
ಕಬ್ಬಿನ ಸ್ವಾಗಿಯೇ ಹಾಲಿಗೆ ಮೇವು; ಬದಲಾಯ್ತು ಮಲೆನಾಡ ಪಶು ಆಹಾರ
ಕಬ್ಬು ಬೆಳೆಯ ಉಪ ಉತ್ಪನ್ನಗಳಲ್ಲಿ ರೈತರಿಗೆ ಎಷ್ಟು ಪಾಲು ಸಿಕ್ಕುತ್ತಿದೆಯೋ ಗೊತ್ತಿಲ್ಲ.
Team Udayavani, Jan 5, 2023, 4:47 PM IST

ಧಾರವಾಡ: ಭತ್ತದ ಹುಲ್ಲು ತಿನ್ನಿಸಲು ಈಗ ಭತ್ತ ಬೆಳೆಯುತ್ತಿಲ್ಲ. ಕಡ್ಡದ ಮೇವು ತಿನ್ನಿಸಲು ಈಗ ಗೋಮಾಳಗಳು ಇಲ್ಲ. ಹೊಟ್ಟು ಹೂಸ ತಿನ್ನಿಸಲು ದ್ವಿದಳ ಧಾನ್ಯಗಳನ್ನು ರೈತರು ಬೆಳೆಯುತ್ತಿಲ್ಲ. ಈಗೇನಿದ್ದರೂ ಕಬ್ಬು ಕಬ್ಬು ಕಬ್ಬು. ಹೀಗಾಗಿ ಹೈನುಗಾರಿಕೆ ನಂಬಿದವರಿಗೆ ಸದ್ಯಕ್ಕೆ ಕಬ್ಬಿನ ಸ್ವಾಗಿ(ಕಬ್ಬಿನ ಮೇಲಿನ ತಪ್ಪಲು ಭಾಗ) ಯೇ ಮಲೆನಾಡ ಹೈನುಗಾರಿಕೆಗೆ ಆಹಾರ ಮತ್ತು ಆಧಾರ.
ಹೌದು. ಧಾರವಾಡ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಅತ್ಯಂತ ರಭಸದ ಬೆಳೆಯಾಗಿ ಎಲ್ಲಾ ಸಾಂಪ್ರದಾಯಿಕ ಬೆಳೆಗಳನ್ನು ಹಿಂದಿಕ್ಕಿ ಮುನ್ನಡೆದ ಕಬ್ಬು ಬೆಳೆ ಈ ವರ್ಷ 90 ಸಾವಿರ ಹೆಕ್ಟೇರ್‌ಗೆ ಏರಿಕೆಯಾಗಿದೆ. ಅದರಲ್ಲೂ ಕಲಘಟಗಿ,ಧಾರವಾಡ-ಅಳ್ನಾವರ ತಾಲೂಕಿನಲ್ಲಿ ಶೇ.80 ಕಬ್ಬು ಬೆಳೆ ಆವರಿಸಿದ್ದು, ಇನ್ನುಳಿದ ಎಲ್ಲಾ ಬೆಳೆಗಳು ಮಂಗಮಾಯವಾಗಿ ಹೋಗಿವೆ.
ಕಬ್ಬು ಬೆಳೆಯ ಉಪ ಉತ್ಪನ್ನಗಳಲ್ಲಿ ರೈತರಿಗೆ ಎಷ್ಟು ಪಾಲು ಸಿಕ್ಕುತ್ತಿದೆಯೋ ಗೊತ್ತಿಲ್ಲ. ಆದರೆ ಕಬ್ಬಿನ ಸ್ವಾಗಿ ಅಂದರೆ ಕಬ್ಬಿನ ಬೆಳೆ ಮೇಲ್ಭಾಗದಲ್ಲಿರುವ ಹಸಿರು ಹುಲ್ಲು ಇದೀಗ ಕಬ್ಬು ಬೆಳೆಯುವ ಗ್ರಾಮಗಳಲ್ಲಿನ ಹೈನುಗಾರಿಕೆಗೆ ಬೇಕಾಗುವ ಮೇವಾಗಿ ಬಳಕೆಯಾಗುತ್ತಿದೆ. ಅಷ್ಟೆಯಲ್ಲ ಇದನ್ನೇ ಅವಲಂಬಿಸಿ ಹೈನುಗಾರಿಕೆ ಉದ್ಯಮ ನಡೆಯುತ್ತಿದೆ.
