ಪ್ರಹ್ಲಾದ ಜೋಶಿ ಬೃಹತ್‌ ರೋಡ್‌ ಶೋ

Team Udayavani, Apr 22, 2019, 11:17 AM IST

ಹುಬ್ಬಳ್ಳಿ: ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರವಾಗಿ ದುರ್ಗದ ಬಯಲಿನಿಂದ ರವಿವಾರ ಬೃಹತ್‌ ರೋಡ್‌ ಶೋ ನಡೆಸಿ ಮತಯಾಚನೆ ಮಾಡಲಾಯಿತು.

ಸಾವಿರಾರು ಕಾರ್ಯಕರ್ತರೊಂದಿಗೆ ವಿವಿಧ ವಾದ್ಯ ಮೇಳದೊಂದಿಗೆ ಆರಂಭಗೊಂಡ ಮೆರವಣಿಗೆಯಲ್ಲಿ ಮೋದಿ ಪರ, ಸಂಸದ ಪ್ರಹ್ಲಾದ ಜೋಶಿ ಪರ ಘೋಷಣೆಗಳನ್ನು ಹಾಕುತ್ತಾ ಮತಯಾಚನೆ ಮಾಡಲಾಯಿತು. ದುರ್ಗದ ಬಯಲಿನಿಂದ ಆರಂಭಗೊಂಡ ಮೆರವಣಿಗೆ ಬ್ರಾಡ್‌ವೇ, ಕೊಪ್ಪಿಕರ ರಸ್ತೆ, ಲ್ಯಾಮಿಂಗ್ಟನ್‌ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ದಾಜೀಬಾನ ಪೇಟೆ ಮೂಲಕ ಮೂರುಸಾವಿರ ಮಠದ ಮುಂಭಾಗದಲ್ಲಿ ಅಂತ್ಯಗೊಂಡಿತು.

ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ವಿ. ಸೋಮಣ್ಣ, ಕಳೆದ ಮೂರು ಚುನಾವಣೆಗಳಲ್ಲಿ ಭರ್ಜರಿ ಜಯ ಸಾಧಿಸಿರುವ ಸಂಸದ ಪ್ರಹ್ಲಾದ ಜೋಶಿ ಅವರು ಈ ಬಾರಿ ಇನ್ನೂ ಹೆಚ್ಚು ಮತಗಳಿಂದ ಜಯ ಗಳಿಸಬೇಕು. ಇಡೀ ನಾಡಿಗೆ ಗೊತ್ತಾಗುವ ರೀತಿಯಲ್ಲಿ ಬಹುಮತ ನೀಡಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ಕೇಂದ್ರ ಸರಕಾರದ ವಿವಿಧ ಯೋಜನೆಗಳು, ನರೇಂದ್ರ ಮೋದಿ ಅವರ ಜನಪರ ಕಾರ್ಯಗಳು, ದೇಶಕ್ಕಾಗಿ ಅವರು ನೀಡಿರುವ ಕೊಡುಗೆಗಳು, ವಿಶೇಷವಾಗಿ ಮಹಿಳಾ ಯೋಜನೆಗಳ ಕುರಿತು ಮಾಹಿತಿ ನೀಡಿ ಮತಯಾಚನೆ ಮಾಡಿದರು.

ಅಭ್ಯರ್ಥಿ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ವಿಧಾನ ಪರಿಷತ್ತು ಸದಸ್ಯ ಪ್ರದೀಪ ಶೆಟ್ಟರ, ಮಾ. ನಾಗರಾಜ, ಶಿವು ಮೆಣಸಿನಕಾಯಿ, ಅಶೋಕ ಕಾಟವೆ, ಶಿವಾನಂದ ಮುತ್ತಣ್ಣವರ, ನಾಗೇಶ ಕಲ್ಬುರ್ಗಿ, ಮೇನಕಾ ಹುರಳಿ ಇನ್ನಿತರರು ಇದ್ದರು.

