ಜಿಲ್ಲೆಯಿಂದ ದೂರಾಗುತ್ತಿದ್ದಾರೆಯೇ ದೊಡ್ಡ ಗೌಡರು ?

Team Udayavani, Sep 11, 2019, 11:26 AM IST

ಹಾಸನ: ಲೋಕಸಭಾ ಚುನಾವಣೆ ಮಗಿದ ನಂತರ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತವರು ಜಿಲ್ಲೆ ಹಾಸನದ ಕಡೆ ಬರುವುದನ್ನೇ ಬಿಟ್ಟಿದ್ದಾರೆ. ಸಂಸದರಾಗಿದ್ದಾಗ ಕನಿಷ್ಠ ತಿಂಗಳಿಗೊಮ್ಮೆಯಾದರೂ ಹಾಸನ ಜಿಲ್ಲೆಯ ಯಾವು ದಾದರೊಂದು ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಲೋಕಸಭಾ ಚುನಾವಣಾ ಫ‌ಲಿತಾಂಶ ಪ್ರಕಟ ವಾದ 3 ತಿಂಗಳ ನಂತರ ಎರಡು ಬಾರಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದನ್ನು ಬಿಟ್ಟರೆ ಹಾಸನ ಜಿಲ್ಲೆಗೆ ಬರಲು ದೇವೇಗೌಡರು ಆಸಕ್ತಿ ತೋರುತ್ತಿಲ್ಲ.

ಕಾರ್ಯಕರ್ತರ ನಿರಾಸಕ್ತಿ: ಹಾಸನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸಿದ ಜಿಲ್ಲೆಯ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞನತಾ ಸಮಾ ವೇಶ ಮತ್ತು ರಾಜ್ಯ ಜೆಡಿಎಸ್‌ ಅಧ್ಯಕ್ಷರಾಗಿ ನೇಮಕ ವಾಗಿರುವ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರ ಅಭಿನಂದನಾ ಕಾರ್ಯಕ್ರಮ ಸೆ.5 ರಿಂದ ಸೆ.9 ವರೆಗೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಆಯಾ ತಾಲೂಕು ಜೆಡಿಎಸ್‌ ವತಿಯಿಂದ ಹಮ್ಮಿಕೊಳ್ಳ ಲಾಗಿತ್ತು. ಈ ಕಾರ್ಯಕ್ರಮಗಳಲ್ಲಿ ದೇವೇಗೌಡರು ಪಾಲ್ಗೊಳ್ಳುವರು ಎಂದು ಪಕ್ಷದ ಮುಖಂಡರೂ ಹೇಳಿ ದ್ದರು. ಆದರೆ ಒಂದು ವಾರ ನಡೆದ ಈ ಕಾರ್ಯಕ್ರಮ ಗಳಲ್ಲೂ ದೇವೇಗೌಡರು ಭಾಗವಹಿಸಲಿಲ್ಲ. ದೇವೇ ಗೌಡರ ಆಗಮನದ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರು ಅವರು ಬರುವುದಿಲ್ಲವೆಂಬ ಮಾಹಿತಿ ಪಡೆದ ಕಾರ್ಯ ಕರ್ತರು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನಡೆದ ಸಭೆ ಗಳಿಗೂ ಬರುವ ಉತ್ಸಾಹ ತೋರಲಿಲ್ಲ. ಹಾಗಾಗಿ ಸಭೆಗಳಲ್ಲಿ ಕಾರ್ಯಕರ್ತರ ಕೊರತೆ ಎದ್ದು ಕಾಣುತ್ತಿತ್ತು.

ತುಮಕೂರು ಸೋಲಿನಿಂದ ಬೇಸರ? ತುಮಕೂರು ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಸೋಲು ಹಾಗೂ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಪತನ ದೇವೇಗೌಡರಿಗೆ ಬಹಳ ಬೇಸರವಾಗಿರ ಬಹುದು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದೇವೇಗೌಡರು ಹಾಸನ ಜಿಲ್ಲೆಯಿಂದಲೂ ದೂರ ವಾಗುತ್ತಿದ್ದಾರೆಯೇ ಎಂಬ ಅನುಮಾನ ದೇವೇಗೌಡ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರನ್ನು ಕಾಡುತ್ತಿದೆ.

