ದೊಡ್ಡವರ ಟೀಕಿಸಿದರೆ ದೊಡ್ಡವರಾಗೋದಿಲ್ಲ

Team Udayavani, Sep 30, 2018, 4:39 PM IST

ದಾವಣಗೆರೆ: ಕಾಂಗ್ರೆಸ್‌-ಬಿಜೆಪಿ ಮುಖಂಡರ ಕೆಸರೆರಚಾಟ, ಆರೋಪ-ಪ್ರತ್ಯಾರೋಪ ಮುಂದುವರಿದಿದ್ದು, ಶನಿವಾರ ಕಾಂಗ್ರೆಸ್‌ ಜಿಲ್ಲಾ ಸಮಿತಿ ಪದಾಧಿಕಾರಿಗಳು, ಬಿಜೆಪಿ ಧುರೀಣರ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪನವರ ವಿರುದ್ಧ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಹಗುರವಾಗಿ ಮಾತನಾಡಿದ್ದಾರೆ ಎಂಬುದಾಗಿ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ.ಶೆಟ್ಟಿ, ಬಿಜೆಪಿ ಅಧ್ಯಕ್ಷರು ಕೂಡಲೇ ಕಾಂಗ್ರೆಸ್‌ ಹಾಗೂ ಸಾರ್ವಜನಿಕರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಪ, ಪ್ರತಿಭಟನೆ, ಪ್ರತಿರೋಧ ಸಾಮಾನ್ಯ. ಆದರೆ, ಇದನ್ನು ಅರಿಯದ ಬಿಜೆಪಿ ಜಿಲ್ಲಾಧ್ಯಕ್ಷರು, ಟೀಕೆಗೆ ಸರಿಯಾದ ರೀತಿ ಪ್ರತಿಕ್ರಿಯಿಸದೇ ಅನಾಗರಿಕ ಪದ ಬಳಸಿ, ತೇಜೋವಧೆ ಮಾಡಿರುವುದನ್ನು ನೋಡಿದರೆ ಅವರ ವ್ಯಕ್ತಿತ್ವ ಎಂಥಹದ್ದು ಎಂಬುದಾಗಿ ತಿಳಿಯಲಿದೆ ಎಂದು ಟಾಂಗ್‌ ನೀಡಿದರು.

ಯಾರನ್ನೇ ಆಗಲಿ ಟೀಕಿಸುವಾಗ ಪದ ಬಳಕೆ ಬಗ್ಗೆ ಗಮನವಿರಬೇಕು. ದೊಡ್ಡವರನ್ನು ಟೀಕಿಸಿದರೆ ನಾವು ದೊಡ್ಡವರಾಗುತ್ತೇವೆ ಎಂಬ ಭ್ರಮೆ ಸರಿಯಲ್ಲ. ಶಾಸಕ ಶಾಮನೂರು ಶಿವಶಂಕರಪ್ಪನವರು, ದಾವಣಗೆರೆ ಅಭಿವೃದ್ಧಿ
ಜತೆಗೆ ಸಮಾಜದ ಬಡ ವಿದ್ಯಾರ್ಥಿಗಳಿಗೆ ವೈಯಕ್ತಿವಾಗಿಯೂ ಆರ್ಥಿಕ ನೆರವು ನೀಡುತ್ತಿದ್ದಾರೆ. ಯಾವುದೇ ತಾರತಮ್ಯ
ಮಾಡದೇ ಎಲ್ಲ ವರ್ಗದ ಹಿತಕಾಯುತ್ತಿದ್ದಾರೆ.

ಉಚಿತ ವಿದ್ಯಾರ್ಥಿ ನಿಲಯ, ಧಾರ್ಮಿಕ ಸಂಸ್ಥೆ, ಎಲ್ಲಾ ಸಮಾಜದ ಅಭಿವೃದ್ಧಿಗೂ ಅನುದಾನ ನೀಡಿದ್ದಾರೆ. ಅಂಥವರ ಬಗ್ಗೆ ಬಿಜೆಪಿ ಅಧ್ಯಕ್ಷರು ಹಗುರವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಹೇಳಿದರು.

