ಕರಾವಳಿ ತೀರ ಪ್ರದೇಶದ ಸಂರಕ್ಷಣೆಗೆ ಮಿಸ್ತಿ ಕಾಂಡ್ಲಾ ವನ ಸಂಕಲ್ಪ


Team Udayavani, Jun 5, 2023, 4:43 PM IST

ಕರಾವಳಿ ತೀರ ಪ್ರದೇಶದ ಸಂರಕ್ಷಣೆಗೆ ಮಿಸ್ತಿ ಕಾಂಡ್ಲಾ ವನ ಸಂಕಲ್ಪ

ಮಂಗಳೂರು/ಮಣಿಪಾಲ: ಕರಾವಳಿಯಲ್ಲಿ ಕಾಂಡ್ಲಾವನಗಳಿವೆ. ಅವುಗಳ ಪ್ರಯೋಜನಕ್ಕಿಂತ ಮೊದಲು ಅವು ಕರಾವಳಿ ತೀರದ ಜೀವ ರಕ್ಷಕರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅದರ ಮಹತ್ವವನ್ನು ಅರಿತಾಗ‌ ಮಾತ್ರ ಅವುಗಳ ಸಂರಕ್ಷಣೆ ಸಾಧ್ಯ ಎನ್ನುತ್ತಾರೆ ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ| ಕರಿಕಾಳನ್‌.

ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ “ಉದಯವಾಣಿ’ಯು “ಕರಾವಳಿ ಪರಿಸರ ಸಂರಕ್ಷಣೆ; ಯಾವ ಸ್ಥಿತಿ, ಏನು ಮಾಡಬಹುದು? ನಾವು ಏನು ಮಾಡಬೇಕು?’ ಎಂಬ ವಿಷಯದ ವಿಶೇಷ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

ಕಾಂಡ್ಲಾವನ ಕರಾವಳಿ ತೀರದ ಜೀವ ರಕ್ಷಕ. ಹೊರಗಿನಿಂದ ನೋಡುವಾಗ ಇದೂ ಒಂದು ಗಿಡ. ಆದರೆ ಇದು ಕಡಲಿನ ಹಲವು ಜೀವಿಗಳಿಗೆ ಅಶ್ರಯ ತಾಣ. ಏಡಿ, ಸಿಗಡಿ ಸಹಿತ ವಿವಿಧ ಜೀವಿಗಳಿಗೆ ಇದುವೇ ಆಧಾರ. ಕಾಂಡ್ಲಾ ವನ ಸಮೃದ್ಧವಾಗಿದ್ದರೆ ಅಳಿವಿನಂಚಿನಲ್ಲಿರುವ ಹಲವು ಕಡಲ ಜೀವ ಸಂಪತ್ತಿನ ಸಂರಕ್ಷಣೆ ಸಾಧ್ಯ. ಜತೆಗೆ ಪರಿಸರ ಪ್ರವಾಸೋದ್ಯಮಕ್ಕೂ ಪೂರಕ. ಹಾಗಾಗಿ ನೆಡುವ ಕಾಂಡ್ಲಾ ಸಸಿಗಳ ಮೇಲೆ ದೋಣಿಗಳನ್ನು ಚಲಾಯಿಸದೇ ಅವುಗಳ ಸಂರಕ್ಷಣೆಗೆ ಕರಾವಳಿ ತೀರದ ಮೀನುಗಾರ ಸಮುದಾಯ ಮುಂದಾಗಬೇಕು ಎನ್ನುತ್ತಾರೆ ಅವರು. ವೆಬಿನಾರ್‌ನಲ್ಲಿ ಎದುರಾದ ಪ್ರಶ್ನೆಗಳಿಗೆ, ಸಂಶಯಗಳಿಗೆ ನೀಡಿದ ಉತ್ತರ ವಿವರ ಇಲ್ಲಿದೆ.

ಕರಾವಳಿಯಲ್ಲಿ ಕಾಂಡ್ಲಾವನ ಎಷ್ಟಿದೆ?:

ದೇಶದ ಇತರ ರಾಜ್ಯಗಳಲ್ಲಿ ಕಾಂಡ್ಲಾವನ ಯಥೇತ್ಛವಾಗಿದೆ. ಆದರೆ ನಮ್ಮಲ್ಲಿ ನಿರೀಕ್ಷೆಯಷ್ಟು ಇಲ್ಲ. ಮಂಗಳೂರು, ಕುಂದಾ ಪುರ ಭಾಗದಲ್ಲಿ ಸುಮಾರು 1,600 ಹೆಕ್ಟೇರ್‌ ಪ್ರದೇಶದಲ್ಲಿ ಕಾಂಡ್ಲಾ ವನವಿದ್ದರೂ ಇದರಲ್ಲಿ 1,000 ಹೆಕ್ಟೇರ್‌ನಷ್ಟು ಖಾಸಗಿ ಭೂಮಿ ಯಲ್ಲಿದೆ. ಉಳಿದದ್ದು ಕಂದಾಯ ಕಂದಾಯ ಭೂಮಿಯಲ್ಲಿದೆ. ಆದ ಕಾರಣ ಅವುಗಳ ಸಂರಕ್ಷಣೆ ಸ್ವಲ್ಪ ಕಷ್ಟವಾಗುತ್ತಿದೆ.

