ಸೌಲಭ್ಯವಿಲ್ಲದೇ ಸೊರಗಿದ ತಾರೀಹಾಳ ಆಸ್ಪತ್ರೆ
Team Udayavani, Sep 28, 2019, 1:35 PM IST
ಶಿವಾನಂದ ಮೇಟಿ
ಹಿರೇಬಾಗೇವಾಡಿ: ಸುವರ್ಣ ವಿಧಾನಸೌಧವ ಕೂಗಳತೆಯಲ್ಲಿರುವ ತಾರೀಹಾಳ ಗ್ರಾಮದ ಸರ್ಕಾರಿ ಉಪ ಆರೋಗ್ಯ ಕೇಂದ್ರ ಅನಾಥ ಸ್ಥಿತಿ ತಲುಪಿದ್ದು, ಸಾರ್ವಜನಿಕರಿಗೆ ಸಿಗಬೇಕಾದ ಆರೋಗ್ಯ ಸೇವೆ ಸಕಾಲಕ್ಕೆ ಸಿಗದೆ ಗ್ರಾಮಸ್ಥರು ಪರದಾಡುವಂತಾಗಿದೆ.
ಜನರಿಗೆ ಆರೋಗ್ಯ ಸೇವೆ ನೀಡಬೇಕಾದ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ತಾರಿಹಾಳ ಹಾಗೂ ಚಂದನಹೊಸೂರು ಗ್ರಾಮಸ್ಥರಿಗೆ ಆರೋಗ್ಯ ಸೇವೆ ನೀಡುವ ಹೊಣೆ ಹೊತ್ತ ಈ ಉಪ ಆರೋಗ್ಯ ಕೇಂದ್ರದಲ್ಲಿ ಒಬ್ಬರು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹಾಗೂ 6 ಜನ ಆಶಾ ಕಾರ್ಯಕರ್ತೆಯರಿದ್ದಾರೆ. ಆದರೆ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಸ್ಥಳೀಯ ನಿರೀಕ್ಷೆಗೆ ತಕ್ಕಂತೆ ಇಲ್ಲಿನ ಸಿಬ್ಬಂದಿಗೆ ಆರೋಗ್ಯ ಸೇವೆಯನ್ನು ನೀಡಲು ಸಾಧ್ಯವಾಗುತ್ತಿಲ್ಲ. ಹಾಗಿದ್ದರೆ ಆರೋಗ್ಯ ಇಲಾಖೆಯ
ಅಧಿ ಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಜನರ ಪ್ರಶ್ನೆಗೆ ಇನ್ನೂ ಸ್ಪಷ್ಟವಾದ ಉತ್ತರ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇತ್ತೀಚೆಗೆ ನಡೆದ ಗ್ರಾಮ ಸಭೆಯಲ್ಲಿ ಆಸ್ಪತ್ರೆಯ ಅಸಮರ್ಪಕ ಸೇವೆಗಳ ಬಗ್ಗೆ ಚರ್ಚೆ ನಡೆದು ಅಗತ್ಯ ಕ್ರಮಕ್ಕಾಗಿ ಒತ್ತಾಯಿಸಲಾಗಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಕಟ್ಟಡದ ಮೇಲ್ಛಾವಣಿ ಕುಸಿದು ಬೀಳುವ ಭಯ ಕಾಡುತ್ತಿದೆ.
ಎಲ್ಲೆಂದರಲ್ಲಿ ಕಸ, ಗಿಡ, ಗಂಟೆ ಬೆಳದಿದ್ದು ಜೀವ ಜಂತುಗಳ ಭಯ ಕಾಡುತ್ತಿದೆ. ಅಲ್ಲದೇ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಇನ್ನಾದರೂ ಆರೋಗ್ಯ ಇಲಾಖೆ ಅ ಧಿಕಾರಿಗಳು ಗ್ರಾಮಾಂತರ ಜನರ ಆರೋಗ್ಯ ಸೇವೆಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.