ಹೊಸ ವಿದ್ಯುತ್‌ ಸಂಪರ್ಕ; ಹಣ ಪಡೆಯುವುದಕ್ಕೆ ಆಕ್ಷೇಪ

ಮೆಸ್ಕಾಂ ಗ್ರಾಹಕರ ಜನ ಸಂಪರ್ಕ ಸಭೆ

Team Udayavani, Nov 17, 2019, 4:32 AM IST

ಮೂಲ್ಕಿಯಲ್ಲಿ ಮೆಸ್ಕಾಂ ಗ್ರಾಹಕರ ಜನ ಸಂಪರ್ಕ ಸಭೆ ಜರಗಿತು.

ಮೂಲ್ಕಿ: ಮೂಲ್ಕಿ ಮತ್ತು ಸುರತ್ಕಲ್‌ ಉಪ ವಿಭಾಗ ವ್ಯಾಪ್ತಿಯ ಮೆಸ್ಕಾಂ ಗ್ರಾಹಕರ ಜನ ಸಂಪರ್ಕ ಸಭೆಯು ಮೂಲ್ಕಿ ನಗರ ಪಂಚಾಯತ್‌ ಸಮುದಾಯ ಭವನದಲ್ಲಿ ಮಂಗಳೂರು ಮೆಸ್ಕಾಂ ಸೂಪರಿಡೆಂಟೆಡ್‌ ಎಂಜಿನಿಯರ್‌ ಮಂಜಪ್ಪ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಜರಗಿತು.

ಕೆಲವೊಂದು ಕಡೆ ರೈತರು ಹೊಸ ವಿದ್ಯುತ್‌ ಸಂಪರ್ಕ ಪಡೆಯಬೇಕಾದರೆ 10 ಸಾವಿರ ರೂ. ಹಣ ನೀಡಬೇಕಾಗಿರುವುದನ್ನು ತತ್‌ಕ್ಷಣದಿಂದಲೇ ರದ್ದುಪಡಿಸಬೇಕು ಎಂದು ಕಿನ್ನಿಗೋಳಿ ರೈತ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ ಸಭೆಯಲ್ಲಿ ಅಗ್ರಹಿಸಿದರು.

ಮಂಗಳೂರು ವಿಭಾಗದ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಕೃಷ್ಣರಾಜ್‌ ಕೆ., ಸುರತ್ಕಲ್‌ ಉಪ ವಿಭಾಗದ ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಅಭಿಷೇಕ್‌, ಮೂಲ್ಕಿ ಉಪ ವಿಭಾಗದ ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ರಾಮಕೃಷ್ಣ ಐತಾಳ್‌ ಮತ್ತು ಮೂಲ್ಕಿ, ಹಳೆಯಂಗಡಿ ಮತ್ತು ಕಿನ್ನಿಗೋಳಿ ಸೆಕ್ಷನ್‌ ಆಫೀಸರ್‌ಗಳಾದ ವಿವೇಕಾನಂದ ಶೆಣೈ, ಸುಧೀಶ್‌ ಮತ್ತು ಚಂದ್ರಹಾಸ್‌ ಉಪಸ್ಥಿತರಿದ್ದರು.

ಕಿನ್ನಿಗೋಳಿ ವ್ಯಾಪ್ತಿಯಲ್ಲಿ 11 ಮಂದಿ ಸರಕಾರದಿಂದ ನಿವೇಶನದ ಜತೆಗೆ ವಿದ್ಯುತ್‌ ಸಂಪರ್ಕವನ್ನು ಪಡೆದ ಮನೆಯನ್ನು ಬಾಡಿಗೆಗೆ ನೀಡಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು ಆ ಮನೆಗಳ ವಿದ್ಯುತ್‌ ಸಂಪರ್ಕರದ್ದುಗೊಳಿಸಬೇಕು. ಇಂಥವರ ವಿರುದ್ಧ ಕಠಿನ ಕ್ರಮ ಜರಗಿಸಬೇಕೆಂದು ಶ್ರೀಧರ ಶೆಟ್ಟಿಯವರು ಅಗ್ರಹಿಸಿದರು.

ವಿದ್ಯುತ್‌ ಕಂಬ ಸ್ಥಳಾಂತರಕ್ಕೆ ಆಗ್ರಹ
ವಿದ್ಯುತ್‌ ಟವರ್‌ಗಾಗಿ ಜಮೀನಿನಲ್ಲಿ ಹಾದು ಹೋಗುವ ವಿದ್ಯುತ್‌ ಸಂಪರ್ಕವನ್ನು ಬೇರೆಡೆಗೆ ಸ್ಥಳಾಂತರಿಸಿ ಎಂದು ರೈತ ದಿನೇಶ್‌ ಅಜಿಲ ಅವರು ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮಾನಂಪಾಡಿಯ ಕೃಷಿ ಭೂಮಿಯ ಮಧ್ಯೆ ಇರುವ ವಿದ್ಯುತ್‌ ಸಂಪರ್ಕದ ಕಂಬಗಳನ್ನು ಸ್ಥಳಾಂತರಿಸುವಂತೆ ನಿವೃತ್ತ ಬ್ಯಾಂಕ್‌ ಅಧಿಕಾರಿ ಕೃಷ್ಣಪ್ಪ ಪೂಜಾರಿ ಅವರು ಸಭೆಯಲ್ಲಿ ಮನವಿ ಸಲ್ಲಿಸಿದಾಗ ಸೂಕ್ತ ಕ್ರಮ ಜರಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಬಳ್ಕುಂಜೆಯಲ್ಲಿ ರಿಪೇರಿ ಇದ್ದರೆ ಕಿನ್ನಿಗೋಳಿಯಲ್ಲಿ ವಿದ್ಯುತ್‌ ಸಂಪರ್ಕ ವ್ಯತ್ಯಯ ಸರಿಯಲ್ಲ ಭುವನಾಭಿರಾಮ ಉಡುಪ ಅಧಿಕಾರಿಗಳ ಗಮನ ಸೆಳೆದಾಗ ಮುಂದೆ ಹೀಗಾಗದಂತೆ ವ್ಯವಸ್ಥೆ ಮಾಡಲು ಮಂಜಪ್ಪ ಅವರು ವಿಭಾಗಾಧಿಕಾರಿಗಳು ಸೂಚಿಸಿದರು.

