ಕಸದ ತೊಟ್ಟಿಗಳಾದ ಖಾಲಿ ನಿವೇಶನಗಳು

Team Udayavani, Oct 1, 2019, 2:29 PM IST

ಹಾವೇರಿ: ದೇಶದೆಲ್ಲೆಡೆ ಈಗ ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಆದರೆ, ಹಾವೇರಿ ನಗರಸಭೆ ಮಾತ್ರ ಇದಕ್ಕೆ ಹೊರತಾಗಿದೆ. ನಗರದಲ್ಲಿ ಅಸ್ವಚ್ಛತೆ ತಾಂಡವಾಡುತ್ತಿದ್ದು, ಅದರಲ್ಲೂ ಖಾಲಿ ನಿವೇಶನಗಳಂತೂ ಕಸದ ತೊಟ್ಟಿಗಳಾಗಿ ಮಾರ್ಪಟ್ಟು ಸುತ್ತಲಿನ ಜನರಿಗೆ ತಲೆನೋವಾಗಿ ಕಾಡುತ್ತಿವೆ. ನಗರದಲ್ಲಿ ನೂರಾರು ಖಾಲಿ ನಿವೇಶನಗಳಿದ್ದು, ಮಾಲೀಕರು ಅವುಗಳನ್ನು ಹಾಗೆಯೇ. ಬಿಟ್ಟಿರುವುದರಿಂದ ಅವು ಕಸದ ತೊಟ್ಟಿಯಂತಾಗಿವೆ.

ಜತೆಗೆ ಗಿಡಗಂಟಿಗಳು ಬೆಳೆದು ನಗರದ ಅಂದ ಕೆಡಿಸಿವೆ. ಜಿಲ್ಲಾ ಕೇಂದ್ರ ಹಾವೇರಿ ನಗರ ಬೆಳೆಯುತ್ತಲೇ ಇದೆ. ಜನಸಂಖ್ಯೆಗೆ ತಕ್ಕಂತೆ ಮೂಲ ಸೌಲಭ್ಯವೂ ಹೆಚ್ಚಬೇಕಿತ್ತು. ಆದರೆ, ಇಲ್ಲಿ ಘನ ತ್ಯಾಜ್ಯ ಪ್ರಮಾಣ ಮಾತ್ರ ಬೆಳೆಯುತ್ತಲೇ ಇದ್ದು, ಎಲ್ಲಿ ನೋಡಿದರಲ್ಲಿ ಕಸ, ಕೊಳಚೆಯ ಹಾವಳಿಯೇ ಅಧಿಕವಾಗಿದೆ. ಇದು ಬೆಳೆಯುತ್ತಿರುವ ಎಲ್ಲ ನಗರಗಳ ಸಮಸ್ಯೆ ಎಂದು ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿ ಧಿಗಳು ಜಾರಿಕೊಂಡರೂ, ಖಾಸಗಿ ಹಾಗೂ ಸರ್ಕಾರದ ಖಾಲಿ ಜಾಗವೆಲ್ಲ ಕೊಳಚೆಮುಕ್ತ ಮಾಡುವಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಅದೂ ಕೂಡ ಇಲ್ಲಿ ಆಗಿಲ್ಲ ಎಂಬುದು ಖೇದಕರ ಸಂಗತಿ.

ನಿವೇಶನಗಳೇ ಕಸದ ತೊಟ್ಟಿ: ನಗರದಲ್ಲಿ ಕಸ ಚೆಲ್ಲಲು ನಗರಸಭೆ ಎಲ್ಲ ಕಡೆ ತೊಟ್ಟಿ ಇಟ್ಟಿಲ್ಲ. ಆದರೆ, ಎಲ್ಲ ಬಡಾವಣೆಗಳಲ್ಲೂ ಖಾಲಿ ನಿವೇಶನಗಳಿವೆ. ಅವು ಈಗ ಕಸದ ತೊಟ್ಟಿಯಾಗಿ ಪರಿವರ್ತನೆಯಾಗಿವೆ. ಮನೆ ಕಟ್ಟಿಕೊಳ್ಳುವ ಉದ್ದೇಶದಿಂದ ಅನೇಕರು ನಿವೇಶನ ಖರೀದಿಸಿ ಇಟ್ಟುಕೊಂಡಿದ್ದಾರೆ ಹೊರತು ನಿವೇಶನ ಸುತ್ತ ಕಾಂಪೌಂಡ್‌ ನಿರ್ಮಿಸಿ, ಆಳೆತ್ತರ ಬೆಳೆದ ಗಿಡಗಂಟಿಗಳನ್ನು ಕಟಾವು ಮಾಡುವ ಕಾರ್ಯ ಮಾತ್ರ ಮಾಡುತ್ತಿಲ್ಲ. ಇದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಕಾಡಿನಲ್ಲಿ ಮನೆ ಮಾಡಿಕೊಂಡ ಅನುಭವವಾಗುತ್ತಿದೆ. ಕ್ರಿಮಿ ಕೀಟಗಳು, ಹಾವು ಚೇಳು, ವಿಷ ಜಂತುಗಳು ಖಾಲಿ ನಿವೇಶನಗಳಲ್ಲಿ ಮನೆ ಮಾಡಿಕೊಂಡಿವೆ. ಆಗಾಗ ಅಕ್ಕಪಕ್ಕದ ಮನೆಗಳಿಗೂ ಇವು ನುಗ್ಗಿ ಭಯದ ವಾತಾವರಣ ನಿರ್ಮಿಸುತ್ತಿವೆ.

