ನಿಗದಿತ ಸಮಯದಲ್ಲಿ ಕೆಲಸ ಮುಗಿಸಿ

•ಜಿಲ್ಲಾ ಉಸ್ತುವಾರಿ ಸಚಿವರ ಪ್ರಗತಿ ಪರಿಶೀಲನಾ ಸಭೆ•ಸರ್ಕಾರಿ ಯೋಜನೆಗಳು ಅರ್ಹರಿಗೆ ತಲುಪಲಿ

Team Udayavani, Sep 20, 2019, 1:43 PM IST

ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ದಾವಣಗೆರೆ: ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಕೆಲಸ ಕುಂಠಿತವಾಗುತ್ತಿವೆ ಎಂದು ಸ್ವತಃ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸಚಿವ ಕೆ.ಎಸ್‌. ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳೇ ತಿಳಿಸಿರುವಂತೆ ನಿಗದಿತ ಸಮಯದಲ್ಲಿ ಕೆಲಸ ಮುಗಿಸದೇ ಇದ್ದಲ್ಲಿ ನೀವೇ ಅನುಭವಿಸುತ್ತೀರಿ… ಎಂದು ಎಚ್ಚರಿಸಿದರು.

ಸರ್ಕಾರದ ಸೌಲಭ್ಯಗಳು ಖಂಡಿತವಾಗಿಯೂ ಅರ್ಹರು, ಬಡವರಿಗೆ ದೊರೆಯಲೇಬೇಕು. ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ, ಅಧಿಕಾರಿಗಳು ನಿಗದಿತ ಸಮಯದಲ್ಲಿ ಗುರಿ ಮುಟ್ಟಲೇಬೇಕು. ಹೊಸದಾಗಿ ಬಂದಿರುವ ಅಧಿಕಾರಿಗಳಿಗೆ ಮೊದಲ ಸಭೆ ಎಂದು ವಿನಾಯತಿ ನೀಡಲಾಗಿದೆ. ಮುಂದೆ ಅ.11 ರಂದು ನಡೆಯುವ ಸಭೆಯ ವೇಳೆಗೆ ಅಧಿಕಾರಿಗಳೇ ತಿಳಿಸಿರುವಂತೆ ಎಲ್ಲಾ ಕೆಲಸ ಮುಗಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ 24 ಬಹು ಗ್ರಾಮ ಕುಡಿಯುವ ನೀರು ಯೋಜನೆ ಮುಗಿದಿವೆ. 6 ಪ್ರಗತಿ, 4 ಡಿಪಿಆರ್‌ ಹಂತದಲ್ಲಿವೆ. 1,134 ಜನವಸತಿ ಪ್ರದೇಶಗಳಲ್ಲಿ 650 ಜನವಸತಿ ಪ್ರದೇಶಗಳಿಗೆ ನೀರು ಒದಗಿಸಬೇಕಾಗಿದೆ. ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ 406, ಎಸ್‌ಡಿಪಿ 56 ಕಾಮಗಾರಿಯಡಿ 396 ಮುಗಿದಿವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾರ್ಯಪಾಲಕ ಇಂಜಿನಿಯರ್‌ ಎಚ್.ಎನ್‌. ರಾಜು ತಿಳಿಸಿದರು.

ಈ ಸಾಲಿನಿಂದ ಗ್ರಾಮೀಣ ಕುಡಿಯುವ ನೀರು ಯೋಜನೆ(ಎನ್‌ಆರ್‌ಡಬ್ಲ್ಯೂಪಿ) ಮುಗಿಯಲಿದೆ. ಪ್ರಧಾನ ಮಂತ್ರಿ ಜಲಜೀವನ ಮಿಷನ್‌… ಪ್ರಾರಂಭವಾಗಲಿದೆ. ಹಾಗಾಗಿ ಎಲ್ಲಾ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಆಯುಕ್ತ ಆರ್‌. ವಿಶಾಲ್ ಸೂಚಿಸಿದರು. ಮುಂದಿನ ಅ.11ರ ಸಭೆ ಒಳಗೆ ಕೆಲಸ ಮುಗಿಸಬೇಕು ಎಂದು ಸಚಿವ ಈಶ್ವರಪ್ಪ ಸಹ ಸೂಚಿಸಿದರು.

