ಉತ್ತಮ ಸೇವೆಯೇ ರೈಲ್ವೇ ಇಲಾಖೆಯ ಧ್ಯೇಯ: ಸುಧಾ
ಅಂತಾರಾಷ್ಟ್ರೀಯ ರೈಲ್ವೇ ಲೆವೆಲ್ ಕ್ರಾಸಿಂಗ್ ದಿನದ ಜಾಗೃತಿ
Team Udayavani, Jun 7, 2019, 6:00 AM IST
ಹಳೆಯಂಗಡಿ: ಬೈಕ್‌ನಲ್ಲಿ ಬಂದ ಸವಾರರಿಬ್ಬರು ಹಾಕಿದ ರೈಲ್ವೇ ಕ್ರಾಸಿಂಗ್‌ನ ಎಲ್.ಸಿ.ಗೇಟನ್ನು ತೆಗೆಯಲು ಆಗ್ರಹಿಸಿದರು.
ನನಗೆ ಮೀಟಿಂಗ್‌ಗೆ, ಮತ್ತೂಬ್ಬರಿಗೆ ಮೆಸ್ಕಾಂ ಬಿಲ್ ಕಟ್ಟಲು ಇದೆ ಅರ್ಜೆಂಟ್ ಹೋಗಬೇಕು ತೆಗೆಯಿರಿ ಎಂದು ಬೊಬ್ಬೆ ಹಾಕಿ, ಬೈಕ್‌ನ್ನು ಹಾಕಿದ ಗೇಟ್‌ನ ಕೆಳಗೆ ತೂರಿಸಲು ಪ್ರಯತ್ನಿಸಿ ದಾಗ ಸ್ಥಳದಲ್ಲಿದ್ದ ಅಧಿಕಾರಿಗಳು ಬಲವಂತವಾಗಿ ಗೇಟ್ ತೆಗೆಯುವುದರಿಂದ ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಪ್ರ್ಯಾತ್ಯಕ್ಷಿಕೆ ಇಲ್ಲಿನ ಹಳೆಯಂಗಡಿ ಇಂದಿರಾನಗರದ ರೈಲ್ವೇಗೇಟ್‌ನಲ್ಲಿ ಗುರುವಾರ ಜರಗಿತು.
ಜಿಲ್ಲಾ ಕೊಂಕಣ ರೈಲ್ವೇ ಕಾರ್ಪೊರೇಶನ್ ಸಂಸ್ಥೆಯಿಂದ ಹಮ್ಮಿ ಕೊಂಡಿರುವ ಅಂತಾರಾಷ್ಟ್ರೀಯ ರೈಲ್ವೇ ಲೆವೆಲ್ ಕ್ರಾಸಿಂಗ್ ಜಾಗೃತಿ ದಿನದ ಪ್ರಯುಕ್ತ ಜೂ.6ರಂದು ರೈಲ್ವೇ ಗೇಟ್‌ಗಳಲ್ಲಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದೆ.
ಮಂಗಳೂರು ಕೊಂಕಣ್ ರೈಲ್ವೇ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣ ಮೂರ್ತಿ ಮಾಹಿತಿ ನೀಡಿ, ಜನರಿಗೆ ಉತ್ತಮ ಸೇವೆ ಸಲ್ಲಿಸಲು ರೈಲ್ವೇ ಇಲಾಖೆಗೆ ಸಾರ್ವ ಜನಿಕರ ಸಹಕಾರ ಅಗತ್ಯ. ಲೆವೆಲ್ ಕ್ರಾಸಿಂಗ್ ಗೇಟನ್ನು ಎಂದಿಗೂ ಜಾಗ್ರತೆಯಿಂದ ಪ್ರವೇಶಿಸಬೇಕು. ಮುಚ್ಚಿದ ಎಲ್.ಸಿ. ಗೇಟ್‌ನಿಂದ ಸಾಕಷ್ಟು ದೂರವಿರಿ, ಗೇಟಿನ ತಡೆಬೇಲಿಯ ಕೆಳಗಿನಿಂದ ಅಥವಾ ಪಕ್ಕದಿಂದ ವಾಹನಗಳನ್ನು ಅತಿಕ್ರಮಣ ಮಾಡಲು ಪ್ರಯತ್ನ ನಡೆಸಬೇಡಿ. ಮುಚ್ಚಿದ ಗೇಟನ್ನು ತೆಗೆಯಲು ಪ್ರಯತ್ನ ನಡೆಸದಿರಿ, ನಿರ್ಲಕ್ಷ್ಯ ವಹಿಸಿದಲ್ಲಿ ಜೀವಕ್ಕೆ ಅಪಾಯದ ಬಗ್ಗೆ ಜಾಗೃತಿಗೆ ಈ ಅಭಿಯಾನ ಹಮ್ಮಿಕೊಂಡಿದ್ದು ಕೊಂಕಣ ರೈಲ್ವೇಯ 90 ರೈಲ್ವೇ ಗೇಟಿಗಳಲ್ಲಿ ಏಕಕಾಲದಲ್ಲಿ ಈ ಜಾಗೃತಿ ಅಭಿಯಾನ ನಡೆದಿದೆ ಎಂದರು.