ಕಲಬುರಗಿಯಲ್ಲಿ ಮತ ಯಂತ್ರ ಬದಲಿಸುವ ಸಾಧ್ಯತೆ

ಹುಬ್ಬಳ್ಳಿ: ಕಲಬುರಗಿಯಲ್ಲಿ ಮತದಾನ ನಂತರ ಮತಯಂತ್ರಗಳನ್ನು ಬದಲಿಸುವ ಸಾಧ್ಯತೆಗಳಿವೆ. ಇಡೀ ಜಿಲ್ಲಾ ಚುನಾವಣಾ ವ್ಯವಸ್ಥೆ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಆರೋಪಿಸಿದರು.

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೀಗಾಗಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಬದಲಿಸುವಂತೆ ಚುನಾವಣಾ ಆಯೋಗಕ್ಕೆ ಮತ್ತೂಮ್ಮೆ ದೂರು ನೀಡಲಾಗುವುದು. ಇಡೀ ಚುನಾವಣಾ ವ್ಯವಸ್ಥೆ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪರ ಕೆಲಸ ಮಾಡುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರನ್ನು ವರ್ಗಾಯಿಸುವಂತೆ ಆಯೋಗಕ್ಕೆ ಬಿಜೆಪಿ ಕಾನೂನು ಮೋರ್ಚಾದಿಂದ ದೂರು ನೀಡಲಾಗಿತ್ತು. ಆದರೆ ಚುನಾವಣೆ ಆಯೋಗ ಈ ದೂರು ಗಂಭೀರವಾಗಿ ತೆಗೆದುಕೊಂಡಿಲ್ಲ. ಹೀಗಾಗಿ ಚುನಾವಣೆ ನಂತರವಾದರೂ ಅವರನ್ನು ವರ್ಗಾಯಿಸುವಂತೆ ಮತ್ತೂಮ್ಮೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಮಲ್ಲಿಕಾರ್ಜುನ ಖರ್ಗೆಯವರು ಸೋಲುವ ಭಯದಿಂದ ಕ್ಷೇತ್ರ ಬಿಟ್ಟು ಬರಲಿಲ್ಲ. ಚುನಾವಣೆ ನಂತರವೂ ಕ್ಷೇತ್ರ ಬಿಟ್ಟು ಬರಲ್ಲ. ಈಗಾಗಲೇ ಅವರ ಪರ ಕೆಲಸ ಮಾಡುತ್ತಿರುವ ಅಧಿಕಾರಿಗಳ ಮೂಲಕ ಮತಯಂತ್ರಗಳನ್ನು ಬದಲಿಸುವ ಕೆಲಸಕ್ಕಾಗಿ ಅವರು ಹೊರ ಬರಲ್ಲ. ಆ ಕ್ಷೇತ್ರದ ನಮ್ಮ ಕಾರ್ಯಕರ್ತರು ಮಾಹಿತಿ ಸಂಗ್ರಹಿಸಿದ್ದು, ಅಲ್ಲಿ ಮತ ಯಂತ್ರಗಳನ್ನು ಬದಲಿಸುವ ಸಾಧ್ಯತೆಗಳಿವೆ ಎಂದು ಗಂಭೀರ ಆರೋಪ ಮಾಡಿದರು.

ದೇಶದ ರಕ್ಷಣೆಯಲ್ಲಿ ಮೋದಿ ಸರಕಾರ ಯಾವುದೇ ರಾಜಿ ಮಾಡಿಕೊಳ್ಳಲಿಲ್ಲ. ದೇಶದಲ್ಲಾದ ಅಭಿವೃದ್ಧಿ ಪರ ಯೋಜನೆಗಳು, ರಾಜ್ಯ ಸರಕಾರ ವೈಫ‌ಲ್ಯಗಳು ಹಾಗೂ ಬಿಜೆಪಿಯ ಶಕ್ತಿಯ ಮೇಲೆ ಈ ಚುನಾವಣೆ ಎದುರಿಸುತ್ತೇವೆ. ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಹರಿದು ಬಂದ ಸಾವಿರಾರು ಕೋಟಿ ರೂ. ಅನುದಾನ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಹಿರಂಗವಾಗಿ ಹೇಳಬೇಕು. ಇಲ್ಲದಿದ್ದರೆ ಕರಾಳ ಪತ್ರ ಹೊರಡಿಸಲಾಗುವುದು ಎಂದರು.