ಇನ್ನು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ.ರವೀಂದ್ರನಾಥ್‌ ನಗರದ ಸರ್ಕಾರಿ ಬಾಲಕರ ಹೈಸ್ಕೂಲ್‌ ಮೈದಾನದಲ್ಲಿ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.  ಆದರೆ, ಅಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಪಡೆದು, ಪ್ರವೇಶ ಶುಲ್ಕ ವಿಧಿಸಿ, ಗಣಪತಿ ಹೆಸರಲ್ಲಿ ಹಣ ಸಂಗ್ರಹಿಸಲಾಗುತ್ತಿದೆ.
ಸಾರ್ವಜನಿಕರ ಹಣ ಸಂಗ್ರಹದ ಬಗ್ಗೆ ಲೆಕ್ಕ ಕೊಡಬೇಕೆಂದು ಅವರು ಆಗ್ರಹಿಸಿದರು. 

ಶಾಮನೂರು ಹೆಸರಿಗೆ ಆಕ್ಷೇಪ ಸರಿಯಲ್ಲ: ಕುಂದುವಾಡ ಕೆರೆ ಬಳಿ ನಿರ್ಮಿಸಲಾಗಿರುವ ಗಾಜಿನ ಮನೆ ಶಾಮನೂರಿಗೆ ಹತ್ತಿರ ಇರುವುದರಿಂದ ಶಾಮನೂರು ಗಾಜಿನ ಮನೆ ಎಂಬುದಾಗಿ ಹೆಸರಿಡಲು ತೀರ್ಮಾನಿಸಲಾಗಿದೆ. ಅದು ವ್ಯಕ್ತಿಯದ್ದಲ್ಲ ಊರಿನ ಹೆಸರು. ಒಂದು ವೇಳೆ ಶಾಮನೂರು ಶಿವಶಂಕರಪ್ಪರ ಹೆಸರಿಟ್ಟರೂ ತಪ್ಪೇನೂ ಇಲ್ಲ. ಏಕೆಂದರೆ
ಅವರು ಸಚಿವ ಹಾಗೂ ಶಾಸಕರಾಗಿ ಸಾಕಷ್ಟು ಅನುದಾನ ತಂದಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ದಾವಣಗೆರೆ ಸಮಗ್ರ ಅಭಿವೃದ್ಧಿಗೆ ಅವರು ಶ್ರಮಿಸಿದ್ದಾರೆ.

ಗಾಜಿನ ಮನೆ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಪರಿಕಲ್ಪನೆ. ಹಾಗಾಗಿ ಗಾಜಿನ ಮನೆಗೆ ಶಾಮನೂರು ಹೆಸರಿಡುವ ಬಗ್ಗೆ ಆಕ್ಷೇಪ ಸರಿಯಲ್ಲ. ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಜಿಲ್ಲೆಯಲ್ಲಿ ಮೂವರು ಮಂತ್ರಿಗಳಿದ್ದರು. ಆ ಸಮಯದಲ್ಲಿ ಯಾವ ಯಾವ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂಬುದನ್ನು ಬಿಜೆಪಿಯವರು ತೋರಿಸಲಿ ಎಂದು ದಿನೇಶ್‌ ಶೆಟ್ಟಿ ಸವಾಲು ಹಾಕಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪ ಮಾತನಾಡಿ, ಅ.2ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್‌ ಶಾಸ್ತ್ರೀಜಿ ಜಯಂತಿ ಆಚರಣೆ ಮತ್ತು ಲೋಗ್‌ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. 

ಲೋಗ್‌ ಸಂಪರ್ಕ ಅಭಿಯಾನದ ಮೂಲಕ ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟಿಸಲಾಗುವುದು. ಎಸ್‌ಎಂಎಸ್‌ ಮೂಲಕ ಮತದಾರರ ಗುರುತಿನ ಚೀಟಿ, ಮೊಬೈಲ್‌ ನಂಬರ್‌ ನೋಂದಾಯಿಸಿಕೊಂಡು ಅಭಿಯಾನದ ಮೂಲಕ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಲಾಗುವುದು ಎಂದು ಹೇಳಿದರು. ಪಕ್ಷದ ಮುಖಂಡರಾದ ಕೆ.ಜಿ. ಶಿವಕುಮಾರ್‌, ಎಂ. ಹಾಲೇಶ್‌, ಎ. ನಾಗರಾಜ್‌ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