ಅರ್ಧ ಗಂಟೆ ಹೆದ್ದಾರಿ ತಡೆದ ಒಂಟಿ ಸಲಗ! ಕಿ.ಮೀ.ವರೆಗೆ ಟ್ರಾಫಿಕ್ ಜಾಮ್
ವಾಹನ ಸವಾರರು ಭಯಭೀತ
Team Udayavani, Mar 5, 2021, 7:24 PM IST
ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ -75 ಶಿರಾಡಿ ಘಾಟಿಯಲ್ಲಿ ಕಳೆದ ವಾರ ವ್ಯಕ್ತಿಯೊಬ್ಬನನ್ನು ತುಳಿದು ಸಾಯಿಸಿದ್ದ ಕಾಡಾನೆ, ಮತ್ತೆ ಪ್ರತ್ಯಕ್ಷವಾಗಿ ಅರ್ಧಗಂಟೆ ಹೆದ್ದಾರಿಯಲ್ಲಿ ನಿಂತು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣ ಮಾಡಿತ್ತು.
ಫೆ.25 ರಂದು ರಾಷ್ಟ್ರೀಯ ಹೆದ್ದಾರಿ-75ರ ಶಿರಾಡಿ ಘಾಟ್‌ನ ಕೆಂಪುಹೊಳೆ ರಕ್ಷಿತಾರಣ್ಯದಿಂದ ಆಗಮಿಸಿದ ಒಂಟಿಸಲಗ ಹೆದ್ದಾರಿಯಲ್ಲಿ ಸಂಚರಿಸಿದ ಪರಿಣಾಮ, ರಾಜಸ್ಥಾನ ಮೂಲದ ಕಂಟೈನರ್ ಲಾರಿ ಚಾಲಕ ವಕೀಲ್ (25)ಎಂಬಾತ ಕಾಡಾನೆ ದಾಳಿಗೆ ಬಲಿಯಾಗಿದ್ದ. ಈ ಘಟನೆ ಮರೆಯುವ ಮೊದಲೇ ಕಾಡಾನೆ ಮತ್ತೂಮ್ಮೆ ಜೋಡಿ ತಿರುವು ಸಮೀಪ ಹೆದ್ದಾರಿ ಮಧ್ಯದಲ್ಲಿಅರ್ಧಗಂಟೆಗೂ ಹೆಚ್ಚು ಕಾಲ ನಿಂತು,ಆತಂಕ ಸೃಷ್ಟಿಸಿತ್ತು. ಪರಿಣಾಮ ಹೆದ್ದಾರಿಯ ಎರಡು ಬದಿಯಲ್ಲಿ ವಾಹನಗಳು ಸಂಚರಿಸದೆ, ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಂ ಉಂಟಾಯಿತು.
ಆನೆಯ ಹತ್ತಿರವಿದ್ದ ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದರು.ಅದೃಷ್ಟವಷಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಸಂಜೆ 5 ಗಂಟೆಯಿಂದ ಕಾಡಾನೆ ಸ್ಥಳದಲ್ಲೆ ನಿಂತಿದೆ ಎಂದು ಹೇಳಲಾಗುತ್ತಿದೆ. ಅರಣ್ಯ ಇಲಾಖೆಯವರು ಕಾಡಾನೆ ಓಡಿಸಲು ತಡವಾಗಿ ಆಗಮಿಸಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಒಟ್ಟಾರೆಯಾಗಿ ತಾಲೂಕಿನಲ್ಲಿಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಇದಕ್ಕೆ ಪರಿಹಾರ ಹುಡುಕುವಲ್ಲಿಸರ್ಕಾರಗಳು ವಿಫಲವಾಗಿವೆ. ಕನಿಷ್ಠ ಹೆದ್ದಾರಿ ಬದಿ ರೈಲು ತಡೆಗೋಡೆಗಳನ್ನುಅಳವಡಿಸುವ ಕೆಲಸ ಮಾಡಿದರೆ ಕಾಡಾನೆಗಳು ಸೇರಿ ಇತರ ವನ್ಯಪ್ರಾಣಿಗಳು ರಸ್ತೆಗೆ ಬರುವುದು ತಪ್ಪುತ್ತದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿ ಬದಿ ಶೀಘ್ರರೈಲು ತಡೆಗೋಡೆ ಅಳವಡಿಸಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.