಗುತ್ತವೆ. 

ಪ್ರಸ್ತುತ ಚಾರ್ಮಾಡಿ ಭಾಗದಲ್ಲಿ ಕಾಡ್ಗಿಚ್ಚಿನ ಪರಿಣಾಮ ನೇತ್ರಾವತಿಯ ಪ್ರಮುಖ ಉಪನದಿ ಗಳಾದ ಮೃತ್ಯುಂಜಯ ಹೊಳೆ, ಸುನಾಲ ಹೊಳೆ, ಅನಿಯೂರು ಹೊಳೆ, ನೆರಿಯಾ ಹೊಳೆಗಳಿಗೆ ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನೇತ್ರಾವತಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ಪರಿಸರವಾದಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಚಾರಣ ನಿರ್ಬಂಧ ವಿಪರ್ಯಾಸ
“ಕಾಡ್ಗಿಚ್ಚು ಎನ್ನುವುದು ಕೃತಕವಲ್ಲ. ಅದು ಮಾಫಿಯಾಗಳ ಸೃಷ್ಟಿ. ಪ್ರಸ್ತುತ ಅರಣ್ಯ ಇಲಾಖೆಯ ವ್ಯವಸ್ಥೆಯಲ್ಲಿ ಕಾಡಿಗೆ ಬಿದ್ದ ಬೆಂಕಿ ನಂದಿಸಲು ಸಾಧ್ಯವಿಲ್ಲ. ಹೀಗಾಗಿ ನಾವು ಕಾಡಿನ ಮಧ್ಯಕ್ಕೆ ತೆರಳಲು ಹೆಲಿಕಾಪ್ಟರ್‌ಗಾಗಿ ಮನವಿ ನೀಡಿದ್ದು, ಯಾವುದೇ ಸ್ಪಂದನೆ ಇಲ್ಲ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬಹುತೇಕ ಕಡೆ ಅತಿಕ್ರಮಣ ನಡೆಯುತ್ತಿದೆ. ಸರಕಾರ ಇಂತಹ ಮಾಫಿಯಾಗಳನ್ನು ನಿಲ್ಲಿಸುವುದು ಬಿಟ್ಟು ಚಾರಣ ನಿರ್ಬಂಧಕ್ಕೆ ಹೊರಟಿರುವುದು ವಿಪರ್ಯಾಸವೇ ಸರಿ.’
 ದಿನೇಶ್‌ ಹೊಳ್ಳ,  ಸಹ್ಯಾದ್ರಿ ಸಂಚಯ, ಮಂಗಳೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