ತಾನೇ ಉತ್ಪಾದಿಸುವ ತಂಬಾಕಿಗೆ ಮನುಷ್ಯ ಬಲಿ

ಡಾ| ರಾಜೇಶ್ವರಿ ಅಣ್ಣಿಗೇರಿ ವಿಷಾದಮಾಧ್ಯಮಗಳು ಮಾಡುತ್ತಿವೆ ತಂಬಾಕು ಬಳಕೆ ಪ್ರೇರೇಪಣೆ

Team Udayavani, Dec 13, 2019, 11:48 AM IST

ದಾವಣಗೆರೆ: ಮನುಷ್ಯ ಉತ್ಪಾದಿಸುವ ತಂಬಾಕು ಇಂದು ಆತನನ್ನೇ ಬಲಿ ಪಡೆಯುತ್ತಿದೆ. ತಂಬಾಕನ್ನು ವಿವಿಧ ರೀತಿಯಲ್ಲಿ ಬಳಸಿಕೊಳ್ಳುವುದರ ಮೂಲಕ ಮನುಷ್ಯ ಅದರ ದಾಸನಾಗುತ್ತಿದ್ದಾನೆ ಎಂದು ಓರಲ್‌ ಮೆಡಿಸಿನ್‌ ಕಾಲೇಜ್‌ ಆಫ್‌ ಡೆಂಟಲ್‌ ಸೈನ್ಸ್‌ನ ಓರಲ್‌ ಮೆಡಿಸಿನ್‌ ವಿಭಾಗದ ಮುಖ್ಯಸ್ಥೆ ಡಾ| ರಾಜೇಶ್ವರಿ ಅಣ್ಣಿಗೇರಿ ವಿಷಾದಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪೊಲೀಸ್‌ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯುಕ್ತಾಶ್ರಯದಲ್ಲಿ ಗುರುವಾರ ಚೇತನಾ ಹೊಟೇಲ್‌ ಸಭಾ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕೋಟಾ³ ಕಾನೂನು ಅನುಷ್ಠಾನ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ, ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದ ಅವರು, ಪ್ರಸ್ತುತ ದಿನಗಳಲ್ಲಿ ಯುವಜನಾಂಗ ತಂಬಾಕಿಗೆ ದಾಸಾರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪೂರ್ವಜರು ಆರಂಭಿಸಿದ ತಂಬಾಕು ಬೆಳೆ ಇಂದು ನಮ್ಮೆಲ್ಲರ ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನವಾಗಿ ಪರಿಣಮಿಸುತ್ತಿದೆ ಎಂದರು.

ತಂಬಾಕು ಉತ್ಪನ್ನವು 17ನೇ ಶತಮಾನದಲ್ಲಿ ಭಾರತಕ್ಕೆ ಪರಿಚಯವಾಯಿತು. ಅಂದಿನಿಂದಲೂ ಸಮಾಜದ ಎಲ್ಲಾ ವರ್ಗದ ಜನ ತಂಬಾಕು ಬಳಸುತ್ತಿದ್ದಾರೆ. ತಂಬಾಕಿನಲ್ಲಿ ನಿಕೋಟಿನ್‌ ಎಂಬ ರಾಸಾಯನಿಕ ಅಂಶವಿದ್ದು, ಇದು ದೇಹದೊಳಗೆ ಸೇರಿಕೊಂಡು ನಶೆ ಉಂಟು ಮಾಡಿ ತಾತ್ಕಾಲಿಕ ಖುಷಿ ನೀಡುವ ಕಾರಣದಿಂದಾಗಿ ತಂಬಾಕು ಉತ್ಪನ್ನಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ತಂಬಾಕಿನಿಂದ ಗುಟ್ಕಾ, ಸಿಗರೇಟ್‌ ಹಾಗೂ ಇತರೆ ಮಾದಕ ದ್ರವ್ಯಗಳನ್ನು ತಯಾರಿಸಲಾಗುತ್ತದೆ. ಆರಂಭದಲ್ಲಿ ಜನರು ತಮ್ಮ ಜೀವನದ ಒತ್ತಡಗಳಿಂದ ಮುಕ್ತಿ ಹೊಂದಲು ಇಂತಹ ಉತ್ಪನ್ನಗಳ ಸೇವನೆಯನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಆದರೆ ಕ್ರಮೇಣ ತಂಬಾಕಿನ ನಶೆ ರೂಢಿಯಾಗಿ ಆ ಉತ್ಪನ್ನವಿಲ್ಲದೇ ತಾವು ಬದುಕಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ದುಶ್ಚಟಕ್ಕೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ಮಾಧ್ಯಮಗಳು ತಂಬಾಕು ಬಳಕೆಯನ್ನು ಪ್ರೇರೇಪಿಸುವಂತಹ ಕೆಲಸ ಮಾಡುತ್ತಿವೆ. ಮಾಧ್ಯಮಗಳಲ್ಲಿ ಬಿತ್ತರಿಸುವ ಜಾಹೀರಾತುಗಳು, ಚಲನಚಿತ್ರಗಳಲ್ಲಿ ಧೂಮಪಾನ ಮತ್ತು ಮದ್ಯಪಾನ ಯುವಜನರಲ್ಲಿ ತಂಬಾಕು ಉತ್ಪನ್ನಗಳ ಬಳಕೆಗೆ ಆಸಕ್ತಿ ಮೂಡಿಸುತ್ತಿವೆ. ಗುಟ್ಕಾ ಮನಷ್ಯರ ಮನಸ್ಸಿನ ಮೇಲೆಯೇ ಹಿಡಿತ ಸಾ ಧಿಸುವ ಹಂತಕ್ಕೆ ಬಂದಿದೆ.

