ಡಿಜಿಟಲ್ ಮಾಧ್ಯಮದಿಂದ ಒಣಗುತ್ತಿದೆ ಕಾವ್ಯ ಕ್ಷೇತ್ರ

Team Udayavani, May 21, 2019, 12:20 PM IST

ದಾವಣಗೆರೆ: ರೋಟರಿ ಬಾಲಭವನದಲ್ಲಿ ಏಟ್ಸ್‌ ಮತ್ತು ನಾನು ಕವನ ಸಂಕಲನದ ಪುಸ್ತಕವನ್ನು ವಿಮರ್ಶಕ ಡಾ| ವಸಂತಕುಮಾರ್‌ ಪೆರ್ಲ ಬಿಡುಗಡೆ ಮಾಡಿದರು.

ದಾವಣಗೆರೆ: ಕಾವ್ಯವನ್ನು ಇಂದಿನ ಹೊಸ ತಲೆಮಾರಿಗೆ ಪರಿಚಯಿಸಲು ಚಳವಳಿಗಳು ಅಗತ್ಯ ಎಂದು ವಿಮರ್ಶಕ ಡಾ| ವಸಂತಕುಮಾರ್‌ ಪೆರ್ಲ ಅಭಿಪ್ರಾಯಪಟ್ಟರು.

ರೋಟರಿ ಬಾಲಭವನದಲ್ಲಿ ಸೋಮವಾರ ಪ್ರಕೃತಿ ಪ್ರಕಾಶನ ಮತ್ತು ಗೆಳೆಯರ ಬಳಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕವಿ ಪ್ರಕಾಶ್‌ ಕೊಡಗನೂರು ಅವರ ಏಟ್ಸ್‌ ಮತ್ತು ನಾನು ಕವನ ಸಂಕಲನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಚಳವಳಿಗಳು ಒಂದು ಹಂತದಲ್ಲಿ ಓದುವ ಮತ್ತು ಸಂಘಟಿಸುವ ಕೆಲಸ ಮಾಡುತ್ತವೆ. ಇಂದು ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಮುಂತಾದ ಸಾಮಾಜಿಕ ಜಾಲತಾಣಗಳ ಗ್ರೂಪ್‌ಗ್ಳಲ್ಲಿ ದಿನ ಒಂದಕ್ಕೆ ಸಾವಿರಾರು ಕವಿತೆಗಳು ಯುವ ಬರಹಗಾರರಿಂದ ರಚಿತವಾಗಿ ಹರಿದಾಡುತ್ತಿರುತ್ತವೆ. ಅಂತಹವರನ್ನು ಸಂಘಟಿಸುವ ಮೂಲಕ ಕಾವ್ಯ ಪರಂಪರೆ ಬಗ್ಗೆ ಪರಿಚಯಿಸಿಕೊಡಬೇಕು. ಆಗ ಮಾತ್ರ ಕಾವ್ಯ ಪರಂಪರೆಯ ಅಸ್ತಿತ್ವ, ಗಟ್ಟಿನೆಲೆ ಕಾಯ್ದುಕೊಳ್ಳಲು ಸಾಧ್ಯ ಎಂದರು.

ಪ್ರಸ್ತುತ‌ ದಿನಗಳಲ್ಲಿ ಪ್ರತಿಯೊಬ್ಬರು ಡಿಜಿಟಲ್ ಮಾಧ್ಯಮದ ಮೊರೆ ಹೋಗುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನವ ಮಾಧ್ಯಮದ ಪ್ರಭಾವದಿಂದ ಸಾಹಿತ್ಯದ ಕಾವ್ಯ ಕ್ಷೇತ್ರ ಒಣಗುತ್ತಿದೆ. ಇನ್ನು ಆಂಗ್ಲ ಭಾಷಾ ಮಾಧ್ಯಮದ ಪ್ರಭಾವದಿಂದ ಕನ್ನಡ ಭಾಷೆ, ಸಾಹಿತ್ಯ ಸೊರಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಏಟ್ಸ್‌ ಮತ್ತು ನಾನು ಕವನ ಸಂಕಲನದಲ್ಲಿ ಪ್ರೇಮ ಮತ್ತು ಕಾಮ ಮುಖ್ಯ ಕೇಂದ್ರಬಿಂದುಗಳಾಗಿವೆ. ಹೃದಯ, ಭಾವಕೋಶವನ್ನು ಪ್ರವೇಶ ಮಾಡುವ ಶಕ್ತಿ ಕಾವ್ಯಕ್ಕಿದೆ. ಪ್ರತಿಭೆ, ರೂಪ ಇರುವ ಕವಿತೆಯ ಗುಣ ಕಾಲ ಕಾಲಕ್ಕೆ ಬದಲಾಗುತ್ತಿರುತ್ತದೆ. ಕವಿತೆ ಎಂದಿಗೂ ನಿಂತ ನೀರಲ್ಲ. ಹಾಗಾಗಿ ಆಯಾ ಕಾಲಘಟ್ಟದ ವಿಶೇಷತೆ, ಮನೋಧರ್ಮವನ್ನು ಪ್ರತಿಪಾದಿಸುವ ಕೆಲಸ ಮಾಡುತ್ತಿರುತ್ತದೆ ಎಂದರು.