ಕಾಂಡ್ಲಾ ಬೆಳೆಸಲು ಮೀನುಗಾರರ ಅಗತ್ಯ:

ಕಾಂಡ್ಲಾ ಕಾಡು ಬೆಳೆಸಲು  ಮೀನುಗಾರರು ಮತ್ತು ಸ್ಥಳೀಯರ ಸಹಾಯ ಅಗತ್ಯ. ನದಿ ಮತ್ತು ಸಮುದ್ರ ಸೇರುವ ಭಾಗದಲ್ಲಿ ಕಾಂಡ್ಲಾ ಸಸ್ಯಗಳು ಬೆಳೆಯುತ್ತವೆ. ನಾವು ಸಸಿಗಳನ್ನು ನೆಡುವಾಗ ಮೀನುಗಾರರು ಆ ಭಾಗದಲ್ಲಿ ಮೀನುಗಾರಿಕೆಗೆ ತೆರಳದೇ ಸಹಕರಿಸಬೇಕು. ಈ ನಿಟ್ಟಿನಲ್ಲಿ ಅವರಲ್ಲಿಯೂ ಅರಿವು ಮೂಡಿಸಬೇಕಿದೆ. ಇತ್ತೀಚೆಗೆ ಒಡಿಶಾ ಮತ್ತು ಮುಂಬಯಿಗೆ ತೆರಳಿ ಕಾಂಡ್ಲಾವನದ ಕುರಿತು ಅಧ್ಯಯನ ನಡೆಸಿದ್ದೆವು. ಥಾಣೆಯಲ್ಲಿ ಕಾಂಡ್ಲಾ ಬೆಳೆಸಲು ಪ್ರತ್ಯೇಕ ವ್ಯವಸ್ಥೆಯೇ ಇದೆ. ಅದಕ್ಕಾಗಿ ರಾಜ್ಯ ಸರಕಾರವೂ ಆರ್ಥಿಕ ನೆರವು ನೀಡುತ್ತಿದೆ.

ಒಡಿಶಾದಲ್ಲಿ ಆಲೀವ್‌ ರಿಡ್ಲೆ ಆಮೆಗಳು ಸಂತಾನೋತ್ಪತ್ತಿಗಾಗಿ ಮೊಟ್ಟೆ ಇಡಲು ಆಗಮಿಸುವ ವೇಳೆ (ಆಮೆಗಳ ಸಂರಕ್ಷಣಾವಧಿ) ಸುಮಾರು 7 ತಿಂಗಳ ಕಾಲ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತದೆ. ಈ ಅವಧಿಯಲ್ಲಿ ಮೀನುಗಾರರ ಜೀವನೋಪಾಯ ಕ್ಕಾಗಿ ರಾಜ್ಯ ಸರಕಾರ ತಿಂಗಳಿಗೆ 7,500 ರೂ. ನೆರವು ನೀಡುತ್ತದೆ. ಕರಾವಳಿಯಲ್ಲೂ ಕಾಂಡ್ಲಾ ಕಾಡು ಬೆಳೆಸಲು ಮೀನುಗಾರರಿಗೆ ಆರ್ಥಿಕ ನೆರವು ಒದಗಿಸುವಂಥ ವ್ಯವಸ್ಥೆ ಜಾರಿ ಪರಿಶೀಲನೆಯಲ್ಲಿದೆ. ಕುಂದಾಪುರ ಹಾಗೂ ಪಂಚಗಂಗಾವಳಿ ಪ್ರದೇಶ ಸೂಕ್ತ ಸ್ಥಳವಾಗಿದ್ದು, ಪರಿಸರ ಸ್ನೇಹಿ, ಪ್ಲಾಸ್ಟಿಕ್‌ ಮತ್ತು ತ್ಯಾಜ್ಯ ಮುಕ್ತ ಪ್ರವಾಸೋದ್ಯಮ ಕೇಂದ್ರವನ್ನಾಗಿಸುವ ಆಲೋಚನೆಯೂ ಇದೆ.

ಕಡಲ ಆಮೆ ಸಂತತಿ ಹೆಚ್ಚಳ:

ಉಡುಪಿ ಜಿಲ್ಲೆಯ ಕೋಡಿ, ತ್ರಾಸಿ, ಮರವಂತೆ ಸಮುದ್ರ ತೀರದಲ್ಲಿ ಕಡಲ ಆಮೆಗಳು ಹೆಚ್ಚು ಮೊಟ್ಟೆ ಇಡುತ್ತವೆ. ಎರಡು ಮೂರು ವರ್ಷಗಳ ಹಿಂದೆ ಕೆಲವು ಮರಿಗಳು ಸಿಕ್ಕಿದ್ದವು. ಇತ್ತೀಚೆಗೆ ಒಟ್ಟಾರೆಯಾಗಿ 285 ಮರಿಗಳು ಸಿಕ್ಕಿವೆ. ಎಲ್ಲವನ್ನೂ ಸಂರಕ್ಷಿಸಿ ಸಮುದ್ರಕ್ಕೆ ಬಿಡಲಾಗಿದೆ. ಕಡಲ ಆಮೆಗಳು ಒಮ್ಮೆ 100ರಿಂದ 120 ಮೊಟ್ಟೆಯನ್ನು ಇಡುತ್ತವೆ.

ಕಡಲಾಮೆಗೆ ಚಿಕಿತ್ಸೆ:

ಕುಂದಾಪುರದಲ್ಲಿ ಕಡಲಾಮೆ ಸಂರಕ್ಷಣೆ ಕೇಂದ್ರ ಸ್ಥಾಪನೆಗೆ ವಿಶ್ವ ಬ್ಯಾಂಕ್‌ ಹಾಗೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬರಬೇಕಿದೆ. ಪ್ರಸ್ತುತ ರೀಫ್ ವಾಚ್‌ ಸಂಸ್ಥೆ ಮೂಲಕ ಕಡಲಾಮೆ ರಕ್ಷಣೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ.

ಗಿಡ ನೆಟ್ಟುಬಿಟ್ಟರೆ ಜವಾಬ್ದಾರಿ ಮುಗಿದಂತಲ್ಲ:

ನೆಟ್ಟ ಸಸಿಗಳು ಅಭಿವೃದ್ಧಿಗೊಳ್ಳುವುದು ಶೇ. 50ರಿಂದ 60ರಷ್ಟು. ಗಿಡ ಕೊಡುವುದು, ನೆಡುವುದು ನಮ್ಮ ಕೈಯಲ್ಲಿದೆ, ಬೆಳೆಯುವುದು ಪ್ರಕೃತಿ ಕೈಯಲ್ಲಿದೆ. ಆದರೆ ನಮ್ಮ ಪ್ರಯತ್ನ, ಕಾಳಜಿ ಬೇಕೇಬೇಕು. ನೆಟ್ಟು ಬಿಟ್ಟರೆ ನಮ್ಮ ಜವಾಬ್ದಾರಿ ಮುಗಿಯದು. ಕೆಲವೇ ದಿನಗಳಲ್ಲಿ ಗಿಡಗಳು ಬೆಳೆಯ ಲಾರವು, ಕನಿಷ್ಠ 3ರಿಂದ 5 ವರ್ಷ ಆರೈಕೆ ಬೇಕೇಬೇಕು.

