ಮಂಜು ಕವಿದ ವಾತಾವರಣ; ಮಂಗಳೂರಿನತ್ತ ವಿಮಾನಯಾನ
Team Udayavani, Apr 4, 2021, 7:02 PM IST
ಹುಬ್ಬಳ್ಳಿ: ಶನಿವಾರ ಬೆಳಗ್ಗೆ 7:20 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಆಗಮಿಸಿದ ಇಂಡಿಗೋ ವಿಮಾನ, ದಟ್ಟ ಮಂಜು ಹಾಗೂ ಮೋಡಕವಿದ ವಾತಾವರಣ ಹಿನ್ನೆಲೆಯಲ್ಲಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗದೆ, ಕೆಲ ಕಾಲ ಆಕಾಶದಲ್ಲೇ ಸುತ್ತಾಡಿ ನಂತರ ಮಂಗಳೂರಿಗೆ ಪ್ರಯಾಣ ಬೆಳೆಸಿತು.
ಬೆಂಗಳೂರಿನಿಂದ ಹುಬ್ಬಳ್ಳಿಗೆ ವಿಮಾನ ಶನಿವಾರ ಬೆಳಗ್ಗೆ ಸಮಯಕ್ಕೆ ಸರಿಯಾಗಿ ಆಗಮಿಸಿ ತಾದರೂ, ಮಂಜು ಕವಿದ ವಾತಾವರಣ ಹಾಗೂ ಮೋಡ ಇದ್ದಿದ್ದರಿಂದ ಇಳಿಯಲು ಸಾಧ್ಯವಾಗಲಿಲ್ಲ. ಸುಮಾರು 25 ನಿಮಿಷಗಳ ವರೆಗೆ ಆಕಾಶದಲ್ಲೇ ಸುತ್ತಾಡಿತಾದರೂ ಎಟಿಸಿಯಿಂದ ಲ್ಯಾಂಡಿಂಗ್ ಸಿಗ್ನಲ್ ಸಿಗಲಿಲ್ಲ. ಜತೆಗೆ ಪೈಲಟ್‌ಗೆ ರನ್ ವೇ ಕಾಣಿಸದ ಪರಿಣಾಮ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ವಿಮಾನ ಮಂಗಳೂರಿನತ್ತ ಪ್ರಯಾಣ ಬೆಳೆಸಿತು.
ಸುಮಾರು ಎರಡು ತಾಸು ಕಳೆದ ನಂತರ ಮತ್ತೆ ಹುಬ್ಬಳ್ಳಿಗೆ ಆಗಮಿಸಿದ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ವಿಮಾನದಲ್ಲಿ 63 ಜನ ಪ್ರಯಾಣಿಕರು ಇದ್ದರು. ಸುಮಾರು ಎರಡೂವರೆ ತಾಸು ವಿಳಂಬವಾಗಿ ವಿಮಾನ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಸುಮಾರು 53 ಜನ ಪ್ರಯಾಣಿಕರು ಹುಬ್ಬಳ್ಳಿಯಿಂದ ತೆರಳಿದರು ಎಂದು ಮೂಲಗಳು ತಿಳಿಸಿವೆ. ಶನಿವಾರ ಬೆಳಗ್ಗೆ 8 ಗಂಟೆಗೆ ಚೆನ್ನೈನಿಂದ ಹುಬ್ಬಳ್ಳಿಗೆ ಆಗಮಿಸಿದ ಇಂಡಿಗೋ ಕಂಪೆನಿಯ ಮತ್ತೂಂದು ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿ ನಂತರ ಕೊಚ್ಚಿಗೆ ತೆರಳಿತು.