ಧಾರವಾಡ : ಜಲ್ಲಿಕಲ್ಲಿನ ಕಿರಿಕಿರಿಗೆ ಸುಸ್ತಾದೇವಯ್ಯ!
ರಸ್ತೆ ತಡೆ, ತಿರುವಿನಲ್ಲಿ ಹರವುತ್ತಿದೆ ಕಲ್ಲಿನ ಪುಡಿ ! ವಾಹನ ಸವಾರರಿಗೆ ಕಿರಿಕಿರಿ
Team Udayavani, Apr 1, 2021, 7:04 PM IST
ಡಾ|ಬಸವರಾಜ ಹೊಂಗಲ್
ಧಾರವಾಡ: ರಸ್ತೆ ತಡೆ ಅಕ್ಕಪಕ್ಕ ಹರಿದಾಡಿಕೊಂಡು ಬಿದ್ದ ಜಲ್ಲಿಕಲ್ಲು, ಸಿಮೆಂಟ್ ರಸ್ತೆ ಮಧ್ಯದ ಬಿರುಕು ಮುಚ್ಚುವುದಕ್ಕೆ ಹಾಕಿದ ಸಿಮೆಂಟ್ ಮಿಶ್ರಿತ ಗೊರಚಲು ಕಲ್ಲು, ಈ ಕಲ್ಲು ಕೊರೆದು ಪಂಚರ್ ಆಗುತ್ತಿರುವ ವಾಹನಗಳು, ಅಷ್ಟೇಯಲ್ಲ, ಆಯತಪ್ಪಿ ಬಿದ್ದು ಪ್ರಾಣಾಪಾಯಕ್ಕೆ ಒಳಗಾಗುತ್ತಿರುವ ಬೈಕ್ ಸವಾರರು.
ಹೌದು. ಜಿಲಿಟಿನ್ ಕಡ್ಡಿಗಳ ಸ್ಫೋಟದಿಂದ ರಾಜ್ಯಾದ್ಯಂತ ತೀವ್ರ ಸದ್ದು ಮಾಡಿದ್ದ ಕಲ್ಲು ಗಣಿಗಾರಿಕೆಯ ಪ್ರಮಾದಗಳು ನಿಲ್ಲುವಂತೆ ಕಾಣುತ್ತಿಲ್ಲ. ನಿಯಮಗಳ ಪಾಲನೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ರೂಪಿಸಿದ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಗಣಿಗಾರಿಕೆ ನಡೆಸುವ ಕಂಪನಿಗಳು (ಕ್ವಾರಿಗಳು)ಮತ್ತು ಕಲ್ಲು ಸಾಗಾಣಿಕೆ ಮಾಡುವ ಸಾಗಾಣಿಕಾ ವಾಹನಗಳು ಪಾಲನೆ ಮಾಡಲು ಇನ್ನು ಎಷ್ಟು ವರ್ಷಗಳು ಕಳೆಯಬೇಕು ಗೊತ್ತಿಲ್ಲ. ಜಿಲ್ಲೆಯಲ್ಲಿ ಇರುವ 80ಕ್ಕೂ ಅಧಿಕ ಕಲ್ಲು ಗಣಿಗಾರಿಕೆ ಕ್ವಾರಿಗಳ ಪೈಕಿ ಈಗಾಗಲೇ ಅರ್ಧಕ್ಕಿಂತ ಹೆಚ್ಚು ನಿಯಮ ಪಾಲನೆ ಮಾಡಲು ಹಿಂದೇಟು ಹಾಕಿದ್ದಕ್ಕೆ ಮುಚ್ಚಿಕೊಂಡು ಹೋಗಿವೆ. ಇರುವ ಬೆರಳೆಣಿಕೆಯಷ್ಟು ಕಲ್ಲು ಕ್ವಾರಿಗಳಾದರೂ ಸರಿಯಾಗಿ ನಿಮಯ ಪಾಲನೆ ಮಾಡದೇ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿವೆ.
