ಸ್ಮಾರ್ಟ್ ಸಿಟಿ ಡರ್ಟಿಗೆ ಬಿಜೆಪಿಗರೇ ಕಾರಣ
Team Udayavani, Oct 8, 2017, 11:31 AM IST
ದಾವಣಗೆರೆ: ಸ್ಮಾರ್ಟ್ ಸಿಟಿ ಗಬ್ಬು ನಾರುತ್ತಿದೆ, ಡರ್ಟಿ ಸಿಟಿ ಆಗಿದೆ ಎಂಬ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಟೀಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಶನಿವಾರ ತಿರುಗೇಟು ನೀಡಿದ್ದು, ಬಿಜೆಪಿಗರು ತಮ್ಮ ಆಡಳಿತಾವಧಿಯಲ್ಲಿ ಕತ್ತೆ ಕಾಯ್ತಾ ಇದ್ದರಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ನಗರದ ಇಂದಿನ ಸ್ಥಿತಿಗೆ ಈ ಹಿಂದೆ 7 ವರ್ಷ ಆಡಳಿತ ನಡೆಸಿದ ಬಿಜೆಪಿಗರೇ ಕಾರಣ. ಅವರ ಕಾಲದಲ್ಲಿ ಕೈಗೊಂಡ ಯೋಜನೆಗಳು ವಿಫಲಗೊಂಡಿದ್ದೇ ದುಸ್ಥಿತಿಗೆ ನಾಂದಿಯಾಯಿತು.
ಅದನ್ನೇ ನಾವೀಗ ಸರಿಪಡಿಸುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಶನಿವಾರ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಎಂದು ಹೇಳಿದರು.
2003ರಿಂದ 2013ರ ವರೆಗೆ ಆಡಳಿತ ನಡೆಸಿದ ಬಿಜೆಪಿಯವರು ನಗರಕ್ಕೆ ಏನೂ ಮಾಡಿಲ್ಲ. ಸ್ಮಾರ್ಟ್ ಸಿಟಿ ಇಂದು ಡರ್ಟಿ ಸಿಟಿ ಆಗಲು ಇವೇ ಕಾರಣ. ಅವರು ಮಾಡಿದ್ದ ಕಾಮಗಾರಿಗಳಿಂದ ಇಂದು ಊರು ಕೊಚ್ಚೆಗುಂಡಿ ಆಗಿದೆ.
ಅವರ ಆಡಳಿತಾವಧಿಯಲ್ಲಿ ನಿರ್ಮಾಣ ಮಾಡಿದ್ದ ಚರಂಡಿಯಲ್ಲಿ ನೀರು ಹರಿದು ಹೋಗಲು ಸಾಧ್ಯವೇ ಆಗಲಿಲ್ಲ. ಹಳ್ಳಕ್ಕೆ ತಡೆಗೋಡೆ ಕಟ್ಟಲಿಲ್ಲ. ಹಾಗಾಗಿಯೇ ಇಂದು ಮಳೆ ನೀರಿನ ಸಮಸ್ಯೆಗೆ ಕಾರಣ ಆಗಿವೆ. ಆಗ ಇವರು ಕತ್ತೆ ಕಾಯ್ತಾ ಇದ್ರಾ ಎಂದು ಕುಟುಕಿದರು.
ಇನ್ನು ಬಡಾವಣೆ ನಿರ್ಮಾಣ ವೇಳೆ ಸಹ ಯೋಜನೆ ಸರಿಯಾಗಿ ರೂಪಿಸಿಲ್ಲ. ಶಾಮನೂರು ಬಳಿಯ ಗ್ಲಾಸ್ ಹೌಸ್ ಪಕ್ಕ ನಿರ್ಮಾಣ ಆಗಿರುವ ಬಡಾವಣೆ ಇವರ ಕಾಲದಲ್ಲೇ ಆಗಿದ್ದು. ಇಲ್ಲಿ ಹಾದುಹೋದ ರಾಜಕಾಲುವೆ ಮಾಯಮಾಡಿದ್ದೇ ಇಂದಿನ ಸಮಸ್ಯೆಗೆ ಕಾರಣ. ಆವರಗೆರೆ ಬಳಿಯ ಉತ್ತಮ್‌ಚಂದ್ ಬಡಾವಣೆ ಸಹ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಾಣ ಮಾಡಲಾಗಿದೆ. ಇದೇ
ಕಾರಣಕ್ಕೆ ನಾನೀಗ ರಾಜಕಾಲುವೆ ಸಮೀಕ್ಷಾ ಕಾರ್ಯಕ್ಕೆ ಚಾಲನೆ ಕೊಡಿಸಿದ್ದೇನೆ ಎಂದರು.
