ಬರದಿಂದ ಜನ ತತ್ತರಿಸುತ್ತಿದ್ದರೆ ಸಿಎಂ ರೆಸಾರ್ಟ್‌ನಲ್ಲಿ ವಿಶ್ರಾಂತಿ: ಕರಂದ್ಲಾಜೆ

• ಅರಳಿಕಟ್ಟಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ ಪರ ಪ್ರಚಾರ ಸಭೆ

Team Udayavani, May 15, 2019, 9:54 AM IST

ಹುಬ್ಬಳ್ಳಿ: ಅರಳಿಕಟ್ಟಿ ಗ್ರಾಮದಲ್ಲಿ ಸಭೆ ನಡೆಸಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಲಾಯಿತು.

ಹುಬ್ಬಳ್ಳಿ: ಬರಗಾಲದಿಂದ ಜನರು ನೀರಿಗಾಗಿ ಪರದಾಡುತ್ತಿರುವಾಗ ಸಿಎಂ ಎಚ್.ಡಿ. ಕುಮಾರಸ್ವಾಮಿ ರೆಸಾರ್ಟ್‌ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಕುಂದಗೋಳ ವಿಧಾನಸಭಾ ಕ್ಷೇತ್ರದ ಅರಳಿಕಟ್ಟಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ ಪರ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಸರಕಾರದ ದುರಾಡಳಿತ ದಿಂದಾಗಿ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಾಗಿದೆ. ಸಮ್ಮಿಶ್ರ ಸರಕಾರವು ಗರ್ಭಿಣಿಯರಿಗೆ ಹುಳುವಿದ್ದ ಆಹಾರ ನೀಡುತ್ತಿದೆ. ಮುಖ್ಯಮಂತ್ರಿ ಆರಿಸಿ ಬಂದ 24 ತಾಸಿನೊಳಗೆ ರೈತರ ಸಾಲಮನ್ನಾ ಮಾಡುತ್ತೇನೆಂದು ಸುಳ್ಳು ಹೇಳಿದ್ದಾರೆ ಎಂದರು.

ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ, ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣೆ, ರೈತರ ಪರವಾದ ಬಜೆಟ್, ಬಡ್ಡಿ ಮನ್ನಾ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡಿದ ಹೆಗ್ಗಳಿಕೆ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಗರ್ಭಿಣಿಯರ ಮಡಿಲಿಗೆ ಕಿಟ್, ಮಹಿಳೆಯರ ರಕ್ಷಣೆ, ಮಠ-ಮಂದಿರಗಳಿಗೆ, ಶಾಲೆ-ಹೈಸ್ಕೂಲ್ಗೆ ವಸತಿ ಕಟ್ಟಿಸಲಿಕ್ಕೆ ಅನುದಾನ ನೀಡಿದ್ದು, ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ 400 ಕೋಟಿ ರೂ. ಕೊಟ್ಟಿದೆ ಎಂದು ಹೇಳಿದರು.

ಪ್ರಧಾನಿ ಮೋದಿಯವರು ಪ್ರಧಾನಿಯಾದ ನಂತರ ಉಜ್ವಲ ಗ್ಯಾಸ್‌ ಯೋಜನೆಯಡಿ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಗ್ಯಾಸ್‌ ವಿತರಣೆ, ರೈತರಿಗೆ ವರ್ಷಕ್ಕೆ 6 ಸಾವಿರ ರೂ., ಮುದ್ರಾ ಯೋಜನೆಯಡಿ ಸ್ವಯಂ ಉದ್ಯೋಗ, ಆಯುಷ್ಮಾನ್‌ ಭಾರತ ಯೋಜನೆಯಡಿ ಒಂದು ಕುಟುಂಬದಲ್ಲಿ ಯಾರಾದರೂ ಅನಾರೋಗ್ಯಕ್ಕೀಡಾದರೆ 5 ಲಕ್ಷ ರೂ. ವರೆಗೆ ಖಾಸಗಿ ಆಸ್ಪತ್ರೆ ವೆಚ್ಚ ಹೀಗೆ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ಮುಖಂಡರಾದ ಪ್ರಭಾಕರ ಕೋರೆ, ಹನುಮಂತ ನಿರಾಣಿ, ಎಸ್‌.ವಿ. ಸಂಕನೂರ, ಮಹಾಂತೇಶ ಕವಟಗಿಮಠ, ಸೀಮಾ ಮಸೂತಿ, ಭಾರತಿ ಅಳವಂಡಿ, ಶಿವು ಮೆಣಸಿನಕಾಯಿ, ಮೇನಕಾ ಹುರಳಿ ಸೇರಿದಂತೆ ಅನೇಕರಿದ್ದರು.

