ನಾಯಕತ್ವ ಕೊರತೆಯಿಂದ ಸೊರಗಿತೆ ಕಾಂಗ್ರೆಸ್‌?

Team Udayavani, Nov 15, 2019, 10:58 AM IST

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನಿಂದ ಗೆದ್ದ ಕಾಂಗ್ರೆಸ್‌ ಶಾಸಕಿ ಇದ್ದರೂ, ಪಟ್ಟಣ ಪಂಚಾಯತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಕಳೆದ ಬಾರಿಗಿಂತಲೂ ಕಡಿಮೆ ಸ್ಥಾನ ಗಳಿಸಿರುವುದಕ್ಕೆ ಸ್ಥಳೀಯ ಸಮರ್ಥ ನಾಯಕತ್ವದ ಕೊರತೆಯೇ ಕಾರಣವಾಯಿತೆ?

ರಾಜಕೀಯ ಮೂಲಗಳು ಹೌದು ಎನ್ನುತ್ತಿವೆ. ಕುಂದಗೋಳ ಪಪಂಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದುಕೊಂಡಿದ್ದು, ಕಾಂಗ್ರೆಸ್‌ ಶಾಸಕರಿದ್ದರೂ ಪಕ್ಷ ಅಲ್ಲಿ ಹೆಚ್ಚಿನ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. 19 ಸದಸ್ಯ ಬಲದ ಪಪಂದಲ್ಲಿ ಈ ಬಾರಿ ಬಿಜೆಪಿ 12 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್‌ ಕೇವಲ 5 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದ್ದು, ಜೆಡಿಎಸ್‌ ಶೂನ್ಯ ಸಾಧನೆ ತೋರಿದೆ. ಪಕ್ಷೇತರರು ಎರಡು ಕಡೆ ಗೆಲುವು ಕಂಡಿದ್ದಾರೆ.

ಹಿಂದಿನ ಅವಧಿಯಲ್ಲಿ ಬಿಜೆಪಿ, ಕಾಂಗ್ರೆಸ್‌ ತಲಾ ಆರು ಸ್ಥಾನ ಗಳಿಸಿದ್ದರೆ, ಜೆಡಿಎಸ್‌ ಮೂರು ಸ್ಥಾನ ಗಳಿಸಿತ್ತು. ಈ ಬಾರಿ ಬಿಜೆಪಿ ತನ್ನ ಬಲ ದುಪ್ಪಟ್ಟು ಮಾಡಿಕೊಂಡಿದ್ದರೆ, ಕಾಂಗ್ರೆಸ್‌ ಕಳೆದ ಸಲಕ್ಕಿಂತ ಒಂದು ಸ್ಥಾನ ಕುಸಿತ ಕಂಡಿದೆ. ಜೆಡಿಎಸ್‌ ಶೂನ್ಯಕ್ಕೆ ತಲುಪಿದೆ.

ನಾಯಕತ್ವ ಕೊರತೆ ಕಾರಣವೇ?: ಮಾಜಿ ಸಚಿವ ಸಿ.ಎಸ್‌. ಶಿವಳ್ಳಿ ಅವರ ಅಕಾಲಿಕ ನಿಧನದಿಂದಾಗಿ ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕತ್ವ ಕೊರತೆ ಎದುರಿಸುತ್ತಿದೆಯೇ? ಪಪಂ ಚುನಾವಣೆ ಫ‌ಲಿತಾಂಶ ಗಮನಿಸಿದರೆ ಅಂತಹ ಶಂಕೆ ವ್ಯಕ್ತವಾಗುತ್ತಿದೆ. ಆರು ತಿಂಗಳ ಹಿಂದೆಯಷ್ಟೇ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ರಾಜ್ಯದ ಗಮನ ಸೆಳೆದಿತ್ತು. ಅಂದಿನ ಸಮ್ಮಿಶ್ರ ಸರಕಾರದ ಪಾಲುದಾರ ಕಾಂಗ್ರೆಸ್‌-ಜೆಡಿಎಸ್‌ ನಾಯಕರ ದಂಡು, ವಿಪಕ್ಷ ಬಿಜೆಪಿ ನಾಯಕರು ಮುಗಿಬಿದ್ದು ಪ್ರಚಾರ ಮಾಡಿದ್ದರು. ಗೆಲುವಿಗಾಗಿ ತೀವ್ರ ಜಿದ್ದಾಜಿದ್ದಿ ನಡೆಸಿದ್ದರು.