ವರ್ತುಲ ರಸ್ತೆ ನಿರ್ಮಾಣ ಕುರಿತು ಸಹ ಮಾಜಿ ಸಚಿವರು ಮಾತನಾಡಿದ್ದಾರೆ. ನಗರದ ಸುತ್ತ ವರ್ತುಲ ರಸ್ತೆ ನಿರ್ಮಿಸಲು ಈಗಿನ ಬೆಲೆಯಲ್ಲಿ ಭೂಮಿ ಸೇರಿಸಿ 4,000 ಕೋಟಿ ರೂ. ವೆಚ್ಚ ಆಗುತಿತು. ಇದರ ಬದಲು ಜಿಲ್ಲಾಧಿಕಾರಿಗಳ ಜೊತೆ ಸೇರಿ ಹಳ್ಳದ ಪಕ್ಕದಲ್ಲೇ ವರ್ತುಲ ರಸ್ತೆ ನಿರ್ಮಾಣಕ್ಕೆ ಮುಂದಾದೆವು. ಇದರಿಂದ ಸಾಕಷ್ಟು ಹಣ ಉಳಿತಾಯ ಆಗಿದೆ ಎಂದು ಅವರು ತಿಳಿಸಿದರು.
ಅಂಡರ್ ಪಾಸ್‌ಗಳಲ್ಲಿನ ನೀರಿನ ಸಮಸ್ಯೆ ಪರಿಹಾರಕ್ಕೂ ನಾವು ಯೋಜನೆ ರೂಪಿಸಿದ್ದೇವೆ. ಪಾಲಿಕೆ ಮುಂಭಾಗದ ಹಳೆ ರೈಲ್ವೆ ಕೆಳಸೇತುವೆಯಲ್ಲಿ ನೀರು ನಿಲ್ಲುತ್ತಿದೆ. ಇದನ್ನು ತಡೆಯಲು ನೇರ ಪೈಪ್‌ಲೈನ್ ಅಳವಡಿಸಲು 83 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ.
ಯೋಜನೆ ಅನ್ವಯ ಸೇತುವೆಯಿಂದ ಆರಂಭವಾಗುವ ಪೈಪ್‌ಲೈನ್ ನೇರ ಗಾಂಧಿನಗರದ ಅಂಬೇಡ್ಕರ್ ವೃತ್ತದವರೆಗೆ ಅಳವಡಿಸಲಾಗುವುದು. ಆಗ ನೀರಿನ ಮಳೆ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಅವರು ತಿಳಿಸಿದರು.
ಇದೇ ಜಾಗದಲ್ಲಿ ಮೇಲ್ಸೇತುವೆ ನಿರ್ಮಿಸುವ ಚಿಂತನೆ ನಡೆದಿತ್ತು. ಆದರೆ, ಅಷ್ಟು ಹಣ ಖರ್ಚು ಮಾಡಿ ಮೇಲ್ಸೇತುವೆ ನಿರ್ಮಾಣ ಸೂಕ್ತವಲ್ಲ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆ ಮತ್ತು ಬಿಜೆಪಿಯವರ ಆಡಳಿತದಲ್ಲಿ ಡಿಸಿಎಂ ಟೌನ್‌ಶಿಪ್ ಮತ್ತು ಶಿರಮಗೊಂಡನಹಳ್ಳಿ ಬಳಿಯ ನಿರ್ಮಿಸಿರುವ ಮೇಲ್ಸೇತುವೆಗಳಂತೆ ಇದೂ ಸಹ ಸಮಸ್ಯೆಗೆ ಈಡಾಗದಿರಲಿ ಎಂಬ ಉದ್ದೇಶದಿಂದ ಈ ಯೋಜನೆ ಕೈ ಬಿಡಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು
ವಿಜನ್- 2025 ಮುಖ್ಯಮಂತ್ರಿ ಕನಸು ದಾವಣಗೆರೆ: ಪ್ರತಿ ಯೋಜನೆಯ ಲಾಭ ಅರ್ಹರಿಗೆ ಸಿಗಬೇಕೆಂಬ ಉದ್ದೇಶದಿಂದ ರೂಪಿತಗೊಂಡಿರುವ ವಿಜನ್-2025 ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಕನಸಾಗಿದ್ದು, ಅದನ್ನ ಕಾರ್ಯರೂಪಕ್ಕೆ ತರಬೇಕೆಂಬ ಉದ್ದೇಶದಿಂದ ಡಾಕ್ಯುಮೆಂಟ್ ಸಿದ್ಧಪಡಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.
ಶನಿವಾರ ಎಂಬಿಎ ಕಾಲೇಜಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರ್ಯಾರಿಗೆ ಯಾವ ಸವಲತ್ತು ಬೇಕು ಎಂಬುದನ್ನು ಅವರಿಂದಲೇ ತಿಳಿದುಕೊಳ್ಳಲು ರೂಪಿಸಿರುವ ಈ ಕಾರ್ಯಕ್ರಮ ಯಶಸ್ವಿಯಾಗಬೇಕು. ರೈತರೂ ಸೇರಿದಂತೆ ಎಲ್ಲರಿಗೂ ಅಗತ್ಯ ಸವಲತ್ತು ಸಿಗಬೇಕು ಎಂದರು.