ಆಳೆತ್ತರ ಬೆಳೆದಿದೆ ಪೊದೆ: ನಗರದಲ್ಲಿ ಇಂಥ ನೂರಾರು ಖಾಲಿ ನಿವೇಶನಗಳಿದ್ದು, ಅಲ್ಲೆಲ್ಲ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ನಿವೇಶನಗಳ ಮಾಲೀಕರು ಅವುಗಳನ್ನು ಕಟಾವು ಮಾಡುವ ಗೋಜಿಗೂ ಹೋಗುತ್ತಿಲ್ಲ. ಇದೇ ರೀತಿ ಸರ್ಕಾರಿ ಜಾಗಗಳೂ ಹಾಳು ಬಿದ್ದಿವೆ. ಉದ್ಯಾನವನಕ್ಕೆಂದು ಬಿಟ್ಟ ಅನೇಕ ಜಾಗವೂ ಇದೇ ರೀತಿ ಕಳೆ ಬೆಳೆದು ನಿಂತಿವೆ. ಇದು ನಗರದ ಸೌಂದರ್ಯ ಜತೆಗೆ ಪರಿಸರವನ್ನೇ ಹಾಳು ಮಾಡುತ್ತಿದೆ. ಆದರೂ ನಗರಸಭೆಯವರು ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇರುವ ಚರಂಡಿ, ರಸ್ತೆಯನ್ನೇ ಸ್ವಚ್ಛವಾಗಿಡುವುದು ತಲೆ ನೋವಾಗಿರುವಾಗ ಖಾಲಿ ನಿವೇಶನದಲ್ಲಿ ಬೆಳೆದ ಗಿಡಗಂಟಿ ಕತ್ತರಿಸುವುದು ಹೇಗೆ ಸಾಧ್ಯ ಎಂಬಂತೆ ವರ್ತಿಸುತ್ತಿದೆ. ಖಾಲಿ ನಿವೇಶನಗಳಲ್ಲಿ ಬೆಳೆದ ಗಿಡಗಳನ್ನು ಕಟಾವು ಮಾಡಿ ಸ್ವತ್ಛವಾಗಿಡುವುದು ಆಯಾ ನಿವೇಶನಗಳ ಮಾಲೀಕರ ಜವಾಬ್ದಾರಿ. ಈ ನಿಟ್ಟಿನಲ್ಲಿ ನಗರಸಭೆ ಆಡಳಿತ ಮಂಡಳಿ ಸಂಬಂಧಪಟ್ಟವರಿಗೆ ಸೂಕ್ತ ನೋಟಿಸ್‌ ಜಾರಿ ಮಾಡಿ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಕ್ರಮ ಕೈಗೊಳ್ಳಬೇಕಿದೆ.

ನಿವೇಶನದಲ್ಲಿ ಬೆಳೆದಿರುವ ಗಿಡಗಂಟಿ ತೆಗೆದು ಸ್ವತ್ಛಗೊಳಿಸುವಂತೆ ಹಲವಾರು ಬಾರಿ ಖಾಲಿ ನಿವೇಶನಗಳ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ. ಆದರೆ, ಕೆಲವರು ಇನ್ನೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ನಗರಸಭೆಯಿಂದಲೇ ಸ್ವತ್ಛಗೊಳಿಸಿ ಅದಕ್ಕೆ ತಗಲುವ ವೆಚ್ಚವನ್ನು ನಿವೇಶನ ಮಾಲೀಕರಿಂದ ವಸೂಲಿ ಮಾಡಲಾಗುವುದು.  –ಪರಿಸರ ಅಧಿಕಾರಿ, ನಗರಸಭೆ

 

-ಎಚ್‌.ಕೆ. ನಟರಾಜ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