ಪೂಜೆ ಮಾಡಿಸಲು ಹೇಳಿದ್ದೇನೆ
ನನ್ನ ವಿರೋಧಿಗಳು ಸ್ವರ್ಗದಲ್ಲಿದ್ದಾರೆಂದು ಎಚ್.ಡಿ.ದೇವೇಗೌಡರು ಹೇಳಿಕೆ ನೀಡಿದ್ದು, ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಅವರಿಗೆ ತೊಂದರೆಯಾಗುವ ಸಾಧ್ಯಗಳಿವೆ ಎನ್ನುವ ಮುನ್ಸೂಚನೆಯಾಗಿದೆ. ಹೀಗಾಗಿ ಅವರಿಗೆ ಸೂಕ್ತ ಭದ್ರತೆ ನೀಡುವಂತೆ ಒತ್ತಾಯಿಸುತ್ತೇನೆ. ಯಾವುದಾದರೂ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುವಂತೆ ಹಾಸನ ಕ್ಷೇತ್ರದ ನಮ್ಮ ಅಭ್ಯರ್ಥಿ ಎ. ಮಂಜು ಅವರಿಗೂ ಹೇಳಿದ್ದೇನೆ. ರೇವಣ್ಣ ಅವರ ಕೈಯಲ್ಲಿರುವ ನಿಂಬೆಹಣ್ಣಿನಿಂದ ಯಾವುದೇ ತೊಂದರೆಯಾಗಬಾರದೆಂಬುದು ನಮ್ಮ ಉದ್ದೇಶ ಎಂದು ವ್ಯಂಗ್ಯವಾಡಿದರು.

ಜಾತಿಯಾಧರಿಸಿ ಮತ ಕೇಳಿದರೆ ಯಾರೂ ನೀಡಲ್ಲ
ಹುಬ್ಬಳ್ಳಿ: ಎಲ್ಲ ಜಾತಿ, ಧರ್ಮದವರೊಂದಿಗಿನ ಬಾಂಧವ್ಯ, ಅಭಿವೃದ್ಧಿ ಕಾರ್ಯಗಳು, ಕ್ಷೇತ್ರದ ಜನರ ಕಷ್ಟಗಳಿಗೆ ಸ್ಪಂದನೆ ಇವೆಲ್ಲವೂ ನಮ್ಮ ಕೈ ಹಿಡಿಯುತ್ತವೆಯೇ ಹೊರತು ಕೇವಲ ಜಾತಿಯಾಧರಿಸಿ ಯಾರೂ ಮತ ನೀಡಲ್ಲ ಎಂದು ಮಾಜಿ ಸಚಿವ ವಿ. ಸೋಮಣ್ಣ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕ್ಷೇತ್ರಕ್ಕೆ ಪ್ರಹ್ಲಾದ ಜೋಶಿ ಕೊಡುಗೆ ಏನೆಂದು ಕೇಳುತ್ತಿರುವ ವಿನಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಮೊದಲು ತಿಳಿಸಲಿ. ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣ ಆರೋಪಿ, ಕಿಮ್ಸ್‌ ವೈದ್ಯರ ಮೇಲೆ ಹಲ್ಲೆ ಮಾಡಿದ ವಿನಯ ಕುಲಕರ್ಣಿಗೆ ವಿಧಿಯಿಲ್ಲದೇ ಟಿಕೆಟ್ ನೀಡಲಾಗಿದೆಯೋ, ಒತ್ತಡ ಹೇರಿ ಟಿಕೆಟ್ ಪಡೆದಿದ್ದಾರೋ ಸ್ಪಷ್ಟವಾಗಬೇಕು ಎಂದರು.

ರಾಜ್ಯದಲ್ಲಿ ಮೊದಲ ಹಂತದಲ್ಲಿ ಬಿಜೆಪಿ 9, ದ್ವಿತೀಯ ಹಂತದಲ್ಲಿ 13 ಸ್ಥಾನ ಗಳಿಸುವುದು ನಿಶ್ಚಿತ. ತೇಜಸ್ವಿನಿ ಅನಂತಕುಮಾರ ಅನ್ಯಾಯ ಈಗ ಮುಗಿದ ಅಧ್ಯಾಯ. ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಅಧ್ಯಕ್ಷ ಅಮಿತ್‌ ಶಾ ಭೇಟಿ ಮಾಡಿ ಸೂಕ್ತ ಸ್ಥಾನ-ಮಾನ ಕೊಡುವ ಭರವಸೆ ನೀಡಿದ್ದಾರೆಂದು ಹೇಳಿದರು.

