ಆಲೆಟ್ಟಿ ಸಂಸದರ ಆದರ್ಶ ಗ್ರಾಮವಾಗಲಿ

Team Udayavani, Aug 15, 2019, 5:13 AM IST

ಸುಳ್ಯ: ಸರ್ವಾಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ಆಲೆಟ್ಟಿಯನ್ನು ಸಂಸದರ ಆದರ್ಶ ಗ್ರಾಮವನ್ನಾಗಿ ಆಯ್ಕೆ ಮಾಡುವಂತೆ ಆಲೆಟ್ಟಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.

ಆಲೆಟ್ಟಿ ಗ್ರಾ.ಪಂ. 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಪಂಚಾಯತ್‌ ಅಧ್ಯಕ್ಷ ಹರೀಶ್‌ ರಂಗತ್ತಮಲೆ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು.ಲೋಲಜಾಕ್ಷ ಭೂತಕಲ್ಲು ಮಾತನಾಡಿ, ಪಂಚಾಯತ್‌ಗೆ ವರ್ಷಕ್ಕೊಮ್ಮೆ ಪಾವತಿಸುವ ತೆರಿಗೆ ಪಾವತಿಸುತ್ತಿದ್ದೇವೆ. ಆದರೆ ಭೂತಕಲ್ಲು ಭಾಗದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಈ ಪ್ರದೇಶದಲ್ಲಿ ಪ.ಜಾತಿ ಮತ್ತು ಪ. ಪಂಗಡದ ಕಾಲನಿಯಿದೆ. ನಮ್ಮ ಭಾಗಕ್ಕೆ ಬಿಡುಗಡೆಯಾದ ಅನುದಾನ ಬೇರೆ ವಾರ್ಡಿಗೆ ಹಾಕಲಾಗಿದೆ. ಆಯಾಯ ವಾರ್ಡಿನ ಅನುದಾನವನ್ನು ಅಲ್ಲಿಗೆ ಬಳಸ ಬೇಕು. ನಾವು ಗ್ರಾ.ಪಂ.ನ ಸೌಲಭ್ಯದಿಂದ ವಂಚಿತರಾಗಿದ್ದೇವೆ ಎಂದರು.

ಆಲೆಟ್ಟಿಯನ್ನು ಸಂಸದರ ಆದರ್ಶ ಗ್ರಾಮದ ಆಯ್ಕೆಗೆ ಸೇರಿಸಿಕೊಳ್ಳುವಂತೆ ಜಿ.ಪಂ. ಸದಸ್ಯರು ಒತ್ತಡ ಹಾಕಬೇಕು. ಇದರಿಂದ ಅಭಿವೃದ್ಧಿ ಸಾಧ್ಯ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಬಾಪೂ ಸಾಹೇಬ್‌ ಮಾತನಾಡಿ, ಗ್ರಾ.ಪಂ. ವ್ಯಾಪ್ತಿಯ ರಸ್ತೆ- ಚರಂಡಿ ನಿರ್ವಹಣೆ ಕೆಲಸ ಆಗುತ್ತಿಲ್ಲ. ಅರಂಬೂರಿನಲ್ಲಿ ನಾವೇ ದುರಸ್ತಿ ಮಾಡಿಸಿದ್ದೇವೆ. ಚರಂಡಿ ಇಲ್ಲದೆ ಕಾಂಕ್ರೀಟ್ ರಸ್ತೆಗೆ ಹಾನಿಯಾಗಿದೆ. ದೊಡ್ಡ ಗ್ರಾಮ ಆಲೆಟ್ಟಿಗೆ ವಿಶೇಷ ಅನುದಾನಕ್ಕೆ ಸರಕಾರಕ್ಕೆ ಮನವಿ ಮಾಡುವಂತೆ ಆಗ್ರಹಿಸಿದರು.

