ಶ್ರೀಕೃಷ್ಣನ ಆದರ್ಶ ಗುಣ ಪಾಲಿಸಿ

Team Udayavani, Sep 3, 2018, 4:05 PM IST

ಹರಪನಹಳ್ಳಿ: ಭಗವದ್ಗೀತೆ ಅರಿತುಕೊಂಡವರು ಜೀವನ ಮೌಲ್ಯ ಮತ್ತು ಬದುಕಿನ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳತ್ತಾರೆ. ಭಗವದ್ಗೀತೆಯ ಸಾರವನ್ನು ಮಾತ್ರವೇ ಶ್ರೀಕೃಷ್ಣನು ಬೋಧಿಸದೆ ತಮ್ಮ ಜೀವನದಿಂದಲೂ ಮಾನವ ಅರಿತುಕೊಳ್ಳಬೇಕಾದ ಅಂಶಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದು ಚಿತ್ರದುರ್ಗ ಯಾದವ ಸಂಸ್ಥಾನದ ಪೀಠಾಧ್ಯಕ್ಷ ಕೃಷ್ಣ ಯಾದವಾನಂದ ಸ್ವಾಮೀಜಿ ಹೇಳಿದರು.

ತಾಲೂಕಿನ ಸತ್ತೂರು ಗೊಲ್ಲರಹಟ್ಟಿ ಗ್ರಾಮದ ಜುಂಜೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಶ್ರೀಕೃಷ್ಣ ಜಯಂತ್ಯುತ್ಸವ ಹಾಗೂ ಶ್ರಾವಣ ಸಂಜೆ ಕಾರ್ಯಕ್ರಮ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.

ಭಗವಾನ್‌ ವಿಷ್ಣುವಿನ ಎಂಟನೆಯ ಅವತಾರವಾಗಿರುವ ಶ್ರೀಕೃಷ್ಣನು, ದುಷ್ಟರನ್ನು ಶಿಕ್ಷಿಸುವುದಕ್ಕೆ ಮತ್ತು ಧರ್ಮದ
ಸ್ಥಾಪನೆಗಾಗಿ ಅವತಾರವೆತ್ತಿದ್ದಾನೆ. ತನ್ನ ಅವತಾರದ ಮಹತ್ವ ಮತ್ತು ಧರ್ಮ ಸಂಸ್ಥಾಪನೆಯ ಉದ್ದೇಶವನ್ನು ಕೃಷ್ಣನು ಅರ್ಜುನನಿಗೆ ಮಹಾಭಾರತ ಯುದ್ಧ ಸಮಯದಲ್ಲಿ ಬೋಧಿಸಿದ್ದಾರೆ. ಜೀವನದ ಪ್ರತಿ ಹಂತದಲ್ಲೂ ಕೃಷ್ಣ ನಮಗೆ ಆದರ್ಶ ಪುರುಷನಾಗಿ ಕಾಣುತ್ತಾನೆ. ಕೃಷ್ಣನ ಆದರ್ಶ ಗುಣಗಳನ್ನು ಪಾಲಿಸಿದರೆ ಪ್ರತಿ ಮನೆಯೂ ನಂದಗೋಕುಲವಾಗಲಿದೆ ಎಂದರು. ಭಾರತ ಕಾಶ್ಮೀರದಿಂದ ಹಿಡಿದು ಕನ್ಯಕುಮಾರಿವರೆಗೆ ಯದುವಂಶದವರು ಆಳ್ವಿಕೆ ನಡೆಸಿದ್ದಾರೆ. ಈಗಲೂ ಭಾರತದಲ್ಲಿ ಯಾದವರು ಬಹುಸಂಖ್ಯಾ ವರ್ಗವಾಗಿದೆ. ಹಿಂದುಳಿದ ಯಾದವ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣ, ಸಂಘಟನೆಯಲ್ಲಿ ಸದೃಢರಾಗಬೇಕು ಎಂದು ಹೇಳಿದರು.

 ಸಾಮಾಜಿಕ, ಅರ್ಥಿಕ, ರಾಜಕೀಯವಾಗಿ ಸಮುದಾಯದ ಮುಖ್ಯವಾಹಿನಿಯಲ್ಲಿರುವ ಸಮುದಾಯದವರ ಜತೆ ವಿಶ್ವಾಸದಿಂದ ಸಲಹೆ ಪಡೆದು ಸಮಾಜವನ್ನು ಬಲಿಷ್ಠವಾಗಿ ಸಂಘಟಿಸಿದಾಗ ಮಾತ್ರ ನಾವು ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳ ಶಕ್ತಿಯಾಗಿ ಹೊರಬರಬಹುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮೀಪುರ ಗ್ರಾಪಂ ಅಧ್ಯಕ್ಷ ಪಿ.ಟಿ. ಭರತ್‌ ಮಾತನಾಡಿ, ಮಹಾಭಾರತ ಹಾಗೂ ಭಗವದ್ಗೀತೆ ನೀಡುವ ಸಂದೇಶವನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ಧರ್ಮವನ್ನು ಉಳಿಸುವಲ್ಲಿ ಕೃಷ್ಣನ ಪಾತ್ರ ಮಹತ್ವದ್ದಾಗಿದೆ. ಅಧರ್ಮವನ್ನು ನಾಶಗೊಳಿಸಲು ಕೃಷ್ಣ ಅವತಾರ ಎತ್ತಿದರು. ಅಂಧಕಾರವನ್ನು ತೊಲಗಿಸಲು ಕೃಷ್ಣ ಮಧ್ಯರಾತ್ರಿ ಜನ್ಮ ತಾಳಿದ. ಅಷ್ಟಮಿ ದಿನ ಜನಿಸುವ ಮೂಲಕ 8 ಮದಗಳಿಂದ ಮಾನವ ದೂರವಿರಬೇಕು ಎಂಬ ಸಂದೇಶ ನೀಡಿದ್ದಾನೆ. ಕೃಷ್ಣನ ಜೀವನ ದರ್ಶನ ಮಾಡಿಕೊಂಡು ಎಲ್ಲರೂ ಸನ್ಮಾರ್ಗದಲ್ಲಿ ಸಾಗುವಂತಾಗಬೇಕು ಎಂದರು.

ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಪಿ.ಎಲ್‌. ಪೋಮ್ಯನಾಯ್ಕ ಮಾತನಾಡಿ, ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಎಲ್ಲ
ವಿದ್ಯಮಾನಗಳಿಗೆ, ರಾಜಕೀಯ ರಣತಂತ್ರ, ಚಾಣಾಕ್ಷ ನಡೆಗಳಿಗೆ ಕೃಷ್ಣನ ಜೀವನ ಚರಿತ್ರೆಯೇ ಮೂಲಾಧಾರ. ಜಗತ್ತಿನ ಎಲ್ಲ ಆಗುಹೋಗುಗಳಿಗೆ ಅವನೇ ಸೂತ್ರಧಾರ. ಮಾನವೀಯ ಮೌಲ್ಯಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ ಕೃಷ್ಣನ ಆದರ್ಶಗಳು ನಮಗೆ ಮಾರ್ಗದರ್ಶನ ನೀಡುತ್ತವೆ. ಶತ್ರುಗಳ ಸಂಹಾರಕ್ಕಾಗಿ ಅವತಾರ ತಾಳಿದ ಕೃಷ್ಣ ಶಿಷ್ಟರನ್ನು ರಕ್ಷಿಸಿದ. ಇಂದಿನ ಸಮಾಜದಲ್ಲಿ ದುಷ್ಟ ಶಕ್ತಿಗಳ ನಿವಾರಣೆಗಾಗಿ ಕೃಷ್ಣನಂತಹವರು ಬರಬೇಕಿದೆ ಎಂದು ವಿವರಿಸಿದರು.

ಉಪನ್ಯಾಸ ನೀಡಿದ ಎಚ್‌ಪಿಎಸ್‌ ಕಾಲೇಜ್‌  ಚಾರ್ಯರಾದ ಕೆ.ನೀಲಮ್ಮ ಮಾತನಾಡಿ, ಭಗವದ್ಗೀತೆ,  ಮಾಯಣಗಳಂತಹ ಧಾರ್ಮಿಕ ಗ್ರಂಥಗಳನ್ನು ಹೊರಗಿನ ಕಣ್ಣುಗಳಿಂದ ನೋಡಬಾರದು. ಅಂತರಂಗದ ಕಣ್ಣುಗಳಿಂದ ನೋಡಬೇಕು. ಯುವಕರು ಮೊಬೈಲ್‌ ಬಿಟ್ಟು ಶ್ರೀಕೃಷ್ಣನ ಅದರ್ಶ ಅಳವಡಿಸಿಕೊಳ್ಳಬೇಕು. ಪ್ರಕೃತಿ ನಾಶ ಮಾಡುತ್ತಿರುವುದರಿಂದ ಪ್ರಾಕೃತಿಕ ಅವಘಡಗಳು ಸಂಭವಿಸುತ್ತಿದೆ. ಅದ್ದರಿಂದ ಪ್ರತಿಯೊಬ್ಬರೂ ಪ್ರಕೃತಿಯನ್ನು
ರಕ್ಷಿಸಲು ಮುಂದಾಗಬೇಕು ಎಂದರು.

ಜಂಜೇಶ್ವರ ದೇವಸ್ಥಾನ ಪ್ರಧಾನ ಆರ್ಚಕ ಗುರುಪ್ರಸಾದ್‌ ಯಾದವ್‌ ಕಾರ್ಯಕ್ರಮ ಉದ್ಘಾಟಿಸಿದರು. ಲಕ್ಷ್ಮೀಪುರ ಗ್ರಾಪಂ ಉಪಾಧ್ಯಕ್ಷೆ ಪಾಟೀಲ್‌ ಜಯ್ಯಮ್ಮ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಟಿ.ಈ. ಉಮೇಶ್‌, ಗುತ್ತಿಗೆದಾರ ಎಸ್‌.ಎಚ್‌. ಉಮೇಶ್‌, ಯಾದವ ಸಮಾಜದ ಅಧ್ಯಕ್ಷ ಎಂ. ಶಿವಮೂರ್ತೆಪ್ಪ, ಉಪಾಧ್ಯಕ್ಷ ಎಂ.ಜಿ. ಹೇಮಂತ, ಪಾರಿಬಾಯಿ ಮತ್ತಿತರರು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