ವಿಮರ್ಶಕ ಸತೀಶ್‌ ಕುಲಕರ್ಣಿ ಮಾತನಾಡಿ, ಕಾವ್ಯಕ್ಕೆ ತನ್ನದೇ ಆದ ಭಾಷೆ ಇದೆ. ಮಾಧ್ಯಮ ಭಾಷೆಗೆ ಜನರ ಮನಸ್ಸಿನಲ್ಲಿ ಕುತೂಹಲ ಮೂಡಿಸುವ ಶಕ್ತಿ ಇದ್ದರೆ, ಕಾವ್ಯದ ಭಾಷೆ ಅದಕ್ಕಿಂತ ಭಿನ್ನವಾಗಿರುತ್ತದೆ ಎಂದು ಹೇಳಿದರು.

ಕೆ.ಎಸ್‌. ನರಸಿಂಹಸ್ವಾಮಿ, ಬೇಂದ್ರೆ ಇತರರು ಪ್ರೀತಿಯನ್ನು ಮೌಲ್ಯವಾಗಿ ನೋಡಿದಂತವರು. ಏಟ್ಸ್‌ ಮತ್ತು ನಾನು ಕವನ ಸಂಕಲದನಲ್ಲಿ 32ಕ್ಕೂ ಹೆಚ್ಚು ಕವಿತೆಗಳು ಪ್ರೀತಿ, ಪ್ರೇಮದ ವಿಚಾರಗಳನ್ನು ಒಳಗೊಂಡಿವೆ. ಇಂತಹ ಕಾವ್ಯ ಸಂಕಲನ ಹೊರತಂದಿರುವ ಪ್ರಕಾಶ್‌ ಕೊಡಗನೂರು ಅವರು ಮುಂದಿನ ದಿನಗಳಲ್ಲಿ ನೇರ ಅನುಭವ, ಅನಿಸಿಕೆಗಳನ್ನು ಇನ್ನಷ್ಟು ಕಲಾತ್ಮಕವಾಗಿ ಕಾವ್ಯದ ರೂಪದಲ್ಲಿ ಹೊರತರುವ ಕೆಲಸ ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಬಿ. ಸುರೇಂದ್ರನಾಯ್ಕ ಮಾತನಾಡಿ, ಕಾವ್ಯ ಪರಂಪರೆಗೆ ವಿಶಿಷ್ಟ ಮಾನ್ಯತೆ ಇದೆ. ಬರವಣಿಗೆ ಸಶಕ್ತವಾಗಿದ್ದರೆ ಕಾವ್ಯಕ್ಕೆ ಸಾವೇ ಇಲ್ಲ. ಮಾಧ್ಯಮ ನೆಪ ಮಾತ್ರ. ಪ್ರಚಾರ ಸಿಕ್ಕರೂ, ಸಿಗದಿದ್ದರೂ ಓದು, ಬರವಣಿಗೆ ಬಿಡದೇ ಸಾಹಿತ್ಯ ಕೃಷಿ ಮಾಡಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಮಾತನಾಡಿ, 20ನೇ ಶತಮಾನದ ಸುಪ್ರಸಿದ್ಧ ಇಂಗ್ಲಿಷ್‌ ಕವಿಯಾದ ಏಟ್ಸ್‌ ಐರ್ಲೆಂಡ್‌ನ‌ವರಾಗಿದ್ದು, ಅವರ ಬಹುತೇಕ ಕಾವ್ಯಗಳು ಪ್ರೇಮ ಕವಿತೆಗಳಾಗಿವೆ. ಇಂದಿನ ನಿಜವಾದ ಕವಿಗಳು ತಮ್ಮ ಆಂತರಿಕ ನೋವುಗಳನ್ನು ಕಲಾತ್ಮಕವಾಗಿ ಕಾವ್ಯಗಳ ಮೂಲಕ ಪರಿಚಯ ಮಾಡಿಕೊಳ್ಳಬೇಕು.ಆಗ ಮಾತ್ರ ಉತ್ತಮ ಕವಿಗಳಾಗಿ ಹೊರಹೊಮ್ಮಲು ಸಾಧ್ಯ ಎಂದರು.

ಪ್ರಗತಿಪರ ಸಂಘಟಕ ಎನ್‌.ಪಿ. ನಾಗರಾಜ್‌ ಉಪಸ್ಥಿತರಿದ್ದರು. ಕೆ.ಎನ್‌. ಸ್ವಾಮಿ ನಿರೂಪಿಸಿದರು. ಯು. ಅರುಣಾದೇವಿ ಆಯ್ದ ಕವಿತೆಗಳ ಗೀತಗಾಯನ ನಡೆಸಿಕೊಟ್ಟರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