ಸೋಂಕಿತರಿಗೆ ಕೆಎಚ್‌ಪಿ ಫೌಂಡೇಶನ್ ನೆರವು
ಕೋವಿಡ್ ವಿರುದ್ಧ ಸಮರಕ್ಕೆ ಟೊಂಕ ಕಟ್ಟಿ ನಿಂತ ಪ್ರತಿಷ್ಠಾನ ! ಬಡ ರೋಗಿಗಳ ಚಿಕಿತ್ಸೆಗೆ ಸಹಾಯಹಸ್ತ
Team Udayavani, May 24, 2021, 7:41 PM IST
ವರದಿ : ವೀರೇಂದ್ರ ನಾಗಲದಿನ್ನಿ
ಗದಗ: ಜಿಲ್ಲಾದ್ಯಂತ ಕೋವಿಡ್ ಸೋಂಕು ದಿನದಿಂದ ದಿನಕ್ಕೆ ವ್ಯಾಪಿಸುತ್ತಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಅನೇಕರಿಗೆ ಬೆಡ್ ಸಿಗದೇ ಪರದಾಡುವಂತಾಗಿದೆ. ಹೀಗಾಗಿ ಹುಲಕೋಟಿಯ ಕೆ.ಎಚ್. ಪಾಟೀಲ ಪ್ರತಿಷ್ಠಾನದಿಂದ ನಗರದಲ್ಲಿ ಕೋವಿಡ್ ಕೇರ್ ಆಸ್ಪತ್ರೆ ಸ್ಥಾಪಿಸಿ, ಬಡ ರೋಗಿಗಳ ಚಿಕಿತ್ಸೆಗೆ ನೆರವಿನ ಹಸ್ತ ಚಾಚಿದೆ.
ಕೋವಿಡ್ ವಿರುದ್ಧದ ಸಮರದಲ್ಲಿ ಜಿಲ್ಲಾಡಳಿತದೊಂದಿಗೆ ಕೆ.ಎಚ್. ಪಾಟೀಲ ಪ್ರತಿಷ್ಠಾನ ಟೊಂಕಕಟ್ಟಿ ನಿಂತಿದೆ. ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ ಹುಲಕೋಟಿ, ಕೆ.ಎಚ್. ಪಾಟೀಲ ಪ್ರತಿಷ್ಠಾನ, ಶ್ರೀಮದ್ ರಾಜ್‌ಚಂದ್ರ ಲವ್ ಆ್ಯಂಡ್ ಕೇರ್, ಬೆಂಗಳೂರಿನ ಉದ್ಯಮಶೀಲತೆ(ಎಂಟರ್‌ಪೆನರ್ ಶಿಪ್) ಸಂಘಟನೆ ಸಹಯೋಗದಲ್ಲಿ ಇಲ್ಲಿನ ಹುಬ್ಬಳ್ಳಿ ರಸ್ತೆಯಲ್ಲಿರುವ ಪರಿಸರ ಲೇಔಟ್‌ನಲ್ಲಿರುವ ಹುಲಕೋಟಿ ಸಹಕಾರ ಸಂಘಗಳ ಬೃಹತ್ ಕಟ್ಟಡದಲ್ಲಿ ಸುಸಜ್ಜಿತ ಕೋವಿಡ್ ಕೇರ್ ಆಸ್ಪತ್ರೆ ತಲೆ ಎತ್ತಿದೆ.
ಆಸ್ಪತ್ರೆಯಲ್ಲಿ ಏನೇನಿದೆ?:
ಕೋವಿಡ್ ಕೇರ್ ಆಸ್ಪತ್ರೆ ನೆಲಮಹಡಿ ಹಾಗೂ ಮೊದಲ ಮಹಡಿ ಸೇರಿದಂತೆ 16 ಕೋಣೆಗಳಲ್ಲಿ ಒಟ್ಟು 65 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಬೆಡ್‌ಗೆ ಸಲೈನ್ ಹಚ್ಚಲು ಐವಿ ಸ್ಟ್ಯಾಂಡ್ ವ್ಯವಸ್ಥೆ ಮಾಡಲಾಗಿದೆ. 10 ಲೀಟರ್ ಸಾಮರ್ಥ್ಯದ 25 ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ 25 ಜಂಬೋ ಸಿಲಿಂಡರ್ ಸೇರಿದಂತೆ ಸೋಂಕಿತರ ಚಿಕಿತ್ಸೆಗಾಗಿ ಅಗತ್ಯ ವೈದ್ಯಕೀಯ ಪರಿಕರ ಒದಗಿಸಲಾಗಿದೆ. ಪ್ರತಿ ದಿನ ಬೆಳಗ್ಗೆ ಹಾಗೂ ರಾತ್ರಿ ಪಾಳೆಯಲ್ಲಿ ತಲಾ ಇಬ್ಬರು ಎಂಬಿಬಿಎಸ್ ವೈದ್ಯರು ನಿರಂತರ ಕಾರ್ಯ ನಿರ್ವಹಿಸಲಿದ್ದಾರೆ. ಜತೆಗೆ ಇಬ್ಬರು ತಜ್ಞ ವೈದ್ಯರಾದ ಡಾ| ವೇಮನ ಸಹುಕಾರ, ಡಾ| ಕೃಷ್ಣಾ ಹೂಲಿ ರೌಂಡ್ಸ್ ನಡೆಸುವರು. ಪ್ರತಿಯೊಬ್ಬ ರೋಗಿಯ ಆರೋಗ್ಯ ವರದಿ ಪಡೆದು, ಮಾರ್ಗದರ್ಶನ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಮನಃಶಾಸ್ತ್ರ ಹಾಗೂ ಮತ್ತಿತರೆ ತಜ್ಞರ ಸೇವೆ ಕಲ್ಪಿಸಲು ಉದ್ದೇಶಿಸಿದೆ.