ಒಂದು ಗುಟ್ಕಾ ಪ್ಯಾಕೆಟ್‌ನಲ್ಲಿ ಸುಮಾರು ಮೂರು ಸಾವಿರ ರಾಸಾಯನಿಕಗಳಿರುತ್ತವೆ. ಇವು ದೇಹದಲ್ಲಿ ಸೇರಿಕೊಂಡು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಗುಟ್ಕಾ ಹಾಗೂ ಸಿಗರೇಟ್‌ ಸೇವನೆಯಿಂದ ಕೇವಲ ಆ ವ್ಯಕ್ತಿಗೆ ಮಾತ್ರವಲ್ಲದೇ ಅವನ ಸುತ್ತಮುತ್ತ ಇರುವ ವ್ಯಕ್ತಿಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಅವರು ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ತಂಬಾಕು ಉತ್ಪನ್ನಗಳ ಬಳಕೆಯಿಂದಾಗಿ ಅನೇಕ ಮಂದಿ ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹವರಿಗೆ ತಂಬಾಕು ಬಳಕೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಕಾರ್ಯವಾಗಬೇಕು ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸೋಣ ಎಂದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ನಾವು ತಂಬಾಕು ನಿರ್ಮೂಲನೆ ಬಗ್ಗೆ ಮಾತನಾಡಿದರೆ ಸಾಲದು. ಅದಕ್ಕಾಗಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಉತ್ಸಾಹ ಮತ್ತು ಕಾಳಜಿ ವಹಿಸಿ ಕೆಲಸ ಮಾಡಬೇಕು.

ಶಾಲಾ, ಕಾಲೇಜು ವಲಯಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳಲ್ಲಿ ತಂಬಾಕಿನ ದುಷ್ಪರಿಣಾಮದ ಬಗ್ಗೆ ಪೋಸ್ಟರ್‌ ಅಳವಡಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ, ಅಳವಡಿಸದೇ ಇರುವರರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಬೇಕು. ಡೆಂಟಲ್‌ ಕಾಲೇಜು ರಸ್ತೆಯುದ್ದಕ್ಕೂ ಇರುವ ಅಂಗಡಿಗಳಲ್ಲಿ ತಂಬಾಕು ದುಷ್ಪರಿಣಾಮ ತೋರುವ ಪೋಸ್ಟರ್‌ ಇಲ್ಲ. ಈ ನಿಟ್ಟಿನಲ್ಲಿ ಕೋಟಾ³ ಕಾಯ್ದೆಯಡಿ ಡಿ.31 ರೊಳಗೆ ಕನಿಷ್ಠ 20 ಕೇಸ್‌ ದಾಖಲಿಸುವಂತೆ ಸೂಚಿಸಿದರು.

ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕ ಮಹಾಂತೇಶ ಉಳ್ಳಾಗಡ್ಡಿ ಕೋಟ್ಪಾ ಕಾಯ್ದೆಯ ಕಲಂ 4, 5, 6 ಮತ್ತು 7ರ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಘವೇಂದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಎಚ್‌.ವಿಜಯ್‌ ಕುಮಾರ್‌, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಗಂಗಾಧರ್‌, ತಾಲೂಕುಗಳ ತಹಶೀಲ್ದಾರರು, ತಾಲ್ಲೂಕು ಆರೋಗ್ಯ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾ ಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳು, ವೈದ್ಯರು ಕಾರ್ಯಕ್ರಮದಲ್ಲಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