ರಾಧಾಕೃಷ್ಣ ಪರಿವಾರಕಾನ ಪ್ರಸ್ತಾವಿಸಿ, ಆಲೆಟ್ಟಿಗೆ ಪ್ರವೇಶದ ನಾಗಪಟ್ಟಣದಲ್ಲಿ ರಸ್ತೆ ಬದಿಯ ಚರಂಡಿಯಲ್ಲಿ ಕೆಎಫ್‌ಡಿಸಿ ಬಿಡುವ ತ್ಯಾಜ್ಯದ ಮಲಿನ ನೀರು ಹರಿದು ದುರ್ವಾಸನೆ ಬೀರುತ್ತಿದೆ. ಪಂ. ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಸುಳ್ಯದಿಂದ ಕೂರ್ನಡ್ಕಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಪ್ರಾರಂಭಿಸುವಂತೆ ಒತ್ತಡ ಹೇರಬೇಕು. ಮುಖ್ಯ ರಸ್ತೆಯಿಂದ ಮನೆಗಳಿಗೆ ಸಂಪರ್ಕದ ರಸ್ತೆ ನಿರ್ಮಿಸುವಾಗ ಮೋರಿ ಅಳವಡಿಸದೇ ರಸ್ತೆಯೆಲ್ಲ ಹಾಳಾಗುತ್ತಿದೆ. ಈ ಬಗ್ಗೆ ಗ್ರಾ.ಪಂ. ಕ್ರಮ ಕೈಗೊಳ್ಳಬೇಕು. ಆಲೆಟ್ಟಿಗೆ ಬರುವ ರಸ್ತೆಯ ಕುಡೆಕಲ್ಲು ಕಾಲನಿ ಬಳಿ ತಡೆಗೋಡೆ ನಿರ್ಮಿಸುವ ಸಂದರ್ಭದಲ್ಲಿ ಚರಂಡಿ ಮುಚ್ಚಿದ್ದಾರೆ. ಇದರಿಂದ ನೀರೆಲ್ಲ ರಸ್ತೆಯಲ್ಲಿ ಹರಿಯುತ್ತಿದೆ ಎಂದು ರಾಧಾಕೃಷ್ಣ ಹೇಳಿದರು.

ಸಂಚಾರ ಸಮಸ್ಯೆಯಿದೆ
ಕೃಪಾಶಂಕರ ತುದಿಯಡ್ಕ ಮಾತನಾಡಿ, ಮಳೆಹಾನಿ ಅನುದಾನದಲ್ಲಿ ಗ್ರಾಮದ ಜನಪ್ರತಿನಿಧಿಗಳ ಗಮನಕ್ಕೆ ತರದೆ ನಾಗಪಟ್ಟಣದಿಂದ ಆಲೆಟ್ಟಿ ರಸ್ತೆಯಲ್ಲಿನ ಮೋರಿಗಳನ್ನು ಅಸಮರ್ಪಕವಾಗಿ ಜೋಡಿಸಲಾಗಿದೆ. ಈ ರಸ್ತೆಯ ಅಲ್ಲಲ್ಲಿ ಹೊಂಡ ಗುಂಡಿಗಳಿದ್ದು ಸುಳ್ಯದಿಂದ ಬಡ್ಡಡ್ಕ ತನಕ ಸಂಚಾರಕ್ಕೆ ಸಮಸ್ಯೆಯಿದೆ. ಮೋರಿ ಅಳವಡಿಕೆ ಬದಲು ರಸ್ತೆಯ ಎರಡು ಬದಿ 1 ಅಡಿಯಷ್ಟು ಅಗಲಗೊಳಿಸಿ ಮರು ಡಾಮರು ಹಾಕಿ ಅನುಕೂಲವಾಗುವಂತೆ ಮಾಡಬಹುದಿತ್ತು. ಅದರ ಬದಲಾಗಿ ಎಂಜಿನಿಯರ್‌ ಮತ್ತು ಗುತ್ತಿಗೆದಾರರು ಸೇರಿ ತಮಗೆ ಬೇಕಾದ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಸಾರ್ವಜನಿಕರಿಗೆ ಉಪ ಕಾರವಾಗಬೇಕಾದ ಕಾಮಗಾರಿ ಕೆಲಸ ಮಾಡದೇ ಅವರ ಲಾಭದ ದೃಷ್ಟಿ ಯನ್ನಿಟ್ಟುಕೊಂಡು ಕೆಲಸ ನಿರ್ವಹಿಸಿ ರುವುದರಿಂದ ಜನ ಪ್ರತಿನಿಧಿಗಳಾದ ನಾವು ತಲೆ ತಗ್ಗಿಸುವಂತಾಗಿದೆ ಎಂದರು.

ಬಂಡೆಕಲ್ಲು ತೆರವುಗೊಳಿಸಿಲ್ಲ
ಕರುಣಾಕರ ಹಾಸ್ಪರೆ ಮಾತನಾಡಿ, ಪೈಂಬೆಚ್ಚಾಲ್ ರಸ್ತೆಯನ್ನು 35 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಿದ್ದರೂ, ಪ್ರಥಮ ಮಳೆಗೆ ಎದ್ದು ಹೋಗಿದೆ. ಕೋಲ್ಚಾರು ಬಂದಡ್ಕ ರಸ್ತೆಯ ತಿರು ವಿಲ್ಲಿರುವ ದೊಡ್ಡ ಗಾತ್ರದ ಬಂಡೆಕಲ್ಲನ್ನು ತೆರವು ಗೊಳಿಸು ವಂತೆ ಹಿಂದಿನ ಸಭೆಯಲ್ಲಿ ತಿಳಿಸ ಲಾಗಿದೆ. ಇಲ್ಲಿಯ ತನಕ ತೆರವುಗೊಳಿಸಿಲ್ಲ ಎಂದು ದೂರಿದರು.