ಒಂದೆರಡು ಚುನಾವಣೆಗಳನ್ನು ಹೊರತುಪಡಿಸಿದರೆ ಹಾಸನ ಜಿಲ್ಲೆಯ ಜನರು 80ರ ದಶಕದಿಂದಲೂ ದೇವೇಗೌಡರು ಮತ್ತು ಅವರ ಪಕ್ಷವನ್ನು ಕೈ ಬಿಟ್ಟಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಂದರೆ 2018ರ ಚುನಾವಣೆಯಲ್ಲಿ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದ ಹಾಸನ ಜಿಲ್ಲೆಯ ಮತದಾರರು ಕಳೆದ ಮೇ ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಬೀಸಿದ ಮೋದಿ ಅಲೆಯ ನಡುವೆಯೂ ದೇವೇಗೌಡ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು 1.42 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಹಾಸನ ಜಿಲ್ಲೆಯ ಜನರು ದೇವೇಗೌಡರ ಕೈಬಿಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಆದರೂ ದೇವೇಗೌಡರೇಕೆ ಜಿಲ್ಲೆ ಯಿಂದ ದೂರವಾಗುತ್ತಿದ್ದಾರೆ? ತುಮಕೂರು ಲೋಕ ಸಭಾ ಕ್ಷೇತ್ರದಲ್ಲುಂಟಾದ ಸೋಲು ದೇವೇಗೌಡರಿಗೆ ನೋವು ಉಂಟು ಮಾಡಿರಬಹುದು. ಆದರೆ ಅಷ್ಟೇ ನೋವು, ಸಂಕಟವನ್ನು ಹಾಸನ ಜಿಲ್ಲೆಯ ಜೆಡಿಎಸ್‌ ಕಾರ್ಯಕರ್ತರು, ದೇವೇಗೌಡರ ಅಭಿಮಾನಿಗಳು ಅನು ಭವಿಸಿದ್ದಾರೆ. ಆ ಸೋಲಿನಿಂದ ದೇವೇಗೌಡರು ಎದೆಗುಂದುವುದು ಬೇಡ. ದೇವೇಗೌಡರು ಮುಖ್ಯ ಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ, ಅವರ ಮಗ ಎಚ್.ಡಿ.ರೇವಣ್ಣ ಅವರೂ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಬಹಳ ಕೊಡುಗೆ ನೀಡಿದ್ದಾರೆ. ಅದನ್ನು ಜಿಲ್ಲೆಯ ಜನರು ಮರೆತಿಲ್ಲ. ಆದ್ದರಿಂದ ದೇವೇಗೌಡರು ಹಾಸನ ಜಿಲ್ಲೆಯತ್ತ ಬರಲಿ ಎಂಬುದು ಮಾತ್ರ ಜೆಡಿಎಸ್‌ ಕಾರ್ಯಕರ್ತರ ಒತ್ತಾಯ.

ಮೊಮ್ಮಗನಿಗಾಗಿ ಕ್ಷೇತ್ರ ತ್ಯಾಗ: ಲೋಕಸಭಾ ಚುನಾ ವಣೆಗೆ ಹಾಸನ ಲೋಕಸಭಾ ಕ್ಷೇತ್ರದಿಂದಲೇ ದೇವೇ ಗೌಡರು ಸ್ಪರ್ಧೆಗಿಳಿಯಬೇಕು. ಅವರ ವಯಸ್ಸಿನ ದೃಷ್ಟಿಯಿಂದ ಅವರ ರಾಜಕೀಯ ಜೀವನದ ಕೊನೆಯ ಚುನಾವಣೆಯಲ್ಲಿ ಜಿಲ್ಲೆಯ ಮಣ್ಣಿನ ಮಗ ನಿಗೆ ಒಂದು ಓಟು ಹಾಕಬೇಕು ಎಂಬುದು ಜಿಲ್ಲೆಯ ಬಹುಜನರ ಬಯಕೆಯಾಗಿತ್ತು. ಆದರೆ ತಮ್ಮ ಕುಟುಂಬದ ಮೂರನೇ ತಲೆಮಾರು ಹಾಸನ ಜಿಲ್ಲೆಯ ರಾಜಕಾರಣದಲ್ಲಿ ನೆಲೆಯೂರಲು ದೇವೇಗೌಡರು ತಮ್ಮ ಮೊಮ್ಮಗನಿಗೆ ಹಾಸನ ಕ್ಷೇತ್ರ ವನ್ನು ಧಾರೆ ಎರೆದು ಮೊಮ್ಮಗನನ್ನು ಕೈ ಬಿಡಬೇಡಿ ಎಂಬ ಮನವಿಗೂ ಜಿಲ್ಲೆಯ ಜನ ಸ್ಪಂದಿಸಿದ್ದಾರೆ. ದೇವೇಗೌಡರು ಜಿಲ್ಲೆಗೆ ಬರಲಿ ಎಂಬುದು ಜೆಡಿಎಸ್‌ ಕಾರ್ಯಕರ್ತರ ಬಯಕೆ.

 

● ಎನ್‌. ನಂಜುಂಡೇಗೌಡ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