ಹಣ್ಣಿನ ಗಿಡಗಳಿಗೆ ಆದ್ಯತೆ:

ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಕಾಡುಗಳಲ್ಲಿ ಪ್ರಾಣಿಗಳಿಗೆ ಪೂರಕವಾದ ಆಹಾರ ಸೃಷ್ಟಿಸಬೇಕಿದೆ. ಜನಸಂಖ್ಯೆ ಹೆಚ್ಚಾದಂತೆ ಅರಣ್ಯ ಒತ್ತುವರಿ, ವಾಣಿಜ್ಯ ಬೆಳೆಗಳಿಗಾಗಿ ಮರಗಿಡಗಳು ನಾಶವಾಗುತ್ತಿದ್ದು, ಇದರಿಂದ ಕಾಡುಪ್ರಾಣಿಗಳ ಸಂಚಾರಕ್ಕೆ, ಜೀವನಕ್ಕೆ ಚ್ಯುತಿ ಬಂದಿದೆ. ಅವುಗಳು ನಾಡಿನತ್ತ ಬರುತ್ತಿವೆ. ಇದನ್ನು ತಡೆಯಲು ಕಾಡುಗಳಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಪೂರಕ ಆಹಾರ ವ್ಯವಸ್ಥೆ ಸದೃಢಗೊಳಿಸುತ್ತೇವೆ. ಆಗ ಅವುಗಳ ನಗರ ಪ್ರವೇಶ ತಪ್ಪಿಸಬಹುದು. ಮಂಗಗಳ ಹಾವಳಿ ಜಾಸ್ತಿಯಾಗಿರುವಲ್ಲಿ ಅರಣ್ಯ ಇಲಾಖೆಗೆ ತಿಳಿಸಿದರೆ ಅವುಗಳನ್ನು ಹಿಡಿದು, ಕಾಡು ಅಥವಾ ನಿರ್ಜನ ಪ್ರದೇಶಗಳಲ್ಲಿ ಬಿಡಲಾಗುವುದು. ಸದ್ಯ ಮಂಕಿ ಪಾರ್ಕ್‌ ಪ್ರಸ್ತಾವ ಇಲಾಖೆಯ ಎದುರಿಲ್ಲ.

ಸರ್ಕಲ್‌ಗೊಂದು ವನ್ಯಜೀವಿ ಸಂರಕ್ಷಣ ಕೇಂದ್ರ :

ಅಪಾಯದಲ್ಲಿ ಸಿಲುಕಿದ ಅಥವಾ ಗಾಯಗೊಂಡ ವನ್ಯಜೀವಿಗಳ ಚಿಕಿತ್ಸೆ ಮತ್ತು ಆರೈಕೆಗಾಗಿ ಸರ್ಕಲ್‌ಗೊಂದು ಪ್ರತ್ಯೇಕ ವನ್ಯಜೀವಿ ಸಂರಕ್ಷಣ ಕೇಂದ್ರ ಸ್ಥಾಪಿಸುವ ಯೋಜನೆ ಸಿದ್ಧವಿದ್ದು, ಮಂಗಳೂರು ವೃತ್ತದಲ್ಲಿ ಒಂದು ಕೇಂದ್ರವನ್ನು ಸ್ಥಾಪಿಸಲಾಗುವುದು. ಇದರಲ್ಲಿ ಪ್ರಯೋಗಾಲಯ, ತಜ್ಞರು, ವೈದ್ಯರನ್ನು ಒಳಗೊಂಡ ಸುಸಜ್ಜಿತ ವ್ಯವಸ್ಥೆ ಇರಲಿದೆ. ಮರೈನ್‌ ರೆಸ್ಕ್ಯೂ ಸೆಂಟರ್‌ ಮಾದರಿಯಲ್ಲೇ ಈ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು:

ಜನವಸತಿ ಪ್ರದೇಶಗಳಲ್ಲಿ ಹಾವುಗಳು ಕಂಡು ಬಂದಲ್ಲಿ ಜನರು ಸಾಮಾನ್ಯವಾಗಿ ಉರಗ ರಕ್ಷಕರಿಗೆ ಮಾಹಿತಿ ನೀಡುತ್ತಾರೆ. ಉರಗ ರಕ್ಷಣೆಯಲ್ಲಿ ಉರಗ ರಕ್ಷಕರ ಪಾತ್ರ ಮಹತ್ವದ್ದು. ಅವರು ಅವುಗಳನ್ನು ಹಿಡಿಯುವಾಗ ಮತ್ತು ಕಾಡಿಗೆ ಬಿಡುವಾಗ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಹಾವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ವನ್ಯಜೀವಿ ಕಾಯ್ದೆ ಉಲ್ಲಂಘನೆ. ಉರಗ ರಕ್ಷಕರು ಕಡ್ಡಾಯವಾಗಿ ಇಲಾಖೆಗೆ ಅರ್ಜಿ ಸಲ್ಲಿಸಿ, ನೋಂದಣಿಗೆ ವೈಲ್ಡ್‌ಲೈಫ್ ಚೀಫ್ ವಾರ್ಡನ್‌ ಅವರಿಂದ ಅನುಮತಿ ಪತ್ರ ಪಡೆದುಕೊಳ್ಳಬೇಕು.

ಸಿಂಗಳೀಕ ಸಂರಕ್ಷಣೆಗೆ ಕ್ರಮ :

ಕುದುರೆಮುಖ ವನ್ಯಜೀವಿ ವಿಭಾಗ ಆಗುಂಬೆ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಂಡು ಬರುವ ಅಪಾಯದಂಚಿನಲ್ಲಿರುವ ಸಿಂಗಳೀಕ ಸಂರಕ್ಷಣೆಗೆ ಅರಣ್ಯ ಇಲಾಖೆ ವಿಶೇಷ ಕ್ರಮ ಕೈಗೊಂಡಿದೆ. ಇದರ ಸಂರಕ್ಷಣೆಗೆ ಹುಲಿಯಷ್ಟೇ ಪ್ರಾಧಾನ್ಯ ನೀಡಲಾಗಿದೆ. ಇವುಗಳ ಬದುಕಿನ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.