ಜಗಳೂರು ತಾಲೂಕಿನ ಸಂತೇಮುದ್ದಾಪುರ+109 ಗ್ರಾಮಗಳ ಬಹು ಗ್ರಾಮ ಕುಡಿಯುವ ನೀರು ಯೋಜನೆ ಕಳೆದ 8 ವರ್ಷದಿಂದ ನನೆಗುದಿಗೆ ಬಿದ್ದಿದೆ. ಕೂಡಲೇ ಅನುಮೋದನೆ ನೀಡುವಂತಾಗಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಒತ್ತಾಯಿಸಿದರು. ಚಳ್ಳಕೆರೆ ಸಮೀಪದ ಇಸ್ರೋದವರು ನೀರು ಕೇಳುತ್ತಿದ್ದಾರೆ. ಪಾವಗಡ ಯೋಜನೆಯಡಿ ಜಗಳೂರು ತಾಲೂಕಿನ ಒಂದು ಹೋಬಳಿಗೆ ನೀರು ಕೊಡಲಾಗುವುದು ಎಂದು ವಿಶಾಲ್ ಮಾಹಿತಿ ನೀಡಿದರು.

ಬಹು ಗ್ರಾಮ ಯೋಜನೆಗೆ 6 ಸಾವಿರ ಕೋಟಿ ಮೀಸಲಿಡಲಾಗಿದೆ. ನದಿ ನೀರು ಅವಲಂಬಿತ ಯೋಜನೆ ಸಂಪೂರ್ಣ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ವಿಜಯಪುರ, ಮಂಡ್ಯ ಜಿಲ್ಲೆಯಲ್ಲಿ ಜಲಧಾರಾ ಯೋಜನೆ ಕೈಗೆತ್ತಿಗೊಳ್ಳಲಾಗುತ್ತಿದೆ ಎಂದು ವಿಶಾಲ್ ತಿಳಿಸಿದರು. ನಮ್ಮಲ್ಲಿ ಬಹು ಗ್ರಾಮ ಯೋಜನೆ ಬಹಳ ನಿಧಾನಗತಿಯಲ್ಲಿ ನಡೆಯುತ್ತಿದೆ. ಜಲಧಾರಾ ಯೋಜನೆ ಬರಲು ಬಹಳ ತಡವಾಗುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಯಿಂದ ನೀರು ಹರಿಸುವ ಯೋಜನೆ ಪ್ರಾರಂಭಿಸಬೇಕು ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸೂಚಿಸಿದರು.

ರಾಜೀವಗಾಂಧಿ ಸಬ್‌ ಮಿಷನ್‌ ಯೋಜನೆಯಡಿ ಮಾಯಕೊಂಡ ಇತರೆ 14 ಗ್ರಾಮಗಳಿಗೆ ನೀರು ಹೋಗಬೇಕು. ಆದರೆ, ಮೋಟಾರು ಕೆಟ್ಟಿರುವ ಕಾರಣಕ್ಕೆ 2 ಗ್ರಾಮಗಳಿಗೂ ನೀರು ಹರಿಯುತ್ತಿಲ್ಲ ಎಂದು ಶಾಸಕ ರವೀಂದ್ರನಾಥ್‌ ದೂರಿದರು. ಸಿಇಒ ಜೊತೆ ಚರ್ಚಿಸಿ, ಯೋಜನೆ ಸಿದ್ಧಪಡಿಸಲಾಗುವುದು ಎಂದು ಕಾರ್ಯಪಾಲಕ ಇಂಜಿನಿಯರ್‌ ಹೇಳಿದಾಗ, ಸಿಇಒ ಏನು ವಿದೇಶದಲ್ಲಿ ಇದ್ದಾರಾ? ಕೂಡಲೇ ಚರ್ಚಿಸಿ, ವರದಿ ಸಿದ್ಧಪಡಿಸುವ ಜೊತೆಗೆ ನೀರು ಕೊಡುವ ವ್ಯವಸ್ಥೆ ಮಾಡಿ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಸೂಚಿಸಿದರು.

ಜಿಲ್ಲೆಯಲ್ಲಿ ಮಂಜೂರಾದ 793 ಶುದ್ಧ ಕುಡಿಯುವ ನೀರು ಘಟಕದಲ್ಲಿ 775 ಘಟಕ ಪ್ರಾರಂಭಿಸಲಾಗಿದ್ದು, ಅವುಗಳಲ್ಲಿ 760 ಕಾರ್ಯನಿರ್ವಹಿಸುತ್ತಿವೆ. 15 ಘಟಕಗಳಲ್ಲಿ ಕೆಲವಾರು ತಾಂತ್ರಿಕ ಸಮಸ್ಯೆ ಇವೆ ಎಂದು ಕೆಆರ್‌ಐಡಿಎಲ್ ಇಂಜಿನಿಯರ್‌ ತಿಳಿಸಿದರು. ಅ.11ರ ಸಭೆಗೆ ಮುಂಚೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಘಟಕಗಳ ಭಾವಚಿತ್ರ, ಜನಪ್ರತಿನಿಧಿಗಳ ಭೇಟಿ ಒಳಗೊಂಡ ಸಮಗ್ರ ವರದಿ ಸಲ್ಲಿಸುವಂತೆ ಸಚಿವ ಈಶ್ವರಪ್ಪ ಸೂಚಿಸಿದರು.

ಗ್ರಾಮೀಣ ಭಾಗದ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಇದೇ ಮೊದಲ ಬಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಅನುದಾನ ನೀಡಲಾಗುತ್ತಿದೆ. ಎಷ್ಟು ಬೇಕೋ ಅಷ್ಟು ಶೌಚಾಲಯ ನಿರ್ಮಾಣ ಪ್ರಾರಂಭಿಸಿ, 45 ದಿನಗಳಲ್ಲಿ ಮುಗಿಸಿ, ನಗರ ಪ್ರದೇಶಗಳಲ್ಲಿನ ಶೌಚಾಲಯಗಳಿಗೆ ಶಾಸಕರಿಗೆ ನೀಡಿರುವ 25 ಕೋಟಿ ಅನುದಾನದಲ್ಲಿ ಪಡೆದುಕೊಳ್ಳಿ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಸೂಚಿಸಿದರು.

ದಾವಣಗೆರೆ ತಾಲೂಕಿನ 10, ಜಗಳೂರಿನ 52, ಚನ್ನಗಿರಿ 1 ಗ್ರಾಮಕ್ಕೆ ಈಗಲೂ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. 40 ಗ್ರಾಮಗಳಲ್ಲಿ 60 ಖಾಸಗಿಯವರ ಕೊಳವೆಬಾವಿ ಬಾಡಿಗೆ ಪಡೆದು ನೀರು ಕೊಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ತಿಳಿಸಿದರು.

ಗ್ರಾಮ ಪಂಚಾಯತ್‌ಗಳಲ್ಲಿ 14ನೇ ಹಣಕಾಸು ಯೋಜನೆಯ ಅನುದಾನವನ್ನು ಬೇರೆ ಬೇರೆ ಕೆಲಸಕ್ಕೆ ಹಂಚಿಕೆ ಮಾಡಿಕೊಳ್ಳಲಾಗುತ್ತಿದೆ. ಕುಡಿಯುವ ನೀರು ಸಂಬಂಧಿತ ಕೆಲಸಗಳಗೆ ಮಾತ್ರವೇ ಅನುದಾನ ಬಳಕೆ ಮಾಡಬೇಕು ಎಂದು ವಿಶಾಲ್ ಸೂಚಿಸಿದರು. ಈ ಹಿಂದೆ ಅದೇ ರೀತಿ ಇತ್ತು. ಈಗ ಕುಡಿಯುವ ನೀರು ಸಂಬಂಧಿತ ಕೆಲಸಕ್ಕೆ ಮಾತ್ರ ಬಳಕೆ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಾಯಕೊಂಡ ಶಾಸಕ ಪ್ರೊ| ಎನ್‌. ಲಿಂಗಣ್ಣ, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಶೈಲಜಾ ಬಸವರಾಜ್‌, ಉಪಾಧ್ಯಕ್ಷ ಸುರೇಂದ್ರನಾಯ್ಕ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ವಾಗೀಶಸ್ವಾಮಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ, ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪದ್ಮಾ ಬಸವಂತಪ್ಪ, ಭುವನಹಳ್ಳಿ ನಾಗರಾಜ್‌ ಇತರರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