ಪೇರಲ ಆದಾಯಕ್ಕೆ ಕೋವಿಡ್ ಕೊಕ್ಕೆ
ಫಸಲು ಕೈಗೆಟುಕುವಾಗಲೇ ಕೊರೊನಾ ಕಂಟಕ ! ಎರಡು ವರ್ಷದಿಂದ ತಪ್ಪದ ನಷ್ಟ
Team Udayavani, May 24, 2021, 7:45 PM IST
ವರದಿ : ಸಿದ್ಧಲಿಂಗಯ್ಯ ಮಣ್ಣೂರಮಠ
ನರಗುಂದ: ಸಮೃದ್ಧವಾಗಿ ಬೆಳೆದು ನಿಂತ ಫಸಲು.. ಗಿಡದ ತುಂಬೆಲ್ಲ ಕಾಯಿಗಳು.. ಆದರೂ ರೈತನಿಗಿಲ್ಲ ಹರ್ಷ…ಕಾರಣ ಬೆಳೆದ ಪೇರಲ ಹಣ್ಣುಗಳ ಮಾರಾಟಕ್ಕೆ ಆವರಿಸಿದೆ ಕೊರೊನಾ ಕರಿನೆರಳು. ಹೀಗಾಗಿ ಪೇರಲ ಬೆಳೆಗಾರ ಕಣ್ಣೀರು ಸುರಿಸುವಂತಾಗಿದೆ!. ಇದು ತಾಲೂಕಿನ ಕುರ್ಲಗೇರಿ ಗ್ರಾಮದ ಮಹದಾಯಿ ಹೋರಾಟಗಾರ, ರೈತ ಯಲ್ಲಪ್ಪ ಚಲವಣ್ಣವರ ಗೋಳು.
ದೇಶದ ಜನರ ಬದುಕನ್ನೇ ಕಿತ್ತುಕೊಂಡ ಕೊರೊನಾ ಮಹಾಮಾರಿ ರೈತರ ಕೃಷಿ ಚಟುವಟಿಕೆಗೆ ಮಾತ್ರವಲ್ಲದೇ ರೈತನ ತುತ್ತಿನ ಅನ್ನಕ್ಕೂ ಕುತ್ತು ತಂದೊಡ್ಡಿದೆ.
ಒಂದು ಎಕರೆ ಪೇರಲ: ಯಲ್ಲಪ್ಪ ಚಲವಣ್ಣವರ ಗ್ರಾಮದ ಗದಗ ಒಳರಸ್ತೆಗೆ ಹೊಂದಿಕೊಂಡ ಒಂದೇ ಎಕರೆ ಜಮೀನಿನಲ್ಲಿ ಸರ್ಕಾರದ ಸಹಾಯಧನದಲ್ಲಿ ಪೇರಲ ಬೆಳೆದಿದ್ದಾರೆ. ಪೇರಲ ಸಸಿಗಳು ನಾಲ್ಕನೇ ವರ್ಷ ಅವಧಿಯಲ್ಲಿವೆ. ಬೆಣ್ಣಿ ಹಳ್ಳದಿಂದ ಪೈಪ್‌ಲೈನ್‌ನಿಂದ ನೀರಿನ ವ್ಯವಸ್ಥೆಯಿದೆ. ಕೃಷಿ ಹೊಂಡವೂ ಬೆಳೆಗೆ ಸಹಕಾರಿಯಾಗಿದೆ.
ಕೇಳ್ಳೋರಿಲ್ಲ ಪೇರಲ!: ಪೇರಲ ಸಮೃದ್ಧವಾಗಿ ಬೆಳೆದು ನಿಂತಿದ್ದರೂ ಫಲ ರೈತನಿಗೆ ದೊರಕುತ್ತಿಲ್ಲ. ಕಳೆದೆರಡು ವರ್ಷಗಳಿಂದ ಕೊರೊನಾ ಮಹಾಮಾರಿ ರೈತ ಯಲ್ಲಪ್ಪನ ಪೇರಲ ಹಣ್ಣುಗಳ ಮಾರಾಟಕ್ಕೂ ಮಗ್ಗಲು ಮುಳ್ಳಾಗಿ ಕಾಡುತ್ತಿದೆ. ಪರಿಣಾಮ ಕಾಣದ ವೈರಸ್ ರೈತನ ಅನ್ನವನ್ನೇ ಕಸಿದಿದೆ.
