ಟಿಕೆಟ್‌ಗಾಗಿ ಕೈ-ಕಮಲ ಆಕಾಂಕ್ಷಿಗಳ ಕಸರತ್ತು

Team Udayavani, Apr 13, 2018, 12:14 PM IST

ದಾವಣಗೆರೆ: ಟಿಕೆಟ್‌ಗಾಗಿ ದೆಹಲಿಯಲ್ಲಿಯೇ ಬೀಡು ಬಿಟ್ಟ ಕಾಂಗ್ರೆಸ್‌ ಕೆಲ ನಾಯಕರು, ಸಂಸತ್‌ನ ಬಜೆಟ್‌ ಅಧಿವೇಶನಕ್ಕೆ ವಿಪಕ್ಷಗಳ ಅಡ್ಡಿ ವಿರೋಧಿಸಿ ಸಂಸದ ಸಿದ್ದೇಶ್ವರ್‌ ನೇತೃತ್ವದಲ್ಲಿ ಬಿಜೆಪಿಯವರ ಪ್ರತಿಭಟನೆ, ಮನೆ ಮನೆಗೆ ಕುಮಾರಣ್ಣಾ ಕಾರ್ಯಕ್ರಮದಲ್ಲಿ ಜೆಡಿಎಸ್‌ ಪಡೆ….ಇವು ಗುರುವಾರದ ರಾಜಕೀಯ ಚಟುವಟಿಕೆಗಳು.

ಚುನಾವಣೆಯ ಅಧಿಸೂಚನೆ ಹೊರಬೀಳಲು ಇನ್ನು 5 ದಿನ ಬಾಕಿ ಇದೆ. ತಮ್ಮ ಟಿಕೆಟ್‌ ಪಕ್ಕಾ ಮಾಡಿಕೊಳ್ಳಲು ಆಕಾಂಕ್ಷಿಗಳು ಏನೇನೋ ಲಾಬಿ ಮಾಡುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್ಸಿಗರು ಇನ್ನಿಲ್ಲದ ಸರ್ಕಸ್‌ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಎಸ್‌. ಮಲ್ಲಿಕಾರ್ಜುನ್‌, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರು ಮಾತ್ರ ಈ ಕುರಿತು ತಲೆ ಕೆಡಿಸಿಕೊಂಡಿಲ್ಲ. ಬಹುತೇಕ ಅವರಿಗೆ ಟಿಕೆಟ್‌ ಪಕ್ಕಾ ಆಗಿರುವಂತಿದೆ. ಹಾಗಾಗಿಯೇ ಸಚಿವ ಮಲ್ಲಿಕಾರ್ಜುನ್‌ ನಿವಾಸ ಹಾಗೂ ನಗರ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗಿದೆ.

ಈ ಬಾರಿಯಾದರೂ ಹೊನ್ನಾಳಿಯಿಂದ ಟಿಕೆಟ್‌ ಪಡೆದುಕೊಂಡು ಶಾಸಕನಾಗಬೇಕು ಎಂಬ ಕನಸು ಕಾಣುತ್ತಿರುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ, ಮಾಯಕೊಂಡ ಟಿಕೆಟ್‌ ಆಕಾಂಕ್ಷಿಗಳ ಪೈಕಿ ಓರ್ವರಾದ ಡಿ. ಬಸವರಾಜ ಸೇರಿದಂತೆ ಹಲವರು ದೆಹಲಿಯಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಶುಕ್ರವಾರ ಸ್ಕ್ರೀನಿಂಗ್‌ ಕಮಿಟಿ ಸಭೆ ಇರುವ ಹಿನ್ನೆಲೆಯಲ್ಲಿ ಅಲ್ಲಿಯವರೆಗೆ ಚಾತಕ ಪಕ್ಷಿಯಂತೆ ಕಾಯಲಿದ್ದಾರೆ. ಬಿಜೆಪಿಯವರು ಸಹ ಹಿಂದೆ ಬಿದ್ದಿಲ್ಲ. ಇಂದು ಅಮಿತ್‌ ಶಾ ರಾಜ್ಯ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಟಿಕೆಟ್‌ ಆಕಾಂಕ್ಷಿಗಳು ತಮ್ಮ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

ಕೆಲ ನಾಯಕರು ಟಿಕೆಟ್‌ ಬಗ್ಗೆ ತಲೆ ಕೆಡಿಸಿಕೊಳ್ಳದೇ ಪ್ರಚಾರದಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಮಾಜಿ ಸಚಿವ, ಬಿಜೆಪಿ ಮುಖಂಡ ಜಿ. ಕರುಣಾಕರ ರೆಡ್ಡಿ ಹರಪನಹಳ್ಳಿ ಕ್ಷೇತ್ರದ ಕಡಬಗೆರೆ, ಅಡವಿಹಳ್ಳಿ, ಸಾಸ್ವಿಹಳ್ಳಿ ಗ್ರಾಮಗಳಲ್ಲಿ ಸಂಚರಿಸಿ ಮತಯಾಚಿಸಿದರು. ಹೊನ್ನಾಳಿಯಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಹೊಸಹಳ್ಳಿ ಗ್ರಾಮದಲ್ಲಿ ಮುಖಂಡರ ಜೊತೆ ಚರ್ಚೆ ನಡೆಸಿದರು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕುಳಗಟ್ಟೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದರು.