ಆಗುತ್ತಿರುವುದೇನು?:
ಜಿಲ್ಲೆಯಲ್ಲಿ ರಾಜ್ಯದ ಎರಡನೇ ಅತೀ ದೊಡ್ಡ ಮಹಾನಗರ ಹುಬ್ಬಳ್ಳಿ-ಧಾರವಾಡದಲ್ಲಿ ದೊಡ್ಡ ದೊಡ್ಡ ಮಹಲ್‌ಗಳು, ಕಾಂಕ್ರೀಟ್ ರಸ್ತೆಗಳು, ಸೇತುವೆಗಳ ನಿರ್ಮಾಣ ಭರದಿಂದ ಸಾಗಿದೆ. ಯಾವುದೇ ಕಾಂಕ್ರೀಟ್ ಕೆಲಸ ಮತ್ತು ಡಾಂಬರೀಕರಣ ಕೆಲಸಕ್ಕೆ ಇದೀಗ ಜಲ್ಲಿಕಲ್ಲು ಮತ್ತು ಎಂ ಸ್ಯಾಂಡ್ ಅನಿವಾರ್ಯ. ನಗರ ಮಧ್ಯೆ ಕಟ್ಟಡ ಕಾಮಗಾರಿಗಳು ನಡೆಯುತ್ತಿದ್ದು, ಅಲ್ಲಿಗೆ ಜಲ್ಲಿಕಲ್ಲು ಸಾಗಾಣಿಕೆ ನಡೆಯುತ್ತದೆ. ಹೀಗೆ ಜಲ್ಲಿಕಲ್ಲು ಸಾಗಾಣಿಕೆ ಮಾಡುವ ಲಾರಿಗಳು ಸರಿಯಾಗಿ ನಿಯಮ ಪಾಲನೆ ಮಾಡುತ್ತಿಲ್ಲ. 10-15 ಟನ್‌ನಷ್ಟು ಜಲ್ಲಿಕಲ್ಲು ಹೇರುವ ದೈತ್ಯ ಟಿಪ್ಪರ್‌ಗಳಲ್ಲಿ ನಿಯಮ ಮೀರಿ ಜಲ್ಲಿಕಲ್ಲು ಮತ್ತು ಕಲ್ಲಿನ ಪುಡಿ ಹೇರಲಾಗುತ್ತಿದೆ.
ಲಾರಿಗಳು ತುಂಬುವ ಜಲ್ಲಿಕಲ್ಲು ಅಥವಾ ಕಲ್ಲಿನ ಪುಡಿ ಅದರ ಟ್ರೈರಿ ಭಾಗದ ಒಂದು ಅಡಿ ಕೆಳಕ್ಕೆ ಇರಬೇಕು. ಅಂದರೆ ಅದು ರಸ್ತೆ ತಡೆ, ಗುಂಡಿಗಳ ಮೇಲೆ ಹತ್ತಿ ಇಳಿದರೂ ಕೆಳಕ್ಕೆ ಬೀಳುವುದಿಲ್ಲ. ಆದರೆ ನಗರದಲ್ಲಿ ಸಂಚರಿಸುವ ಬಹುತೇಕ ಲಾರಿಗಳು ನಿಯಮ ಮೀರಿ ಮತ್ತು ಮಿತಿಮೀರಿ ಕಲ್ಲಿಕಲ್ಲು ತುಂಬಿಕೊಂಡು ಅದನ್ನು ರಸ್ತೆಯುದ್ದಕ್ಕೂ ಚೆಲ್ಲಾಡಿಕೊಂಡು ಸಾಗುತ್ತಿವೆ. ಇದು ದ್ವಿಚಕ್ರವಾಹನ ಸೇರಿದಂತೆ ಕಾರು, ಬಸ್, ಲಾರಿ ಇತರೇ ಲಘು ವಾಹನಗಳಿಗೆ ತೀವ್ರ ತೊಂದರೆಯನ್ನುಂಟು ಮಾಡುತ್ತಿದೆ.