ಸಾವಯವ ಬಳಕೆ: ರಾಸಾಯನಿಕ ಗೊಬ್ಬರದ ಮೊರೆ ಹೋಗದ ರೈತ ಯಲ್ಲಪ್ಪ ಪೇರಲ ಗಿಡಗಳಿಗೆ ತಮ್ಮ ಕೊಟ್ಟಿಗೆಯಿಂದ ಸಂಗ್ರಹಿಸಿದ ಸಗಣಿ ಗೊಬ್ಬರವನ್ನೇ ಬಳಸಿ ಸಾವಯವ ಕೃಷಿಗೆ ಒತ್ತು ನೀಡಿದ್ದಾರೆ. ಪೇರಲ ನಾಟಿ ಮಾಡಿದ ಮೇಲೆ 2 ವರ್ಷದ ಬಳಿಕ ಅದರ ಫಸಲು ರೈತನಿಗೆ ದೊರಕುತ್ತದೆ. ಕಳೆದ ವರ್ಷ ಮಾರ್ಚ್ ವೇಳೆಗೆ ಪೇರಲ ಮಾರಾಟಕ್ಕೆ ಸಜ್ಜಾಗುವ ವೇಳೆಗೆ ಕೊರೊನಾ ವಕ್ಕರಿಸಿ ರೈತನಿಗೆ ಅದರ ಫಲ ದೊರಕಲಿಲ್ಲ. ಈ ವರ್ಷ ಮಾರ್ಚ್ ಪೂರ್ವದಲ್ಲಿ ಒಂದಷ್ಟು ಪೇರಲ ಮಾರಾಟ ಮಾಡಿದ ರೈತನಿಗೆ ಮತ್ತೆ ಕೊರೊನಾ ಎರಡನೇ ಅಲೆ ಆದಾಯವನ್ನೇ ಕಿತ್ತುಕೊಂಡಿದೆ. ಪ್ರಸಕ್ತ ಸಾಲಿನಲ್ಲಿ ಪೇರಲ ಮಾರಾಟಕ್ಕೆ ಸಜ್ಜಾಗಿದ್ದರು. ಆದರೆ ಕೊರೊನಾ ಲಾಕ್‌ಡೌನ್ ಪರಿಣಾಮ ಪೇರಲ ಕೇಳುವವರೇ ಇಲ್ಲದಂತಾಗಿದೆ.
ವರ್ಷಕ್ಕೆ 15ರಿಂದ 20 ಸಾವಿರ ಖರ್ಚು ಮಾಡಿದ್ದು, ಈ ವರ್ಷವೂ 50 ಸಾವಿರ ರೂ.ನಷ್ಟು ನಷ್ಟ ರೈತ ಅನುಭವಿಸುವಂತಾಗಿದೆ. ಪೇರಲ ತೋಟದಲ್ಲಿ ಮಿಶ್ರ ಬೆಳೆಗೆ ಒತ್ತುಕೊಟ್ಟ ಯಲ್ಲಪ್ಪ ಚಲವಣ್ಣವರ 176 ಪೇರಲ ಗಿಡಗಳ ಮಧ್ಯೆ ಬದನೆ, ಪಪ್ಪಾಯಿ, ಕರಿಬೇವು ಬೆಳೆದಿದ್ದಾರೆ. ಒಟ್ಟಾರೆ ರೈತನ ಪೇರಲ ಮಾರಾಟಕ್ಕೆ ಕೊರೊನಾ ಕರಿನೆರಳು ಆವರಿಸಿದ್ದು, ರೈತ ನಷ್ಟ ಎದುರಿಸುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಶ್ವಗುರು ಭಾರತ 100ನೇ ಸಂಚಿಕೆ ಬಿಡುಗಡೆ; 5ಜಿ ಸೇವೆ ಶೀಘ್ರ ಕಾರ್ಯಾರಂಭ: ಸಚಿವೆ ನಿರ್ಮಲಾ
ಜಾತಿ ಪ್ರಮಾಣಪತ್ರ ಪ್ರಕರಣ: ಸಮೀರ್ ವಾಂಖೆಡೆ ಮುಸ್ಲಿಂ ಸಮುದಾಯದವರಲ್ಲ’
ಏಷ್ಯಾ ಕಪ್, ಟಿ20 ವಿಶ್ವಕಪ್: ಶಕಿಬ್ ಅಲ್ ಹಸನ್ ಬಾಂಗ್ಲಾ ನಾಯಕ
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ವಿಜೇತರಿಗೆ ಐಒಎ ನಗದು ಪುರಸ್ಕಾರ
ರಾಯಲ್ ಲಂಡನ್ ವನ್-ಡೇ ಕಪ್: ಚೇತೇಶ್ವರ ಪೂಜಾರ ಶತಕ ವ್ಯರ್ಥ