ಚನ್ನಗಿರಿ ಅಜ್ಜಿಹಳ್ಳಿಯಲ್ಲಿ ಶಾಸಕ ವಡ್ನಾಳ್‌ ರಾಜಣ್ಣ ಪ್ರಚಾರ ಕೈಗೊಂಡರು. ಬಿಜೆಪಿಯ ಮಾಡಾಳು ವಿರುಪಾಕ್ಷಪ್ಪ ಉಬ್ರಾಣಿ ಭಾಗದಲ್ಲಿ ಪ್ರಚಾರ ನಡೆಸಿದರು. ಜೆಡಿಎಸ್‌ ನಾಯಕ ಹೊದಿಗೆರೆ ರಮೇಶ್‌ ಚನ್ನಗಿರಿ ಪಟ್ಟಣದ ವಡ್ನಾಳ್‌ ರಾಜಣ್ಣ ಬಡಾವಣೆಯಲ್ಲಿ ಪ್ರಚಾರ ನಡೆಸಿದರು. ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್‌ ಬೆಂಗಳೂರು ಪ್ರವಾಸ ಕೈಗೊಂಡು ಸಂಜೆ ವಾಪಸ್ಸಾಗಿ ಪಕ್ಷದ ಕಚೇರಿಯಲ್ಲಿ ಮುಖಂಡರ ಸಭೆ ನಡೆಸಿದರು. ಮಾಯಕೊಂಡದ ಬಹುತೇಕ ಮುಖಂಡರು ಟಿಕೆಟ್‌ಗಾಗಿ ದೆಹಲಿ, ಬೆಂಗಳೂರು ಚಲೋ ನಡೆಸಿದರೆ, ಜೆಡಿಎಸ್‌ನ ಶೀಲಾ ನಾಯ್ಕ ಮಾತ್ರ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು.

ಹರಿಹರದಲ್ಲಿ ಜೆಡಿಎಸ್‌ ಭರ್ಜರಿ ಪ್ರಚಾರ ನಡೆಸಿದೆ. ಬಿಜೆಪಿಯ ಕಾರ್ಯಕರ್ತರು ಬೂತ್‌ಮಟ್ಟದಲ್ಲಿ ಪ್ರಚಾರ ದಿನನಿತ್ಯ ಮಾಡುವ ಕೆಲಸ ಮಾಡುತ್ತಿದ್ದರು. ಆದರೆ, ಟಿಕೆಟ್‌ ಅಂತಿಮ ಆಗದ ಹಿನ್ನೆಲೆಯಲ್ಲಿ ನಾಯಕರು ಕಾಣಸಿಗಲಿಲ್ಲ. ಬಹುತೇಕ ರಾಜಕೀಯ ಪಕ್ಷಗಳು ತಮ್ಮ ಹುರಿಯಾಳುಗಳನ್ನು ಅಂತಿಮಗೊಳಿಸಲು ಭರ್ಜರಿ ತಯಾರಿ ನಡೆಸುತ್ತಿವೆ.

ಚುನಾವಣಾ ಅಧಿಸೂಚನೆ ಹೊರಬಿಳುವುದರ ಒಳಗೆ ತಮಗೆ ಟಿಕೆಟ್‌ ಖಚಿತ ಆದರೆ ತಾಲೀಮು ಮಾಡೋದು ಸುಲಭ ಎಂದು ನಾಯಕರು ಲೆಕ್ಕಹಾಕುತ್ತಿದ್ದಾರೆ. ಇತ್ತ  ರ್ಯಕರ್ತರು ತಮ್ಮ ನಾಯಕರಿಗೇ ಟಿಕೆಟ್‌ ಸಿಗಬೇಕು ಎಂದು ಒತ್ತಾಸೆ ಹೊಂದಿದ್ದಾರೆ. ರಣರಂಗದ ಅಸಲಿ ಗಮ್ಮತ್ತು ಶುರು ಆಗಲು ಇದೀಗ ದಿನಗಣನೆ ಆರಂಭ ಆಗಿದೆ.