ರಿಡ್ಜ್ ಟು ಶೋರ್‌ ಪ್ರಾಜೆಕ್ಟ್ :

ಸಮುದ್ರ ಮಾಲಿನ್ಯ ತಡೆಗಟ್ಟುವುದೂ ಬಹಳ ಪ್ರಮುಖವಾದುದು. ಹಸಿರಿನ ಸಂರಕ್ಷಣೆ ಎಷ್ಟು ಮುಖ್ಯವೋ ಅಷ್ಟೇ ಪ್ರಮುಖವಾದುದು ಕಡಲಿನ ಸಂರಕ್ಷಣೆ. ಕಡಲ ಜೀವ ವೈವಿಧ್ಯ ಸಂರಕ್ಷಣೆಗೆ ಗಮನ ಹರಿಸಲೇಬೇಕಾದ ಹೊತ್ತಿದು. ಸಮುದ್ರದ ಮಾಲಿನ್ಯ ಹಲವೆಡೆಗಳಿಂದ ಆಗುತ್ತಿದೆ. ಕೈಗಾರಿಕೀಕರಣ, ನಗರೀಕರಣ ಎಲ್ಲದರ ಪಾತ್ರವಿದೆ. ಅದನ್ನು ತಡೆಯುವುದು ಮೊದಲ ಆದ್ಯತೆ. ಈ ಹಿನ್ನೆಲೆಯಲ್ಲಿ ಕರಾವಳಿಯ ನದಿಗಳನ್ನು ಮೂಲದಿಂದ ಅದು ಹರಿದು ಸಮುದ್ರ ಸೇರುವವರೆಗೂ ಕಲುಷಿತ ಮುಕ್ತಗೊಳಿಸುವ ಅತ್ಯಂತ ಮಹತ್ವದ “ರಿಡ್ಜ್ ಟು ಶೋರ್‌’ ಯೋಜನೆಯನ್ನು ಅರಣ್ಯ ಇಲಾಖೆ ರೂಪಿಸಿ, ವಿಶ್ವ ಬ್ಯಾಂಕ್‌ಗೆ ಸಲ್ಲಿಸಿದೆ. ಸುಮಾರು 850 ಕೋಟಿ ರೂ. ಯೋಜನೆಯಿಂದ ನದಿಗಳನ್ನು ಸುಸ್ಥಿರಗೊಳಿಸಿ ಕಡಲ ಆರೋಗ್ಯವನ್ನು ಕಾಪಾಡುವುದು ಯೋಜನೆಯ ಉದ್ದೇಶ. ಈಗಾಗಲೇ ವಿಶ್ವ ಬ್ಯಾಂಕ್‌ ತಜ್ಞರು ಬಂದು ಸಮಾಲೋಚಿಸಿದ್ದಾರೆ. ಪ್ರಧಾನಿಗಳ ಕಾರ್ಯಾಲಯದ ಅನುಮೋದನೆಯ ನಿರೀಕ್ಷೆಯಲ್ಲಿದ್ದೇವೆ.

 ಮಳೆಯೇ ಬಂದಿಲ್ಲ! :

ಒಟ್ಟು ಪ್ರದೇಶದಲ್ಲಿ ಶೇ. 33ರಷ್ಟು ಪ್ರದೇಶದಲ್ಲಿ ಹಸುರಿರಬೇಕು ಎಂಬುದು ಲೆಕ್ಕಾಚಾರ. ಆದರೆ ಕರ್ನಾಟಕದಲ್ಲಿ ಶೇ. 23ರ ಆಸುಪಾಸಿನಲ್ಲಿದೆ. ಇದನ್ನು ಶೇ. 33ರಷ್ಟು ಏರಿಸುವ ಸವಾಲು ನಮ್ಮ ಮುಂದಿದೆ. ನಾವು ಈಗಾಗಲೇ ಹವಾಮಾನ ವೈಪರೀತ್ಯದ ಪರಿಣಾಮ ಎದುರಿಸುತ್ತಿದ್ದೇವೆ. ಅದನ್ನು ಅರಿಯಬೇಕು. ಇದುವರೆಗೆ ಕರಾವಳಿಯಲ್ಲಿ ಫೆಬ್ರವರಿ, ಮಾರ್ಚ್‌, ಎಪ್ರಿಲ್‌ ವೇಳೆಗೆ ಉತ್ತಮ ಮಳೆ ಬರುತ್ತಿತ್ತು. ಈ ವರ್ಷ ಜೂನ್‌ ಬಂದರೂ ಸರಿಯಾಗಿ ಎಲ್ಲೆಡೆ ಮಳೆಯೇ ಆಗಿಲ್ಲ. ಇದಕ್ಕಿಂದ ನಿದರ್ಶನ ಬೇಕೇ?

15 ಕಡೆ ಕಾಂಡ್ಲಾವನ :

ಮಂಗಳೂರಿನಲ್ಲಿ 3 ಹಾಗೂ ಕುಂದಾಪುರದ 12 ಸ್ಥಳದಲ್ಲಿ “ಕಾಂಡ್ಲಾ ವನ’ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಕ್ಟೇರ್‌ನಂತೆ ಒಟ್ಟು 15 ಹೆಕ್ಟೇರ್‌ ವ್ಯಾಪ್ತಿಯಲ್ಲಿ ಕಾಂಡ್ಲಾ ವನ ನಿರ್ಮಾಣ ಮಾಡಲಾಗುವುದು. ಈ ಪೈಕಿ ಮಂಗಳೂರಿನ ತಣ್ಣೀರುಬಾವಿ ಬೀಚ್‌ ಸಮೀಪದ ಕುದ್ರು ಪ್ರದೇಶ ಹಾಗೂ ಉಡುಪಿಯ ಕುಂದಾಪುರದ ಆನಗಳ್ಳಿ ಕೋಡಿಯಲ್ಲಿ ಜೂ.5ರಂದು ಕಾರ್ಯಕ್ರಮ ಆಯೋಜಿಸಲಾಗಿದೆ.