ಹುಲ್ಲಿನ ಬಣವಿಗೆ ಸಮ: ಒಂದು ಎಕರೆಯಲ್ಲಿ 50 ಟನ್ ಕಬ್ಬು ಬಂದರೆ 4 ಟನ್‌ನಷ್ಟು ಸ್ವಾಗಿ ಹುಲ್ಲು ಲಭ್ಯವಿರುತ್ತದೆ. ಅದರಲ್ಲೂ ಹೊಡೆ ಬಿಡದ ಕಬ್ಟಾದರಂತೂ ಸ್ವಾಗಿ ಪ್ರಮಾಣ ಇನ್ನು ಹೆಚ್ಚಾಗಿಯೇ ಇರುತ್ತದೆ. ಇದು ಮಲೆನಾಡು ಪ್ರದೇಶದಲ್ಲಿ ವರ್ಷಗಳ ಹಿಂದೆ ಒಟ್ಟಿ ಇಡುತ್ತಿದ್ದ ಭತ್ತದ ಹುಲ್ಲಿನ ಒಂದು ಬಣವಿಗೆ ಸಮವಾಗಿರುತ್ತದೆ. ಅಂದರೆ ಒಂದು ಹಸು ಇಡೀ ತಿಂಗಳು ತಿನ್ನುವಷ್ಟು ಹುಲ್ಲಿಗೆ ಇದು ಸಮ ಎನ್ನಬಹುದು.
ಸದ್ಯಕ್ಕೆ ಎಮ್ಮೆ, ಆಕಳು ಮತ್ತು ಎತ್ತುಗಳು ಸೇರಿ ಜಾನುವಾರುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ಪಶುಪಾಲನೆ ಲಾಭದಾಯಕವಾಗಿಲ್ಲದಿರುವುದು ಇದಕ್ಕೆ ಪ್ರಮುಖ ಕಾರಣ. ಗಾಂವಠಾಣಾ, ಗುಡ್ಡಗಾಡು, ಕೆರೆಕುಂಟೆ ಪ್ರದೇಶ ಸಂಪೂರ್ಣ ಕಡಿಮೆಯಾಗಿದ್ದು ದನಕರುಗಳ ಮೇವಿಗೆ ಪರದಾಡಬೇಕಿದೆ. ಇಂತಹ ಸಂದರ್ಭದಲ್ಲಿ ಕಬ್ಬಿನ ಸ್ವಾಗಿಹುಲ್ಲು ಇಡೀ ಗ್ರಾಮಗಳ ಅಂದಾಜು ಆರು ತಿಂಗಳ ಸಮಯದ ಮೇವಿನ ಪೂರೈಕೆ ಮಾಡಲಿದೆ. ಪ್ರತಿವರ್ಷ ನವೆಂಬರ್ ಅಥವಾ ದೀಪಾವಳಿಯಿಂದ ಕಬ್ಬು ಕಟಾವು ಶುರುವಾದರೆ ಹೆಚ್ಚು ಕಡಿಮೆ ಯುಗಾದಿವರೆಗೂ ನಡೆಯುತ್ತದೆ. ಈ ಆರು ತಿಂಗಳ ಅವಧಿಯಲ್ಲಿ ಕಬ್ಬಿನ ಸ್ವಾಗಿಮೇವು ಪಶುಗಳ ಪ್ರಮುಖ ಆಹಾರವಾಗಿ ಬದಲಾಗಿದೆ.