ಪಡುಬಿದ್ರಿ ವಿದ್ಯುತ್‌ ಮಾರ್ಗದಲ್ಲಿ ಅಗಾಗ ವಿದ್ಯುತ್‌ ಅಡಚಣೆಯಾಗುತ್ತಿರುವ ಬಗ್ಗೆ ಹಿಂದಿನ ಸಭೆಯಲ್ಲಿ ನೀಡಿದ ದೂರಿನ ಬಗ್ಗೆ ಸ್ಪಂದನೆ ದೊರೆತಿಲ್ಲ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದರು.

ಕಿನ್ನಿಗೋಳಿಗೆ ಮೆಸ್ಕಾಂ ವಿಭಾಗ ಮತ್ತು ಆಡಳಿತ ಕಚೇರಿಗೆ ಪ್ರಸ್ತಾವನೆಯಲ್ಲಿರುವ ಜಮೀನಿನ ಬಗ್ಗೆ ತುರ್ತು ಕಾರ್ಯ ಅಗತ್ಯ ಎಂದು ಭುವನಾಭಿರಾಮ ಉಡುಪ ಒತ್ತಾಯಿಸಿದರು.
ಕಿನ್ನಿಗೋಳಿಯ ಗೋಳಿಜೋರ ಎಂಬಲ್ಲಿ ವಿದ್ಯುತ್‌ ಸಂಪರ್ಕದ ಲೈನ್‌ಗಳು ಅಸಮರ್ಪಕವಾಗಿ ಅಪಾಯಮಟ್ಟದಲ್ಲಿ ಇದ್ದರೂ 20 ವರ್ಷಗಳಿಂದ ಎಚ್ಚರಿಸುತ್ತಾ ಬಂದಿರುವ ರೈತರೊಬ್ಬರ ದೂರಿಗೆ ಯಾವುದೇ ಉತ್ತರ ಸಿಕ್ಕಿಲ್ಲ ಎಂದು ಶ್ರೀಧರ ಶೆಟ್ಟಿ ಸಭೆಯಲ್ಲಿ ಅಧಿಕಾರಿಗಳ ಗಮನ ಸೆಳೆದರು. ಮೂಲ್ಕಿ ವಿಭಾಗ ಅಸಿಸ್ಟಿಂಟ್‌ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ರಾಮಕೃಷ್ಣ ಐತಾಳ್‌ ಸ್ವಾಗತಿಸಿದರು.

ದಾರಿದೀಪ ಸಂಪರ್ಕವಿಳಂಬ; ಸಲ್ಲ
ಪಂಚಾಯತ್‌ ವತಿಯಿಂದ ದಾರಿದೀಪ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದರೆ ಅನುಮತಿಗೆ ವಿಳಂಬ ಮಾಡಲಾಗುತ್ತಿದೆ ಕಿನ್ನಿಗೋಳಿ ಪಂಚಾಯತ್‌ ಸದಸ್ಯ ಚಂದ್ರಶೇಖರ್‌ ಪ್ರಶ್ನಿಸಿದಾಗ, ಮೆಸ್ಕಾಂ ಮಂಗಳೂರು ವಿಭಾಗ ಅಧೀಕ್ಷಕ ಎಂಜಿನಿಯರ್‌ ಮಂಜಪ್ಪ ಅವರು ಉತ್ತರಿಸಿ, ಸೂಕ್ತ ಕ್ರಮಕೈಗೊಳ್ಳುವಂತೆ ಉಪ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿ, ಮತ್ತಷ್ಟು ಅರ್ಜಿಗಳಿದ್ದರೆ ತತ್‌ಕ್ಷಣ ಅನುಮತಿ ಕೂಡಲೇ ನೀಡುವುದಾಗಿ ಹೇಳಿದರು.

ವಿವಿಧ ಬೇಡಿಕೆ, ಆಗ್ರಹಗಳು
 ಸೋಲಾರ್‌ ವಿದ್ಯುತ್‌ ಸಂಪರ್ಕ ಇದ್ದವರು ವಿದ್ಯುತ್‌ ಸಂಪರ್ಕ ಪಡೆಯದಿದ್ದರೂ ಸರಕಾರಕ್ಕೆ ಯಾಕೆ ತೆರಿಗೆ ಕೊಡ ಬೇಕು.
 ಮೂಲ್ಕಿಯಲ್ಲಿ ಬಿಲ್‌ ಪಾವ ತಿಗೆ ಎ.ಟಿ.ಪಿ. ಮಷಿನ್‌ ಸ್ಥಾಪಿಸಿ.
 ಮೂಲ್ಕಿಯ ಹೆಚ್ಚಿನ ವಿದ್ಯುತ್‌ ಕಂಬಗಳು ಹದಗೆಟ್ಟಿವೆ. ಆದಷ್ಟು ಬೇಗ ಬದಲಾಯಿಸಿ.
ಮೂಲ್ಕಿ- ನಡಿಕುದ್ರು ಸಂಪರ್ಕ ಮಾರ್ಗದ ಕಾಮಗಾರಿಗೆ ಚಾಲನೆಗೆ ಒತ್ತಾಯ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