ಮ್ಯಾಂಗ್ರೋವ್‌ ವಿಶಿಷ್ಟ ಯೋಜನೆಗೆ ಇಂದು ಪ್ರಧಾನಿ ಚಾಲನೆ :

ದೇಶದ ಕರಾವಳಿ ತೀರ ಪ್ರದೇಶದ ಸಂರಕ್ಷಣೆ ಹಾಗೂ ಪರಿಸರ ಸಮತೋಲನತೆ ಕಾಯ್ದುಕೊಳ್ಳಲು “ಕಾಂಡ್ಲಾ ವನ’ ಅಭಿವೃದ್ಧಿಗೆ “ಮಿಸ್ತಿ’ (ಮ್ಯಾಂಗ್ರೋವ್‌ ಇನಿಷಿಯೇಟಿವ್‌ ಫಾರ್‌ ಶೋರ್‌ಲೈನ್‌ ಹ್ಯಾಬಿಟಾಟ್ಸ್‌ ಆ್ಯಂಡ್‌ ಟ್ಯಾಂಜಿಬಲ್‌ ಇಂಕಮ್ಸ್‌Õ) ಎಂಬ ಮಹತ್ವದ ಯೋಜನೆಯನ್ನು ಕೇಂದ್ರ ಸರಕಾರ ಪರಿಚಯಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಪರಿಸರ ದಿನವಾದ ಜೂ. 5ರಂದು ಹೊಸದಿಲ್ಲಿಯಿಂದ ಆನ್‌ಲೈನ್‌ ಮೂಲಕ ಚಾಲನೆ ನೀಡಿ, ಬೆಳಗ್ಗೆ 10.30ರಿಂದ 11.30ವರೆಗೆ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಂಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ “ಕಾಂಡ್ಲಾ ವನ’ ನಿರ್ಮಾಣಕ್ಕೆ ಸಂಕಲ್ಪ ತೊಡಲಾಗಿದ್ದು, ಕಾರ್ಯಕ್ರಮದ ನೇರಪ್ರಸಾರವಿರಲಿದೆ.

ಪರಿಸರ ಸಂರಕ್ಷಣೆ ಎಲ್ಲರ ಹೊಣೆ :

ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ನ‌ ಎಂಡಿ ಮತ್ತು ಸಿಇಒ ವಿನೋದ್‌ ಕುಮಾರ್‌ ಅವರು ವೆಬಿನಾರ್‌ಗೆ ಚಾಲನೆ ನೀಡಿ, ಭೂಮಿ, ಪರಿಸರ ರಕ್ಷಣೆ ಎಲ್ಲರ ಹೊಣೆ. ಪ್ರತೀ ವರ್ಷ ಒಂದೊಂದು ಥೀಮ್‌ ಅಡಿಯಲ್ಲಿ ಪರಿಸರ ದಿನ ಆಚರಿಸಲಾಗುತ್ತದೆ. ಈ ವರ್ಷ ಸೊಲ್ಯೂಷನ್ಸ್‌ ಟು ಪ್ಲಾಸ್ಟಿಕ್‌ ಪಲ್ಯೂಷನ್‌ “ಬೀಟ್‌ ದಿ ಪ್ಲಾಸ್ಟಿಕ್‌’ ಎಂಬುದು ಥೀಮ್‌. ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಸಮಾಜದಲ್ಲಿ ಅನೇಕರು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ಸಲ್ಲಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ “ಉದಯವಾಣಿ’ಯೂ ಪರಿಸರ ಜಾಗೃತಿ ಮೂಡಿಸುವ ಮಹತ್ತರ ಜವಾಬ್ದಾರಿ ನಿಭಾಯಿಸುತ್ತಿದೆ ಎಂದು ಹೇಳಿದರು.

ಬಿತ್ತೋತ್ಸವಕ್ಕೆ ಕ್ರಮ :

ಮಳೆಗಾಲದ ಹಿನ್ನೆಲೆಯಲ್ಲಿ ವಿವಿಧೆಡೆ “ಬಿತ್ತೋತ್ಸವ’ ಕಾರ್ಯಕ್ರಮ

ನಿಗದಿ ಮಾಡಲಾಗಿದೆ. ಮಳೆ ಬರತೊಡಗುತ್ತಿದ್ದಂತೆ ವಿವಿಧ ಗಿಡಗಳ ಬೀಜವನ್ನು ನಿಗದಿತ ಕಾಡಿನಲ್ಲಿ ಬಿತ್ತುವ ಸಂಕಲ್ಪವಿದು. ಕಾಡು ಹೊರತು ಪಡಿಸಿ ಅವಕಾಶ ಇರುವಲ್ಲಿ ವನಮಹೋತ್ಸವ ನಡೆಸಲಾಗುವುದು.

ಹಿಂದಿನ ಗಿಡದ ಮಾಹಿತಿ ನೀಡಿ! :

ಇಲ್ಲಿಯವರೆಗೆ ಗಿಡಗಳನ್ನು ಮಾತ್ರ ನೀಡಲಾಗುತ್ತಿತ್ತು. ಆದರೆ ಈಗ ಹೊಸ ಗಿಡ ಕೊಡುವ ಮೊದಲು ಈ ಹಿಂದೆ ಕೊಟ್ಟ ಗಿಡವನ್ನು ಹೇಗೆ ಪೋಷಿಸುತ್ತಿದ್ದೀರಿ ಎಂದು ಕೇಳುತ್ತೇವೆ. ಅದಕ್ಕೆ ಪೂರಕ ದತ್ತಾಂಶವನ್ನೂ ಕ್ರೋಡೀಕರಿಸಲಾಗುತ್ತಿದೆ. ಅವರ ಕಾಳಜಿಯನ್ನು ಗಮನಿಸಿ, ಹೊಸ ಗಿಡಗಳನ್ನು ಕೊಡುತ್ತೇವೆ.ಯಾಕೆಂದರೆ ಗಿಡ ನೆಡುವುದು ಬರೀ ತೋರಿಕೆ, ಪ್ರದರ್ಶನಕ್ಕೆ ಎಂದಾಗಬಾರದು. ಬದಲಾಗಿ ಅವುಗಳ ಸಂರಕ್ಷಣೆಗೂ ಆದ್ಯತೆ ನೀಡಿ ನಿಜವಾದ ಪರಿಸರ ಕಾಳಜಿ ವ್ಯಕ್ತವಾಗಬೇಕು.