ಕ್ಷೇತ್ರ ಪ್ರತಿನಿಧಿಸುತ್ತಿದ್ದ ಸಿ.ಎಸ್‌. ಶಿವಳ್ಳಿ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಕಾಂಗ್ರೆಸ್‌ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಅವರನ್ನು ಅಭ್ಯರ್ಥಿಯಾಗಿಸಿದ್ದರೆ, ಬಿಜೆಪಿ ಮಾಜಿ ಶಾಸಕ, ಬಿ.ಎಸ್‌. ಯಡಿಯೂರಪ್ಪ ಅವರ ಬಂಧು ಎಸ್‌.ಐ. ಚಿಕ್ಕನಗೌಡ್ರ ಅವರನ್ನು ಕಣಕ್ಕಿಳಿಸಿತ್ತು. ಸಮ್ಮಿಶ್ರ ಸರಕಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಂದಿನ ಸಚಿವ ಡಿ.ಕೆ. ಶಿವಕುಮಾರ ಅವರ ವಿಶೇಷ ಶ್ರಮ ಹಾಗೂ ಅನುಕಂಪದಿಂದಾಗಿ ಕಾಂಗ್ರೆಸ್‌ ಪ್ರಯಾಸದ ಗೆಲುವು ಸಾಧಿಸಿತ್ತು. ಕುಸುಮಾವತಿ ಶಿವಳ್ಳಿ ಅವರು ಶಾಸಕರಾದ ಆರು ತಿಂಗಳಿಗೆ ಎದುರಾದ ಪಪಂ ಚುನಾವಣೆಯಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ತೋರಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಫ‌ಲಿತಾಂಶ ಮಾತ್ರ ತದ್ವಿರುದ್ಧವಾಗಿ ಬಂದಿದೆ.

ಸಿ.ಎಸ್‌. ಶಿವಳ್ಳಿ ಅವರು ಚುನಾವಣೆ ತಂತ್ರಗಾರಿಕೆ ಹಾಗೂ ಸಂಘಟನೆ ದೃಷ್ಟಿಯಿಂದ ತಮ್ಮದೇ ಪ್ರಭಾವ ಹೊಂದಿದ್ದರು. ಅವರ ನಂತರದಲ್ಲಿ ಸಂಘಟನೆ ಹಾಗೂ ತಂತ್ರಗಾರಿಕೆ ದೃಷ್ಟಿಯಿಂದ ಅವರ ಸ್ಥಾನ ತುಂಬುವವರು ಯಾರು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ. ಉಪ ಚುನಾವಣೆಯಲ್ಲಿ ಶಿವಳ್ಳಿ ಅವರ ಪತ್ನಿ ಕುಸುಮಾವತಿ ಅವರ ಗೆಲುವಿಗೆ ಅನುಕಂಪದ ಜತೆಗೆ ಕಾಂಗ್ರೆಸ್‌ನ ರಾಜ್ಯ ನಾಯಕರ ತಂತ್ರಗಾರಿಕೆ, ಸಂಘಟನೆ, ಅಂದಿನ ಸಮ್ಮಿಶ್ರ ಸರಕಾರದ ಶ್ರಮದ ಫ‌ಲವಾಗಿ ಫ‌ಲಿತಾಂಶ ಕಾಂಗ್ರೆಸ್‌ ಪಾಲಾಗಿತ್ತು.

ಒಂದಿಷ್ಟು ಹೆಚ್ಚು ಕಡಿಮೆಯಾಗಿದ್ದರೂ ಫ‌ಲಿತಾಂಶ ಬೇರೆಯದ್ದೇ ಆಗುತ್ತಿತ್ತು. ಜತೆಗೆ ಬಿಜೆಪಿಯಲ್ಲಿ ಒಳಹೊಡೆತದ ಸ್ಥಿತಿಯೂ ಕಾಂಗ್ರೆಸ್‌ಗೆ ಒಂದು ರೀತಿಯಲ್ಲಿ ವರವಾಯಿತು ಎನ್ನಬಹುದು. ಪಪಂ ಚುನಾವಣೆಯಲ್ಲಿ ಸ್ಥಳೀಯ ನಾಯಕತ್ವ, ಚುನಾವಣಾ ತಂತ್ರಗಾರಿಕೆಯನ್ನು ಓರೆಗಲ್ಲಿಗಚ್ಚಿದ್ದು, ಕಾಂಗ್ರೆಸ್‌ ಜಿಲ್ಲಾ ನಾಯಕರು, ಮುಖಂಡರು ಹೋಗಿ ಪ್ರಚಾರ ಮಾಡಿ ಬಂದಿದ್ದಾರೆ ವಿನಃ, ಸ್ಥಳೀಯವಾಗಿ ಅಲ್ಲಿನ ಸ್ಥಿತಿಗತಿಗನುಗುಣವಾಗಿ ಚುನಾವಣಾ ತಂತ್ರಗಾರಿಕೆ, ಮತದಾರರ ಆಕರ್ಷಣೆ ಜಾಣ್ಮೆಯಲ್ಲಿ ಕಾಂಗ್ರೆಸ್‌ ನಿರೀಕ್ಷಿತ ಯತ್ನ ಕೈಗೊಳ್ಳುವಲ್ಲಿ ಹಿನ್ನಡೆ ಅನುಭವಿಸಿತು ಎಂಬುದನ್ನು ಫ‌ಲಿತಾಂಶ ಹೇಳುತ್ತಿದೆ.

 

-ಅಮರೇಗೌಡ ಗೋನವಾರ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