ಬಡವರಿಗೆ ಮೊದಲಾದ್ಯತೆ: ಕೆ.ಎಚ್. ಪಾಟೀಲ ಪ್ರತಿಷ್ಠಾನ ಆರಂಭಿಸಿರುವ ಕೋವಿಡ್ ಆಸ್ಪತ್ರೆಯಲ್ಲಿ ಬಡವರಿಗೆ ವಿಶೇಷ ಆದ್ಯತೆ ಕಲ್ಪಿಸಲಾಗಿದೆ. ರೆಮ್ ಡೆಸಿವಿಯರ್ ಹಾಗೂ ಕೆಲ ದುಬಾರಿ ಔಷಧ ಹೊರತುಪಡಿಸಿ ಬೆಡ್, ಔಷಧ ಹಾಗೂ ವೈದ್ಯಕೀಯ ಸೇವೆ, ಅಗತ್ಯವಿದ್ದವರಿಗೆ ಆಕ್ಸಿಜನ್ ಸೌಲಭ್ಯವನ್ನೂ ಉಚಿತವಾಗಿ ಕಲ್ಪಿಸಲಾಗುತ್ತದೆ. ಆರ್‌ಟಿಪಿಸಿಆರ್‌ನಲ್ಲಿ ಸೋಂಕು ದೃಢಪಟ್ಟವರು, ಆರ್‌ಟಿಪಿಸಿಆರ್ ವರದಿ ನೆಗೆಟಿವ್ ಆಗಿದ್ದರೂ, ಸೋಂಕಿನ ಲಕ್ಷಣಗಳಿದ್ದಲ್ಲಿ ಸಿಟಿ ಸ್ಕಾನ್‌ನಲ್ಲಿ ಲಕ್ಷಣಗಳು ಕಂಡುಬಂದು, ವೈದ್ಯಕೀಯ ಸೇವೆ ಅಗತ್ಯವಿದ್ದವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲಾಗುತ್ತದೆ.
ಆಸ್ಪತ್ರೆಯು ಕೆಲ ಅತ್ಯಾಧುನಿಕ ಸೌಲಭ್ಯ ಹೊಂದಿದ್ದರೂ ವೆಂಟಿಲೇಟರ್ ಸೌಲಭ್ಯಗಳಿಲ್ಲ. ಹೀಗಾಗಿ ಗಂಭೀರ ಸ್ವರೂಪದ ರೋಗಿಗಳಿಗೆ ಅವಕಾಶ ನೀಡುವುದಿಲ್ಲ ಎನ್ನುತ್ತಾರೆ ಕೋವಿಡ್ ಕೇರ್ ಆಸ್ಪತ್ರೆಯ ಉಸ್ತುವಾರಿ ಡಾ| ವೇಮನ ಸಾಹುಕಾರ. ಒಟ್ಟಾರೆ, ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ನರಳುತ್ತಿರುವ ಕೋವಿಡ್ ರೋಗಿಗಳಿಗೆ ಈ ಆಸ್ಪತ್ರೆ ಆಸರೆಯಾಗಲಿದೆ. ಅಲ್ಲದೇ, ಕೆ.ಎಚ್. ಪಾಟೀಲ ಪ್ರತಿಷ್ಠಾನದಿಂದ ಆರಂಭಗೊಳ್ಳುತ್ತಿರುವ ಕೋವಿಡ್ ಕೇರ್ ಆಸ್ಪತ್ರೆ ಇತರರಿಗೆ ಮಾದರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಡಬಕ್ಕೆ ಜಿಲ್ಲಾಧಿಕಾರಿ ಭೇಟಿ : ಇಕ್ಕಟ್ಟಿನ ತಾಲೂಕು ಕಛೇರಿಯಲ್ಲಿ ಸಾರ್ವಜನಿಕರ ಪರದಾಟ!
ಹುಬ್ಬಳ್ಳಿ ಹೋಟೆಲ್ ನಲ್ಲಿ ‘ಸರಳ ವಾಸ್ತು’ ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ!
ಅಸ್ವಸ್ಥಗೊಂಡಿದ್ದ ಮಗು ಸಾವು: ವೈದ್ಯರ ನಿರ್ಲಕ್ಷ್ಯ ಖಂಡಿಸಿ ಪೋಷಕರ ಆಕ್ರೋಶ
ಒಣ ಮೀನಿಗೆ ಮೊರೆ ಹೋಗುವ ಮೀನು ಪ್ರಿಯರು
ಪ್ರತಿಕೂಲ ಹವಾಮಾನ; ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ, 3,000 ಯಾತ್ರಾರ್ಥಿಗಳು ಅತಂತ್ರ