1 ಮರಕ್ಕೆ 10 ಸಸಿ ನೆಡುವ ಷರತ್ತು :

ಹೆದ್ದಾರಿ, ರಾಜ್ಯ ಹೆದ್ದಾರಿ ಒಳ ರಸ್ತೆಗಳಲ್ಲಿ ರಸ್ತೆ ಅಭಿವೃದ್ಧಿ, ವಿಸ್ತರಣೆ ಸಂದರ್ಭ ರಸ್ತೆ ಬದಿ ಮರ ತೆರವುಗೊಳಿಸಲು ಅರಣ್ಯ ಇಲಾಖೆ ಅನುಮತಿ ಕಡ್ಡಾಯ. ನಿಯಮಾ ನುಸಾರ ಇಲಾಖೆಗೆ ಅರ್ಜಿ ಹಾಕಿ ಅನುಮತಿ ಪಡೆಯಬೇಕು. ಆ ಬಳಿಕವೇ ತೆರವು ಮಾಡಬೇಕು. ಪೂರ್ವಾನುಮತಿ ಇಲ್ಲದೆ ಮರಗಳ ಬುಡಗಳ ಮಣ್ಣು  ತೆರವುಗೊಳಿಸುವುದು ಇತ್ಯಾದಿ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.  ಮರ ತೆರವು ಸಂದರ್ಭ 1ರ ಬದಲಿಗೆ 10  ಸಸಿಗಳನ್ನು ಬೆಳೆಸುವ ಷರತ್ತು ವಿಧಿಸಲಾಗುತ್ತಿದೆ.

ಕಾಡಿಗೆ ಬೆಂಕಿ: ತಡೆಗೆ ವಾಯುಪಡೆ ನೆರವು:

ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ ಅರಣ್ಯ ಸೇರಿದಂತೆ ಹಲವೆಡೆ ಬೆಂಕಿ ಅನಾಹುತ ನಡೆದಿದೆ. ಸುಬ್ರಹ್ಮಣ್ಯ ಭಾಗದಲ್ಲಿ ಆನೆ ದಾಳಿಗೆ ಇಬ್ಬರು ಸಾವನ್ನಪ್ಪಿದ್ದರು. ಇದರಿಂದ ಕಾಡಾನೆ ಹಾವಳಿ ತಡೆಯಲು ಜನರೇ ಕಾಡಿಗೆ ಬೆಂಕಿ ಹಾಕಿದ್ದರೆಂಬ ಅಭಿಪ್ರಾಯವೂ ಇದೆ. ಇದರೊಂದಿಗೆ ಈ ಬಾರಿ ಹೆಚ್ಚು ಮಳೆ ಬೀಳದ ಕಾರಣ ಅರಣ್ಯದಲ್ಲಿನ ಹುಲ್ಲು ಒಣಗಿತ್ತು. ಬೆಂಕಿ ಕ್ಷಿಪ್ರಗತಿಯಲ್ಲಿ ಹರಡಲು ಅದು ಕಾರಣವಾಯಿತು. ಮಾಹಿತಿ ಬಂದ ಕೂಡಲೇ ಇಲಾಖೆ ಬೆಂಕಿ ತಡೆಗೆ ಕಾರ್ಯೋನ್ಮುಖವಾಗಿ ಹಲವೆಡೆ ಸಫ‌ಲವಾದೆವು. ಜತೆಗೆ ನಮಗೆ ಅಲ್ಲಲ್ಲಿ ನೀರಿನ ಅಲಭ್ಯತೆಯೂ ಸವಾಲಾಗಿ ಪರಿಣಮಿಸಿತು. ಕೆಲವೆಡೆ ರಸ್ತೆ, ಸಂಪರ್ಕ ಕಷ್ಟವಾದ ಕಡೆ ಕಾರ್ಯಾಚರಣೆ ತುಸು ವಿಳಂಬವಾಗಿರಬಹುದು. ಈ ಹಿನ್ನೆಲೆಯಲ್ಲಿ ಇಂಥ ಸಂದರ್ಭದ ಕಾರ್ಯಾಚರಣೆಗೆ ಪೂರಕವಾಗಿ ಅರಣ್ಯ ಪ್ರದೇಶದಲ್ಲಿನ ನೀರನ್ನು ಅಲ್ಲಲ್ಲೇ ಹಿಡಿದಿಡಲು ಬೇರೆ ಬೇರೆ ಬ್ಲಾಕ್‌ಗಳನ್ನು ಸಂರಚಿಸಿ ಸಣ್ಣ ಪುಟ್ಟ ತಡೆ ನಿರ್ಮಿಸಿ ನೀರು ಸಂಗ್ರಹ ವ್ಯವಸ್ಥೆ ಹೊಂದುವ ಯೋಜನೆ ಇದೆ. ಆಗ ಅವುಗಳಲ್ಲಿನ ನೀರನ್ನು ಇಂಥ ತುರ್ತು ಸಂದರ್ಭದಲ್ಲಿ ಬಳಸಬಹುದು. ಕಾರ್ಯಾಚರಣೆಗೆ ಪೂರಕ ಪಥ ನಿರ್ಮಾಣಕ್ಕೂ ಪ್ರಯತ್ನಿಸುತ್ತೇವೆ. ವಾಯುಪಡೆ ನೆರವು ಪಡೆಯಲೂ ಈಗಾಗಲೇ ಸಮಾಲೋಚಿಸಿ ಒಪ್ಪಂದ ಮಾಡಿಕೊಂಡಿದ್ದೇವೆ.