ಕೈ ನಾಯಕರಿಂದ ದಾರಿ ತಪ್ಪಿಸುವ ಕೆಲಸ: ಮುನೇನಕೊಪ್ಪ

ನವಲಗುಂದ: ಪ್ರಹ್ಲಾದ ಜೋಶಿ ಪರವಾಗಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಪಟ್ಟಣದ ಬಸವೇಶ್ವರ ನಗರ ವಾರ್ಡ್‌ ಮತ್ತು ತಾಲೂಕಿನ ಹೆಬ್ಟಾಳ ಹಾಗೂ ಕರ್ಲವಾಡ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ತಮ್ಮ ನಿಲುವನ್ನು ಬಹಿರಂಗ ಪಡಿಸಬೇಕು. ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮುಖಂಡರು ಮಹದಾಯಿ ವಿಚಾರ ಬಳಸಿಕೊಂಡು ಜನರ ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ಸೇರಿ ಅನೇಕ ಕಾಂಗ್ರೆಸ್‌ ಮುಖಂಡರು ಮತ್ತೆ ಕಳಸಾ ಬಂಡೂರಿ ವಿಷಯ ಪ್ರಸ್ತಾಪಿಸುತ್ತಿದ್ದು ನೆಲ, ಜಲ ಹಾಗೂ ಭಾಷೆ ವಿಷಯದಲ್ಲಿ ರಾಜಕೀಯ ಮಾಡಿದವರಿಗೆಲ್ಲ ಏನು ಗತಿಯಾಗಿದೆ ಎಂಬುದು ಗೊತ್ತಿರುವ ವಿಚಾರವೆಂದು ಹರಿಹಾಯ್ದರು. ಸಿದ್ದನಗೌಡ ಪಾಟೀಲ, ಎನ್‌.ಪಿ. ಕುಲಕರ್ಣಿ, ಮಹಾಂತೇಶ ಕಲಾಲ, ರಾಜು ಜಾಲಿಹಾಳ, ಪರಶುರಾಮ ಕಲಾಲ, ಬಸವರಾಜ ಹೊಸಅಂಗಡಿ, ಮಂಜು ಸುಣಗಾರ, ರಾಜು ಕುಳಗೇರಿ, ವಿಜಯ ಕಟ್ಲಾಸ್ಕರ, ಮಂಜುನಾಥ ಅಕ್ಕಿ, ಶ್ರೀಕಾಂತ ಪಾಟೀಲ, ವೆಂಕಣ್ಣ ಗಾಯಕವಾಡ, ಹುಲಿಗೆಪ್ಪ ವಡ್ಡರ, ಫಕ್ಕಿರೇಶ ಹೂಗಾರ, ರುದ್ರಪ್ಪ ದನಮಾರು, ಸಿದ್ದು ಪೂಜಾರ, ಮತ್ತಿತರರಿದ್ದರು.

ಅಣ್ಣಿಗೇರಿಯಲ್ಲಿ ಪ್ರಚಾರ: ಪಟ್ಟಣದಲ್ಲಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ಪ್ರಹ್ಲಾದ ಜೋಶಿ ಪರ ಪ್ರಚಾರ ಮಾಡಿದರು. ವಿದ್ಯಾನಗರ, ಗಾಂಧಿ ನಗರ, ಅಂಬೇಡ್ಕರ್‌ ನಗರ, ಹುಡೇದ ಬಯಲು, ಪೇಟೆ, ಜಾಡಗೇರಿ ಓಣಿ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಮತ ಯಾಚಿಸಿದರು. ಷಣ್ಮುಖಪ್ಪ ಗುರಿಕಾರ, ಸಿದ್ದನಗೌಡ ಪಾಟೀಲ, ನಿಜಲಿಂಗಪ್ಪ ಅಕ್ಕಿ, ಶಿವಯೋಗೆಪ್ಪ ಸುರಕೋಡ, ಪ್ರವೀಣ ಹಾಳದೋಟರ, ಚೆಂಬಣ್ಣ ಆಲೂರ, ಮಂಜುನಾಥ ಅಕ್ಕಿ, ಮಂಜುನಾಥ ದಿಡ್ಡಿ ಇನ್ನಿತರರಿದ್ದರು.