ಉತ್ತಮ ಹೈನು: ಇನ್ನು ಕಬ್ಬಿನ ಸ್ವಾಗಿ ಸಿಹಿಯಾಗಿರುವುದರಿಂದ ಜಾನುವಾರುಗಳು ಕೂಡ ಇದನ್ನು ಇಷ್ಟ ಪಟ್ಟು ತಿನ್ನುತ್ತಿದೆ. ಅಷ್ಟೇಯಲ್ಲ, ಉತ್ತಮ ಹಾಲು ನೀಡುತ್ತಿವೆ. ಹೀಗಾಗಿ ಯುವಕರು ನಾಲ್ಕು ಆಕಳು ಅಥವಾ ಎಮ್ಮೆಗಳನ್ನು ತಮ್ಮ ಹೊಲದಲ್ಲಿ ಕಟ್ಟಿಕೊಂಡಾದರೂ ಸರಿ ಹೈನುಗಾರಿಕೆ ಮಾಡಬಹುದು ಎನ್ನುವ ಧೈರ್ಯ ತೋರುತ್ತಿದೆ. ಇದರಲ್ಲಿನ ಸಿಹಿ ಪ್ರಮಾಣದಿಂದ ಜಾನುವಾರಗಳು ಇದು ಅರ್ಧಮರ್ಧ ಒಣಗಿದರೂ ತಿಂದು ಬಿಡುತ್ತವೆ. ಇದು ಜಾನುವಾರು ಸಾಕುವ ರೈತರಿಗೆ ವರದಾನವಾಗಿ ಪರಿಣಮಿಸಿದೆ.
ಉಚಿತ ಪೂರೈಕೆ: ಇನ್ನು ರೈತರು ತಮ್ಮ ಹೊಲದಲ್ಲಿನ ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಸ್ವಾಗಿಮೇವು ಅರಸಿ ಬರುವ ಯಾವುದೇ ರೈತರಿಗೆ ಬೇಡ ಎನ್ನುವುದಿಲ್ಲ. ಹಸಿ ಸ್ವಾಗಿ ಮೇವು ಕಬ್ಬು ಕಟಾವಿನ ನಂತರ ಉಳಿದರೆ ಅದು ಒಣಗಿ ಹೋಗುತ್ತದೆ. ನಂತರ ಅದನ್ನು ಸುಟ್ಟು ಹಾಕಬೇಕು ಅಥವಾ ರೂಟೇಟರ್ ಹೊಡೆದು ಗೊಬ್ಬರ ಮಾಡಬೇಕು. ಹೀಗಾಗಿ ದನಕರುಗಳಿಗೆ ಮೇವು ಬೇಕೆಂದು ಬಂದವರಿಗೆ ಕಬ್ಬು ಬೆಳೆದವರು ಕಟಾವಿನ ವೇಳೆ ಉಚಿತವಾಗಿಯೇ ಸ್ವಾಗಿ ಮೇವು ನೀಡುತ್ತಾರೆ.
ಬದಲಾಯ್ತು ಜಾನುವಾರ ಆಹಾರ ಕ್ರಮ
ಮೊದಲು ಒಣ ಭತ್ತದ ಹುಲ್ಲು, ಕಡ್ಡ, ಗಾಂವಠಾಣಾ ವ್ಯಾಪ್ತಿಯಲ್ಲಿನ ದೇಶಿ ತಳಿಯ ಹುಲ್ಲನ್ನು ರೈತರು ಶೇಖರಣೆ ಮಾಡಿಟ್ಟು ಬೇಸಿಗೆಯಲ್ಲಿ ಅದನ್ನು ಒಣಗಿಸಿ ಒಟ್ಟಾಗಿಸಿ ಬಣವಿ ಹಾಕುತ್ತಿದ್ದರು. ಅದನ್ನು ಮಳೆಗಾಲ ಅಥವಾ ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ತಿನ್ನಿಸುತ್ತಿದ್ದರು. ಆದರೆ ಇದೀಗ ಆರು ತಿಂಗಳು ಕಬ್ಬಿನ ಸ್ವಾಗಿಮೇವು ಲಭ್ಯವಾಗುತ್ತಿದೆ. ಮಳೆಗಾಲ ನಂತರವೂ ಜಾನುವಾರುಗಳಿಗೆ ಹಸಿರು ಮೇವು ಲಭ್ಯವಾಗುತ್ತಿದೆ. ಅದೂ ಅಲ್ಲದೇ ಕಬ್ಬಿನ ಗದ್ದೆಗಳ ಮಧ್ಯದ ಬದುಗಳಲ್ಲಿ ಹೈಬ್ರಿಡ್ ಹುಲ್ಲು ನೆಡುತ್ತಿದ್ದಾರೆ. ಅದು ಕೂಡ ವರ್ಷಪೂರ್ತಿಯಾಗಿ ಹಸಿರು ಮೇವಾಗಿ ಲಭ್ಯವಿದೆ. ಒಟ್ಟಿನಲ್ಲಿ ಮನುಷ್ಯ ಮಾತ್ರವಲ್ಲ, ಜಾನುವಾರಗಳ ಆಹಾರ ಕ್ರಮ ಕೂಡ ಇದೀಗ ಬದಲಾಗಿದೆ.