ಮೈತ್ರಿ ಸರಕಾರದಿಂದ ಉಕ ನಿರ್ಲಕ್ಷ್ಯ: ಪ್ರಭಾಕರ ಕೋರೆ

ಉತ್ತರ ಕರ್ನಾಟಕದಲ್ಲಿ ಭೀಕರ ಬರ ಆವರಿಸಿದ್ದು, ಮೈತ್ರಿ ಸರಕಾರ ಈ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಕೃಷ್ಣಾ ನದಿಗೆ ನೀರು ಹರಿಸುವ ಕುರಿತು ಚಿಂತಿಸಬೇಕಾದ ಜಲ ಸಂಪನ್ಮೂಲ ಸಚಿವರು ಚುನಾವಣೆಯಲ್ಲಿ ನಿರತರಾಗಿದ್ದಾರೆ ಎಂದ ರಾಜ್ಯಸಭಾ ಸದಸ್ಯ ಡಾ| ಪ್ರಭಾಕರ ಕೋರೆ ಸುದ್ದಿಗೋಷ್ಠಿಯಲ್ಲಿ ದೂರಿದರು. ಕೃಷ್ಣಾ ನದಿ ಸಂಪೂರ್ಣ ಬತ್ತಿದೆ. ಒಂದು ತಿಂಗಳಿನಿಂದ ಈ ಭಾಗದ ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಮಹಾರಾಷ್ಟ್ರ ಸರಕಾರದೊಂದಿಗೆ ಮಾತುಕತೆ ನಡೆಸಿ ನೀರು ಬಿಡುವ ಚಿಂತನೆ ಮೈತ್ರಿ ಸರಕಾರದಿಂದ ನಡೆಯುತ್ತಿಲ್ಲ. ಹೀಗಾಗಿ ಈ ಭಾಗದ ಸುಮಾರು 290 ಹಳ್ಳಿಗಳಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ಇಂತಹ ಪರಿಸ್ಥಿತಿಗೆ ಮೈತ್ರಿ ಸರಕಾರದ ವೈಫ‌ಲ್ಯವೇ ಕಾರಣ ಎಂದು ಆರೋಪಿಸಿದರು. ಹತ್ತು ಹಲವು ಜನಪರ ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಆದರೆ ಅವನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಮೈತ್ರಿ ಸರಕಾರ ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದೆ. ಈ ಭಾಗದ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೇ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಕೃಷ್ಣಾ ನದಿಗೆ ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡುವ ಬೇಡಿಕೆಯಿದ್ದರೂ ಸರಕಾರ ಕಿವಿಗೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಧಾನ ಪರಿಷತ್‌ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕಾಗಿ 10 ಕಿಮೀಗೆ ಒಂದರಂತೆ ಬಾಂದಾರ ನಿರ್ಮಿಸುವ ಕಾರ್ಯ ಆಗಬೇಕು. ಕೃಷ್ಣೆಯ ಕಣ್ಣೀರು, ಕಾಂಗ್ರೆಸ್‌ ನಡಿಗೆ ಕೃಷ್ಣೆಯ ಕಡೆಗೆ ಎನ್ನುವ ಪಾದಯಾತ್ರೆ ಕೇವಲ ರಾಜಕಾರಣಕ್ಕಾಗಿ ಎಂಬುವುದು ಸಾಬೀತಾಗಿದೆ. ಉತ್ತರ ನಿರ್ಲಕ್ಷ್ಯದಿಂದಾಗಿ ಪ್ರತ್ಯೇಕ ರಾಜ್ಯದ ಕೂಗು ಹೆಚ್ಚುತ್ತಿದೆ ಎಂದರು. ವಿಧಾನಪರಿಷತ್‌ ಸದಸ್ಯರಾದ ಪ್ರೊ| ಎಸ್‌.ವಿ. ಸಂಕನೂರ, ಹನುಮಂತ ನಿರಾಣಿ ಹಾಗೂ ಇನ್ನಿತರರಿದ್ದರು.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