ಜೋಶಿ ಕೇಂದ್ರ ಸಚಿವರಾಗುವುದು ನಿಶ್ಚಿತ
ಧಾರವಾಡ: ಮೋದಿ ಮತ್ತೂಮ್ಮೆ ಪ್ರಧಾನಿ ಆಗುವುದು ಎಷ್ಟು ನಿಶ್ಚಿತವೋ, ಪ್ರಹ್ಲಾದ ಜೋಶಿ 4ನೇ ಬಾರಿಗೆ ಸಂಸದರಾಗಿ ಆಯ್ಕೆಗೊಂಡು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗುವುದು ಅಷ್ಟೇ ನಿಶ್ಚಿತ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಹಿಂದೆ ಚುನಾವಣೆಗಳು ಜಾತಿ ಹಾಗೂ ಪಕ್ಷದ ಆಧಾರದ ಮೇಲೆ ನಡೆಯುತ್ತಿದ್ದವು. ಆದರೆ ಇಂದು ಜನರು ದೇಶದ ಪ್ರಗತಿ ಹಾಗೂ ರಕ್ಷಣೆಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಒಂದು ಕಡೆ ಮೋದಿ ಅಲೆ, ಮತ್ತೂಂದು ಕಡೆ ಅಭ್ಯರ್ಥಿ ಸಾಧನೆಗಳಿಂದ ಈ ಬಾರಿ ಚುನಾವಣೆಯಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜೋಶಿ ಅವರು ವಿಜಯ ಸಾಧಿಸಲಿದ್ದಾರೆ ಎಂದರು.
ಮೋದಿ-ಯೋಗಿ ಬಗ್ಗೆ ಹಗುರ ಮಾತು ಸಲ್ಲ
ಕುಂದಗೋಳ: ಸಿದ್ದರಾಮಯ್ಯನವರು ನರೇಂದ್ರ ಮೋದಿ, ಯೋಗಿ ಆದಿತ್ಯನಾಥ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಖಂಡನೀಯ ಎಂದು ಶ್ರೀ ಶಿಥಿಕಂಠೇಶ್ವರ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ದೇಶದ ಭದ್ರತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಮೋದಿ ಅವರನ್ನು ಚೋರನೆಂದು ಕರೆಯುವುದು ಸರಿಯಲ್ಲ. ಮೋದಿ ಅವರ ಖಾತೆಯಲ್ಲಿನ ಹಣವೇ ಪ್ರಾಮಾಣಿಕತೆಗೆ ಸಾಕ್ಷಿ. ಕಾಂಗ್ರೆಸ್‌ 12 ಬಾರಿ ಸರ್ಜಿಕಲ್ ಸ್ಟ್ರೆ ೖಕ್‌ ಮಾಡಿದೆ ಎಂದು ಸುಳ್ಳು ಹೇಳುವ ಸಿದ್ದರಾಮಯ್ಯ ಅದಕ್ಕೆ ತಕ್ಕ ಸಾಕ್ಷಿ ತೋರಿಸಲಿ ಎಂದು ಸವಾಲೆಸೆದರು. ಯೋಗಿ ಆದಿತ್ಯನಾಥ ಅವರು ಭಾರತೀಯ ಸೈನ್ಯವನ್ನು ಮೋದಿ ಸೈನ್ಯವೆಂದು ಹೇಳಿರುವುದು ಸತ್ಯವಾಗಿದ್ದು, ರಾಮಾಯಣದಲ್ಲಿ ಶ್ರೀರಾಮ ಸೇನೆ ಎಂದು ಗುರುತಿಸಿದಂತೆ ಭಾರತಕ್ಕೆ ಮೋದಿ ಪ್ರಮುಖರಾದ್ದರಿಂದ ಮೋದಿ ಸೈನ್ಯ ಎಂದು ಹೇಳಿರುವುದು ತಪ್ಪಲ್ಲ ಎಂದರು.