ತಿಂಗಳಿಗೊಮ್ಮೆ ಬಿಲ್ ಕೊಡಿ
ಜಗದೀಶ್‌ ಕೂಳಿಯಡ್ಕ ಮಾತನಾಡಿ, ತಿಂಗಳಿಗೊಮ್ಮೆ ನೀರಿನ ಬಿಲ್ ನೀಡುವಂತೆ ಮನವಿ ಸಲ್ಲಿಸಿದ್ದೇವೆ. ಆದರೆ ಮತ್ತೆ 6 ತಿಂಗಳಿಗೊಮ್ಮೆ ಬಿಲ್ಲು ನೀಡಿದ್ದೀರಿ. ದೊಡ್ಡ ಮೊತ್ತವನ್ನು ಏಕ ಕಾಲದಲ್ಲಿ ಪಾವತಿಸಲು ಸಾಮನ್ಯ ಜನರಿಗೆ ತೊಂದರೆಯಾಗುತ್ತಿದೆ. ತಿಂಗಳಿಗೊಮ್ಮೆ ಬಿಲ್ ಕೊಡುವ ವ್ಯವಸ್ಥೆ ಯಾಗಬೇಕು. ಪಿಂಚಣಿ ಯೋಜನೆಯಲ್ಲಿ ಬರುವ ನಗದು ಸರಿಯಾಗಿ ಫಲಾ ನುಭವಿಗಳಿಗೆ ಸಿಗುತ್ತಿಲ್ಲ. ಪಶು ಸಂಗೋಪನಾ ಇಲಾಖೆಯ ಸವಲತ್ತುಗಳಿಗೆ ಅರ್ಜಿ ನೀಡಿದರೂ ಪ್ರಯೋಜನವಿಲ್ಲ. 15 ಅರ್ಜಿ ಕೊಟ್ಟರೂ ಒಂದು ಕೋಳಿ ಮರಿಯೂ ಸಿಕ್ಕಿಲ್ಲ ಎಂದರು.

ಕಲ್ಚೆರ್ಪೆ ಬಳಿಯ ಟ್ಯಾಂಕ್‌ನಿಂದ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ ಟ್ಯಾಂಕ್‌ ಸ್ವಚ್ಛ ಮಾಡದೆ ಕಲುಷಿತ ನೀರು ಕುಡಿಯಬೇಕಿದೆ ಎಂದು ಪುರುಷೋತ್ತಮ, ನಾಗಪಟ್ಟಣದ ಸೇತುವೆಯ ಮೇಲ್ಭಾಗಕ್ಕೆ ಮರು ಡಾಮರು ಆಗಬೇಕು ಎಂದು ಸುದರ್ಶನ ಪಾತಿಕಲ್ಲು, ಕುಧ್ಕುಳಿ ರಸ್ತೆ ಸಂಚರಿಸಲು ಸಾಧ್ಯವಾಗದ ರೀತಿಯಲ್ಲಿದೆ. ಚರಂಡಿ ದುರಸ್ತಿ ಮಾಡಿಸುವಂತೆ ತಂಗವೇಲು ಮನವಿ ಮಾಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸರಸ್ವತಿ ಚರ್ಚಾ ನಿಯಂತ್ರಣಾಧಿ ಕಾರಿ ಯಾಗಿದ್ದರು. ಸುಷ್ಮಾ ಸ್ವರಾಜ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸ ಲಾಯಿತು. ತಾ.ಪಂ. ಸದಸ್ಯೆ ಪದ್ಮಾವತಿ ಕುಡೆಂಬಿ, ಗ್ರಾ.ಪಂ.ಉಪಾಧ್ಯಕ್ಷೆ ಸುಂದರಿ ಮೊರಂಗಲ್ಲು, ಸದಸ್ಯರಾದ ಧನಂಜಯ ಕುಂಚಡ್ಕ, ಶ್ರೀವಾಣಿ ಕೋಲ್ಚಾರು, ಜಯಲತಾ ಅರಂಬೂರು, ಜಯಂತಿ ಕೂಟೇಲು, ವಸಂತಿ ಕುಂಚಡ್ಕ, ವಸಂತ ಕುಮಾರ್‌ ಬಾಳೆಹಿತ್ಲು, ಯೂಸುಫ್‌ ಅಂಜಿಕ್ಕಾರ್‌, ಪುಂಡರೀಕ ಕಾಪುಮಲೆ, ಶಶಿಕಲಾ ಆಡಿಂಜ, ಅರುಣ ಗೂಡಿಂಜ, ಪುಷ್ಪಾವತಿ, ಕುಸುಮಾವತಿ ಕುಡೆಕಲ್ಲು, ಉಮೇಶ್‌ ಕಲ್ಲೆಂಬಿ ಉಪಸ್ಥಿತರಿದ್ದರು. ಪಿಡಿಒ ಕೀರ್ತಿಪ್ರಸಾದ್‌ ಸ್ವಾಗತಿಸಿದರು. ಸಿಬಂದಿ ಸೀತಾರಾಮ ಮೊರಂಗಲ್ಲು ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