ಮುಕ್ತ ಸಂಚಾರಕ್ಕೆ ಮೇಲ್ಸೇತುವೆ ಅಗತ್ಯ
ಹಳೆಯಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹಾಬಲ ಸಾಲ್ಯಾನ್ ಮಾತ ನಾಡಿ, ಹಳೆಯಂಗಡಿ ರೈಲ್ವೇ ಕ್ರಾಸಿಂಗ್‌ನಲ್ಲಿ ಮುಕ್ತವಾಗಿ ಸಂಚರಿಸಲು ಮೇಲ್ಸೇತುವೆ ಅಗತ್ಯವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದರೆ ರಾಜ್ಯ ಸರಕಾರ ಜಮೀನು ನೀಡಿಲ್ಲ ಎಂಬ ಮಾತು ಅಧಿಕಾರಿಗಳಿಂದ ಕೇಳಿ ಬಂದಿದೆ. ರೈಲ್ವೇ ಕ್ರಾಸಿಂಗ್ ಬಗ್ಗೆ ಉತ್ತಮ ಜಾಗೃತಿ ಮೂಡಿಸಿರುವುದು ಕೊಂಕಣ ರೈಲ್ವೇಯ ಕಾರ್ಯಕ್ಷಮತೆ ಮೆಚ್ಚುವಂಥದ್ದಾಗಿದೆ ಎಂದರು.
ಮಂಗಳೂರು ಪ್ರಾದೇ ಶಿಕ ಸಂಚಾರದ ಪ್ರಬಂಧಕ ಎಸ್. ವಿನಯ ಕುಮಾರ್ ನೇತೃತ್ವದಲ್ಲಿ ಸಹಾಯಕ ಪ್ರಬಂಧಕ ದರ್ಶನ್ ಠಾಕೂರ್, ಸುರತ್ಕಲ್ ನಿಲ್ದಾಣದ ಸೂಪರ್ ವೈಸರ್ ಶೇಷಗಿರಿ, ಸಿಬಂದಿಯೊಂದಿಗೆ ರೈಲ್ವೇ ಕ್ರಾಸಿಂಗ್‌ನಲ್ಲಿ ಜನರು ಉದ್ವೇಗದಿಂದ ಪ್ರತಿಕ್ರಿಯಿಸುವ ಬಗೆಯ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು.
ಕಲ್ಲಾಪು ಕ್ರಾಸಿಂಗ್‌ನಲ್ಲೂ ಸಮಸ್ಯೆ
ರೈಲ್ವೇ ಇಲಾಖೆಯು ಹಳೆಯಂಗಡಿ ಮತ್ತು ಕಲ್ಲಾಪುವಿನ ನಡುವೆ ಮೇಲ್ಸೇತುವೆ ನಿರ್ಮಿಸಬೇಕು ಇದರಿಂದ ಎರಡೂ ಕಡೆಗಳಲ್ಲೂ ಅನುಕೂಲವಾಗುತ್ತದೆ.ರೈಲ್ವೇ ಜಾಗೃತಿ ಸಮಯದಲ್ಲಿಯೇ ಈ ಬಗ್ಗೆ ಅಧಿಕಾರಿಗಳನ್ನು ಒತ್ತಾಯಿಸಲಾಗಿದೆ . ಕಲ್ಲಾಪುವಿನಲ್ಲಿ ಇಕ್ಕಟ್ಟಿನಲ್ಲಿ ರಸ್ತೆ ಸಂಚಾರ ಇದೆ ಎಂದು ಪಡುಪಣಂಬೂರು ಗ್ರಾ.ಪಂ.ಅಧ್ಯಕ್ಷ ಮೋಹನ್‌ದಾಸ್ ಅವರು ಹೇಳಿದರು.