ಮೋದಿ ವಿರೋಧಿಗಳ ಒಗ್ಗಟ್ಟು ಹಾಸ್ಯಾಸ್ಪದ

ಅಳ್ನಾವರ: ಯಾವ ನಾಡಿನಲ್ಲಿ ದೊರೆ ಪ್ರಾಮಾಣಿಕವಾಗಿರುತ್ತಾನೋ ಅಂತಹ ನಾಡಿನಲ್ಲಿ ಕಳ್ಳರೆಲ್ಲ ಒಂದಾಗುತ್ತಾರೆ ಎನ್ನುವ ನೀತಿಯಂತೆ ಇಂದು ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಸೊಲಿಸಲು ವಿರೋಧಿಗಳೆಲ್ಲ ಒಂದಾಗಿರುವದು ಹಾಸ್ಯಾಸ್ಪದ ಎಂದು ಬೆಳಗಾವಿ ಮಾಜಿ ಶಾಸಕ, ಬಿಜೆಪಿ ಮುಖಂಡ ಸಂಜಯ ಪಾಟೀಲ ಹೇಳಿದರು. ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು. ಕಳೆದ ಐದು ವರ್ಷದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗಬೇಕಿದೆ. ಈಗಿನ ಚುನಾವಣೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ಚುನಾವಣೆಯಲ್ಲ. ದೇಶದ ಹಿತದೃಷ್ಟಿಯಿಂದ ನಡೆಯುತ್ತಿರುವ ಚುನಾವಣೆಯಾಗಿದೆ ಎಂದರು. ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಭಾಷಣ ಮಾಡಿದ ಸಂಜಯ ಯುವಕರನ್ನು ಸೆಳೆಯಲು ಯಶಸ್ವಿಯಾದರು.

ಮೋದಿ ಇನ್ನೊಮ್ಮೆ ಪ್ರಧಾನಿಯಾದ್ರೆ ದೇಶ ಮತ್ತಷ್ಟು ಶಕ್ತಿಶಾಲಿ: ಸಂಕೇಶ್ವರ
ಧಾರವಾಡ: ಲೋಕಸಭಾ ಚುನಾವಣೆ ದೇಶದ ಹಣೆಬರಹ ಮಾತ್ರಲ್ಲ. ನಮ್ಮ ಹಣೆಬರಹದ ಜೊತೆಗೆ ಮುಂದಿನ ಪೀಳಿಗೆಗೆ ಅಡಿಪಾಯವಾಗಿದೆ. ಹೀಗಾಗಿ ಎಲ್ಲರೂ ತಪ್ಪದೇ ಮಾತದಾನ ಮಾಡಬೇಕಲ್ಲದೆ, ನೆರೆಹೊರೆಯವರಿಗೂ ಬಿಜೆಪಿಗೆ ಬೆಂಬಲಿಸುವಂತೆ ಪ್ರೇರೇಪಿಸಬೇಕು ಎಂದು ಮಾಜಿ ಸಂಸದ ಡಾ|ವಿಜಯ ಸಂಕೇಶ್ವರ ಹೇಳಿದರು.

ಚನ್ನಬಸವೇಶ್ವರ ನಗರ ಹಾಗೂ ವಿಜಯಾನಂದ ನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಸಹ ಅತೀ ಹೆಚ್ಚು ಸಂಸದರನ್ನು ನೀಡಿದರೆ ಮೋದಿ ಮತ್ತೂಮ್ಮೆ ಪ್ರಧಾನಿಯಾಗುವರು. ಇದರಿಂದ ದೇಶ ಮತ್ತಷ್ಟು ಬಲಿಷ್ಠವಾಗಲಿದೆ ಎಂದರು.

ರಾಜ್ಯದಲ್ಲಿ 24 ಸೀಟ್‌ಗಳನ್ನು ಗೆಲ್ಲುವ ಭರವಸೆ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಇದೆ. ಆದರೆ ತಮ್ಮ ಪ್ರಕಾರ ಮಂಡ್ಯ ಸೇರಿದಂತೆ ಒಟ್ಟು 26 ಸೀಟ್‌ಗಳು ಬರಲಿವೆ. ರಾಜ್ಯದಲ್ಲಿ ಬಿಜೆಪಿಯಿಂದ ಬೃಹತ್‌ ಶಕ್ತಿ ಪ್ರದರ್ಶನವಾಗುವುದು ನಿಶ್ಚಿತ ಎಂದು ಹೇಳಿದರು.

