ಮತ ಚಲಾಯಿಸಲು ಬರುತ್ತಿದ್ದಾರೆ ದೂರದೂರಿನ ಮತದಾರರು

Team Udayavani, Apr 18, 2019, 6:00 AM IST

ಮತದಾನಕ್ಕೆ ಕುವೈಟ್‌ನಿಂದ ಮಂಗಳೂರಿಗೆ ಹೊರಟ ಪ್ರಯಾಣಿಕರು.

ಮಂಗಳೂರು: ತಮ್ಮ ಅಮೂಲ್ಯ ಮತವನ್ನು ಚಲಾಯಿಸಲು ಅನಿವಾಸಿ ಭಾರತೀಯರು ಮತ್ತು ದೇಶದ ವಿವಿಧ ಭಾಗಗಳಲ್ಲಿ ಇರುವ ವರು ಬುಧವಾರವೇ ಮಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

ಕುವೈಟ್‌ನಿಂದ ಕೆಲವು ಮಂದಿ ಅನಿವಾಸಿ ಭಾರತೀಯರು 35,000 ರೂ.ಗಳಿಂದ 40,000 ರೂ. ಖರ್ಚು ಮಾಡಿ ಮಂಗಳೂರಿಗೆ ಹೊರಟಿದ್ದಾರೆ. ಅದೇ ರೀತಿ ಬೆಂಗಳೂರಿನಲ್ಲಿ ಇರುವವರೂ ರೈಲು, ಬಸ್‌ಗಳಲ್ಲಿ ಮಂಗಳೂರು ಕಡೆಗೆ ಬುಧವಾರ ಪ್ರಯಾಣಿಸಿದ್ದಾರೆ.

ಕುವೈಟ್‌ನಿಂದ ಸುಮಾರು 36 ಮಂದಿಯ ತಂಡ ಬುಧವಾರ ಬೆಳಗ್ಗೆ ಏರ್‌ ಇಂಡಿಯಾ ವಿಮಾನದಲ್ಲಿ ಮಂಗಳೂರಿಗೆ ಬಂದಿದೆ. ಐದು ವರ್ಷಕ್ಕೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡ ಬೇಕೆಂಬ ಅದಮ್ಯ ಉತ್ಸಾಹದಿಂದ ಈ ಜನರು ಇಷ್ಟೊಂದು ಖರ್ಚು ಮಾಡಿ ಮಂಗಳೂರಿಗೆ ಬರುತ್ತಿದ್ದಾರೆ.

ದುಬಾರಿ ಟಿಕೆಟ್‌ ದರ
ಕುವೈಟ್‌ – ಮಂಗಳೂರು- ಕುವೈಟ್‌ ವಿಮಾನ ಯಾನ ದರ ಸಾಮಾನ್ಯವಾಗಿ 18,000 ರೂ.ಗಳಿಂದ 22,000 ರೂ.ಗಳಷ್ಟು ಇರುತ್ತದೆ. ಆದರೆ ಇತ್ತೀಚೆಗೆ ಈ ದರ (ಏರ್‌ ಇಂಡಿಯಾ ವಿಮಾನದಲ್ಲಿ) ದುಪ್ಪಟ್ಟು ಏರಿಕೆಯಾ ಗಿದ್ದು, 35,000 ರೂ. ಗಳಿಂದ 40,000 ರೂ.ಗಳಷ್ಟಿದೆ. ಆರ್ಥಿಕ ಮುಗ್ಗಟ್ಟಿನಲ್ಲಿರುವ ಜೆಟ್‌ ಏರ್‌ವೆàಸ್‌ ವಿಮಾನ ಸಂಸ್ಥೆ ತನ್ನ ಎಲ್ಲ ವಿಮಾನ ಸೇವೆಗಳನ್ನು ರದ್ದು ಪಡಿಸಿರುವುದು ಈ ಟಿಕೆಟ್‌ ದರ ಏರಿಕೆಗೆ ಕಾರಣ ಎನ್ನಲಾಗುತ್ತಿದ್ದರೂ ನಿಜವಾದ ಕಾರಣ ತಿಳಿದು ಬಂದಿಲ್ಲ.