ಆನೆ ಹಾವಳಿ ತಡೆಗೆ ಕಾರ್ಯಪಡೆ:

ಕಾಡಾನೆ ಹಾವಳಿ ತಡೆಗಟ್ಟಲು ಹಾಸನ ಸೇರಿದಂತೆ ಕೆಲವು ಭಾಗಗಳಲ್ಲಿ ಸ್ಥಾಪಿಸಲಾದ  ಆನೆ ಟಾಸ್ಕ್ ಫೋರ್ಸ್‌ ಅನ್ನು ಅವಿಭಜಿತ ದ.ಕ.ಜಿಲ್ಲೆಯಲ್ಲೂ ಆರಂಭಿಸಲಾಗುವುದು. ಈ ವಿಶೇಷ ತಂಡದಲ್ಲಿ ಅರಣ್ಯಾಧಿಕಾರಿ, ಉಪ ವಲಯ ಅರಣ್ಯಾಧಿಕಾರಿಗಳು, ಅರಣ್ಯ ರಕ್ಷಕರು ಇತರ ಸಿಬಂದಿ ಇರುವರು. ತಂಡವು  ಜನವಸತಿ ಮತ್ತು ಕೃಷಿ ಪ್ರದೇಶಗಳಲ್ಲಿ ಆನೆಗಳ ಚಲನವಲನ ಗುರುತಿಸಿ ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸುವ ಕಾರ್ಯ ಮಾಡುತ್ತದೆ. ಟಾಸ್ಕ್ ಫೋರ್ಸ್‌ ಕೇಂದ್ರಸ್ಥಾನದಲ್ಲಿ  ಕಂಟ್ರೋಲ್‌ ರೂಂ ಸ್ಥಾಪನೆ, ವಾಕಿಟಾಕಿ, ಬಂದೂಕು, ಸುಧಾರಿತ ಸಲಕರಣೆಗಳ ವ್ಯವಸ್ಥೆ ಎಲ್ಲವನ್ನೂ ಒದಗಿಸಲಾಗುತ್ತದೆ.

ಬೆಟ್ಟ ಕುಸಿತಕ್ಕೆ ಇಂಗುಗುಂಡಿ ಕಾರಣವಲ್ಲ:

ತಲಕಾವೇರಿ, ಜೋಡುಪಾಲ ಸೇರಿದಂತೆ ವಿವಿಧೆಡೆ ಬೆಟ್ಟ ಕುಸಿತ ಉಂಟಾಗಲು ಇಂಗುಗುಂಡಿ ಕಾರಣ ಎಂಬ ಅಭಿಪ್ರಾಯ ಸಮ್ಮತವಾದುದಲ್ಲ. ಏಕೆಂದರೆ ಇಂಗುಗುಂಡಿಯಿಂದ ಅರಣ್ಯದಲ್ಲಿ ಅಂತರ್ಜಲ ಹೆಚ್ಚಾಗುತ್ತದೆ. ಮಳೆನೀರನ್ನು ಹಿಡಿದಿಡಲು ಇದು ಪೂರಕ. ಬೆಟ್ಟದ ಮೇಲ್ಭಾಗದಿಂದ ಮಳೆ ನೀರು ಕೆಳಮುಖವಾಗಿ ಹರಿದು ಬರುವಾಗ ಉಂಟಾಗುವ ಮಣ್ಣಿನ ಸವಕಳಿ ತಡೆಯುವಲ್ಲೂ ಇಂಗುಗುಂಡಿ ಪರಿಣಾಮಕಾರಿ ಪಾತ್ರ ವಹಿಸುತ್ತದೆ. ಹಾಗಾಗಿ ಬೆಟ್ಟ ಕುಸಿತಕ್ಕೆ ಬೇರೆಯದ್ದೇ ಕಾರಣ ಇರಬಹುದು.

ಕಡಲ ಜೀವಿಗಳ ಸಂರಕ್ಷಣೆಗೆ ವಿಶೇಷ ಆದ್ಯತೆ : 

ಕರಾವಳಿ ಕರ್ನಾಟಕವು ಅತ್ಯಂತ ಶ್ರೀಮಂತ ಸಾಗರ ಜೀವ ವೈವಿಧ್ಯ ಹೊಂದಿದೆ. ಡಾಲ್ಫಿ ನ್‌, ತಿಮಿಂಗಿ ಲ, ಕಡಲಾಮೆ ಮೊದಲಾದ ಅಪೂರ್ವ ಜಲಚರಗಳನ್ನು ಉಳಿಸುವುದು ಮಹತ್ವದ ಕಾರ್ಯ. ಈ ನಿಟ್ಟಿನಲ್ಲಿ “ಕಡಲ ಜೀವಿಗಳ ಸಂರಕ್ಷಣ ಕೇಂದ್ರ’ವನ್ನು (ಮರೈನ್‌ ರೆಸ್ಕ್ಯೂ ಸೆಂಟರ್‌) ಮಂಗಳೂರಿನಲ್ಲಿ ಸ್ಥಾಪಿಸುವ ಪ್ರಸ್ತಾವ ಪರಿಶೀಲನೆಯಲ್ಲಿದೆ. ಇದನ್ನು ರಾಜ್ಯ ಮತ್ತು ಸರಕಾರದ ಕೆಲವು ಯೋಜನೆಗಳ ಅನುದಾನವನ್ನು ಬಳಸಿ ಸ್ಥಾಪಿಸಲು ಪ್ರಯತ್ನ ಚಾಲ್ತಿಯಲ್ಲಿದೆ. ಒಡಿಶಾ ಮಾದರಿಯಲ್ಲಿ ಉಳ್ಳಾಲದಿಂದ ಕಾರವಾರದವರೆಗೆ ಕಡಲ ಜೀವ ವೈವಿಧ್ಯ ಕಾರಿಡಾರ್‌ ಆಗಿ ಪರಿವರ್ತಿಸಲು ಅರಣ್ಯ ಇಲಾಖೆ ಕಾರ್ಯ ಪ್ರವೃತ್ತವಾಗಿದೆ.