ಮೋದಿ ಅವರ ಕೈ ಬಲಪಡಿಸಲು ಜೋಶಿ ಅವರನ್ನು ಮತ್ತೂಮ್ಮೆ ಆಯ್ಕೆ ಮಾಡಬೇಕು. ಪ್ರತಿಯೊಬ್ಬರು ಐತಿಹಾಸಿಕ ಚುನಾವಣೆಯಲ್ಲಿ ಮತ ಚಲಾಯಿ ಸಬೇಕು. ಜೋಶಿ ಅವರನ್ನು ಮತ್ತೂಮ್ಮೆ ಆಯ್ಕೆ ಮಾಡಬೇಕು ಎಂದರು.

ಕೆಎಲ್ಇ ಸಂಸ್ಥೆ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಮಾತನಾಡಿದರು. ಮಾಜಿ ಮೇಯರ್‌ ಶಿವು ಹಿರೇಮಠ, ವಿಶ್ರಾಂತ ಕುಲಪತಿ ಡಾ|ಎಂ.ಐ. ಸವದತ್ತಿ, ಪೊ|ವಿ.ಸಿ. ಸವಡಿ, ಪ್ರೊ| ಮೋಹನ ಸಿದ್ದಾಂತಿ, ಅಮೃತ ನರೇಂದ್ರ, ಗಂಗಾಧರ ಬಳ್ಳಾರಿ, ಚಂಬೈಯ್ಯ ಅಂಗಡಿ, ವಿಜಯಾನಂದ ಶೆಟ್ಟಿ, ಬಲರಾಮ ಕುಸುಗಲ್ಲ, ಟಿ.ವಿ. ಪಾಟೀಲ, ಸಿದ್ದು ಸವಡಿ, ವೀರೇಶ ಸಂಗಳದ, ಮೋಹನ ರಾಮದುರ್ಗ, ಮೋಹನ ರಾಮದುರ್ಗ, ಶಿವು ಸೋಭಾನ ಇದ್ದರು.

ಜೋಶಿಗೆ ರೈತ ಸಮುದಾಯ ಬೆಂಬಲ
ಹುಬ್ಬಳ್ಳಿ: ರೈತರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರಿಗೆ ಕ್ಷೇತ್ರದ ರೈತ ಸಮುದಾಯ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಕುಂದಗೋಳ ತಾಲೂಕು ರೈತ ಮೋರ್ಚಾ ಅಧ್ಯಕ್ಷ ಬಾಬುಗೌಡ ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯ ರೈತರ ಬೆಳೆ ವಿಮೆ ಪರಿಹಾರ ಸಮಸ್ಯೆಯಾದಾಗ ಕೇಂದ್ರ ಸಚಿವರೊಂದಿಗೆ ಚರ್ಚಿಸಿ ರೈತರಿಗೆ ತಲುಪಿಸುವ ಪ್ರಯತ್ನ ಮಾಡಿದರು. ಕೇಂದ್ರ ಸರಕಾರದ ಫ‌ಸಲ್ ಭಿಮಾ ಯೋಜನೆ ರೈತರ ಬೆಳೆ ನಷ್ಟವಾದರೂ ಜೀವನಕ್ಕೆ ಆಧಾರವಾಗಿದೆ. ಇಂತಹ ಹಲವು ಯೋಜನೆಗಳು ಕೇಂದ್ರ ಸರಕಾರದಿಂದ ರೈತರಿಗೆ ನೀಡಲಾಗಿದೆ. ಹೀಗಾಗಿ ನರೇಂದ್ರ ಮೋದಿ ಪ್ರಧಾನಿಯಾಗಿ, ಪ್ರಹ್ಲಾದ ಜೋಶಿ ಸಂಸದರಾಗಿ ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾರುತಿ ಕಲಘಟಗಿ, ಮುತ್ತು ಚಕಾರಿ, ಯಲ್ಲಪ್ಪ ಶಿಗ್ಗಾಂವ ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