ಬೈಪಾಸ್‌ನಲ್ಲೂ ಕಾಡಿದ ಕಡಿ
ಇನ್ನು ಅತೀ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಹುಬ್ಬಳ್ಳಿ-ಧಾರವಾಡ ಬೈಪಾಸ್‌ನಲ್ಲಿಯೂ ಕೂಡ ಜಲ್ಲಿಕಲ್ಲು ರಸ್ತೆಯುದ್ದಕ್ಕೂ ಬಿದ್ದಿರುತ್ತದೆ. ಅಷ್ಟೇಯಲ್ಲ, ರಸ್ತೆತಡೆ, ತಗ್ಗು-ದಿಣ್ಣಿಗಳಲ್ಲಿ ಕಡಿ ಬೀಳುವುದು ಸಾಮಾನ್ಯವಾಗಿ ಬಿಟ್ಟಿದೆ. ಇನ್ನು ಟಿಪ್ಪರ್ ಲಾರಿಗಳು ಸರಿಯಾಗಿ ರಸ್ತೆ ನಿಯಮ ಕೂಡ ಪಾಲಿಸುವುದಿಲ್ಲ ಎಂಬುದು ಮೇಲಿಂದ ಮೇಲೆ ಅಲ್ಲಿನ ಅಪಘಾತಗಳ ಆಧಾರದ ಮೇಲೆ ಸಾಬೀತಾಗಿದೆ. ಜ.15ರಂದು 10 ಜನ ಗೃಹಿಣಿಯರನ್ನು ಬಲಿ ಪಡೆದ ಅಪಘಾತಕ್ಕೆ ಟಿಪ್ಪರ್ ಲಾರಿಯೇ ಕಾರಣ ಎಂಬುದು ಎಲ್ಲರಿಗೂ ಗೊತ್ತು. ಇಷ್ಟಾದರೂ ಅಲ್ಲಿನ ಕ್ವಾರಿಗಳಿಂದ ಜಲ್ಲಿಕಲ್ಲು ಸಾಗಾಣಿಕೆ ಮಾಡುವ ಲಾರಿಗಳು ಕಲ್ಲಿನ ಪುಡಿ ರಸ್ತೆಯುದ್ದಕ್ಕೂ ಸೋರಿಕೊಂಡು ಹೋಗುವಂತೆಯೇ ತುಂಬಿಕೊಂಡು ಹೋಗುತ್ತಿವೆ. ಇನ್ನು ಗ್ರಾಮಾಂತರ ಪ್ರದೇಶಗಳಿಗೆ ನರೇಗಾ ಯೋಜನೆ ಅಡಿಯಲ್ಲಿ ಕಾಮಗಾರಿಗೆ ಬಳಕೆಯಾಗುವ ಜಲ್ಲಿಕಲ್ಲು ಪೂರೈಸುವ ಲಾರಿಗಳು ಸಾಗಾಣಿಕೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಅಲ್ಲಿಯೂ ಅಷ್ಟೇ ಎಲ್ಲೆಂದರಲ್ಲಿ ಜಲ್ಲಿಕಲ್ಲು ಸೋರಿಕೆಯಾಗಿರುತ್ತದೆ. ಇದು ವಾಹನಗಳಿಗೆ ಮಾತ್ರವಲ್ಲ, ಕೃಷಿ ಚಟುವಟಿಕೆಗೆ ಸಾಗುವ ದನಕರುಗಳಿಗೂ ತೀವ್ರ ಕಿರಿಕಿರಿಯನ್ನುಂಟು ಮಾಡುತ್ತಿದೆ. ಹೀಗಾಗಿ ಕೂಡಲೇ ಈಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಆಗ್ರಹಿಸುತ್ತಿದ್ದಾರೆ ಗ್ರಾಮೀಣರು.