ಬಿಜೆಪಿ ತರಬೇತಿ ಕೊಟು ಕಾಂಗ್ರೆಸ್‌ ಕರ್ಕೂಂತು
 ಮುಸ್ಲಿಂ ಮತದಾರರನ್ನು ಸೆಳೆಯಲು ಬಿಜೆಪಿ ಇನ್ನಿಲ್ಲದ ಕಸರತ್ತು ಮಾಡುತ್ತಲೇ ಇದೆ. ಇದೇ ಕಾರಣಕ್ಕೆ ಚುನಾವಣೆಗಾಗಿ ರಚಿತವಾಗಿದ್ದ ಪಕ್ಷದ ನವಶಕ್ತಿ ಪಡೆ, ಪೇಜ್‌ ಪ್ರಮುಖ್‌ರ ಹುದ್ದೆಗೆ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಮುಸ್ಲಿಂ ಬಾಹುಳ್ಯ ಇರುವ ಪ್ರದೇಶಗಳ ಮುಸ್ಲಿಂ ಯುವಕರನ್ನು ಸೆಳೆದುಕೊಂಡಿತ್ತು. ಅವರಿಗೆ ಸೂಕ್ತ ತರಬೇತಿ ಸಹ ನೀಡಿತ್ತು. 50 ಜನರ ಪಡೆಯನ್ನು ಸಿದ್ಧಪಡಿಸಿ, ಪ್ರಚಾರದ ಅಖಾಡಕ್ಕೆ ಬಿಟ್ಟಿತ್ತು. ಆದರೆ, ಕಾಂಗ್ರೆಸ್‌ ನಾಯಕರ ಒಂದೇ ಮಾತಿಗೆ ಈ ಎಲ್ಲಾ ಯುವಕರು ಗುರುವಾರ ಕಾಂಗ್ರೆಸ್‌ ನಾಯಕ ಎಂ.ಡಿ. ಶೇಖರಪ್ಪ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆ ಆಗಿದ್ದಾರೆ ಎನ್ನಲಾಗಿದೆ. 

ಕೊಟ್ರೇಶ್‌ಗೆ ಟಿಕೆಟ್‌ ಪಕ್ಕಾ ಅಂತೆ
ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗರಿಗೆ ಟಿಕೆಟ್‌ ಹಂಚಿಕೆ ಕಗ್ಗಂಟು ಉಂಟಾಗಿರುವ 2 ಕ್ಷೇತ್ರಗಳ ಪೈಕಿ
ಹರಪನಹಳ್ಳಿಯೂ ಒಂದು. ಇಲ್ಲಿ ಮಾಜಿ ಸಚಿವ ಕರುಣಾಕರ ರೆಡ್ಡಿ, ಹಿಂದಿನ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಕೊಟ್ರೇಶ್‌
ನಡುವೆ ಭಾರೀ ಸ್ಪರ್ಧೆ ಇದೆ. ಮೂಲಗಳ ಪ್ರಕಾರ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರೇ ಸ್ವತಃ ಕೊಟ್ರೇಶ್‌ ಪರ ಬ್ಯಾಟಿಂಗ್‌ ಮಾಡುತ್ತಿದ್ದರೆ, ಇನ್ನೋರ್ವ ಮುಖಂಡ ಜಗದೀಶ್‌ ಶೆಟ್ಟರ್‌ ಕರುಣಾಕರ ರೆಡ್ಡಿ ಪರ ನಿಂತಿದ್ದಾರಂತೆ. ಆದರೆ, ಪಕ್ಷದ ವರಿಷ್ಠರು ಯಾರ ಪರ ನಿಲ್ಲುತ್ತಾರೆ ಎಂಬುದು ಇದೀಗ ಪ್ರಶ್ನೆಯಾಗಿ ಉಳಿದಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಎನ್‌.ಆರ್‌. ನಟರಾಜ್‌ ದಾವಣಗೆರೆ: ಅಂತೂ ಇಂತೂ ಮಂಗಳವಾರ ವಿಸ್ತರಣೆಯಾದ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಮಂತ್ರಿ ಮಂಡಲದಲ್ಲಿ ಬಿಜೆಪಿ ಭದ್ರ...

  • ದಾವಣಗೆರೆ: ನೂತನ ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಬೆಳಿಗ್ಗೆ ಕಚೇರಿಗೆ ಆಗಮಿಸಿದ ಅವರನ್ನು ಅಪರ ಜಿಲ್ಲಾಧಿಕಾರಿ...

  • ದಾವಣಗೆರೆ: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಸಮಾಜದಲ್ಲಿ ಸಮಾನತೆ, ಏಕತೆ ಜೊತೆಗೆ ಹಿಂದುಳಿದ ದುರ್ಬಲ ವರ್ಗದ ಜನರ ಆರ್ಥಿಕ, ಸಾಮಾಜಿಕ ಭದ್ರತೆಗೆ ನೆಲೆ ಒದಗಿಸಿದ...

  • ದಾವಣಗೆರೆ: ಜಿಲ್ಲೆಯನ್ನು ಕೋಟ್ಪಾ ಉನ್ನತ ಅನುಷ್ಠಾನ ಜಿಲ್ಲೆ ಎಂದು ಘೋಷಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ತಂಬಾಕು ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು...

  • ದಾವಣಗೆರೆ: ರಾಜ್ಯದಲ್ಲಿನ ನೆರೆ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಸಂತ್ರಸ್ತರಿಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಭಾರತ...

ಹೊಸ ಸೇರ್ಪಡೆ