 

ಟಾಪ್ ನ್ಯೂಸ್

coffee, ಔಷಧೀಯ ಉತ್ಪನ್ನ, ಸಂಬಾರ ಪದಾರ್ಥ ಖರೀದಿಗೆ ಕ್ಯಾಂಪ್ಕೊ ಚಿತ್ತ

coffee, ಔಷಧೀಯ ಉತ್ಪನ್ನ, ಸಂಬಾರ ಪದಾರ್ಥ ಖರೀದಿಗೆ ಕ್ಯಾಂಪ್ಕೊ ಚಿತ್ತ

Udupi ಅಗ್ನಿಶಾಮಕ : ಮುಖ್ಯಮಂತ್ರಿ ಪದಕ ಪ್ರದಾನ

Udupi ಅಗ್ನಿಶಾಮಕ : ಮುಖ್ಯಮಂತ್ರಿ ಪದಕ ಪ್ರದಾನ

World Tourism Day ದೂರದೃಷ್ಟಿಯ ಯೋಜನೆ ಕಾರ್ಯಗತಗೊಳಿಸಿ: ಖಾದರ್‌

World Tourism Day ದೂರದೃಷ್ಟಿಯ ಯೋಜನೆ ಕಾರ್ಯಗತಗೊಳಿಸಿ: ಖಾದರ್‌

Udupi ಪ್ರಕೃತಿಯನ್ನು ನೋಡುವ ದೃಷ್ಟಿ ಬದಲಾಗಬೇಕು: ಶಾಸಕ ಗುರ್ಮೆ

Udupi ಪ್ರಕೃತಿಯನ್ನು ನೋಡುವ ದೃಷ್ಟಿ ಬದಲಾಗಬೇಕು: ಶಾಸಕ ಗುರ್ಮೆ

Udupi ಮಾದಕ ವ್ಯಸನಮುಕ್ತ ಜಿಲ್ಲೆಗೆ ವೈದ್ಯಕೀಯ ಕ್ಷೇತ್ರದ ಕೊಡುಗೆ ಅತ್ಯಾವಶ್ಯಕ

Udupi ಮಾದಕ ವ್ಯಸನಮುಕ್ತ ಜಿಲ್ಲೆಗೆ ವೈದ್ಯಕೀಯ ಕ್ಷೇತ್ರದ ಕೊಡುಗೆ ಅತ್ಯಾವಶ್ಯಕ

1-fdsdsa

ODI: ಭಾರತದ ಎದುರು ವೈಟ್‌ವಾಶ್‌ ತಪ್ಪಿಸಿಕೊಂಡ ಆಸೀಸ್ ; 66 ರನ್ ಗಳ ಜಯ

1-cssadsa

Karwar; ಯುದ್ಧವಿಮಾನ ಮ್ಯೂಸಿಯಂ ಸ್ಥಾಪನೆಗೆ ಸಿದ್ಧತೆಗಳು ಪೂರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಅಗ್ನಿಶಾಮಕ : ಮುಖ್ಯಮಂತ್ರಿ ಪದಕ ಪ್ರದಾನ

Udupi ಅಗ್ನಿಶಾಮಕ : ಮುಖ್ಯಮಂತ್ರಿ ಪದಕ ಪ್ರದಾನ

Udupi ಪ್ರಕೃತಿಯನ್ನು ನೋಡುವ ದೃಷ್ಟಿ ಬದಲಾಗಬೇಕು: ಶಾಸಕ ಗುರ್ಮೆ

Udupi ಪ್ರಕೃತಿಯನ್ನು ನೋಡುವ ದೃಷ್ಟಿ ಬದಲಾಗಬೇಕು: ಶಾಸಕ ಗುರ್ಮೆ

Udupi ಮಾದಕ ವ್ಯಸನಮುಕ್ತ ಜಿಲ್ಲೆಗೆ ವೈದ್ಯಕೀಯ ಕ್ಷೇತ್ರದ ಕೊಡುಗೆ ಅತ್ಯಾವಶ್ಯಕ

Udupi ಮಾದಕ ವ್ಯಸನಮುಕ್ತ ಜಿಲ್ಲೆಗೆ ವೈದ್ಯಕೀಯ ಕ್ಷೇತ್ರದ ಕೊಡುಗೆ ಅತ್ಯಾವಶ್ಯಕ

Udupi: 3-4 ದಿನದೊಳಗೆ ಜಿಲ್ಲೆಯ ಮರಳು ಸಮಸ್ಯೆ ಬಗೆಹರಿಸಿ, ಇಲ್ಲದಿದ್ದರೆ… : ಕೋಟ ಎಚ್ಚರಿಕೆ

Udupi: 3-4 ದಿನದೊಳಗೆ ಜಿಲ್ಲೆಯ ಮರಳು ಸಮಸ್ಯೆ ಬಗೆಹರಿಸಿ, ಇಲ್ಲದಿದ್ದರೆ… : ಕೋಟ ಎಚ್ಚರಿಕೆ

Udupi ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Udupi ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

MUST WATCH

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

ಹೊಸ ಸೇರ್ಪಡೆ

ಸೆ. 30: ಕಂಬಳ ಸಮಿತಿ ಸಭೆ: ದೇವಿಪ್ರಸಾದ ಶೆಟ್ಟಿ ಬೆಳಪು

ಸೆ. 30: ಕಂಬಳ ಸಮಿತಿ ಸಭೆ: ದೇವಿಪ್ರಸಾದ ಶೆಟ್ಟಿ ಬೆಳಪು

eid milab

Prophet Muhammad (ಸ): ಸಮಾನತೆಯ ಹರಿಕಾರ- ಇಂದು ಪ್ರವಾದಿ ಮುಹಮ್ಮದರ ಜನ್ಮದಿನ

1-2w323

Hunsur; ಗದ್ದಿಗೆಯಲ್ಲಿ 59 ಆದಿವಾಸಿ ಜೋಡಿಗಳ ಸಾಮೂಹಿಕ ವಿವಾಹ

Mangaluru ನವದುರ್ಗಾ ಟಿವಿಎಸ್‌: ಐಕ್ಯೂಬ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಬಿಡುಗಡೆ

Mangaluru ನವದುರ್ಗಾ ಟಿವಿಎಸ್‌: ಐಕ್ಯೂಬ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಬಿಡುಗಡೆ

coffee, ಔಷಧೀಯ ಉತ್ಪನ್ನ, ಸಂಬಾರ ಪದಾರ್ಥ ಖರೀದಿಗೆ ಕ್ಯಾಂಪ್ಕೊ ಚಿತ್ತ

coffee, ಔಷಧೀಯ ಉತ್ಪನ್ನ, ಸಂಬಾರ ಪದಾರ್ಥ ಖರೀದಿಗೆ ಕ್ಯಾಂಪ್ಕೊ ಚಿತ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.