ಕಬ್ಬಿನ ಸ್ವಾಗಿಯಲ್ಲಿ ಸಾಕಷ್ಟು ಉತ್ತಮ ಪೋಷಕಾಂಶಗಳು ಇದ್ದು ಇದು ಜಾನುವಾರುಗಳು ಇಷ್ಟಪಟ್ಟು ತಿನ್ನುವ ಮೇವಾಗಿದೆ. ಹೈನುಗಾರಿಕೆ ಹುಲುಸಾಗಲಿದ್ದು, ಜಾನುವಾರುಗಳು ಗಟ್ಟಿಯಾಗಲಿವೆ. ರೈತರು ಇದನ್ನು ಮೇವಾಗಿ ಪರಿವರ್ತಿಸಿಕೊಂಡಿದ್ದು ಉತ್ತಮ ಸಂಗತಿ.
ಉಮೇಶ ಕೊಂಡಿ,ಡಿ.ಡಿ.,
ಪಶುಪಾಲನಾ ಇಲಾಖೆ,ಧಾರವಾಡ.
ಮೊದಲಿನಂತೆ ಹಳ್ಳಿಗಳಲ್ಲಿ ಜಾನುವಾರು ಸಾಕಾಣಿಕೆ ಸಾಧ್ಯವಿಲ್ಲ. ಈಗ ಅಳಿದುಳಿದ ಎರಡೂ¾ರು ಜಾನುವಾರುಗಳನ್ನು ಸಾಕಲು ಕಬ್ಬಿನ ಸ್ವಾಗಿಮೇವು ಆಧಾರವಾಗಿದೆ. ಹೀಗಾಗಿ ಇದನ್ನೇ ಬಳಸಿಕೊಂಡು ಹೈನುಗಾರಿಕೆ ಮಾಡುತ್ತಿದ್ದೇವೆ.
ಮಂಜುನಾಥ ಪೂಜಾರ,
ಕಬ್ಬು ಬೆಳೆಗಾರ, ಮನಸೂರು.
*ಡಾ|ಬಸವರಾಜ ಹೊಂಗಲ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ರೀರಾಮನ ವನವಾಸದ ಚಿತ್ರಕೂಟ ಭಾರತೀಯರೆಲ್ಲ ವೀಕ್ಷಿಸಬೇಕಾದ ಸ್ಥಳ;ವಿದ್ಯಾಧೀಶ ತೀರ್ಥ ಸ್ವಾಮೀಜಿ

ಅಂಚೆ ಸೇವೆಗಳಿಗೆ ಸರ್ವರ್ ಸಮಸ್ಯೆ; ಗ್ರಾಹಕರ ಪರದಾಟ-ಕಚೇರಿಗೆ ನಿತ್ಯ ಅಲೆದಾಟ

ಮೀಸಲಾತಿ ವಿಚಾರದಲ್ಲೂ ರಾಜಕೀಯ ಸಲ್ಲ: ಜಗದೀಶ್ ಶೆಟ್ಟರ್

ಧಮಕಿ ಹಾಕುವುದು- ಹೊಡೆಯುವುದು ಡಿಕೆಶಿ- ಸಿದ್ದರಾಮಯ್ಯ ಸಂಸ್ಕೃತಿ: ಪ್ರಹ್ಲಾದ ಜೋಶಿ

ಇಡಬ್ಲೂಎಸ್ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರಕಾರದಿಂದ ನಿರ್ಲಕ್ಷ್ಯ: ಹನುಮಂತ ಡಂಬಳ