ಏರ್‌ಫೋರ್ಸ್ ಪೈಲಟ್ ಹುದ್ದೆಗೆ ಪುನೀತ ನೇಮಕ
Team Udayavani, May 31, 2021, 8:07 PM IST
ಹಿರೇಕೆರೂರ: ಗ್ರಾಮೀಣ ಪ್ರತಿಭಾವಂತ ಯುವಕನೊಬ್ಬ ಏರ್‌ಫೋರ್ಸ್ ಪೈಲೆಟ್ ಹುದ್ದೆಗೆ ನೇಮಕಗೊಳ್ಳುವ ಮೂಲಕ ಗ್ರಾಮದ ಹಿರಿಮೆ ಹೆಚ್ಚಿಸಿದ್ದಾನೆ.
ರಟ್ಟಿಹಳ್ಳಿ ತಾಲೂಕಿನ ಹೊಸಳ್ಳಿ ಗ್ರಾಮದ ರಾಜಶೇಖರ ಗೌರಮ್ಮ ದಂಪತಿ ಪುತ್ರ ಪುನೀತ ಬಣಕಾರ ಈ ಸಾಧನೆ ಮಾಡಿದ್ದಾರೆ. 2011ರಲ್ಲಿ ಕೊಡಗು ಸೈನಿಕ ಶಾಲೆಯಲ್ಲಿ 6ರಿಂದ ದ್ವಿತೀಯ ಪಿಯುಸಿವರೆಗೆ ಅಭ್ಯಾಸ ಮಾಡಿ 2019ರಲ್ಲಿ ಜರುಗಿದ ಯುಪಿಎಸ್‌ಸಿ (ನ್ಯಾಶನಲ್ ಡಿಫೆನ್ಸ್ ಆಕಾಡೆಮಿ) ಪರೀಕ್ಷೆಯ 140ನೇ ಬ್ಯಾಚಿನಲ್ಲಿ ತೇರ್ಗಡೆ ಹೊಂದಿ, ಏರ್‌ಫೋರ್ಸ್ ಪೈಲೆಟ್ ಹುದ್ದೆಗೆ ಆಯ್ಕೆಯಾಗಿ ಮಹಾರಾಷ್ಟ್ರದ ಪುಣೆಯ ಕಡಕ ವಾಸ್ಲಾದಲ್ಲಿ ಫೋರ್ಸ್ ಪೈಲೆಟ್ 3 ವರ್ಷಗಳ ತರಬೇತಿ ಪಡೆದು, ಮೇ 29ರಂದು ನಡೆದ ಪಾಸಿಂಗ್ ಔಟ್ ಪರೇಡ್‌ನಲ್ಲಿ ತೇರ್ಗಡೆ ಹೊಂದಿ ಮುಂದಿನ ಒಂದು ವರ್ಷದ ತರಬೇತಿಗಾಗಿ ಫೈಟರ್ ಪೈಲೆಟ್ ವಿಶೇಷ ತರಬೇತಿ ಪಡೆಯಲು ಹೈದರಾಬಾದಗೆ ತೆರಳಿದ್ದಾರೆ.
ಇತ್ತ ಹೊಸಳ್ಳಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. ತಂದೆ ರಾಜಶೇಖರ, ತಾಯಿ ಗೌರಮ್ಮ ತಮ್ಮ ಪುತ್ರನ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.