ಪ್ರಯಾಣ ಮೊಟಕು
ಮತದಾನ ಮಾಡಬೇಕೆಂದು ನಿರ್ಧರಿಸಿ ಕುವೈಟ್‌ನಲ್ಲಿದ್ದ ಅನೇಕ ಮಂದಿ ಅನಿವಾಸಿ ಭಾರತೀಯರು ಜೆಟ್‌ ಏರ್‌ವೆàಸ್‌, ಏರ್‌ ಇಂಡಿಯಾ ವಿಮಾನಗಳಿಗೆ ತಿಂಗಳ ಹಿಂದೆಯೇ ಟಿಕೆಟ್‌ ಬುಕ್‌ ಮಾಡಿದ್ದರು. ಆದರೆ ಜೆಟ್‌ ಏರ್‌ವೆàಸ್‌ ಸಂಸ್ಥೆಯು ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಎಲ್ಲ ದೇಶೀಯ ಮತ್ತು ಅಂತರ್ದೇಶೀಯ ವಿಮಾನ ಯಾನ ಸೇವೆಯನ್ನು ರದ್ದುಪಡಿಸಿದ್ದರಿಂದ ಈ ವೈಮಾನಿಕ ಸಂಸ್ಥೆಯಲ್ಲಿ ಕುವೈಟ್‌ನಿಂದ ಮಂಗಳೂರಿಗೆ ಮುಂಗಡ ಟಿಕೆಟ್‌ ಬುಕ್‌ ಮಾಡಿದ ಹಲವಾರು ಮಂದಿಗೆ ಪ್ರಯಾಣಿಸಲು ಸಾಧ್ಯವಾ ಗಿಲ್ಲ. ಇದೇ ವೇಳೆ ಏರ್‌ ಇಂಡಿಯಾ ಸಂಸ್ಥೆ ಟಿಕೆಟ್‌ ದರ ಹೆಚ್ಚಳ ಮಾಡಿದ್ದ ರಿಂದ 35,000-40,000 ರೂ.ಗಳಷ್ಟು ದುಬಾರಿ ಟಿಕೆಟ್‌ ದರ ಪಾವತಿಸಿ ಪ್ರಯಾಣಿಸುವುದು ಬೇಡ ಎಂದು ನಿರ್ಧರಿಸಿ ಅನಿವಾರ್ಯವಾಗಿ ಪ್ರಯಾಣ ರದ್ದುಪಡಿಸಿದ್ದಾರೆ. ಪರಿಣಾಮ ಹಲವರು ಮತದಾನ ದಿಂದ ವಂಚಿತರಾಗಿದ್ದಾರೆ.

ಕೇರಳಕ್ಕೆ ಟಿಕೆಟ್‌ ಅಗ್ಗ!
ವಿಮಾನ ಟಿಕೆಟ್‌ ದರ ಹೆಚ್ಚಳವನ್ನು ಕರ್ನಾಟಕಕ್ಕೆ ಮಾತ್ರ ಅನ್ವಯಿಸುವಂತೆ ಮಾಡಲಾಗಿದ್ದು, ಕೇರಳಕ್ಕೆ ಸಂಬಂಧಪಟ್ಟಂತೆ ಹೆಚ್ಚಳ ಮಾಡಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಕೇರಳದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಹಿತ ಎಲ್ಲ ವಿಮಾನ ನಿಲ್ದಾಣಗಳಿಗೆ ಬರುವ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ದರ ಕಡಿಮೆ ಇದೆ ಎಂದು ಹೇಳಲಾಗಿದೆ. ಕುವೈಟ್‌- ಕಣ್ಣೂರು-ಕುವೈಟ್‌ ವಿಮಾನ ಟಿಕೆಟ್‌ ದರ 18,000 ರೂ. (ಇಂಡಿಗೊ ವಿಮಾನದಲ್ಲಿ) ಇದೆ ಎಂದು ಮೂಲವೊಂದು ತಿಳಿಸಿದೆ. ವೈಮಾನಿಕ ಸಂಸ್ಥೆಗಳು ಈ ರೀತಿ ಟಿಕೆಟ್‌ ದರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವುದು ಏಕೆ ಎನ್ನುವುದು ಅರ್ಥವಾಗುತ್ತಿಲ್ಲ.

ವಿಶೇಷ ರೈಲು
ಕರಾವಳಿಯ ಜನರಿಗೆ ಮತದಾನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ರೈಲ್ವೇ ಇಲಾಖೆಯು ಬೆಂಗಳೂರು- ಮಂಗಳೂರು- ಕಾರವಾರ ಮಾರ್ಗದಲ್ಲಿ ವಿಶೇಷ ರೈಲು ಓಡಾಟಕ್ಕೆ ವ್ಯವಸ್ಥೆ ಕಲ್ಪಿಸಿದೆ.

ಬಸ್‌ ಪ್ರಯಾಣವೂ ದುಬಾರಿ
ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಖಾಸಗಿ ಬಸ್‌ ಪ್ರಯಾಣ ದರವೂ ಚುನಾವಣೆ ಸಂದರ್ಭದಲ್ಲಿ ದುಬಾರಿಯಾಗಿದೆ. ಕೆಲವು ಮಂದಿ ಚುನಾವಣ ದಿನಾಂಕ ಘೋಷಣೆಯಾದ ದಿನಾಂಕದಂದೇ ಟಿಕೆಟ್‌ ಬುಕ್‌ ಮಾಡಿಸಿದ್ದರು.

ಕುವೈಟ್‌ ಮಂಗಳೂರಿನಿಂದ 3,325 ಕಿ.ಮೀ. ದೂರದಲ್ಲಿದೆ. ಸಮುದ್ರ ದಾಟಿ ಹೋಗ ಬೇಕು. ವಿಮಾನದಲ್ಲಿ 5 ಗಂಟೆಯ ಪ್ರಯಾಣ ಅವಧಿ ಇದೆ. ಟಿಕೆಟ್‌ ದರ 35,000 ರೂ.ನಿಂದ 40,000 ರೂ.ಗಳಷ್ಟಿದೆ. ಇಷ್ಟೆಲ್ಲಾ ಖರ್ಚು ತಗುಲಿದರೂ ಒಂದು ಮತ ಚಲಾಯಿಸಲು ಬರುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