ನಮ್ಮ ಸರ್ಕಾರ ಅಧಿಕಾರ ಸ್ವೀಕರಿಸುತ್ತಲೇ ಅನ್ನಭಾಗ್ಯ ಯೋಜನೆ ಜಾರಿ ಮಾಡುವ ಮೂಲಕ ಹಸಿವು ಮುಕ್ತ ಕರ್ನಾಟಕಕ್ಕೆ ನಾಂದಿ ಹಾಡಿತು. ಕೇಂದ್ರ ಸರ್ಕಾರ ಬರೀ ಮಾತನಾಡುವುದರಲ್ಲೇ ಕಾಲ ಕಳೆಯುತ್ತಿದೆ. ನಾಲ್ಕು ವರ್ಷದಲ್ಲಿ ಮಾಡಿದ್ದು ಏನೂ ಇಲ್ಲ. ಈಗ ಬಂಗಾರ ಸೇರಿದಂತೆ ವಿವಿಧ ವಸ್ತುಗಳ ಮೇಲೆ ಜಿಎಸ್‌ಟಿ ಕಡಿಮೆ ಮಾಡಿದೆ. ಉದ್ಯೋಗ ಸೃಷ್ಟಿಯಲ್ಲೂ ಕೇಂದ್ರ ಸರ್ಕಾರ ವಿಫಲವಾಗಿದೆ. ನಮ್ಮ ಸರ್ಕಾರ ಅತಿ ಹೆಚ್ಚು ಉದ್ಯೋಗ ಸೃಷ್ಟಿಗೆ ಒತ್ತು ಕೊಡಲಿದೆ. ವಿಜನ್ 2025ರಲ್ಲಿ ಉದ್ಯೋಗ ಸೃಷ್ಟಿ ಸೇರಿದಂತೆ ಆರ್ಥಿಕ ಬೆಳವಣಿಗೆಗೆ ಹೆಚ್ಚು ಒತ್ತು ಕೊಡುವಂತ ವಿಷಯಗಳು ವರದಿಯಲ್ಲಿರುವಂತಾಗಲಿ ಎಂದು ಅವರು ಆಶಿಸಿದರು.
ಮುಖ್ಯಮಂತ್ರಿಗಳ ಉಪಕಾರ್ಯದರ್ಶಿ ಚಾರುಲತಾ ಮಾತನಾಡಿ, ನಾವು ಸಾರ್ವಜನಿಕರಿಂದ ಪಡೆದ ಮಾಹಿತಿಯನ್ನು ಒಂದು ಡಾಕ್ಯುಮೆಂಟ್ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ಇದು ಸರ್ಕಾರದ ಬಳಿ ಸದಾ ಇರಲಿದೆ. ಜೊತೆಗೆ ಸಾರ್ವಜನಿಕರಿಗಾಗಿ ಜಾಲತಾಣದಲ್ಲಿ ಲಭ್ಯವಾಗಲಿದೆ. ಮುಂದೆ ಯಾವುದೇ ಸರ್ಕಾರ ಬಂದರೂ 2025ರ ಯೋಜನೆಯ ಮಾಹಿತಿ ಸಿಗಲಿದೆ ಎಂದರು.
ಇಡೀ ರಾಜ್ಯಕ್ಕೆ ಬೇಕಾದ ವಿಷಯಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಗುವುದು. 13 ಅಂಶಗಳನ್ನು 5 ವಿಭಾಗಗಳಾಗಿ ಮಾಡಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಸ್ಥಳೀಯ ಆದ್ಯತೆಗಳನ್ನು ಜಿಲ್ಲಾವಾರು ಒಂದು ಪುಟ ನೀಡುವ ಸಾಧ್ಯತೆ ಇದೆ. ಈ ತಿಂಗಳ ಪೂರ್ತಿ ಮಾಹಿತಿ ಸಂಗ್ರಹ ನಡೆಯಲಿದೆ. ಡಿಸೆಂಬರ್ ಅಂತ್ಯದ ವೇಳೆ ಈ ದಸ್ತಾವೇಜು ಸಿದ್ಧವಾಗಲಿದೆ. ಸಾರ್ವಜನಿಕರು ಯಾರು ಬೇಕಿದ್ದರೂ ತಮ್ಮ ಸಲಹೆ, ಸೂಚನೆ ನೀಡಲು ಮುಕ್ತ ಅವಕಾಶ ಇದೆ ಎಂದು ಅವರು ಹೇಳಿದರು.
ಬೇರೆ ರಾಜ್ಯಗಳಲ್ಲೂ ಈ ಕಾರ್ಯಕ್ರಮ ನಡೆಯುತ್ತಿದ್ದು, ವಿಧಾನ ಸೌಧದಲ್ಲಿಯೇ ಎಲ್ಲವೂ ಸಿದ್ಧಗೊಳ್ಳುತ್ತಿದೆ. ಆದರೆ, ನಮ್ಮ ಸರ್ಕಾರ ನೇರ ಜನರಿಂದ ಅಭಿಪ್ರಾಯ ಪಡೆದು ಡಾಕ್ಯುಮೆಂಟ್ ಸಿದ್ಧಪಡಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿಯೇ ಜಿಲ್ಲಾಮಟ್ಟದಲ್ಲಿ ಗುಂಪು ಮಾಡಿ, ಚರ್ಚೆಗೆ
ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಅಶ್ವತಿ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಸುದ್ದಿಗೋಷ್ಠಿಯಲ್ಲಿದ್ದರು.